ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತ ಕುಟುಂಬದ ಶೋಚನೀಯ ಬದುಕು

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗಂತೂ ಈ ಪರಿಸ್ಥಿತಿ ಅತ್ಯಂತ ಶೋಚನೀಯ, ವಸತಿ ಯೋಜನೆ ಸೇರಿದಂತೆ ಸರ್ಕಾರದ ಸೌಲಭ್ಯಗಳಿಗಾಗಿ ಬಹಳಷ್ಟು ಯೋಜನೆ ಗಳಿದ್ದರೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಅವುಗಳು ಸಕಾಲದಲ್ಲಿ ಲಭಿಸದಂತಾಗಿವೆ
ಸಂಕಷ್ಟಕ್ಕೆ ಸಿಲುಕಿದ ಸಂತ್ರಸ್ತ ಕುಟುಂಬದ ಶೋಚನೀಯ ಬದುಕು

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಕಳೆದ ಎರಡು ವರ್ಷಗಳ ಭೀಕರ ಭೂ ಕುಸಿತ ಮತ್ತು ಮಳೆಗೆ
ಸಿಲುಕಿ ನೂರಾರು ಜನರು ಮನೆ ಮಠ ಕಳೆದುಕೊಂಡಿದ್ದಾರೆ. ಹಿಂದಿನ ವರ್ಷಗಳಲ್ಲಿ ಎಂದೂ ಕಾಣದಂತ ಭೂ ಕುಸಿತ ಎರಡು ವರ್ಷಗಳಲ್ಲಿ ಜಿಲ್ಲೆಯನ್ನು ನಲುಗಿಸಿದೆ. ಮತ್ತೊಂದೆಡೆ ಜಗತ್ತನ್ನೆ ತಲ್ಲಣಗೊಳಿಸಿರುವ ಕೋವಿಡ್ ಸೋಂಕಿನಿಂದಾಗಿ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟೂ ನೆಲ ಕಚ್ಚಿದೆ. ಜಿಲ್ಲೆಯಿಂದ ಬೆಂಗಳುರಿಗೆ ಉದ್ಯೋಗ ಅರಸಿಕೊಂಡು ಹೋಗಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಜನರು ಪುನಃ ತವರಿಗೆ ವಾಪಾಸ್ ಆಗಿದ್ದಾರೆ.

ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ಸಾವಿರಾರು ಸಂತ್ರಸ್ಥರು ಸೃಷ್ಟಿಯಾಗಿದ್ದಾರೆ. ನಮ್ಮನ್ನು ಆಳುವ ಸರ್ಕಾರಗಳು ಸಂತ್ರಸ್ಥರಿಗೆ ನೆರವು ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ. ಈ ಪ್ರವಾಸೀ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದ ಭೀಕರ ಸನ್ನಿವೇಶಗಳಲ್ಲಿ ಮನೆ-ಮಠ, ಆಸ್ತಿ-ಪಾಸ್ತಿ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿ ಕಂಗಾಲಾದ ಸಂತ್ರಸ್ತರು, ಬದುಕು ಕಟ್ಟಿಕೊಳ್ಳಲು, ಹಲವು ರೀತಿಯಲ್ಲಿ ಹರಸಾಹಸ ಪಡುತ್ತಿದ್ದಾರೆ.ಅದೆಷ್ಟೋ ಜನಸಾಮಾನ್ಯರು ಸಕಾಲಕ್ಕೆ ಸಿಗದ ಸರ್ಕಾರದ ಸೌಲಭ್ಯಗಳಿಗಾಗಿ ಅಸ್ಸಾಹಾಯಕತೆಯಿಂದ ಪರಿತಪಿಸುತ್ತಿದ್ದಾರೆ.
ಮಳೆಗಾಲದಲ್ಲಿ ವರುಣನ ರೌದ್ರ ನರ್ತನದ ಆರ್ಭಟಕ್ಕೆ ಗುರಿಯಾಗಿ ಕುಸಿದು ಬಿದ್ದ ಹಲವು ಮನೆಗಳು, ನೆಲೆ ಕಳೆದುಕೊಂಡು ಪರಿತಪಿಸುವ ಅನೇಕ ಕುಟುಂಬಗಳು, ನಷ್ಟಕ್ಕೀಡಾಗುವ ಬೆಳೆದ ಫಸಲಿನ ಬೆಳೆಗಳು, ಸಾಂತ್ವನಕ್ಕೆ ಸೀಮಿತವಾಗುವ ಸಚಿವರು, ಶಾಸಕರ ಆಶ್ವಾಸನೆಗಳು, ಪರಿಹಾರ ಕಲ್ಪಿಸಲು ಅನೇಕ ನಿಯಮಗಳನ್ನು ಮುಂದಿಡುವ ಅಧಿಕಾರಿಗಳು, ಕಂತುಗಳಲ್ಲಿ ಬಿಡುಗಡೆಯಾಗುವ ಅಲ್ಪಸ್ವಲ್ಪ ಅನುದಾನಗಳು, ಎಷ್ಟೋ ನೈಜ ಸಂತ್ರಸ್ತರಿಗೆ ಸಿಗದ ಸರ್ಕಾರದ ಸವಲತ್ತುಗಳು, ಇವೆಲ್ಲ ಪ್ರಾಕೃತಿಕ ದುರಂತಗಳು ಸಂಭವಿಸಿದ ನಂತರದ ದಿನಗಳಲ್ಲಿ ಕಂಡುಬರುವ, ಸಮಸ್ಯೆಗಳ ಸರಮಾಲೆಯ ಸಾಮಾನ್ಯ ಚಿತ್ರಣಗಳು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗಂತೂ ಈ ಪರಿಸ್ಥಿತಿ ಅತ್ಯಂತ ಶೋಚನೀಯ, ವಸತಿ ಯೋಜನೆ ಸೇರಿದಂತೆ ಸರ್ಕಾರದ ಸೌಲಭ್ಯಗಳಿಗಾಗಿ ಬಹಳಷ್ಟು ಯೋಜನೆ ಗಳಿದ್ದರೂ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಜನರಿಗೆ ಅವುಗಳು ಸಕಾಲದಲ್ಲಿ ಲಭಿಸದಂತಾಗಿವೆ.ಮೊದಲೇ ಹಣ ಖರ್ಚು ಮಾಡಿ ಕಾಮಗಾರಿ ಕೈಗೊಳ್ಳಲು ಚೈತನ್ಯವಿಲ್ಲದ ಬಡ ಜನರು ಹಲವಾರು ರೀತಿಯ ಸಮಸ್ಯೆಗಳಿಗೆ ಒಳಗಾಗುತ್ತಾರೆ. ನಿರ್ದಿಷ್ಟ ಸಮಯಕ್ಕೆ ದೊರೆಯದ ಸರ್ಕಾರದ ಯೋಜನೆಗಳು, ಅದನ್ನು ನಂಬಿ ಶೋಚನೀಯ ಸ್ಥಿತಿಯಲ್ಲಿ ತೊಳಲಾಡುತ್ತಿರುವ ಜನಸಾಮಾನ್ಯರು ಬಗೆಹರಿಯದ ಸಮಸ್ಯೆಗಳ ನಡುವೆ ನಲುಗುವಂತಾಗಿದೆ. ಕಳೆದ ವರ್ಷದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದ ಹಾನಿಗೊಳಗಾಗಿ ಕುಸಿದುಬಿದ್ದ, ವಾಸದ ಮನೆಯನ್ನು ಕಳೆದುಕೊಂಡ ಬಡ ಕುಟುಂಬವೊಂದು ಸಂತ್ರಸ್ತರ ಪುನರ್ವಸತಿ ಯೋಜನೆಯ ಫಲಾನುಭವಿಯಾದರೂ ಪ್ರಯೋಜನವಿಲ್ಲದೇ, ವಾಸಿಸಲು ಮನೆ ಇಲ್ಲದೇ ಅತಂತ್ರ ಸ್ಥಿತಿಗೆ ಒಳಗಾದ ದಯನೀಯ ಪರಿಸ್ಥಿತಿಗೆ ಊರಿನ ಜನರೆಲ್ಲರೂ ಸಾಕ್ಷಿಯಾಗಿದ್ದಾರೆ.

ನೂತನವಾಗಿ ರಚನೆಗೊಂಡ ಪೊನ್ನಂಪೇಟೆ ತಾಲ್ಲೂಕಿನ ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಾಗಿರುವ ಜುಬೇದಾ ಎಂಬ ಮಹಿಳೆಯೊಬ್ಬರ ಮನೆ ಕಳೆದ ವರ್ಷದ ಧಾರಾಕಾರ ಮಳೆಯಲ್ಲಿ ಸಂಪೂರ್ಣವಾಗಿ ಜಲಾವೃತಗೊಂಡು ಕುಸಿದು ಬಿದ್ದಿತ್ತು. ಮಳೆಯಿಂದಾಗಿ ವಾಸವಿದ್ದ ನೆಲೆಯನ್ನು ಕಳೆದುಕೊಂಡ ಅವರು, ಅದರ ಸಮೀಪದಲ್ಲಿ ಸಣ್ಣ ತಾತ್ಕಾಲಿಕ ಶೆಡ್ ವೊಂದನ್ನು ನಿರ್ಮಿಸಿಕೊಂಡು, ಕೂಲಿ ಕೆಲಸದಿಂದ ಜೀವನ ಸಾಗಿಸುತ್ತ ಮಗ ಹಮೀದ್,ಸೊಸೆ ಮುನೀರಾ ಮತ್ತು ಮೊಮ್ಮಗನೊಂದಿಗೆ ತಿತಿಮತಿಯಲ್ಲಿ ವಾಸವಾಗಿದ್ದಾರೆ.ಅವರ ಮಗ ಟಿಂಬರ್ ಕೆಲಸ ಮಾಡುತ್ತ ಕುಟುಂಬದ ಜವಾಬ್ದಾರಿ ನಿರ್ವಹಿಸುತ್ತಿದ್ದರು. ಆದರೆ ಪ್ರಾಕೃತಿಕ ವಿಕೋಪದಿಂದ ಸ್ವಂತ ಸೂರನ್ನು ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡವರಿಗೆ ಸಂತ್ರಸ್ತರ ಪುನರ್ವಸತಿ ಯೋಜನೆಯಲ್ಲಿ ಮನೆ ಮರು ನಿರ್ಮಾಣಕ್ಕೆ, ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದೆ. ಈ ಯೋಜನೆಯ ಅನುದಾನದಲ್ಲಿ ಮನೆ ಮರು ನಿರ್ಮಿಸಿಕೊಳ್ಳಲು ರಾಜೀವ್ ಗಾಂಧಿ ವಸತಿ ನಿಗಮದ, ವಸತಿ ಯೋಜನೆಯ ಫಲಾನುಭವಿಯಾದ ಅವರಿಗೆ ಒಂದು ಕಂತಿನ ಪರಿಹಾರ ಹಣ ಬಿಡುಗಡೆಯಾಗಿದ್ದು, ಮನೆಯ ಪೌಂಡೇಶನ್ ನಿರ್ಮಾಣ ಕಾರ್ಯ ಮುಗಿದು ವರ್ಷ ಕಳೆದಿದೆ.


ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕುಟುಂಬಕ್ಕೆ ಮುಂದಿನ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗದೇ ಮನೆ ನಿರ್ಮಾಣ ಕೆಲಸ ಅರ್ಧಕ್ಕೆ ನಿಂತಿದೆ. ಸಣ್ಣ ಜಾಗದಲ್ಲಿ ನಿರ್ಮಿಸಿ ಕೊಂಡಿರುವ ತಾತ್ಕಾಲಿಕ ಶೆಡ್ ನಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯ ನಡುವೆಯೂ ಈ ವರ್ಷದ ಮತ್ತೊಂದು ಮಳೆಗಾಲವನ್ನು ಸಹ ಅವರು ಬಹಳ ಕಷ್ಟದಿಂದ ಕಳೆದಿದ್ದಾರೆ. ತನ್ನ ದುಡಿಮೆಯ ಸಂಪಾದನೆಯಿಂದ ಸಂಸಾರದ ಹೊಣೆ ನಿಭಾಯಿಸುತ್ತಿದ್ದ ಜುಬೇದಾರವರ ಮಗ ಹಮೀದ್ ಇದ್ದಕ್ಕಿದ್ದಂತೆ ತೀವ್ರವಾದ ಕಾಲು ನೋವಿನಿಂದ ಅನಾರೋಗ್ಯಕ್ಕೆ ತುತ್ತಾದರು.

ಸಮೀಪದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖ ಕಾಣದೇ, ವೈದ್ಯರ ಸಲಹೆ ಮೇರೆಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಾದರು. ಅಲ್ಲಿ ಒಂದು ಕಾಲಿಗೆ ಗ್ಯಾಂಗ್ರಿನ್ ಆವರಿಸಿರುವುದರಿಂದ ಆ ಕಾಲನ್ನು ಶಸ್ತ್ರಚಿಕಿತ್ಸೆ ಮೂಲಕ ಸಂಪೂರ್ಣವಾಗಿ ಕತ್ತರಿಸಿ ತೆಗೆಯಬೇಕೆಂದು ಇಲ್ಲದಿದ್ದರೇ ಅದು ದೇಹಕ್ಕೆ ವ್ಯಾಪಿಸಿ ಆರೋಗ್ಯದ ಮೇಲೆ ಗಂಭೀರ ಸ್ವರೂಪದ ದುಷ್ಪರಿಣಾಮ ಬೀರಬಹುದೆಂದು, ಫಾದರ್ ಮುಲ್ಲರ್ ಆಸ್ಪತ್ರೆಯ ವೈದ್ಯರು ತಿಳಿಸಿದ್ದರಿಂದ, ಬೇರೆ ವಿಧಿಯಿಲ್ಲದೇ ಶಸ್ತ್ರಚಿಕಿತ್ಸೆಗೆ ಸಮ್ಮತಿಸಲೇಬೇಕಾದ ಅನಿವಾರ್ಯತೆ ಎದುರಾಯಿತು ಎಂದು ಕುಟುಂಬದ ಸದಸ್ಯರು ತಿಳಿಸುತ್ತಾರೆ.

ಕೂಲಿ ಕೆಲಸದಿಂದ ಜೀವನ ಸಾಗಿಸುತ್ತಿರುವ ಅವರಿಗೆ ಶಸ್ತ್ರ ಚಿಕಿತ್ಸೆ ಮತ್ತು ಆಸ್ಪತ್ರೆಯ ಖರ್ಚುವೆಚ್ಚ ಗಳನ್ನು ಭರಿಸುವಷ್ಟು ಸಾಮರ್ಥ್ಯವಿಲ್ಲದೇ ಪರಿತಪಿಸಬೇಕಾದ ಸಮಯದಲ್ಲಿ ತಿತಿಮತಿಯ ಕುವೈತ್ತುಲ್ ಜುಮ್ಮಾ ಮಸೀದಿ ಕಮಿಟಿ ವತಿಯಿಂದ ಹಣಕಾಸಿನ ನೆರವು ನೀಡಲಾಗಿದ್ದು, ಶಸ್ತ್ರ ಚಿಕಿತ್ಸೆ ಮತ್ತು ಆಸ್ಪತ್ರೆಯ ಖರ್ಚುವೆಚ್ಚ ಸುಮಾರು ನಾಲ್ಕು ಲಕ್ಷ ರೂಪಾಯಿಗಳನ್ನು ತಿತಿಮತಿ ಕುವೈತ್ತುಲ್ ಜುಮ್ಮಾ ಮಸೀದಿ ಕಮಿಟಿ ವತಿಯಿಂದಲೇ ಭರಿಸಲಾಗಿದೆ. ಹಮೀದ್ ರವರ ಸದ್ಯದ ಕುಟುಂಬ ನಿರ್ವಹಣೆಯ ವೆಚ್ಚವನ್ನು ಸಹ ಮಸೀದಿ ಕಮಿಟಿಯಿಂದಲೇ ನೋಡಿ ಕೊಳ್ಳಲಾಗುತ್ತಿದ್ದು, ಕಷ್ಟಕ್ಕೆ ಸಿಲುಕಿದ ಬಡ ಕುಟುಂಬಕ್ಕೆ ಸಹಾಯ ನೀಡಿದ್ದಾರೆ.

ಕುಟುಂಬಕ್ಕೆ ಆಸರೆಯಾಗಿದ್ದ ಮಗ ಒಂದು ಕಾಲನ್ನು ಕಳೆದುಕೊಂಡು ಮುಂದೆ ದುಡಿಯಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ನರಳಾಡುತ್ತಿರುವುದನ್ನು ಕಂಡು ತಾಯಿ ನೋವಿನಿಂದ ಕಂಬನಿ ಮಿಡಿಯುವಂತಾಗಿದೆ. ಮುಂದಿನ ಬದುಕಿನ ಬಗ್ಗೆ ಚಿಂತೆಯು ಅವರನ್ನು ಕಾಡುತ್ತಿದೆ. ಇರಲು ಮನೆ ಇಲ್ಲದೇ, ಬಾಡಿಗೆ ಮನೆಯಲ್ಲಿ ವಾಸಿಸಲು ಹಣಕಾಸಿನ ಸಮಸ್ಯೆಯಿರುವುದರಿಂದ, ಇಕ್ಕಟ್ಟಾದ ಸಣ್ಣ ಶೆಡ್ ವೊಂದರಲ್ಲಿ ದಿನದೂಡುತ್ತಿರುವ ಅವರಿಗೆ, ಅನಾರೋಗ್ಯ ಪೀಡಿತ ಮಗನನ್ನು ಅದರಲ್ಲಿ ಉಳಿಸಿಕೊಳ್ಳಲು ಪ್ರತ್ಯೇಕ ಕೊಠಡಿಯು ಇಲ್ಲದೇ, ಸ್ಥಳಾವಕಾಶವು ಸಾಕಾಗದೇ ಇರುವುದರಿಂದ , ಸಂಬಂಧಿಕರೊಬ್ಬರು ಕೊಠಡಿಯೊಂದನ್ನು ನೀಡಿ ಅದರಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಿದ್ದಾರೆ. ವಾಸಕ್ಕೆ ಇದ್ದ ಸ್ವಂತ ನೆಲೆಯನ್ನು ಕಳೆದುಕೊಂಡು ಅನಾರೋಗ್ಯದ ಸಮಯದಲ್ಲಿ ವಿಶ್ರಾಂತಿ ಪಡೆಯಲು ಜಾಗವಿಲ್ಲದೇ ಸಂಬಂಧಿಕರ ಮನೆಯನ್ನು ಆಶ್ರಯಿಸಬೇಕಾದ ಸಂದಿಗ್ಧ ಪರಿಸ್ಥಿತಿ ಬಡ ಕುಟುಂಬಕ್ಕೆ ಎದುರಾಗಿದೆ. ಜಿಲ್ಲಾಡಳಿತ ಹಾಗು ಜನಪ್ರತಿನಿಧಿಗಳು ಜನಸಾಮಾನ್ಯರ
ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಸರ್ಕಾರದ ಪರಿಹಾರ ಯೋಜನೆಗಳನ್ನು ನಂಬಿ ಅನಾರೋಗ್ಯ ಪೀಡಿತರು, ವಯೋವೃದ್ಧರು, ದುರ್ಬಲ ವರ್ಗದವರು ಇನ್ನೂ ಮುಂತಾದವರು ಮತ್ತಷ್ಟು ಸಮಸ್ಯೆಗಳಿಗೆ ಗುರಿಯಾಗಿ ಪರದಾಡಬೇಕಾಗುತ್ತದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ಆದರೆ ಇದು ಕೇವಲ ಒಂದು ನಿರಾಶ್ರಿತ ಕುಟುಂಬದ ಚಿಂತಾಜನಕ ಕಥೆಯಲ್ಲ, ಎಷ್ಟೋ
ಕುಟುಂಬಗಳ ವ್ಯಥೆಯ ಕಥೆಗಳು ಬೆಳಕಿಗೆ ಬಾರದೆ ತೆರೆಯ ಮರೆಯಲ್ಲಿ ಹುದುಗಿ ಹೋಗುತ್ತಿವೆ. ಸಂತ್ರಸ್ತರಿಗಾಗಿ, ಬಡ ಜನರಿಗಾಗಿ ಸಾಲು ಸಾಲು ಯೋಜನೆಗಳಿದ್ದರೂ ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಬಸವ ವಸತಿ ಯೋಜನೆ, ಆಶ್ರಯ ಯೋಜನೆ ಮೊದಲಾದ ಯೋಜನೆಗಳಲ್ಲಿ ಮನೆ ನಿರ್ಮಿಸಿರುವ ಫಲಾನುಭವಿಗಳು ಕಾಮಗಾರಿ ಪೂರ್ಣಗೊಳಿಸಿದರೂ ಕಂತುಗಳಲ್ಲಿ ಬಿಡುಗಡೆಯಾಗಬೇಕಾದ ಸರ್ಕಾರದ ಅನುದಾನ ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಿಲ್ಲ ಎಂಬ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com