ಲವ್ ಜಿಹಾದ್, ಗೋಹತ್ಯೆ ತಡೆ ಕಾಯ್ದೆಗೆ ಬಿಜೆಪಿ ಕಾರ್ಯಕಾರಣಿ ನಿರ್ಣಯ

ಸದ್ಯ ಪಂಚಾಯ್ತಿ ಚುನಾವಣೆ ಮುಗಿಯುವರೆಗೆ ರಾಜ್ಯ ಬಿಜೆಪಿ ಮತ್ತು ಸರ್ಕಾರದ ಮಟ್ಟದಲ್ಲಿ ಮಹತ್ವದ ಬದಲಾವಣೆ ಹಾಗೂ ಹೇಳಿಕೆ, ಪ್ರತಿಹೇಳಿಕೆಯ ಪ್ರಹಸನಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ.
ಲವ್ ಜಿಹಾದ್, ಗೋಹತ್ಯೆ ತಡೆ ಕಾಯ್ದೆಗೆ ಬಿಜೆಪಿ ಕಾರ್ಯಕಾರಣಿ ನಿರ್ಣಯ

ನಾಯಕತ್ವ ಬದಲಾವಣೆ, ಸಂಪುಟ ಪುನರ್ ರಚನೆಯಂತಹ ಮಹತ್ವದ ಬಿಕ್ಕಟ್ಟುಗಳ ನಡುವೆ ಭಾರೀ ನಿರೀಕ್ಷೆಯೊಂದಿಗೆ ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಕಾರ್ಯಕಾರಿಣಿ, ಆ ನಿಟ್ಟಿನಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳದೆ, ಮುಕ್ತಾಯ ಕಂಡಿದೆ.

ಆದರೆ, ರಾಜ್ಯದ ಆಡಳಿತದ ವಿಷಯದಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳದೇ ಇದ್ದರೂ, ಪಕ್ಷ ಮತ್ತು ಸಂಘಪರಿವಾರದ ಅಜೆಂಡಾದ ವಿಷಯದಲ್ಲಿ ಎರಡು ಪ್ರಮುಖ ನಿರ್ಣಯಗಳನ್ನು ಅಂಗೀಕರಿಸಿದ್ದು, ಆ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ಕಾಯ್ದೆ ಜಾರಿಗೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಂಘಪರಿವಾರದ ಪ್ರಮುಖ ಅಜೆಂಡಾವಾದ ಗೋಹತ್ಯೆ ನಿಷೇಧ ಮತ್ತು ಲವ್ ಜಿಹಾದ್ ತಡೆಯ ಸಂಬಂಧ ನಿರ್ಣಯ ಕೈಗೊಂಡಿರುವ ಕಾರ್ಯಕಾರಿಣಿ, ಆ ಸಂಬಂಧ ಕೂಡಲೇ ಮಸೂದೆ ಅಂಗೀಕರಿಸಿ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಲು ತೀರ್ಮಾನಿಸಿದೆ ಎಂದು ಸ್ವತಃ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲು ಹೇಳಿದ್ದಾರೆ.

ರಾಜ್ಯದಲ್ಲಿ ಲವ್ ಜಿಹಾದ್ ದೊಡ್ಡ ಆತಂಕ ಸೃಷ್ಟಿಸಿದೆ. ಪ್ರೀತಿ-ಪ್ರೇಮದ ಹೆಸರಿನಲ್ಲಿ ಮತಾಂತರ ಮಾಡುವ ಹಲವು ಪ್ರಕರಣಗಳು ವರದಿಯಾಗಿವೆ. ಇದು ಸಮಾಜದಲ್ಲಿ ಆತಂಕ ಮೂಡಿಸಿದೆ. ಆ ಹಿನ್ನೆಲೆಯಲ್ಲಿ ಪಕ್ಷ ಲವ್ ಜಿಹಾದನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ಪಕ್ಷದ ಮತ್ತು ಪರಿವಾರದ ಎಂದಿನ ಕಾರ್ಯಸೂಚಿಯಾದ ಗೋಹತ್ಯೆ ನಿಷೇಧವನ್ನು ಕೂಡ ಬಿಗಿ ಕಾನೂನು ಮೂಲಕ ಜಾರಿಗೆ ತರುವಂತೆ ಸರ್ಕಾರವನ್ನು ಒತ್ತಾಯಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ಜೊತೆಗೆ ಗ್ರಾಮ ಪಂಚಾಯ್ತಿ ಮತ್ತು ಮಸ್ಕಿ ಹಾಗೂ ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಕಾರ್ಯಕಾರಿಣಿಯಲ್ಲಿ ಚರ್ಚಿಸಲಾಗಿದೆ. ಪಂಚಾಯ್ತಿ ಚುನಾವಣೆ ಮತ್ತು ಎರಡು ಕ್ಷೇತ್ರಗಳ ವಿಧಾನಸಭಾ ಚುನಾವಣೆಗಳ ಕುರಿತು ಚುನಾವಣಾ ನಿರ್ವಹಣಾ ಸಮಿತಿ, ಶಿಸ್ತು ಸಮಿತಿಗಳನ್ನು ರಚಿಸಲಾಗಿದೆ. ಪ್ರಭಾರಿಗಳನ್ನೂ ನೇಮಕ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ನಡುವೆ, ಕಗ್ಗಂಟಾಗಿರುವ ಸಚಿವ ಸಂಪುಟ ಪುನರ್ ರಚನೆ ಅಥವಾ ವಿಸ್ತರಣೆಯ ವಿಷಯವಾಗಿ ಸಾಕಷ್ಟು ಚರ್ಚೆ ಮಾಡಲಾಯಿತು. ಸಭೆಯಲ್ಲಿ ಪಕ್ಷದ ಕೆಲವರು ನೋವು ತೋಡಿಕೊಂಡರು. ಈ ವಿಷಯದಲ್ಲಿ ಮುಖ್ಯಮಂತ್ರಿಗಳು ಮತ್ತು ಇತರ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದವರೊಂದಿಗೂ ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಪಕ್ಷದ ಎಲ್ಲರಿಗೂ ಸೂಚಿಸಲಾಗಿದೆ. ಯಾವುದೇ ವಿಷಯವಿದ್ದರೂ ಅದನ್ನು ಪಕ್ಷದಲ್ಲಿ ಆಂತರಿಕವಾಗಿ ಚರ್ಚಿಸಬೇಕೇ ವಿನಃ ಬಹಿರಂಗ ಹೇಳಿಕೆ ನೀಡಕೂಡದು. ಒಂದು ವೇಳೆ ಇನ್ನು ಮುಂದೆ ಅಂತಹ ಹೇಳಿಕೆಗಳನ್ನು ನೀಡಿದಲ್ಲಿ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಎಲ್ಲರಿಗೂ ಎಚ್ಚರಿಕೆ ನೀಡಲಾಗಿದೆ ಎಂದೂ ಕಟೀಲು ಹೇಳಿದ್ದಾರೆ.

ಆ ಮೂಲಕ ಪಕ್ಷದ ವಿದ್ಯಮಾನಗಳ ಕುರಿತು ಮಾತನಾಡದಂತೆ ಮುಖಂಡರ ಬಾಯಿಮುಚ್ಚಿಸುವ ನಿಟ್ಟಿನಲ್ಲಿ ಕಾರ್ಯಕಾರಿಣಿ ಹೆಚ್ಚು ಆಸಕ್ತಿ ವಹಿಸಿದೆ. ಬದಲಾಗಿ ಕಳೆದ ಕೆಲವು ತಿಂಗಳುಗಳಿಂದ ರಾಜ್ಯದ ಜನತೆಯ ಪಾಲಿಗೆ ಪ್ರಹಸನವಾಗಿರುವ ಸಂಪುಟ ಮತ್ತು ನಾಯಕತ್ವ ಬದಲಾವಣೆಯ ವಿಷಯಗಳನ್ನು ಕಾರ್ಯಕಾರಿಣಿ ಗಂಭೀರವಾಗಿ ಪರಿಗಣಿಸಲ್ಲ ಎಂಬ ಸಂದೇಶವನ್ನು ಅವರು ರವಾನಿಸಿದ್ದಾರೆ.

ಆದರೆ, ವಾಸ್ತವವಾಗಿ ಕಾರ್ಯಕಾರಣಿ ಮತ್ತು ಕೋರ್ ಕಮಿಟಿ ಸಭೆಗಳ ಆಚೀಚೆ ನಡೆದ ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರೊಂದಿಗಿನ ಸಿಎಂ, ಪಕ್ಷದ ಅಧ್ಯಕ್ಷರು ಮತ್ತು ಇತರ ಹಿರಿಯ ನಾಯಕರ ಆಪ್ತ ಸಮಾಲೋಚನೆಗಳು ಮತ್ತು ದೆಹಲಿಯಿಂದ ರವಾನೆಯಾಗಿದ್ದ ಸಂದೇಶಗಳು ಮೂಲ ಬಿಕ್ಕಟ್ಟುಗಳಿಗೆ ಪರಿಹಾರ ಕಂಡುಕೊಂಡಿವೆ. ಬಿಎಸ್ ಯಡಿಯೂರಪ್ಪ ಅವರ ನಾಯಕತ್ವ ಬದಲಾವಣೆ ಮತ್ತು ಸಂಪುಟ ಸಂಬಂಧದ ಆ ಬಿಕ್ಕಟ್ಟುಗಳಿಗೆ ಪಂಚಾಯ್ತಿ ಚುನಾವಣೆಯ ಬಳಿಕ ಸೂಕ್ತ ಪರಿಹಾರ ಕಂಡುಕೊಳ್ಳಲು ಈಗಲೇ ಸೂತ್ರ ಹೆಣೆಯಲಾಗಿದೆ ಎನ್ನುವುದು ಪಕ್ಷದ ಆಂತರಿಕ ಮೂಲಗಳ ಮಾಹಿತಿ.

ಅಂದರೆ; ಸದ್ಯ ಪಂಚಾಯ್ತಿ ಚುನಾವಣೆ ಮುಗಿಯುವರೆಗೆ ರಾಜ್ಯ ಬಿಜೆಪಿ ಮತ್ತು ಸರ್ಕಾರದ ಮಟ್ಟದಲ್ಲಿ ಮಹತ್ವದ ಬದಲಾವಣೆ ಹಾಗೂ ಹೇಳಿಕೆ, ಪ್ರತಿಹೇಳಿಕೆಯ ಪ್ರಹಸನಗಳಿಗೆ ಸದ್ಯಕ್ಕೆ ಬ್ರೇಕ್ ಬಿದ್ದಂತಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com