ಮಹಾನ್ ಚೇತನ, ರೈತ ಹೋರಾಟಗಾರ ಪುಟ್ಟಣ್ಣಯ್ಯ; ಒಂದು ನೆನಪು

ತಮ್ಮ ಹುಟ್ಟಿನಿಂದ ಸಾಯುವತನಕ ಅದ್ಭುತ ರೈತನಾಗಿ, ಕ್ರೀಡಾಪಟುವಾಗಿ, ರೈತ ಹೋರಾಟಗಾರನಾಗಿ, ಸಾಮಾಜಿಕ ಚಿಂತಕನಾಗಿ, ಜನಪರ ಜೀವವಾಗಿ, ಸಮಾಜದ ಚಿಂತಕನಾಗಿ , ನೊಂದವರ , ಬಡವರ ಧನಿಯಾಗಿ, ಸದನದ ಶೂರನಾಗಿ, ಪರಿಸರ ಪ್ರೇಮಿಯಾಗಿ, ಶಾಸಕನಾಗಿ, ಜನಸೇವಕನಾಗಿ ಬದುಕಿ ಪಯಣ ಮುಗಿಸಿದವರು ಮಹಾನ್ ಚೇತನ ಪುಟ್ಟಣ್ಣಯ್ಯ.
ಮಹಾನ್ ಚೇತನ, ರೈತ ಹೋರಾಟಗಾರ ಪುಟ್ಟಣ್ಣಯ್ಯ; ಒಂದು ನೆನಪು

ರಾತ್ರೋರಾತ್ರಿ ರಾಜಕಾರಣಿ ಹುಟ್ಟಿಕೊಳ್ಳಬಹುದು. ದಿನ ಕಳೆಯುವುದರೊಳಗೆ ಸಮಾಜ ಸೇವಕ ಸೃಷ್ಟಿಯಾಗಬಹುದು. ಬಂಡವಾಳ ಹೂಡಿದ ವ್ಯಕ್ತಿ ನಾಳೆ ದೊಡ್ಡ ಬ್ಯುಸಿನೆಸ್ ಮೆನ್ ಅಂತಲೂ ಕರೆಸಿಕೊಳ್ತಾನೆ. ಬೆಂಬಲವಿದ್ದರೆ ನಟನಾಗಿಯೂ ಮಿಂಚಬಹುದೇನೋ. ಆದರೆ, ರೈತ ನಾಯಕ? ಅಸಾಧ್ಯ. ರೈತ ನಾಯಕ ಎಂಬ ಪದವೇ ಮೈಲುಗಳ ಸವೆತದ ಹಾದಿ. ಅದರಲ್ಲೂ ರೈತ ಸಿದ್ಧಾಂತಿಯಾಗುವುದು ಅದೊಂದು ತಪಸ್ಸು. ಅಂತಹ ತಪಸ್ವಿ ಕೆ.ಎಸ್.ಪುಟ್ಟಣ್ಣಯ್ಯನವರು.

ಇಂದು ಅವರ 71ನೇ ಜನ್ಮ‌ದಿನದ ಹಿನ್ನೆಲೆ, ಅವರು ನಮ್ಮನ್ನೆಲ್ಲ ಅಗಲಿದ ಆ ಕರಾಳ‌ ದಿನದ ಅಪರೂಪ ಕ್ಷಣಗಳಲ್ಲಿ ನಡೆದ ಅಪರೂಪದಲ್ಲಿ ಅಪರೂಪದ ಘಟನೆಗಳನ್ನ ಬಿಚ್ಚಿಡುವ ಸಲುವಾಗಿ ಈ ಸಣ್ಣ ಬರಹ ಬರೆಯುತ್ತಿದ್ದೇನೆ. ಆ ದಿನದ ಕೆಲವು ಘಟನಾವಳಿಗಳನ್ನ, ಅದಕ್ಕೆ ಪೂರಕವಾಗಿ ನನ್ನ ಬದುಕಲ್ಲಿ ನಡೆದಿದ್ದ ಸಣ್ಣ ಘಟನೆಯನ್ನ ನೆನಪಿಸಿಕೊಳ್ಳುತ್ತಾ ಈ ಬರಹ ಮುಂದುವರಿಸುತ್ತಿದ್ದೇನೆ.

ಆ ದಿನ ಪುಟ್ಟಣ್ಣಯ್ಯನವರ ಸಾವಾಗಿತ್ತು. ವರದಿ ಮಾಡುವ ಸಲುವಾಗಿ ಮೈಸೂರಿನಿಂದ ಕ್ಯಾತನಹಳ್ಳಿಗೆ ತೆರಳಿದ್ದೆ. ಆ ದಿನ ಅಪರೂಪದಲ್ಲಿ ಅಪರೂಪದ ದೃಶ್ಯಗಳನ್ನ ಕಂಡಿದ್ದೆ. ಈವರಗೂ ಸಾವಾಗದಾಗ ಕಾಣದ ಅದ್ಭುತ ಕ್ಷಣಗಳನ್ನ ಕಣ್ತುಂಬಿಕೊಂಡಿದೆ‌.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅಣ್ಣಾ, ಊಟ ಮಾಡಿ ಹೋಗಿ.., ಸರ್, ನಿಮ್ಮ ದಮ್ಮಯ್ಯಾ ಅಂತೀವಿ, ಹಸಿದುಕೊಂಡು ಎಷ್ಟೊತ್ತು ನಿಲ್ಲುತ್ತೀರಿ.., ಬನ್ನೀ, ಮೊಸರನ್ನ ತಿನ್ನಿ. ಅಮ್ಮಾ, ಸುಸ್ತಾಗುತ್ತೀರಿ, ಸ್ವಲ್ಪ ಬಾತು ತಿಂದು ಹೊರಡಿ. ಈ ಕಡೆ ಬಂದು ಮಜ್ಜಿಗೆ ಕುಡಿಯಿರಿ. ಬಿಸಿಲು ಜಾಸ್ತಿ ಇದೆ ಬನ್ನಿ ಕಲ್ಲಂಗಡಿ ಜ್ಯೂಸ್ ಇದೆ ಕುಡಿಯಲು ಬನ್ನಿ. ಸ್ವಾಮಿ, ದಯಮಾಡಿ, ನಿಮ್ಮ ಕಾಲಿಗೆ ಬೀಳುತ್ತೀವಿ ಅನ್ನ ಬಿಸಾಡಬೇಡಿ. ಈ ಕಡೆ ಬಂದು ನೆರಳಲ್ಲಿ ಸ್ವಲ್ಪ ಸಮಯ ನಿಂತು ವಿಶಾಂತಿ ತೆಗೆದುಕೊಳ್ಳಿ..ದಯಮಾಡಿ, ಯಾರೂ ಊಟ ಮಾಡದೆ ಹೋಗಬೇಡಿ. ಏನೂ ತಿನ್ನದೆ ಹೋದರೆ ಅದು ಅಣ್ಣನಿಗೆ ಬೇಸರವಾಗುತ್ತದೆ' . “ಊಟ ಮಾಡಿ ಅಣ್ಣನ ಆತ್ಮಕ್ಕೆ ಶಾಂತಿ ಕೊಡಿ”. ಪ್ಲೀಸ್ ದಯಮಾಡಿ..

ಹೌದು, ಕುಡಿಯುವುದಕ್ಕೆ ನೀರು ಕೇಳಿದರೂ ಕೊಡದ ಕಾಲದಲ್ಲಿ ಅಲ್ಲಿ ಊಟ ಮಾಡಿ ಎಂದು ಗೋಗರೆಯುತ್ತಿದ್ದ ದೃಶ್ಯ ಆ ದಿನ ಸಾಮಾನ್ಯವಾಗಿತ್ತು. ಊಟ ಮಾಡದೆ ಹೋದರೆ ಅದು “ಆ ಜೀವಕ್ಕೆ ಮಾಡುವ ಅಪಮಾನ” ಎಂಬ ಮಾತುಗಳು ಕೇಳುತ್ತಿದ್ದವು. ಕೈ ಹಿಡಿದು ಎಳೆದು ಊಟದ ಪ್ಲೇಟುಗಳನ್ನು ಕೊಡುತ್ತಿದ್ದರು. ಹೊಟ್ಟೆ ತುಂಬುವಷ್ಟು ಊಟ ಮಾಡಿ ಎಂದು ಗೋಗರೆಯುತ್ತಿದ್ದರು.

ನಾವು ಎಲ್ಲಾದರೂ ಸಾವಾದರೆ ಒಂದಗುಳು ಅನ್ನ ತಿನ್ನದೆ, ಒಂದು ಗುಟುಕು ನೀರು ಕುಡಿಯದೆ ಶವದ ಮುಂದೆ ರೋಧಿಸುತ್ತಾ, ಕಣ್ಣೀರಿಡುತ್ತಾ ನೆಚ್ಚಿನವರನ್ನು ಕಳೆದುಕೊಂಡಿದ್ದಕ್ಕೆ ದುಖಿಃಸುತ್ತಾ ಇರುತ್ತೇವೆ ಅಲ್ಲವೇ, ಆದರೆ, ಮಂಡ್ಯದ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಆ ವ್ಯಕ್ತಿತ್ವದ ಅಗಲಿಕೆಯ ದಿನ ಸಿಕ್ಕ ಸ್ಪಂದನೆ ಮಾತ್ರ ಇಡೀ ಮನುಕುಲಕ್ಕೆ ಮಾದರಿ ಎನಿಸುವಂತಿತ್ತು.

ನನಗಿನ್ನೂ ಜ್ಞಾಪಕವಿದೆ. ನನಗಾಗ ಎಂಟೋ, ಒಂಬತ್ತೋ ವರ್ಷ ಇರಬೇಕು. ಆವತ್ತು ನಮ್ಮ ಮನೆಯಲ್ಲಿ ರಾತ್ರಿ ಅಪ್ಪ, ಅಣ್ಣ ಮತ್ತು ನಾನು ಊಟಕ್ಕೆ ಕುಳಿತಿದ್ದೆವು. ಅಮ್ಮ ಎಲ್ಲರಿಗೂ ಊಟ ಬಡಿಸಿ ನೋಡುತ್ತಾ ನಿಂತಿದ್ದರು. ಆಗ ಅಮ್ಮ ಹಾಕಿದ್ದ ಅರ್ಧ ರಾಗಿಮುದ್ದೆ ನುಂಗಿದ್ದ ನಾನು ಇನ್ನರ್ಧ ಮುದ್ದೆಯನ್ನ ತಟ್ಟೆಯ ಕೆಳಕ್ಕೆ ಇಟ್ಟಿದ್ದೆ. ಬಳಿಕ ಅಮ್ಮ ಅನ್ನ ಬಡಿಸಿದ್ದರು. ಉಣ್ಣುವಾಗ ಬೆರಳ ಸಂದಿಯಿಂದ ಅನ್ನದ ಅಗುಳು ನೆಲಕ್ಕೆ ಬೀಳುತ್ತಿತ್ತು. ಇದರ ಜೊತೆಗೆ ಪೂರ್ತಿ ಅನ್ನ ಉಣ್ಣದೆ ಅರ್ಧಕ್ಕೆ ಕೈ ತೊಳೆದ ನನ್ನನ್ನು ನೋಡಿದ ಅಪ್ಪ, ಜೋರಾಗಿ ಗದರಿದರು. ಕುಳಿತಲ್ಲಿಂದಲೇ ಕಾಲಿಂದ ಜಾಡಿಸಿ ಒದ್ದರು. ಅವರು ಒದ್ದ ರಭಸಕ್ಕೆ ನಾನು ಊಟದ ತಟ್ಟೆಯ ಸಮೇತ ಹೊಸ್ತಿಲು ದಾಟಿ ಹೊರಗೆ ಬಿದ್ದಿದ್ದೆ. ಅನಂತರ, ಬೆಳಗ್ಗೆ ಗದ್ದೆಗೆ ಹೋಗಬೇಕು ನೀನೂ ಜೊತೆಯಲ್ಲಿ ಬಾ ಅಂತ ಹೇಳಿದ್ದರು.

ಆವತ್ತು ನಮ್ಮ ಗದ್ದೆಯಲ್ಲಿ ಭತ್ತದ ನಾಟಿ. ಚಾಪೆ ಮೇಲೆ ಮಲಗಿದ್ದ ನನ್ನನ್ನ ಕಾಲಿನಿಂದಲೇ ಒದ್ದು ಎಬ್ಬಿಸಿದ್ದ ಅಪ್ಪ, ಗದ್ದೆಯ ಬಳಿಗೆ ಕರೆದುಕೊಂಡು ಹೋದರು. ಆವಾಗ ಈಗಿನ ಥರ ಹಣಕ್ಕಾಗಿ ಕೂಲಿ ಆಳುಗಳು ಬರುತ್ತಿರಲಿಲ್ಲ. ನಮ್ಮ ಕೆಲಸಕ್ಕೆ ಅವರು, ಅವರ ಕೆಲಸಕ್ಕೆ ನಾವು “ಮುಯ್ಯಾಳು” ಹೋಗುವುದು ರೂಢಿ. ಬೆಳಗ್ಗೆ ಆರು ಗಂಟೆ ಸುಮಾರಿಗೆ ಕೆಸರಿನ ಗದ್ದೆಗೆ ಎತ್ತುಗಳನ್ನು ಕಟ್ಟಿದ್ದ ನಮ್ಮೂರಿನ ಬೋರಣ್ಣ ನಮ್ಮಪ್ಪನನ್ನು ಕೇಳಿದರು. ಯಾಕಣ್ಣಾ, ಈವತ್ತು ನಿನ್ನ ಮಗನ್ನ ಜೊತೆಯಲ್ಲಿ ಕರೆದುಕೊಂಡು ಬಂದಿದ್ದೀಯಾ? ನಿನ್ನ ಮಗನನ್ನ ಈವತ್ತು ಸ್ಕೂಲಿಗೆ ಕಳಿಸಲ್ವಾ ಅಂದರು. ಅದಕ್ಕೆ ನಮ್ಮಪ್ಪ ಈವತ್ತು ನಾನೇ ರಜಾ ಹಾಕಿಸಿದ್ದೀನಿ ಎಂದು ಹೇಳಿ ತಾವೂ ಗದ್ದೆ ಕೆಲಸಕ್ಕೆ ಇಳಿದಿದ್ದರು. ಅವರಿಬ್ಬರು ಮಾಡುತ್ತಿದ್ದ ಕೆಲಸವನ್ನು ಗದ್ದೆಯ ತೆವರಿಯ ಮೇಲೆ ಕುಳಿತು ನೋಡುತ್ತಿದ್ದ ನನ್ನನ್ನು ನಮ್ಮಪ್ಪ ಭತ್ತದ ಪೈರು ಕೊಡುವಂತೆ ಕೂಗಿದರು. ಎರಡು ಮೂರು ಗಂಟೆ ಹಾಗೆ ಕೆಲಸ ಮಾಡುತ್ತಿದ್ದ ಅವರ ಜೊತೆಗೆ ಐದಾರು ಹೆಂಗಸರು ಜೊತೆಯಾದರು. ನಾಟಿ ಪೈರು ತೆಗೆದುಕೊಂಡು ನಾಟಿ ಮಾಡುವುದಕ್ಕೆ ಶುರು ಮಾಡಿದರು. ಇದೆಲ್ಲಾ ಕೆಲಸ ಮುಗಿಯುವಷ್ಟರಲ್ಲಿ ಸೂರ್ಯ ನೆತ್ತಿಯ ಮೇಲೆ ಬಂದಿದ್ದ. ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ ಇಲ್ಲದೆ ಹಸಿವಿನಿಂದ ಬಳಲುತ್ತಿದ್ದ ನನಗೆ ನಮ್ಮಪ್ಪನ ಮೇಲೆ ಬೇಸರ, ಕೋಪ. ಕೆಲಸ ಬಿಟ್ಟು ಮನೆಗೆ ಹೋಗಬೇಕೆಂಬ ಚಡಪಡಿಕೆ.

ಆದರೆ, ಅಪ್ಪನ ಭಯದಿಂದ ಕೆಲಸ ಮಾಡುತ್ತಿದ್ದೆ. ಸ್ವಾಭಾವಿಕವಾಗಿ ಮನುಷ್ಯನಿಗೆ ಹಸಿವಾದಾಗ ಆಲೋಚನೆಗಳು ಹೆಚ್ಚಾಗುತ್ತವೆ. ಆವತ್ತು ಅಪ್ಪ ಒಂದೇಟು ಹೊಡೆದಿದ್ದರೂ ಬಾಯಿ ತುಂಬಾ ಬೈದಿದ್ದರೂ ಏನೂ ಅನಿಸುತ್ತಿರಲಿಲ್ಲವೇನೋ, ಆದರೆ, ಊಟ ಕೊಡದೆ ನನ್ನನ್ನ ಉರಿ ಬಿಸಿಲಿನಲ್ಲಿ ದಿನವಿಡಿ ನಿಲ್ಲಿಸಿದ್ದಕ್ಕೆ ತಂದೆಯ ಮೇಲೆಯೇ ಕೋಪ ಉಕ್ಕಿತ್ತು. ಏನಾಗಿದೆ ನಮ್ಮಪ್ಪನಿಗೆ, ನನ್ನ ತಲೆಯಲ್ಲಿ ನೂರಾರು ಪಶ್ನೆಗಳು. ನನಗೇಕೆ ಊಟ ಕೊಡದೆ ಈ ರೀತಿ ಮಾಡುತ್ತಿದ್ದಾರೆ. ಶಾಲೆಗೆ ಕಳುಹಿಸದೆ ಯಾಕೆ ಇಲ್ಲಿಗೆ ಕರೆದುಕೊಂಡು ಬಂದರು.. ಈ ಪಶ್ನೆಗಳಿಗೆ ಉತ್ತರ ನನಗೆ ಹಿಂದಿನ ದಿನದ ರಾತ್ರಿಯ ಘಟನೆಗಳೇ ಕಾರಣ ಅಂತ ತಿಳಿದುಕೊಳ್ಳಲು ಹೆಚ್ಚು ಸಮಯ ಬೇಕಿರಲಿಲ್ಲ. ಆವತ್ತು ಸಂಜೆ ಮನೆಗೆ ವಾಪಸ್ಸು ಬಂದಾಗ ನಮ್ಮಪ್ಪ ನನಗೆ ಹೇಳಿದ್ದರು. “ಇನ್ನು ಮುಂದೆ ನೀನು ತಟ್ಟೆಯಲ್ಲಿ ಊಟ ಬಿಟ್ಟರೆ ಈವತ್ತು ಬೆಳಗ್ಗೆ ನಾನು ಹಾಗೂ ಬೋರಣ್ಣ ಮಾಡಿದ್ದ ಕೆಲಸ ನೀನು ಮಾಡಬೇಕು’ ಎಂದಿದ್ದರು. ಈ ಬಗೆಯ ಘಟನೆಗೆ ಕಾರಣರಾದವರು ಬೇರಾರೂ ಅಲ್ಲ.. ಪುಟ್ಟಣ್ಣಯ್ಯ.

ಹೌದು, ಹಿಂದಿನ ದಿನ ಬೆಳಗ್ಗೆ ಪಾಂಡವಪುರದ ಬಸ್ ನಿಲ್ದಾಣದಲ್ಲಿ ನಡೆದಿದ್ದ ರೈತ ಸಂಘದ ಸಭೆಯಲ್ಲಿ ಪುಟ್ಟಣ್ಣಯ್ಯ ಅವರು ಭಾಷಣ ಮಾಡುತ್ತಾ, ಅನ್ನದ ಮಹತ್ವ ಕುರಿತು ‘ಅನ್ನ ವ್ಯರ್ಥ ಮಾಡಬೇಡಿ’ ಎಂದು ಕೈ ಮುಗಿದು ಬೇಡಿಕೊಂಡಿದ್ದದ್ದು. ಯಾರು ರೈತನಿಗೆ ಬೆಲೆ ಕೊಡುವುದಿಲ್ಲವೋ ಆತ ಜೀವನದಲ್ಲಿ ಉದ್ಧಾರ ಆಗುವುದಿಲ್ಲ. ತಿನ್ನುವ ಅನ್ನಕ್ಕೆ ಬೆಲೆ ಕೊಡದೆ ಪೋಲು ಮಾಡುವವರಿಗೆ ಅನ್ನದ ಬೆಲೆ ತಿಳಿಸಿ, ಅದರ ಮಹತ್ವ ತಿಳಿಯುವವರೆಗೆ ಅವರಿಗೆ ಊಟ ನೀಡಬೇಡಿ. ಆದರೆ, ಹೊಟ್ಟೆ ಹಸಿವು ಎಂದು ಬಂದವರಿಗೆ ಎಂದಿಗೂ ಊಟ ಹಾಕದೆ ಕಳುಹಿಸಬೇಡಿ. ಅಂತಹ ಪುಣ್ಯದ ಕೆಲಸ ನಿಮ್ಮಿಂದಲೇ ಆರಂಭವಾಗಲಿ. ಅದು ನಿಮ್ಮ ಮಕ್ಕಳಾದರೂ ಸರಿ, ನನ್ನ ಮಕ್ಕಳಾದರೂ ಸರಿ ಎಂದಿದ್ದ ಮಾತುಗಳು. ಅಂದು ಭಾಷಣ ಕೇಳಿ ಮನೆಗೆ ಬಂದಿದ್ದ ನನ್ನಪ್ಪ ಅಷ್ಟರಮಟ್ಟಿಗೆ ಪುಟ್ಟಣ್ಣಯ್ಯ ಅವರ ಪ್ರಭಾವಕ್ಕೆ ಒಳಗಾಗಿದ್ದರು. ಅಂದು ನಮ್ಮಪ್ಪ ನನಗೆ ಅಂತಹ ಶಿಕ್ಷೆ ನೀಡಲು ಕಾರಣ ಆ ಒಂದು ಘಟನೆಯಾಗಿತ್ತು. ಅಂತಹ ಪುಟ್ಟಣ್ಣಯ್ಯನವರೇ ತನ್ನ ಅಂತಿಮ ಕ್ಷಣದವರೆವಿಗೂ ಅನ್ನಕ್ಕೆ, ಶಮಕ್ಕೆ ಬೆಲೆ ನೀಡಿದ್ದರು. ತನ್ನ ಕೊನೆಯ ಸಭೆಯಲ್ಲಿ ಗೆಳೆಯರ ಜೊತೆ ಊಟಕ್ಕೆ ಕುಳಿತಾಗಲೂ ತಿನ್ನುವಷ್ಟು ಊಟ ಹಾಕಿಸಿಕೊಳ್ಳಿ. ಅನ್ನವನ್ನು ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದ್ದರು. ಪಂಕ್ತಿಯಲ್ಲಿ ಎಲ್ಲರ ನಡುವೆ ಊಟಕ್ಕೆ ಕುಳಿತಾಗ ಸಾಕು ಎಂದರೂ ಕೇಳದೆ ತನ್ನ ಅಭಿಮಾನಿಗಳು ಪೀತಿಯಿಂದ ಬಡಿಸಿದ್ದಷ್ಟನ್ನೂ ಉಂಡಿದ್ದರು. ಶ್ರಮಕ್ಕೆ , ರೈತರಿಗೆ ಮೊದಲ ಬೆಲೆ ಕೊಡುತ್ತಿದ್ದ ಅಂತಹ ಪುಟ್ಟಣ್ಣಯ್ಯ ಈಗ ಇತಿಹಾಸ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗಾಮದ ಶ್ರೀಕಂಠೇಗೌಡ ಹಾಗೂ ಶಾರದಮ್ಮ ಅವರ ನಾಲ್ಕು ಮಕ್ಕಳ ಪೈಕಿ ಪುಟ್ಟಣ್ಣಯ್ಯ ಅವರು ಹಿರೇಮಗ. 23 ಡಿಸೆಂಬರ್ 1949 ರಲ್ಲಿ ಜನಿಸಿದ ಪುಟ್ಟಣ್ಣಯ್ಯನವರನ್ನು ಕಂಡರೆ ತಾಯಿ ಶಾರದಮ್ಮನವರಿಗೆ ಬಲು ಪೀತಿ. ಪುಟ್ಟಣ್ಣಯ್ಯನವರ ಬೆನ್ನಿಗೆ ತಮ್ಮ ಪಕಾಶ್ ತಂಗಿ ರೇಣುಕಾ ಹಾಗೂ ಕಿರಿಯ ತಮ್ಮ ರಮೇಶ್ ಹುಟ್ಟಿದ್ದರು. ನನ್ನ ಮಗ ಎಂಜಿನಿಯರಿಂಗ್ ಓದುತ್ತಾನೆ. ನನ್ನ ಮಗಳು ಡಾಕ್ಟರ್ ಆಗುವುದಕ್ಕೆ ವಿದೇಶಕ್ಕೆ ಹೊರಟಿದ್ದಾಳೆ. ನನ್ನ ಮಗ ವಿದೇಶದಲ್ಲಿ ದೊಡ್ಡ ಕಂಪನಿಯಲ್ಲಿ ಲಕ್ಷಗಟ್ಟಲೆ ಸಂಬಳ ಪಡೆಯುತ್ತಾನೆ. ವೈಭೋಗದ ಜೀವನ ಸಾಗಿಸುತ್ತಾನೆ ನಿನಗೆ ಗೊತ್ತಾ ? ಎಂದು ಓರಗೆಯ ಗೆಳೆಯರು ಹೇಳಿದಾಗ ಶೀಕಂಠೇಗೌಡ ಹಾಗೂ ಶಾರದಮ್ಮನವರಿಗೆ ಅಳಕು, ಭಯ, ಆತಂಕ. ನನ್ನ ಮಗನನ್ನ ಏನು ಓದಿಸಬೇಕು? ಹೇಗೆ ಓದಿಸಬೇಕು? ಎಂಬ ಚಿಂತೆ, ಕಳವಳ.

ಹೀಗಿರುವಾಗಲೇ ಏನೇನೋ ಓದಿಸಬೇಕು ಎಂದು ಕನಸು ಕಂಡಿದ್ದ ಪೋಷಕರಿಗೆ ತದ್ವಿರುದ್ಧವಾಗಿ ಬದುಕಿದ ಪುಟ್ಟಣ್ಣಯ್ಯ ಆಗಿದ್ದೆ ಬೇರೆ. ತಮ್ಮ ಹುಟ್ಟಿನಿಂದ ಸಾಯುವತನಕ ಅದ್ಭುತ ರೈತನಾಗಿ, ಕ್ರೀಡಾಪಟುವಾಗಿ, ರೈತ ಹೋರಾಟಗಾರನಾಗಿ, ಸಾಮಾಜಿಕ ಚಿಂತಕನಾಗಿ, ಜನಪರ ಜೀವವಾಗಿ, ಸಮಾಜದ ಚಿಂತಕನಾಗಿ , ನೊಂದವರ , ಬಡವರ ಧನಿಯಾಗಿ, ಸದನದ ಶೂರನಾಗಿ, ಪರಿಸರ ಪ್ರೇಮಿಯಾಗಿ, ಶಾಸಕನಾಗಿ, ಜನಸೇವಕನಾಗಿ ಬದುಕಿ ಪಯಣ ಮುಗಿಸಿದವರು ಮಹಾನ್ ಚೇತನ ಪುಟ್ಟಣ್ಣಯ್ಯ.

ಅಂತಹ ಪುಟ್ಟಣ್ಣಯ್ಯ ಆ ದಿನ ದಿಢೀರ್ ಹೃದಯಸ್ತಂಭನದಿಂದ ಅಗಲಿದ ವಿಷಯ ತಿಳಿದು ರಾತ್ರೋರಾತಿ ಕ್ಯಾತನಹಳ್ಳಿಗೆ ಜನಸಾಗರ ಹರಿದು ಬಂದಿತು. ರೈತನಾಯಕ ಪುಟ್ಟಣ್ಣಯ್ಯನವರ ಪಾರ್ಥೀವ ಶರೀರ ಬರುತ್ತಿದ್ದಂತೆ ಗಾಮಕ್ಕೆ ಗಾಮವೇ ಕಣ್ಣೀರ ಕೋಡಿಯಾಯಿತು. ಆಕಂದ್ರನ ಮುಗಿಲು ಮುಟ್ಟಿತು. ಮರುದಿನ ಮಧ್ಯಾಹ್ನ ಒಂದು ಗಂಟೆಯ ತನಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕ್ಯಾತನಹಳ್ಳಿಯ ಮೈದಾನಕ್ಕೆ ಲಕ್ಷೋಪಲಕ್ಷ ಜನ ಆಗಮಿಸಿ ಅಂತಿಮ ದರ್ಶನ ಪಡೆದುಕೊಂಡರು. ಅವರ ಮಕ್ಕಳು, ಸಂಬಂಧಿಕರು ವಿದೇಶದಲ್ಲಿದ್ದ ಕಾರಣ ಅವರ ಅಂತ್ಯಕಿಯೆಯನ್ನು ಮೂರು ದಿನಗಳ ನಂತರ ಮಾಡಲಾಯಿತು. ಈ ರೈತನಾಯಕನ ಬದುಕು ಎಷ್ಟೊಂದು ಅರ್ಥಪೂರ್ಣ ಮತ್ತು ಸಾರ್ಥಕ ಎಂಬುದಕ್ಕೆ ಇವರ ಸಾವಿಗೆ ಇಡೀ ನಾಡಿನ ತುಂಬ ಮಿಡಿದ ಕಂಬನಿ ಸಾಕ್ಷಿ. ರೈತರು, ಕೂಲಿಕಾರರು, ಮಹಿಳೆಯರು, ಹೋರಾಟಗಾರರು, ಚಿಂತಕರು, ಬುದ್ದಿ ಜೀವಿಗಳು, ಕಲಾವಿದರು, ರಾಜಕೀಯ ಗಣ್ಯರು, ಪತಕರ್ತರು ಹೀಗೆ ಸಮಾಜದ ಎಲ್ಲಾ ಸ್ತರದ ಲಕ್ಷೋಪಲಕ್ಷ ಸಂಖ್ಯೆಯ ಜನರು ಪುಟ್ಟಣ್ಣಯ್ಯನವರ ಸಾವಿಗೆ ಕಂಬನಿ ಮಿಡಿದರು. ರಾಜ್ಯದ ಮುಖ್ಯಮಂತಿ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರು, ರಾಜ್ಯದ ಸಚಿವ ಸಂಪುಟದ ನಾಯಕರುಗಳು, ನಾಡಿನ ಮಠಾಧೀಶರು, ಗಣ್ಯಾತಿಗಣ್ಯರು ಅವರ ಅಂತಿಮ ದರ್ಶನ ಪಡೆದುಕೊಂಡರು. ರಾಜ್ಯದ ವಿವಿಧ ಜಿಲ್ಲೆಗಳ, ಹೊರರಾಜ್ಯದ ಜಿಲ್ಲೆಗಳ ರೈತರುಗಳು ಜೊತೆಗೆ ಶ್ರೀಲಂಕದ ಅಭಿಮಾನಿಗಳೂ ಅಂತ್ಯ ಸಂಸ್ಕಾರದಲ್ಲಿ ಪಾಲ್ಗೊಂಡರು.

ಅಂತಿಮವಾಗಿ ಯಾವುದೇ ಸಂಪ್ರದಾಯಗಳನ್ನು ಆಚರಿಸದೆ, ರೈತ ಗೀತೆಯೊಂದಿಗೆ ಪುಟ್ಟಣ್ಣಯ್ಯನವರ ಅಂತ್ಯಕಿಯೆ ಮಾಡಲಾಯಿತು. ಹಸಿರು ಟವಲ್‍ಗಳ ಹಾರಾಟದೊಂದಿಗೆ “ಅಮರ್ ರಹೆ ಪುಟ್ಟಣ್ಣಯ್ಯ ” ಎಂಬ ಘೋಷಣೆಯೊಂದಿಗೆ ಈ ಮಣ್ಣಿನ ಆಸ್ತಿಯಾದರು. ರಾಜ್ಯದ ಪತಿ ಜಿಲ್ಲೆಯ ರೈತರೂ ತಾವು ತಂದಿದ್ದ ಮಣ್ಣನ್ನು ಅವರ ಸಮಾಧಿಗೆ ಸಮರ್ಪಿಸಿದ್ದು ಅರ್ಥಪೂರ್ಣವಾಗಿತ್ತು. ಇದರ ಜೊತೆಗೆ ಪಕ್ಕದ ತಮಿಳುನಾಡು, ಕೇರಳ ರಾಜ್ಯದ ರೈತರು ಅಲ್ಲಿಂದ ಮಣ್ಣನ್ನು ತಂದು ಪುಟ್ಟಣ್ಣಯ್ಯ ಅವರಿಗೆ ಅರ್ಪಣೆ ಮಾಡಿದ್ದು ಅವರ ಮೇಲಿನ ಪೀತಿ, ಅಭಿಮಾನದ ಧ್ಯೋತಕ. ಎಲ್ಲಕ್ಕಿಂತ ಮಿಗಿಲಾಗಿ ರೈತ ಕುಲಕ್ಕೆ, ಮಾನವೀಯ ಗುಣಕ್ಕೆ, ಸಾಮಾಜಿಕ ಕಳಕಳಿಗೆ ಸಿಕ್ಕ ದೊಡ್ಡ ಗೌರವವಾಗಿತ್ತು. ಇಷ್ಟೆಲ್ಲ ಮುಗಿದು ಪುಟ್ಟಣ್ಣಯ್ಯನವರು ಇತಿಹಾಸ ಸೃಷ್ಠಿಸಿ, ಗತಿಸಿ ಮಣ್ಣಲ್ಲಿ ಮಣ್ಣಾಗಿದ್ದರೆ ಇತ್ತ ಅದೇ ಕೂಗು. . . ಸರ್, ಬನ್ನೀ ಸರ್ ಊಟ ಮಾಡಿ ಹೋಗಿ. ಬದುಕಿದ್ದಾಗ ಆ ಪುಣ್ಯಾತ್ಮ ಇದೇ ಅನ್ನಕ್ಕಾಗಿ ಹೋರಾಟ ಮಾಡಿದ್ದರು. ಯಾರೂ ಹಸಿದುಕೊಂಡು ಇರಬಾರದು ಅಂತ ತನ್ನ ಬದುಕನ್ನ ಮುಡುಪಿಟ್ಟಿದ್ದರು. ನಾಲ್ಕು ದಿನ ಅನ್ನ, ನೀರು ಸೇವಿಸದೆ ಆಸ್ಪತೆಯ ಶವಾಗಾರದಲ್ಲಿ ಮಲಗಿದ್ದರು. ದಯಮಾಡಿ ಬನ್ನೀ ಸಾರ್, ಊಟ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಎನ್ನುವ ಕೂಗು. ಜೊತೆಗೆ ದಯಮಾಡಿ ಅನ್ನ ಚೆಲ್ಲಬೇಡಿ, ಎಷ್ಟು ಬೇಕೋ ಅಷ್ಟು ಹಾಕಿಸಿಕೊಂಡು ತಿನ್ನಿ. ಅನ್ನಕ್ಕೆ ಬೆಲೆ ಕೊಡಿ ಎಂಬ ಪುಟ್ಟಣ್ಣಯ್ಯನವರ ಆದರ್ಶದ ಮಾತುಗಳು. ಇಂದು ದೆಹಲಿಯಲ್ಲಿ ಅನ್ನದಾತರು ನಡೆಸುತ್ತಿರುವ ಕೂಗಿಗೆ ಯಾರೂ ಸ್ಪಂದಿಸುತ್ತಿಲ್ಲ. ತಿಂಗಳಿನಿಂದ ರೈತರು ಅನ್ನಾಹಾರ ತ್ಯಜಿಸಿ ಪರಿಪರಿಯಾಗಿ ಪರಿತಪ್ಪಿಸುತ್ತಿರುವ ದೃಶ್ಯ ಕಣ್ಮುಂದೆ ಇರುವಾಗಲೇ, ಈ ಮಹಾನ್ ನಾಯಕ ಬದುಕಿರಬೇಕಿತ್ತು ಅಂದೆನಿಸುತ್ತದೆ.

ಪುಟ್ಟಣ್ಣಯ್ಯ ಅಂತಿಮ ದರ್ಶನಕ್ಕೆ ಸೇರಿದ ಜನಸ್ತೋಮ
ಪುಟ್ಟಣ್ಣಯ್ಯ ಅಂತಿಮ ದರ್ಶನಕ್ಕೆ ಸೇರಿದ ಜನಸ್ತೋಮ

ಅದು ಒತ್ತೊಟ್ಟಿಗಿರಲಿ, ಬಾಲ್ಯದಲ್ಲಿಯೇ ಅನ್ನದ ಬಗ್ಗೆ ಕಣ್ಣು ತೆರೆಸಿದ್ದ ಪುಟ್ಟಣ್ಣಯ್ಯನವರು ಮತ್ತೆ ಆ ದಿನ, ಆ ಕ್ಷಣ ನೆನಪಿಗೆ ಬಂದರು. ಅವರಿಗೆ ಗೌರವ ತೋರುವುದೆಂದರೆ ಪುಟ್ಟಣ್ಣಯ್ಯನವರ ಅಂತ್ಯಕ್ರಿಯೆ ಬಳಿಕ ಊಟ ಮಾಡದೆ ಬರಬಾರದು ಎನಿಸಿತು. ಗೌರವಪೂರ್ವಕವಾಗಿ ಅವರ ಸಮಾಧಿಗೆ ಹಿಡಿ ಮಣ್ಣು ಹಾಕಿ ಹೊಟ್ಟೆ ತುಂಬ ಉಂಡು ಬಂದೆ. ಊಟ ಮಾಡುವಾಗ ಒಂದಗುಳು ಅನ್ನ ಕೆಳಕ್ಕೆ ಬೀಳಲಿಲ್ಲ. ಅಷ್ಟು ಮಾತವಲ್ಲ, ಈಗ ಪ್ರತಿ ಸಾರಿ ಊಟಕ್ಕೆ ಕೂತಾಗಲೆಲ್ಲ ಅವರ ಮಾತುಗಳು ನೆನಪಾಗುತ್ತವೆ. ಅವರೇ ಕೂಗಿ ಹೇಳಿದಂತೆ ಬಾಸವಾಗುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com