ಕೃಷಿಕರ ಗೋಳಿನ ಕಥೆ: ಕೊಡಗಿನಲ್ಲಿ ಆರು ದಶಕ ಕಳೆದರೂ ಸಿಗದ ಪರ್ಯಾಯ ಜಾಗ

ಅಧಿಕಾರಶಾಹಿ ವರ್ಗದ ಜನರ ವರ್ತನೆಯಿಂದ ಕೊಡಗಿನ ಕೆಲ ಕುಟುಂಬಗಳಿಗೆ ಆರು ದಶಕಗಳಿಂದ ಇನ್ನೂ ಭೂಮಿ ಸಿಕ್ಕಿಲ್ಲ, ಭುಮಿ ಪಡೆಯಲು ಇವರು ಇನ್ನಿಲ್ಲದ ಹರಸಾಹಸ ಮಾಡುತಿದ್ದಾರೆ.
ಕೃಷಿಕರ ಗೋಳಿನ ಕಥೆ: ಕೊಡಗಿನಲ್ಲಿ ಆರು ದಶಕ ಕಳೆದರೂ ಸಿಗದ ಪರ್ಯಾಯ ಜಾಗ


ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕೃಷಿಕರ ಬದುಕು ಕಷ್ಟಕರ. ಒಂದೆಡೆ ವರ್ಷ ವರ್ಷವೂ ಪಾಕೃತಿಕ ವಿಕೋಪಕ್ಕೆ ಸಿಲುಕಿ ನಲುಗುತ್ತಿದ್ದರೆ ಮತ್ತೊಂದೆಡೆ ವನ್ಯಪ್ರಾಣಿಗಳ ಹಾವಳಿ ಮಿತಿ ಮೀರಿದೆ. ಜಿಲ್ಲೆಯ ಬಹುತೇಕ ಎಲ್ಲ ಗ್ರಾಮಗಳಲ್ಲೂ ಕಾಡಾನೆಗಳ ಉಪಟಳ ಇದೆ. ಕೆಲವೆಡೆಗಳಲ್ಲಿ ಹುಲಿ , ಚಿರತೆಗಳು ಜಾನುವಾರುಗಳನ್ನು ಕೊಲ್ಲುತ್ತಿವೆ. ಅದರಲ್ಲೂ ದಕ್ಷಿಣ ಕೊಡಗಿನ ನಾಗರಹೊಳೆಯ ಸುತ್ತ ಮುತ್ತಲಿನ ಗ್ರಾಮಗಳಿಗಂತೂ ಹುಲಿ ಕಾಟ ದುಸ್ವಪ್ನವಾಗಿದೆ. ಮತ್ತೊಂದೆಡೆ ಸರ್ಕಾರಿ ಅಧಿಕಾರಿಗಳ ಅಧಿಕಾರಶಾಹಿ ವರ್ತನೆಯಿಂದ ಕೃಷಿಕರು ಮತ್ತಷ್ಟು ಸಂಕಟ ಅನುಭವಿಸಬೇಕಾಗಿದೆ. ಈ ಅಧಿಕಾರ ಶಾಹಿ ವರ್ತನೆಯಿಂದ ಕೊಡಗಿನ ಕೆಲ ಕುಟುಂಬಗಳಿಗೆ ಆರು ದಶಕಗಳಿಂದ ಇನ್ನೂ ಭೂಮಿ ಸಿಕ್ಕಿಲ್ಲ, ಭುಮಿ ಪಡೆಯಲು ಇವರು ಇನ್ನಿಲ್ಲದ ಹರಸಾಹಸ ಮಾಡುತಿದ್ದಾರೆ.

ಉತ್ತರ ಕೊಡಗಿನ ಶನಿವಾರಸಂತೆ ಹೋಬಳಿಯ ಗಂಗಾಧರಯ್ಯ ಹಾಗೂ ಇತರರು ಗಣಗೂರು ಗ್ರಾಮದ 135/2 ಸರ್ವೆ ನಂ. ಅಡಿಯಲ್ಲಿ 64.61 ಎಕರೆ ಜಾಗವನ್ನು 1957 ರಲ್ಲಿ ಆಗಿನ ಕೂರ್ಗ್ ಕಮಿಷನರ್ ಮೂಲಕ ಹರಾಜಿನಲ್ಲಿ ಪಡೆದುಕೊಂಡಿದ್ದರು. ಇಲ್ಲಿ ವ್ಯವಸಾಯ ಮಾಡಿ ಉತ್ತಮ ಬದುಕು, ಮನೆ ಕಟ್ಟಿಕೊಳ್ಳುವುದು ಇವರ ಉದ್ದೇಶವಾಗಿತ್ತು. ಆದರೆ ಇವರಿಗೆ ಸರ್ಕಾರ ನೀಡಿದ ಜಮೀನು ಕಾಡಾನೆಗಳ ಬೀಡಾಗಿದ್ದು ನಿತ್ಯದ ಆನೆ ಕಾಟದಿಂದ ಅವರು ವ್ಯವಸಾಯ ಮಾಡಲು ಸಾಧ್ಯವಾಗಲೇ ಇಲ್ಲ. ನಂತರ ಬೇಸತ್ತು 1960 ರಲ್ಲೆ ಆ ಜಮೀನನ್ನು ಸರ್ಕಾರಕ್ಕೆ ಹಿಂತಿರುಗಿಸಿ ಬೇರೆಡೆ ಜಮೀನು ನೀಡುವಂತೆ ಮನವಿ ಮಾಡಿಕೊಂಡರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಜಾಗದಲ್ಲಿ ಯಾವುದೇ ಕೃಷಿ ಚಟುವಟಿಕೆ ನಡೆಸಲು ಅನಾನುಕೂಲವಾದ ಹಿನ್ನೆಲೆಯಲ್ಲಿ 1964 ರಲ್ಲಿ ಹರಾಜು ಮಂಜೂರಾತಿ ರದ್ದು ಮಾಡಿದ ಅಂದಿನ ಜಿಲ್ಲಾಧಿಕಾರಿಗಳು ಇವರಿಗೆ ಪರ್ಯಾಯವಾಗಿ ಜಾಗ ಕೊಡುವ ಭರವಸೆ ನೀಡಿದರೆನ್ನಲಾಗಿದೆ. ಆದರೆ ವರುಷಗಳೇ ಉರುಳಿದರೂ ಯಾವೊಬ್ಬ ಅಧಿಕಾರಿಯೂ ಇವರಿಗೆ ಭೂಮಿ ನೀಡಲೇ ಇಲ್ಲ. ಇವರು ಭೂಮಿಗಾಗಿ ತಾಲ್ಲೂಕು ಕಚೇರಿ, ಜಿಲ್ಲಾಧಿಕಾರಿಯವರ ಕಚೇರಿಗೆ ಲೆಕ್ಕವಿಲ್ಲದಷ್ಟು ಬಾರಿ ಎಡತಾಕಿ ಚಪ್ಪಲಿ ಸವೆದವೇ ಹೊರಲು ಭೂಮಿ ಸಿಗಿಲ್ಲ. ಕೊನೆಗೆ ಬೇಸತ್ತು ವಕೀಲರೊಬರ ನೆರವಿನಿಂದ ರಾಜ್ಯ ಹೈಕೋರ್ಟಿನಲ್ಲಿ ರಿಟ್‌ ಅರ್ಜಿ ಸಲ್ಲಿಸಿದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟು 2010 ರಲ್ಲಿ ಆದೇಶವೊಂದನ್ನು ನೀಡಿ ಆ ಕುಟುಂಬಗಳಿಗೆ ಪರ್ಯಾಯ ಜಾಗವನ್ನು ಕಲ್ಪಿಸುವಂತೆ ಕೊಡಗು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿತ್ತು.

ಇಷ್ಟೆಲ್ಲದರ ನಡುವೆ 2010 ರಲ್ಲಿ ಅಂದಿನ ಕೊಡಗು ಜಿಲ್ಲಾಡಳಿತದ ಕೆಲವು ಅಧಿಕಾರಿಗಳು ದೊಡ್ಡ ಪ್ರಮಾದವೊಂದನ್ನು ಎಸಗಿರುವುದು ಇದುವರೆಗೂ ಈ ಫಲಾನುಭವಿಗಳಿಗೆ ಪರ್ಯಾಯ ಭೂಮಿ ದೊರಕದಿರಲು ಪ್ರಮುಖ ಕಾರಣ ಎನ್ನಲಾಗಿದೆ. ಕೆಲವು ಮಧ್ಯವರ್ತಿಗಳ ಮೂಲಕ ಆಗಿನ ಅಧಿಕಾರಿಗಳು ಈ ಕುಟುಂಬಗಳಿಗೆ ಕುಶಾಲನಗರ-ಮಡಿಕೇರಿ ರಸ್ತೆಯ 7ನೇ ಹೊಸಕೋಟೆ ಬಳಿ ಸರ್ವೆ ನಂ. 14 ರ ಅತ್ತೂರು ಮೀಸಲು ಅರಣ್ಯ ಪ್ರದೇಶವನ್ನು ಸರ್ವೆ ಮಾಡುವ ಮೂಲಕ ಜಾಗ ನೀಡುವುದಾಗಿ ಭರವಸೆ ನೀಡಿ ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆಯ ಜಂಟಿ ಸರ್ವೆಗೆ ಆದೇಶ ಕೂಡ ಮಾಡಿತ್ತು. ಆದರೆ ಜಿಲ್ಲಾಧಿಕಾರಿಗಳು ಇವರಿಗೆ ನೀಡಲು ಗುರುತಿಸಿದ ಜಾಗವು ಅರಣ್ಯ ಇಲಾಖೆಯ ಮೀಸಲು ಅರಣ್ಯ ಆಗಿದೆ. ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ ಹಿನ್ನೆಲೆ ಅರಣ್ಯಾಧಿಕಾರಿಗಳು ಈ ಭೂಮಿಯನ್ನು ನೀಡಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅದನ್ನು ಮಂಜೂರು ಮಾಡಿ ಕೊಡಲು ಜಿಲ್ಲಾಧಿಕಾರಿ ಅವರಿಗೂ ಅಧಿಕಾರವಿಲ್ಲ.

ವಿಶೇಷವೆಂದರೆ ಈ ಪ್ರದೇಶ ಕೂಡ ಕಾಡಾನೆ ಮತ್ತು ವನ್ಯಜೀವಿಗಳ ಆವಾಸ ಸ್ಥಾನವಾಗಿದ್ದು ಜಾಗದ RTC ಅರಣ್ಯ ಇಲಾಖೆಯ ಹೆಸರಿನಲ್ಲಿದೆ. . ಈ ಬೆಳವಣಿಗೆಯಿಂದ ತಕ್ಷಣ ಎಚ್ಚೆತ್ತ ಅರಣ್ಯ ಇಲಾಖೆ ಪೊಲೀಸ್ ಸಹಕಾರ ಪಡೆದು ಸರ್ವೆ ನಡೆಸದಂತೆ ನಿರ್ಬಂದಿಸಿದೆ. ಆದರೆ ಗಣಗೂರಿನಲ್ಲಿ ಜಾಗ ಕಳೆದುಕೊಂಡ ಕುಟುಂಬಗಳು ಮಾತ್ರ ಅತಂತ್ರ ಪರಿಸ್ಥಿತಿಯಲ್ಲಿ ಮತ್ತೆ ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿ ಸೃಷ್ಟಿಯಾಗಿ ಅರಣ್ಯ ಇಲಾಖೆ ಮತ್ತು ಗಣಗೂರು ನಿವಾಸಿಗಳ ನಡುವೆ ಇನ್ನೂ ವ್ಯಾಜ್ಯ ಮುಂದುವರೆದಿದೆ. ಅರಣ್ಯ ಇಲಾಖೆ ಈ ಬಗ್ಗೆ ನ್ಯಾಯಾಲಯಕ್ಕೆ ಸಂಪೂರ್ಣ ಮಾಹಿತಿ ಒದಗಿಸಿದ್ದು ಸಂಬಂಧಿಸಿದ 64.61 ಎಕರೆ ಜಾಗವನ್ನು ಜಂಟಿ ಸರ್ವೆ ಮೂಲಕ ಪತ್ತೆಹಚ್ಚುವಂತೆ ಕೋರಲಾಗಿದೆ ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಜೆ. ಅನನ್ಯಕುಮಾರ್ ತಿಳಿಸಿದರು. ಅಲ್ಲದೆ ಈ ಭೂಮಿಯು 1890 ರಲ್ಲೆ ಅಂದಿನ ಬ್ರಿಟಿಷ್‌ ಸರ್ಕಾರದ ಅವಧಿಯಲ್ಲೆ ಅರಣ್ಯ ಇಲಾಖೆಗೆ ನೀಡಲಾಗಿರುವುದಕ್ಕೂ ದಾಖಲೆ ಇದ್ದು ಇದು ಇಲಾಖೆ ಸೇರಿದ್ದು ಎಂದು ಅವರು ತಿಳಿಸಿದರು.

ಹೊಸಕೋಟೆ ಗ್ರಾಮಕ್ಕೆ ಸೇರಿದ ಸರ್ವೆ ನಂ 14 ರಲ್ಲಿ ಬರುವ 64.61 ಎಕರೆ ಜಾಗ ಮೀಸಲು ಅರಣ್ಯಕ್ಕೆ ಸೇರಿದ ಜಾಗವೆಂದು ಸ್ಪಷ್ಟಪಡಿಸಿದ ಅವರು, ಈ ಮೇಲೆ ತಿಳಿಸಿದ ಫಲಾನುಭವಿಗಳಿಗೆ ಗುರುತಿಸಿರುವ ಜಾಗವನ್ನು ಸರ್ವೆ ಮಾಡುವ ಮೂಲಕ ಪತ್ತೆಹಚ್ಚಬೇಕಾಗಿದೆ ಎಂದಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆ 1980 ರ ಪ್ರಕಾರ ಅರಣ್ಯ ಇಲಾಖೆಯ ಸುಪರ್ದಿಯಲ್ಲಿ ಇರುವ ಜಾಗವನ್ನು ಯಾವುದೇ ಖಾಸಗಿ ವ್ಯಕ್ತಿಗಳಿಗೆ ನೀಡುವಂತಿಲ್ಲ ಎಂದು ಅವರು ತಿಳಿಸಿದ್ದಾರೆ. ಈ ಪ್ರಕರಣಕ್ಕೆ 2010 ರ ಅವಧಿಯಲ್ಲಿ ಇದ್ದ ಜಿಲ್ಲೆಯ ಹಾಗೂ ತಾಲೂಕಿನ ಅಧಿಕಾರಿಗಳು ತಪ್ಪು ದಾಖಲೆ ಸೃಷ್ಟಿಸುವ ಮೂಲಕ ಈ 64 ಎಕರೆಯನ್ನು ಒಂದು ಮ್ಯುಟೇಷನ್‌ ದಾಖಲೆಯಲ್ಲಿ ಪೈಸಾರಿ ಎಂದು ತೋರಿಸಿರುವುದೆ ಈ ಕೃಷಿಕ ಕುಟುಂಬಗಳಿಗೆ ಇನ್ನೂ ನ್ಯಾಯ ದೊರೆಯದಿರಲು ಕಾರಣವಾಗಿದೆ. ನೊಂದ ಕುಟುಂಬಗಳು ಭೂಮಿಗಾಗಿ ಕಾಯುತ್ತಲೇ ಇವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com