ಕಪ್ಪತಗುಡ್ಡ ಈಗ ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ

ಎಲ್ಲೆಡೆ ಕೋವಿಡ್ ಭಯ ಇನ್ನೂ ಆವರಿಸಿದೆ. ದೂರ ಪ್ರಯಾಣಕ್ಕೆ ಸಾಹಸ ಪ್ರಿಯರು ಇನ್ನೂ ಹಿಂಜರಿಯುತ್ತಿದ್ದಾರೆ. ಈಗ ಚುಮು ಚುಮು ಚಳಿ. ಈ ಸಂದರ್ಭದಲ್ಲಿ ಹತ್ತಿರದ ಕಪ್ಪತಗುಡ್ಡ ಯಾವ ಸ್ವಿಟ್ಜರ್ ಲ್ಯಾಂಡ್ ಗಿಂತ ಕಮ್ಮಿಯಿಲ್ಲ ಎಂಬ ಭಾವನೆಯನ್ನು ಉಂಟು ಮಾಡುತ್ತಿದೆ.
ಕಪ್ಪತಗುಡ್ಡ ಈಗ ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ

ಗದಗ್ ಸುತ್ತಮುತ್ತಲಿನ ಜಿಲ್ಲೆಯ ಜನರು ಈಗ ಕಪ್ಪತಗುಡ್ಡಕ್ಕೆ ಬೆಳ್ಳಬೆಳಿಗ್ಗೆ ಭೇಟಿ ಕೊಟ್ಟು ಸೆಲ್ಫೀ ಹಾಗೂ ಗ್ರೂಪೀ ಅಂತ ಫೋಟೊಗಳನ್ನು ತೆಗೆದು ಸಾಮಾಜಿಕ ತಾಣಗಳಲ್ಲಿ ಹರಿಬಿಡುತ್ತಿದ್ದಾರೆ.

ಗದಗ್ ಜಿಲ್ಲೆಯ ಡೋಣಿ ಗ್ರಾಮದಿಂದ ಕಪ್ಪತಗುಡ್ಡಗಳತ್ತ ಪಯಣಿಸುತ್ತಿರುವಂತೆಯೇ, ಅನತಿ ದೂರದಲ್ಲಿ ಸುಂದರ ಪ್ರಕೃತಿಯ ನೋಟ ಪ್ರವಾಸಿಗರನ್ನು ರೋಚಕಗೊಳಿಸುತ್ತದೆ. ಸಮತಟ್ಟಾದ ಭೂಮಿಯಿಂದ ದಿನ್ನೆಗಳನ್ನು ಏರಿ ಹೋಗುವಾಗ ನಮ್ಮೆದುರಿನಲ್ಲಿ ಅರ್ಧವೃತ್ತಾಕಾರದಲ್ಲಿ ಬೆಟ್ಟಗಳು ಒಂದನ್ನೊಂದು ಆವರಿಸಿ ನಿಂತಂತೆ ತೋರುತ್ತದೆ. ಉತ್ತರದಿಂದ ದಕ್ಷಿಣಕ್ಕೆ ಚಾಚಿದ ಗುಡ್ಡದ ಶ್ರೇಣಿ ಕಪೋತಗಿರಿಯಲ್ಲಿ ಹಠಾತ್ತಾಗಿ ಎತ್ತರಕ್ಕೆ ಬೆಳೆದು ಕವಲೊಡೆದು ಸರಣಿಗಳಾಗಿವೆ. ಅಡ್ಡಲಾಗಿ ತಿರುಚಿ ಕೊಂಡು ಅದು ಬೆಳೆದಲ್ಲಿ ಇರುವ ಗಿರಿಯನ್ನೇ ನಂದಿವೇರಿ ಬೆಟ್ಟ ಎನ್ನಲಾಗಿದೆ. ಹೀಗೆ ಉದ್ದಕ್ಕೆ ಅಡ್ಡಲಾಗಿ ಅರ್ಧ ವೃತ್ತಾಕಾರದಲ್ಲಿ ಬೆಟ್ಟಗಳು ಒಂದನ್ನೊಂದು ಆವರಿಸಿ ನಿಂತಿರುವಂತೆ ಕಾಣುವ ಆ ನೋಟದಲ್ಲಿ ಸೌಂದರ್ಯವು ಕಳೆಗಟ್ಟಿದಂತಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಂದಿವೇರಿ ಬೆಟ್ಟದ ಇಳಿಜಾರು ತೀರ ಕಡಿದಾಗಿದ್ದರೆ, ಉದ್ದಕ್ಕೆ ಚಾಚಿದ ಬೆಟ್ಟಗಳ ಇಳಿಜಾರು ಪದಿರು ಪದಿರಾಗಿರುವುದು ಹಾಗೂ ಅವುಗಳು ಹೊದ್ದಿರುವ ನವಿರಾದ ಹಸಿರು ವಿಲಕ್ಷಣ ಚೆಲುವು ಮನಸ್ಸನ್ನು ಮುದಗೊಳಿಸಿ ಸೌಂದರ್ಯೋಪಾಸನೆಯ ತೀವ್ರತೆಯನ್ನು ತಣಿಸುತ್ತದೆ.

ಕಪ್ಪತಗುಡ್ಡ ಈಗ ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ
ಕಪ್ಪತಗುಡ್ಡ ವನ್ಯಜೀವಿ ಧಾಮಕ್ಕೆ ಬಂದಿದೆಯಾ ಆಪತ್ತು? 

ಕಪ್ಪತಗುಡ್ಡದ ಮೇಲೆ ವರ್ಷದುದ್ದಕ್ಕೂ ಅಧಿಕ ವೇಗದ ತೀವ್ರತರ ಗಾಳಿ ಬೀಸುತ್ತದೆ. ಗಾಳಿಗುಂಡಿ ಬಸವಣ್ಣ ದೇವಾಲಯದ ಬಳಿ (ನಂದಿವೇರಿ ಬೆಟ್ಟದ ದಕ್ಷಿಣದ ಕಂದರದಾಚೆಇರುವ ಬೆಟ್ಟದ ಮೇಲ್ಗಡೆ) ಗಂಟೆಗೆ 90 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತದೆ.

ಕಪ್ಪತಗುಡ್ಡ ಈಗ ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ
ಕೊನೆಗೂ ಬಂತು ಅಧಿಕೃತ ಆದೇಶ, ಕಪ್ಪತಗುಡ್ಡ ಈಗ ವನ್ಯಜೀವಿ ಧಾಮ

ಅಪಾರ ನೈಸರ್ಗಿಕ ಗಿಡಮೂಲಿಕೆ ಸಸ್ಯ ಸಂಪತ್ತು ಹೊಂದಿರುವ ಕಪ್ಪತ್‌ಗಡ್ಡದ ಸಾಲು ನೋಡಿದರೆ ಕಣ್ಮನ ಸೆಳೆಯುತ್ತಿದ್ದು, ಈಗ ಚಾರಣಿಗರನ್ನು ಕೈಬೀಸಿ ಕರೆಯುತ್ತಿದೆ. ಗುಡ್ಡಗಳು ಪೋಣಿಸಿದಂತೆ ಕಾಣುವ ಕಪ್ಪತಗುಡ್ಡ ಏರಿಳಿತ ಅವರ್ಣನೀಯ ರೋಮಾಂಚನ ಹುಟ್ಟಿಸುತ್ತವೆ. ಜಿಟಿಜಿಟಿ ಜಿನುಗುವ ಹನಿಗಳ ಸಖ್ಯ, ಬಿಳಿಯ ಪರದೆಯಂತೆ ನಮ್ಮನ್ನು ಸವರಿ ಹೋಗುವ ಮೋಡ, ಮುಂದೇನೂ ಕಾಣದಂತೆ ಆವರಿಸಿಕೊಳ್ಳುವ ಮಂಜಿನಿಂದ ಸ್ವರ್ಗವೆ ಧರೆಗಿಳಿದಂತೆ ಭಾಸಗುತ್ತದೆ.

ವಾರಾಂತ್ಯದ ವಿಶ್ರಾಂತಿಗೆ ಸ್ವರ್ಗ:

ಈ ಗುಡ್ಡದ ಸಾಲಿನುದ್ದಕ್ಕೂ ಬೆಳಗಿನ ಹೊತ್ತು ತೆರೆತೆರೆಯಾಗಿ ಹರವಿಕೊಳ್ಳುವ ಮಂಜಿನ ನೋಟ (ಫಾಗ್‌ವ್ಯೂ) ನಿಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ. ನಸುಕಿಗೆ ಚಾರಣ ಹೊರಟರೆ ಮಂಜಿನ ಹನಿಗಳು ಗಿಡಗಳ ಹಸಿರೆಲೆಗಳ ಮೇಲೆ ಬೀಳುವುದನ್ನೂ ಕಾಣಬಹುದು. ಈ ಮಂಜಿನ ತೆರೆಗಳೇ ಕಪ್ಪತಗುಡ್ಡಗಳ ಹಸಿರು ಊಟಿಯ ನೋಟ ದಕ್ಕುವಂತೆ ಮಾಡಿವೆ.

ಕಪ್ಪತಗುಡ್ಡ ಈಗ ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ
ಇಷ್ಟೆಲ್ಲ ಆದ ಮೇಲೂ ಗಣಿ ಕಂಪನಿಗಳ ದಾಳದಿಂದ ದೂರ ಉಳಿದಿಲ್ಲ ಕಪ್ಪತಗುಡ್ಡ!

ಮೂರು ತಾಲೂಕು ವಿಸ್ತಾರ ಕಪ್ಪತಗುಡ್ಡ:

33 ಸಾವಿರ ಹೆಕ್ಟೇರ್ ಪ್ರದೇಶ ಹೊಂದಿರುವ ಕಪ್ಪತಗುಡ್ಡದಲ್ಲಿ 33 ಗ್ರಾಮಗಳಿದ್ದು, ಗದಗ ತಾಲೂಕಿನ 2134.86 ಹೆಕ್ಟೇರ್ ಪ್ರದೇಶದಲ್ಲಿ ಬರುವ ಸೊರಟೂರು, ಶಿರುಂಜಾ, ಬೆಳದಡಿ, ಕಬುಲಾಯತಕಟ್ಟಿ, ನಭಾಪುರ ಹಾಗೂ ಶಿರಹಟ್ಟಿ ತಾಲೂಕಿನ 4975.13 ಹೆಕ್ಟೇರ್ ಪ್ರದೇಶದಲ್ಲಿ ಬರುವ ಕಡಕೋಳ, ಜಲ್ಲಿಗೇರಿ, ಮಜ್ಜೂರು, ಕುಸಲಾಪುರ, ವರವಿ, ಟಿ. ಬಾವನೂರ, ಭಾನವೂರ ಮತ್ತು ಮುಂಡರಗಿ ತಾಲೂಕಿನ 16291.68 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಬರುವ ಬಾಗೇವಾಡಿ, ಬಿದರಳ್ಳಿ, ಗುಡ್ಡದ ಬೂದಿಹಾಳ, ಜಾಲವಾಡಗಿ, ಕೆಲೂರು, ಮುಂಡವಾಡ, ಮುರಡಿ, ಚಾಗಿನಕೆರೆ, ಹಮ್ಮಿಗಿ, ಹಿರೇವಡ್ಡಟ್ಟಿ, ಚಿಕ್ಕವಡ್ಡಟ್ಟಿ, ಹಾರೋಗೇರಿ, ಬಿಡ್ನಾಳ, ಕಲಕೇರಿ, ಕೊರ್ಲಹಳ್ಳಿ, ಮುಷ್ಟಿಕೊಪ್ಪ, ಶಿಂಗ್ಟಾಲೂರು, ಅತ್ತಿಕಟ್ಟಿ, ಡಂಬಳ, ದಿಂಡೂರು, ಡೋಣಿ ಗ್ರಾಮಗಳು ಈ ಕಪ್ಪತಗುಡ್ಡ ಪ್ರದೇಶದಲ್ಲಿದ್ದು, ಇಲ್ಲಿ ಶ್ರೀಗಂಧ, ಹೊಳೆಮತ್ತಿ, ಕಮರಾ, ದಿಂಡಗ, ಕಾಚು, ಮರಾಲೆ, ಪಚಾಲಿ, ಜಾನೆ, ಹೊನ್ನೆ, ನಗರಿ, ಬೆಟ್ಟದ ತಾವರೆಯಂತಹ ಗಿಡಮರಗಳಿವೆ.

ಆಯುರ್ವೇದಕ್ಕೆ ಬಳಸುವ ಬೆಟ್ಟದ ನೆಲ್ಲಿ, ಕಾಡು ಕೊತ್ತಂಬರಿ, ಮಧುನಾಶಿನಿ, ಮೆಕ್ಕೆಗಿಡ (ಹೃದಯ ರೋಗಿಗಳಿಗೆ ದಿವ್ಯೌಷಧಿ), ಕಾಡು ಈರಳ್ಳಿ (ಪಶು ಚಿಕಿತ್ಸೆಗೆ ಬಳಸುತ್ತಾರೆ), ಆಲಿಕಾ-ಉಳ್ಳಿಕಾ, ತೊಟ್ಲುಕಾಯಿ, ಅಳಿಲು ಕಾಯಿ, ಧೂಪದಂತಹ ಔಷಧಿ ಸಸ್ಯಗಳು ಇವೆ. ಕೇರಳದ ಪಶ್ಚಿಮಘಟ್ಟಗಳಲ್ಲಿ ಮಾತ್ರ ಕಾಣಿಸುವ "ಲೆಮನ್ ಗ್ರಾಸ್"ನಂತಹ ಔಷಧಿ ಸಸ್ಯ ಬೆಳೆದಿದೆ. ಕೃಷ್ಣಮೃಗ, ಚಿರತೆ, ಕರಡಿ, ಕೊಂಡುಕುರಿ, ನಕ್ಷತ್ರ ಆಮೆ, ತೋಳ, ಕತ್ತೆ ಕಿರುಬ, ಕಾಡುಬೆಕ್ಕು, ಚಿಪ್ಪು ಹಂದಿ ಉಡ, ನವಿಲು ಇದ್ದು, ದೇಶದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಂಡುಬರುವ "ದರವಾಯಿನ" ಎಂಬ ಹಕ್ಕಿ ಇಲ್ಲಿನ ಅರಣ್ಯ ವಲಯದಲ್ಲಿದೆ.

ಕಪ್ಪತಗುಡ್ಡ ಈಗ ವಾರಾಂತ್ಯದ ನೆಚ್ಚಿನ ಪ್ರವಾಸಿ ತಾಣ
ಕಪ್ಪತಗುಡ್ಡದ ಅಂಚಿನ ಗುಹೆಗಳಲ್ಲಿ ಈಗಲೂ ನಡೆಯುತ್ತಿದೆ ಚಿನ್ನದ ಬೇಟೆ!

ಕಪ್ಪತ್ತಗುಡ್ಡದಲ್ಲಿ 80ಕ್ಕೂ ಹೆಚ್ಚು ಕೆರೆ, ಹಳ್ಳ, ಝರಿ, ಕೊಳ್ಳ, ಮತ್ತು ಪಡಿಗಳು ಇವೆ. ಕಪ್ಪತ್ತಗುಡ್ಡದಲ್ಲಿ ನಂದಿವೇರಿಮಠ, ಮಲ್ಲಿಕಾರ್ಜುನ ದೇವಾಲಯ, ಏಳುಕೊಳ್ಳದ ಎಲ್ಲಮ್ಮನ ಗುಡಿ, ಗ್ವಾಲಿಗೇರಿ ಮಠ ಸೇರಿ 15ಕ್ಕೂ ಹೆಚ್ಚು ಮಠಮಂದಿರಗಳಿವೆ. ಹೀಗೆ ಹಲವು ವೈಶಿಷ್ಟ್ಯತೆ ಒಳಗೊಂಡಿರುವ ಕಪ್ಪತಗುಡ್ಡಕ್ಕೆ ಸುತ್ತಲಿನ ಗ್ರಾಮಸ್ಥರು ಪ್ರತಿ ಶ್ರಾವಣ ಮಾಸದಂದು ಟ್ರ್ಯಾಕ್ಟರ್, ಜೀಪ್ ಮೂಲಕ ತಂಡೋಪತಂಡವಾಗಿ ಬಂದು, ಒಂದ ದಿನ ರಾತ್ರಿ ಕಳೆದು, ಸಹ ಭೋಜನ ಮತ್ತು ಪ್ರಕೃತಿಸವಿ ಸವಿದು ಹೋಗುತ್ತಾರೆ.

ಒಟ್ಟಾರೆ, ಕರೊನಾ ಸಂಕಷ್ಟದ ಸಮಯದಲ್ಲಿ ದೂರದ ಪ್ರಯಾಣ ಬೆಳಸದಿರುವವರು, ಕಡಿಮೆ ಖರ್ಚಿನ, ಹತ್ತಿರದ ಒಳ್ಳೆಯ ಪ್ರವಾಸಕ್ಕೆ ಕಪ್ಪತಗುಡ್ಡ ಹೇಳಿ ಮಾಡಿಸಿದಂತಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com