ʼಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿʼ ಕೃಷಿ ಸಚಿವರ ಹೇಳಿಕೆಗೆ ವ್ಯಾಪಕ ಖಂಡನೆ

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದ ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ
ʼಆತ್ಮಹತ್ಯೆ ಮಾಡಿಕೊಳ್ಳುವ ರೈತ ಹೇಡಿʼ ಕೃಷಿ ಸಚಿವರ ಹೇಳಿಕೆಗೆ ವ್ಯಾಪಕ ಖಂಡನೆ

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಹೇಳಿರುವುದು ಸಾಕಷ್ಟು ವಿವಾದಕ್ಕೀಡಾಗಿದೆ.

"ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಹೆಂಡತಿ ಮತ್ತು ಮಕ್ಕಳನ್ನು ನೋಡಿಕೊಳ್ಳಲು ಸಾಧ್ಯವಾಗದ ಹೇಡಿಗಳು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ನಾವು ನೀರಿಗೆ ಬಿದ್ದರೆ ಈಜಿಕೊಂಡು ಗೆಲ್ಲಬೇಕು" ಎಂದು ಕೊಡಗಿನ ಪೊನ್ನಂಪೆಟೆ ರೈತರನ್ನು ಉದ್ದೇಶಿಸಿ ಪಾಟೀಲ್ ಹೇಳಿದ್ದಾರೆ.

ಚಿನ್ನದ ಬಳೆಗಳನ್ನು ಧರಿಸಿದ ಓರ್ವ ರೈತ ಮಹಿಳೆಯ ಉದಾಹರಣೆಯನ್ನು ಉಲ್ಲೇಖಿಸಿದ ಪಾಟೀಲ್‌, ”ಕೃಷಿ ವ್ಯವಹಾರವು ಎಷ್ಟು ಲಾಭದಾಯಕವಾಗಿದೆ ಎಂದರೆ, ಕೆಲವು ಹೇಡಿಗಳು ಅದನ್ನು ಅರಿಯುವುದಿಲ್ಲ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ" ಎಂದು ಹೇಳಿರುವುದು ಚರ್ಚಾ ಕೇಂದ್ರವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಿಸಿ ಪಾಟಿಲ್‌ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ರೈತ ಸಂಘಟನೆ ನಾಯಕರು, ವಿಪಕ್ಷ ನಾಯಕರು ಸಚಿವರ ಹೇಳಿಕೆಯನ್ನು ಖಂಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿದ ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಧ್ಯಕ್ಷ ಕುರುಬೂರು ಶಾಂತಕುಮಾರ್‌ ಕೃಷಿ ಸಚಿವರ ಹೇಳಿಕೆ ಅತ್ಯಂತ ಅವಿವೇಕತನದ್ದು ಎಂದು ಹೇಳಿದ್ದಾರೆ.

ಪ್ರತಿಧ್ವನಿಯೊಂದಿಗೆ ಮಾತನಾಡಿದ ಶಾಂತಕುಮಾರ್‌, ʼಕೃಷಿ ಸಚಿವರ ಹೇಳಿಕೆ ಅತ್ಯಂತ ಅವಿವೇಕತನದ್ದು. ಕೃಷಿ ಸಚಿವರಾಗಿಯೂ ಅವರಿಗೆ ಕೃಷಿಕರ ಮೂಲ ಸಮಸ್ಯೆಯೇ ಗೊತ್ತಿಲ್ಲ. ಬೆಳೆ ನಷ್ಟ ಪರಿಹಾರದ ಹಣ ನೀಡಿಲ್ಲ, ಗೊಬ್ಬರ ಸಿಗುತ್ತಿಲ್ಲ, ಬೀಜ ಸಿಗುತ್ತಿಲ್ಲ ಇಂತಹ ಹಲವಾರು ಸಮಸ್ಯೆಗಳಿವೆ. ದೇಶದಲ್ಲಿ ರೈತರ ಪ್ರತಿಭಟನೆ ನಡೆಯುತ್ತಿದೆ. ಇಂತಹ ಸಂಧರ್ಭದಲ್ಲಿ ರೈತರ ವಿರುದ್ಧ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ರೈತರು ಸ್ವಾಭಿಮಾನಿಗಳು, ಹೇಡಿಗಳಲ್ಲ. ಕೂಡಲೇ ಕೃಷಿ ಸಚಿವರು ರೈತರಲ್ಲಿ ಕ್ಷಮೆಯಾಚಿಸಬೇಕುʼ ಎಂದು ಅವರು ಆಗ್ರಹಿಸಿದ್ದಾರೆ.

ಕುರುಬೂರು ಶಾಂತಕುಮಾರ್
ಕುರುಬೂರು ಶಾಂತಕುಮಾರ್

ಕೃಷಿ ಸಚಿವರ ಹೇಳಿಕೆಗೆ ರಾಜಕೀಯ ನಾಯಕರೂ ಖಂಡನೆ ವ್ಯಕ್ತಪಡಿಸಿದ್ದು, ವಿಪಕ್ಷ ನಾಯಕ ಸಿದ್ದರಾಮಯ್ಯ, ವಿ ಎಸ್‌ ಉಗ್ರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ ಸೇರಿದಂತೆ ಹಲವಾರು ನಾಯಕರು ಬೀಸಿ ಪಾಟೀಲ್‌ ಹೇಳಿಕೆಯನ್ನು ಟೀಕಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳಲ್ಲ ಬಿ.ಸಿ.ಪಾಟೀಲ್ ಅವರೇ, ಹಣ-ಅಧಿಕಾರಕ್ಕಾಗಿ ಆತ್ಮವನ್ನು ಮಾರಿಕೊಂಡವರು ಹೇಡಿಗಳು. ಅನ್ನ ಕೊಡುವ ರೈತರನ್ನು ನಿಂದಿಸಿ ಉಂಡಮನೆಗೆ ದ್ರೋಹ ಬಗೆಯುವ ನಿಮಗೆ ಒಂದು ಕ್ಷಣವೂ ಕೃಷಿಖಾತೆಯಲ್ಲಿ ಮುಂದುವರಿಯುವ ನೈತಿಕ ಹಕ್ಕಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮಳೆ ಮತ್ತು ಪ್ರವಾಹದಿಂದ ಸರ್ವಸ್ವವನ್ನು ಕಳೆದುಕೊಂಡು ಬೀದಿಪಾಲಾಗಿರುವ ರೈತರಿಗೆ ಪರಿಹಾರಕೊಟ್ಟು ನೆರವಾಗುವ ಯೋಗ್ಯತೆ ನಿಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಇಲ್ಲ. ಗಾಯದ ಮೇಲೆ ಬರ ಎಳೆದಂತೆ ಅದೇ ರೈತರನ್ನು ಹೇಡಿಗಳೆಂದು ಜರಿಯುತ್ತೀರಾ? ಹೊಟ್ಟೆಗೆ ಏನು ತಿನ್ತಿದ್ದೀರಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ವಿನಾಶಕಾರಿ ಕಾನೂನುಗಳನ್ನು ಜಾರಿಗೆ ತಂದು ರೈತರನ್ನು ಆತ್ಮಹತ್ಯೆಗೆ ದೂಡಲು ಹೊರಟಿರುವವರು ಯಾರು? ನ್ಯಾಯಕ್ಕಾಗಿ ಹೋರಾಡುತ್ತಿರುವ ಸ್ವಾಭಿಮಾನಿ ರೈತರ ಮೇಲೆ ಲಾಠಿಯೇಟು, ಅಶ್ರುವಾಯು, ಜಲಫಿರಂಗಿಗಳ ಮೂಲಕ ದೌರ್ಜನ್ಯವೆಸಗುತ್ತಿರುವ ಕೊಲೆಗಡುಕ ಮನಸ್ಸು ಯಾರದು ಬಿ.ಸಿ ಪಾಟೀಲ್ ಎಂದು ಸಿದ್ದರಾಮಯ್ಯ ಪ್ರಶ್ನೆ ಹಾಕಿದ್ದಾರೆ.

ಇನ್ನು ಕಾಂಗ್ರೆಸ್ ಕರ್ನಾಟಕ ಘಟಕದ ವಕ್ತಾರ ವಿ ಎಸ್ ಉಗ್ರಪ್ಪ ಅವರು ಸಚಿವರ ಹೇಳಿಕೆಯನ್ನು ಖಂಡಿಸಿದಾರೆ. “ಕೃಷಿ ಸಚಿವರು ಕೃಷಿ ಸಮುದಾಯಕ್ಕೆ ಅಗೌರವ ತೋರಿಸಿದ್ದಾರೆ. ಈ ಹೇಳಿಕೆಗೆ ಅವರು ಕ್ಷಮೆಯಾಚಿಸಬೇಕು" ಎಂದು ಉಗ್ರಪ್ಪ ಆಗ್ರಹಿಸಿದ್ದಾರೆ.

"ಯಾವುದೇ ರೈತ ಜೀವನವನ್ನು ಕೊನೆಗೊಳಿಸಲು ಬಯಸುವುದಿಲ್ಲ. ರೈತರ ಆತ್ಮಹತ್ಯೆಯ ಹಿಂದೆ ಪ್ರವಾಹ ಮತ್ತು ಬರಗಾಲದಂತಹ ಹಲವು ಕಾರಣಗಳಿವೆ, ಅದನ್ನು ಇನ್ನೂ ಅರ್ಥಮಾಡಿಕೊಳ್ಳಲಾಗಿಲ್ಲ ಅವರುಗೆ. ಸಮಸ್ಯೆಯ ಮೂಲವನ್ನು ಅರ್ಥಮಾಡಿಕೊಳ್ಳುವ ಬದಲು ಸಚಿವರು ಇಂತಹ ಬೇಜವಾಬ್ದಾರಿಯುತ ಹೇಳಿಕೆಯನ್ನು ನೀಡುತ್ತಾರೆ" ಎಂದು ಉಗ್ರಪ್ಪ ಟೀಕಿಸಿದ್ದಾರೆ.

ಮಾಜಿ ಸಿಎಂ ಕುಮಾರಸ್ವಾಮಿ ಕೂಡಾ ಕೃಷಿ ಸಚಿವರ ಹೇಳಿಕೆಯನ್ನು ಖಂಡಿಸಿದ್ದು, “ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ” ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ಸಾವಿಗೆ ಶರಣಾಗುತ್ತಾನೆ. ಹೇಡಿತನದ ಪಟ್ಟ ಕಟ್ಟಿಕೊಳ್ಳಲು ಅಲ್ಲ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಅವರು ಹೇಳಿದ್ದಾರೆ.

ರೈತ ರಾಜಕಾರಣಿಗಳಂತೆ ಅಧಿಕಾರಕ್ಕಾಗಿ ಬಣ್ಣ ಬದಲಿಸುವ ಗೋಸುಂಬೆ ವ್ಯಕ್ತಿತ್ವದವನಲ್ಲ. ನೆಲವನ್ನೇ ನಂಬಿ ಬದುಕುವ ಕಡು ಕಷ್ಟ ಜೀವಿ. ಇಂತಹ ರೈತ ಸಮುದಾಯಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳು ರಟ್ಟೆಗೆ ಬಲ ತುಂಬುವ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಬೇಕೇ ಹೊರತು, ಹೇಡಿ ಎಂಬ ಪಟ್ಟ ಕಟ್ಟಿ ಹೊಣೆಗೇಡಿತನ ಪ್ರದರ್ಶಿಸಬಾರದು. ಕೃಷಿ ಸಚಿವರೇ ರೈತ ಸಮುದಾಯದ ವಿರುದ್ಧ ಎಲುಬಿಲ್ಲದ ನಾಲಿಗೆ ಹರಿ ಬಿಟ್ಟಿರುವುದು ಖಂಡನೀಯ. ರೈತ ಸಮುದಾಯಕ್ಕೆ ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com