ಪಕ್ಷಾತೀತ ಚುನಾವಣೆಯಾದರೂ ಮಂಡ್ಯದಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿರುವ ಪಕ್ಷಗಳ ಜಿದ್ದಾಜಿದ್ದಿ

ಮತಗಟ್ಟೆಗೇ ಬಾರದ ಎಲೈಟ್ ಕ್ಲಾಸ್ ಜನರೂ ಈಗ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಹಳ್ಳಿಗೇ ಬಾರದ ಎಂಏ, ಬಿಇ, ಎಂಬಿಎ ಪದವೀಧರರೂ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ.
ಪಕ್ಷಾತೀತ ಚುನಾವಣೆಯಾದರೂ ಮಂಡ್ಯದಲ್ಲಿ ಮೇಲ್ನೋಟಕ್ಕೆ ಎದ್ದು ಕಾಣುತ್ತಿರುವ ಪಕ್ಷಗಳ ಜಿದ್ದಾಜಿದ್ದಿ

ಈಗ ರಾಜ್ಯದಲ್ಲಿ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯು ಪಕ್ಷಾತೀತವಾಗಿದ್ದು ಚುನಾವಣಾ ಚಿಹ್ನೆಗಳೇ ಇಲ್ಲ. ಆದರೂ ಮಂಡ್ಯ ಜಿಲ್ಲೆಯಲ್ಲಿ ಮೂರೂ ಪಕ್ಷಗಳ ಜಿದ್ದಾಜಿದ್ದಿ ಎದ್ದು ಕಾಣುತ್ತಿದೆ. ಕೆ.ಆರ್.ಪೇಟೆ ತಾಲ್ಲೂಕಿನಲ್ಲಿ ನೆಲೆಯೇ ಇಲ್ಲದ ಬಿಜೆಪಿಗೆ ಬೇರು ಮಟ್ಟದಿಂದ ಪಕ್ಷದ ಸಂಘಟನೆ ಮಾಡಿ ಶಾಶ್ವತ ನೆಲೆ ಮಾಡಬೇಕೆಂದು ತಮ್ಮ ಅನಾರೋಗ್ಯದ ನಡುವೆಯೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಪ್ರಾರಂಭಿಕ ಹಂತದಲ್ಲಿಯೇ ಬಿಜೆಪಿ ಬೆಂಬಲಿತ 20ಕ್ಕೂ ಹೆಚ್ಚಿನ ಸದಸ್ಯರ ಅವಿರೋಧ ಆಯ್ಕೆ ಮಾಡಿಸಿ ತೆರೆಮರೆಯ ತಂತ್ರಗಾರಿಕೆಯಲ್ಲಿ ಯಶಸ್ವಿಯಾಗಿದ್ದಾರೆ. 33 ಗ್ರಾಪಂಗಳ ಪೈಕಿ 20ಕ್ಕೂ ಹೆಚ್ಚಿನ ಪಂಚಾಯಿತಿಗಳ ಆಡಳಿತ ಸೂತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾರ್ಯತಂತ್ರ ರೂಪಿಸಿದ್ದಾರೆಂದು ಹೇಳಲಾಗಿದೆ.

ಕಾಂಗ್ರೆಸ್ ಮುಖಂಡರು ಪಂಚಾಯಿತಿ ಫೈಟ್ಗೆ ಆಸಕ್ತಿ ವಹಿಸದ ಕಾರಣ ಮುಖಂಡರು ಹಾಗೂ ಅಭ್ಯರ್ಥಿಗಳು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ತಾಲ್ಲೂಕಿನಲ್ಲಿ ಜಾತ್ಯಾತೀತ ದಳಕ್ಕೆ ತನ್ನದೇ ಆದ ಕಾರ್ಯಕರ್ತರ ಪಡೆ ಹಾಗೂ ಮುಖಂಡರಿದ್ದು ಗೆಲುವಿನ ಹಾದಿ ಹಾಗೂ ಪಕ್ಷ ಸಂಘಟನೆಯಲ್ಲಿ ಮುಂಚೂಣಿಯಲ್ಲಿದೆ. ಸ್ಥಳೀಯ ರಾಜಕೀಯ ವಾತಾವರಣ ಹಾಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಜಾ.ದಳ-ಬಿಜೆಪಿಯೊಂದಿಗೆ ಒಳ ಒಪ್ಪಂದ ಮಾಡಿಕೊಂಡಿರುವ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಹಾಗೂ ಜಾ.ದಳ ಪಕ್ಷಕ್ಕೆ ಶಕ್ತಿ ತುಂಬುತ್ತಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮದ್ದೂರು ತಾಲ್ಲೂಕಿನಲ್ಲಿ ರಾಜ್ಯದಲ್ಲೇ ಅತಿ ದೊಡ್ಡ ಪಂಚಾಯಿತಿ ಎನಿಸಿಕೊಂಡಿರುವ ಬೆಸಗರಹಳ್ಳಿ ಪಂಚಾಯಿತಿಯ 3ನೇ ವಾರ್ಡ್ನಲ್ಲಿ ಆಯ್ಕೆಗಾಗಿ ಸ್ಪರ್ಧಿಸಿರುವ ಬಿ.ಎ. ಟಿಸಿಎಚ್. ಪದವೀಧರರಾದ ಮಂಗಳಗೌರಮ್ಮ ಅವರು ಅಭಿವೃದ್ಧಿಯ ಕನಸು ಹೊತ್ತಿದ್ದಾರೆ. ಗ್ರಾಮವಿಕಾಸ ಗುರಿಯನ್ನು ಸಾಧಿಸುವುದು ಗುರಿಯಂತೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಗ್ರಾಮವಿಕಾಸ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ. ಅದನ್ನು ಸಾಧಿಸಿ ತೋರಿಸುತ್ತೇನೆ ಎಂದು ಚುನಾವಣೆಗೆ ನಿಂತಿದ್ದಾರೆ. ಅವರು ಸ್ಪರ್ಧಿಸಿರುವ ವಾರ್ಡ್ನಲ್ಲಿ 600 ಮುಸ್ಲಿಮರ ಮತಗಳಿವೆ. ಇವರಿಗೆ ಎದುರಾಳಿಯಾಗಿ ಇಬ್ಬರು ಮುಸ್ಲಿಮರು ಸ್ಪರ್ಧೆಯಲ್ಲಿದ್ದಾರೆ. 100 ಹಿಂದೂ ಮತಗಳಿದ್ದರೂ ಸಹ ನಾನು ನನ್ನ ಅಭಿವೃದ್ಧಿಯ ಭರವಸೆಯಿಂದ ಅಲ್ಲಿ ಮತದಾರರ ಗಮನ ಸೆಳೆದು ಗೆಲ್ಲುತ್ತೇನೆ ಎನ್ನುತ್ತಾರೆ.


ಮತಗಟ್ಟೆಗೇ ಬಾರದ ಎಲೈಟ್ ಕ್ಲಾಸ್ ಜನರೂ ಈಗ ಪಂಚಾಯ್ತಿ ಚುನಾವಣೆಯಲ್ಲಿ ಸ್ಪರ್ಧೆಗೆ ಮುಂದಾಗಿದ್ದಾರೆ. ಹಳ್ಳಿಗೇ ಬಾರದ ಎಂಏ, ಬಿಇ, ಎಂಬಿಎ ಪದವೀಧರರೂ
ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ. ಅಷ್ಟೇ ಅಲ್ಲ ಟೆಕ್ಕಿಗಳು ಉತ್ತಮ ಉದ್ಯೋಗವನ್ನು ಬಿಟ್ಟು ಸ್ಪರ್ಧೆಗೆ ಇಳಿದಿದ್ದಾರೆ. ಇದು ಮಂಡ್ಯ ಜಿಲ್ಲೆಯ ಗ್ರಾಪ ಚುನಾವಣೆಯಲ್ಲಿ ಕಂಡು ಬಂದ ವಿದ್ಯಮಾನ. ಮೈಸೂರಿನ ಇನ್ಫೋಸಿಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಶಿಖರನಹಳ್ಳಿ ಗ್ರಾಮದ ಯುವಕ ಎಸ್. ಜೆ. ಪ್ರಮೋದ್ ಇದೀಗ ತಮ್ಮ ಹುದ್ದೆಗೆ
ರಾಜೀನಾಮೆ ನೀಡಿ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಪ್ರಮೋದ್ ಎಂಬಿಎ ಮುಗಿಸಿ, ಕ್ಯಾಂಪಸ್ ಸೆಲೆಕ್ಷನ್ನಲ್ಲಿಯೇ ಇನ್ಫೋಸಿಸ್ ಗೆ ಆಯ್ಕೆಯಾಗಿದ್ದರು. ಅಲ್ಲಿ ಎರಡು ವರ್ಷ ಕೆಲಸ ಮಾಡಿದ ಪ್ರಮೋದ್, ಇದೀಗ ಕದಬಹಳ್ಳಿ ಪಂಚಾಯತಿಯಿಂದ ಸ್ಪರ್ಧಿಸಲು ಉದ್ಯೋಗ ತೊರೆದಿದ್ದಾರೆ. ಅಷ್ಟೊಳ್ಳೆ ಉದ್ಯೋಗವನ್ನು ಬಿಟ್ಟು ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಲು ಕಾರಣವೇನೆಂದು ಕೇಳಿದರೆ, ಗ್ರಾಮಾಭಿವೃದ್ಧಿ ಕನಸು ಎನ್ನುತ್ತಾರೆ ಪ್ರಮೋದ್. ಪ್ರಮೋದ್ ಮಾತ್ರವಲ್ಲ, ಇನ್ನೋರ್ವ ಎಂಬಿಎ ಪದವೀಧರೆ ಸೌಮ್ಯಾ ಕೂಡ ಇದೇ ದಾರಿ ಹಿಡಿದಿದ್ದಾರೆ. ಇವರು ಬಿಳಗುಂದ ಗ್ರಾಮದವರಾಗಿದ್ದು, ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಕಣಕ್ಕೆ ಇಳಿದಿದ್ದಾರೆ. ಸೌಮ್ಯ ಎಂಬಿಎ ಪದವಿ ಅಭ್ಯಾಸ ಮಾಡಿದ್ದಾರೆ. ಸದ್ಯ ಪತಿಯೊಂದಿಗೆ ತುಮಕೂರಿನಲ್ಲಿ ನೆಲೆಸಿದ್ದು, ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ವೋಟರ್ ಐಡಿ ಹುಟ್ಟೂರಿನಲ್ಲೇ ಇರುವುದರಿಂದ, ಮಂಡ್ಯದ ಕಾಳಿಂಗನಹಳ್ಳಿ ಪಂಚಾಯಿತಿಯಿಂದ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ. ಗ್ರಾಮೀಣ ಪ್ರದೇಶದ ರಾಜಕಾರಣಕ್ಕೆ ವಿದ್ಯಾವಂತರು ಧುಮುಕಬೇಕು. ಇದರಿಂದ ಸುಧಾರಣೆಯೂ ಆಗುತ್ತದೆ. ನಾನೂ ಅಷ್ಟೇ ಗ್ರಾಮದ ಏಳಿಗೆಗಾಗಿ ಸೇವೆ ಸಲ್ಲಿಸುವುದಕ್ಕಾಗಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ಇನ್ನು ಮಳವಳ್ಳಿ ತಾಲೂಕಿನ ಹಲಗೂರು ಗ್ರಾಪಂ ಚುನಾವಣಾ ಕಣದಲ್ಲಿ ಬಿಇ ಪದವೀಧರೆಯೊಬ್ಬರು ಸ್ಪರ್ಧಿಸಿದ್ದಾರೆ. ಹಲಗೂರು ಗ್ರಾಮದವರೇ ಆಗಿರುವ ಶ್ರುತಿ, ಎಲೆಕ್ಟ್ರಾನಿಕ್ ಆ್ಯಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್ ಮಾಡಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ಹೆರಿಗೆಗಾಗಿ ತವರು ಹಲಗೂರಿಗೆ ಬಂದಿದ್ದು, ಇಲ್ಲಿಯೇ ಚುನಾವಣಾ ಕಣಕ್ಕಿಳಿದಿದ್ದಾರೆ. ಮದ್ದೂರು ತಾಲ್ಲೂಕಿನ ನಿಲುವಾಗಿಲು ಪಂಚಾಯತಿಯ ಮುದುಗೆರೆ ಗ್ರಾಮದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಸುನೀಲ್ ಕುಮಾರ್ ಅವರು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ, ಲಂಚಗುಳಿತನವನ್ನು ಓಡಿಸಿ, ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ, ಗ್ರಾಮಗಳ ಅಭಿವೃದ್ಧಿ ಸಾಧಿಸುವುದು ನನ್ನ ಗುರಿ ಎಂದು ಸುನಿಲ್ಕುಮಾರ್ ಮತದಾರರ ಗಮನ ಸೆಳೆಯಲು ಮುಂದಾಗಿದ್ದಾರೆ.

ಶ್ರುತಿ
ಶ್ರುತಿಗ್ರಾಮಗಳ ಅಭಿವೃದ್ಧಿಯಾಗಲು ಪಂಚಾಯಿತಿಗಳಿಗೆ ವಿದ್ಯಾವಂತರು ಹೆಚ್ಚು ಆಯ್ಕೆಯಾಗಬೇಕಿದೆ. ಹಿಂದೆಲ್ಲ ಒಂದು ಗ್ರಾಮ ಪಂಚಾಯಿತಿಯ ಕೆಲಸ ಕಾರ್ಯಗಳ ವ್ಯಾಪ್ತಿ ವಿಸ್ತಾರವೇನು, ಸದಸ್ಯರ ಹಕ್ಕುಗಳು ಮತ್ತು ಅವರ ಕೆಲಸಗಳೇನು ಮುಂತಾದ ವಿಚಾರಗಳು ಜನರಿಗೆ ತಿಳಿದಿರಲಿಲ್ಲ. ಈಗ ಸಾಕಷ್ಟು ಪ್ರಜ್ಞಾವಂತರಾಗಿದ್ದಾರೆ.
ಆದರೆ ಪ್ರತಿಷ್ಠೆ, ರಾಜಕೀಯ ಮೇಲಾಟಗಳಿಂದ ವಿದ್ಯಾವಂತರೂ ಕೂಡ ಅನಕ್ಷರಸ್ಥರಿಗಿಂತಲೂ ಕಡೆಯಾಗಿಹೋಗಿದ್ದಾರೆ. ಇತ್ತೀಚೆಗೆ ಒಂದು ಪಂಚಾಯಿತಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ವರ್ಷಕ್ಕೆ ಕನಿಷ್ಠ ಆರೇಳು ಕೊಟಿ ರೂ.ಗಳ ಅನುದಾನಗಳು ಬರುತ್ತವೆ. ವಸತಿ, ರಸ್ತೆಗಳು, ಚರಂಡಿಗಳು, ಬೀದಿ ದೀಪಗಳು, ಕೊಟ್ಟಿಗೆ ನಿರ್ಮಾಣ ಹೀಗೆ ಸರಿಸುಮಾರು 19 ರೀತಿಯ ಅನುದಾನಗಳು ಬರುತ್ತವೆ. ಇದನ್ನು ಆಯಾ ಗ್ರಾಮಗಳ ಜನಪ್ರತಿನಿಧಿಯಾಗಿ ಅರ್ಹರಿಗೆ ತಲುಪಿಸುವ ಪ್ರಜ್ಞಾವಂತಿಕೆ ಇರಬೇಕಷ್ಟೆ. ಅಂತಹ ಪ್ರತಿನಿಧಿಯನ್ನು ಮತದಾರರೂ ಕೂಡ ಪ್ರಜ್ಞಾವಂತಿಕೆಯಿಂದ ಆಯ್ಕೆ ಮಾಡಿಕೊಳ್ಳಬೇಕಿದೆ.

ಮಂಡ್ಯ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಹೊರಡಿಸಿರುವ ಆದೇಶದಂತೆ ನಾಮಪತ್ರ ವಾಪಸ್ ಪಡೆದವರು, ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡವರು, ಅವಿರೋಧ ಆಯ್ಕೆಯಲ್ಲಿ ಗೆದ್ದು ಸದಸ್ಯರಾದೆವೆಂದು ಬೀಗುತ್ತಿರುವವರಿಗೆ ಶಾಕ್ ಕಾದಿದೆ. ಹರಾಜು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ, ಅಂತಹ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೆ ಮುಂದಾಗುವಂತೆ ಸೂಚಿಸಿರುವುದು ಹಲವರ ನೆಮ್ಮದಿ ಕೆಡಿಸಿರುವುದಂತೂ ದಿಟ. ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಲಾಳನಕೆರೆ ಗ್ರಾಮ ಪಂಚಾಯಿತಿಯ ಬಿದರಕೆರೆ ಕ್ಷೇತ್ರದ ಮೂರು ಸ್ಥಾನಗಳಿಗೆ ಕೆಲ ವ್ಯಕ್ತಿಗಳು ಈ ಸ್ಥಾನವನ್ನು ಅವಿರೋಧವಾಗಿ ಆಯ್ಕೆ ಮಾಡಲು ಹಣಕ್ಕಾಗಿ ಹರಾಜು ಪ್ರಕ್ರಿಯೆ ಮಾಡಿದ್ದು, 44 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲಾಗಿದೆ. ನಾಗಮಂಗಲ ತಾಲ್ಲೂಕಿನ ಅಂಚೆಚಿಟ್ಟನಹಳ್ಳಿ ಗ್ರಾಮ ಪಂಚಾಯಿತಿಯ ಭೈರನಹಳ್ಳಿ ಕ್ಷೇತ್ರದ ಒಂದು ಸ್ಥಾನಕ್ಕೆ ಇದೇ ರೀತಿಯ ಹರಾಜು ಪ್ರಕ್ರಿಯೆ ನಡೆದಿದ್ದು 12 ಜನರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ.

ಪ್ರಮೋದ್‌ , ಶ್ರುತಿ, ಸೌಮ್ಯ
ಪ್ರಮೋದ್‌ , ಶ್ರುತಿ, ಸೌಮ್ಯ

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com