ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣದಡಿಯಲ್ಲಿ ಜೈಲು ಪಾಲಾಗಿದ್ದ ನಟಿ ಸಂಜನಾ ಗಲ್ರಾನಿಗೆ ಕೊನೆಗೂ ಜಾಮೀನು ದೊರೆತಿದೆ. ಸಂಜನಾ ಅವರಿಗೆ ಈ ಹಿಂದೆ ಜಾಮೀನು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್ ಈಗ ಷರತ್ತುಬದ್ದ ಜಾಮೀನು ನೀಡಿದೆ.
ಶ್ರೀನಿವಾಸ್ ಹರೀಶ್ ಕುಮಾರ್ ಅವರು ಜಾಮೀನು ನೀಡುವಾಗ ಮೂರು ಷರತ್ತುಗಳನ್ನು ವಿಧಿಸಿದ್ದು, ಅದರ ಪ್ರಕಾರ, ರೂ. 3 ಲಕ್ಷಗಳ ವೈಯಕ್ತಿಕ ಬಾಂಡ್, ತಿಂಗಳಿಗೆ ಎರಡು ಬಾರಿ ಕೋರ್ಟಿಗೆ ಹಾಜರಾಗುವದರೊಂದಿಗೆ ಯಾವುದೇ ಸಾಕ್ಷ್ಯಾಧಾರಗಳನ್ನು ನಾಶಪಡಿಸದೇ ತನಿಖೆಗೆ ಸಹಕರಿಸಬೇಕೆಂದು ನಿರ್ದೇಶನಗಳನ್ನು ನೀಡಿದೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಇದರೊಂದಿಗೆ, ಜೈಲು ಅಧಿಕಾರಿಗಳಿಗೇ ಶುಕ್ರವಾರವೇ ಈ ಕುರಿತಾಗಿ ಮಾಹಿತಿಯನ್ನು ತಿಳಿಸಬೇಕೆಂದು ಕೋರ್ಟ್ ಆದೇಶ ನೀಡಿದೆ.
ಕಳೆದ ತಿಂಗಳು ಜಾಮೀನು ಅರ್ಜಿ ಸಲ್ಲಿಸಿದ್ದ ಸಂಜನಾ ಅವರಿಗೆ ಹೈಕೋರ್ಟ್ ನಿರಾಸೆ ಮಾಡಿತ್ತು. ಅಕ್ಟೋಬರ್ನಲ್ಲಿ ಎನ್ಡಿಪಿಎಸ್ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅರ್ಜಿಯೂ ತಿರಸ್ಕೃತಗೊಂಡಿತ್ತು.
ಕಳೆದ ಸೋಮವಾರ ಹೊಸ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಾಗ ಸಂಜನಾ ಅವರ ಸಂಪೂರ್ಣ ವೈದ್ಯಕೀಯ ತಪಾಸಣೆ ನಡೆಸಲು ಕೋರ್ಟ್ ಆದೇಶ ನೀಡಿತ್ತು. ಗುರುವಾರ ಸರ್ಕಾರದ ಪರ ವಕೀಲ ವಿ ಜಿ ತಿಗಾಡಿ ಅವರು ಅನಾರೋಗ್ಯದ ಕಾರಣ ನೀಡಿ ವಿಚಾರಣೆಯನ್ನು ಮುಂದೂಡಲು ಕೋರಿಕೊಂಡಿದ್ದರು. ಈಗ ಸಂಜನಾ ಅವರಿಗೆ ಜಾಮೀನು ಮಂಜೂರಾಗಿದ್ದು, ಜೈಲಿನಿಂದ ಬಿಡುಗಡೆಯಾಗುವ ಖುಶಿಯಲ್ಲಿದ್ದಾರೆ.
ಇನ್ನೋರ್ವ ನಟಿ ರಾಗಿಣಿ ಅವರ ಜೈಲು ವಾಸ ಮುಂದುವರೆದಿದ್ದು, ಡಿಸೆಂಬರ್ ಮೊದಲ ವಾರದಲ್ಲಿ ಸುಪ್ರಿಂ ಕೋರ್ಟ್ಗೆ ಸಲ್ಲಿಸಿದ್ದ ಜಾಮೀನು ಅರ್ಜಿ ತಿರಸ್ಕೃತಗೊಂಡಿದೆ.