ಕುಂದಾನಗರಿ ಕಾರ್ಯಕಾರಿಣಿ ಬೆನ್ನಲ್ಲೇ ಸಂಪುಟ ಪುನರ್ ರಚನೆ?

ಸಹಜವಾಗೇ ಕುಂದಾ ನಗರಿಯ ಕಾರ್ಯಕಾರಿಣಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಾರ್ಯಕಾರಿಣಿಯ ಬೆನ್ನಲ್ಲೇ ಭಾನುವಾರದ ಹೊತ್ತಿಗೆ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.
ಕುಂದಾನಗರಿ ಕಾರ್ಯಕಾರಿಣಿ ಬೆನ್ನಲ್ಲೇ ಸಂಪುಟ ಪುನರ್ ರಚನೆ?

ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಕುಂದಾನಗರಿ ಬೆಳಗಾವಿಯಲ್ಲಿ ಇಂದಿನಿಂದ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರು ಆ ಹೊಣೆಗಾರಿಕೆ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ.

ನಾಯಕತ್ವ ಬದಲಾವಣೆ, ಸಚಿವ ಸಂಪುಟ ಕುರಿತ ಬಿಕ್ಕಟ್ಟು, ತೀವ್ರ ಬಣ ರಾಜಕಾರಣ, ಗುಂಪುಗಾರಿಕೆ, ಬಹಿರಂಗ ಹೇಳಿಕೆಗಳ ಸಮರ, ಲಿಂಗಾಯತ ಮೀಸಲಾತಿ ಮತ್ತು ಮರಾಠ ನಿಗಮ ವಿವಾದ, ಜೊತೆಗೆ ಸ್ವತಃ ಸಿಎಂ ಆಪ್ತವಲಯದ ಹಲವು ತಲ್ಲಣಗಳ, ಬೇಗುದಿಗಳ ನಡುವೆ ಈ ಕಾರ್ಯಕಾರಿಣಿ ನಡೆಯುತ್ತಿದೆ. ಹಾಗಾಗಿ ಸಹಜವಾಗೇ ಈ ಕಾರ್ಯಕಾರಿಣಿ ಯಾರಿಗೆ ಕುಂದಾ ರುಚಿ ಕೊಡುವುದು, ಯಾರಿಗೆ ಕಹಿಯಾಗುವುದು ಎಂಬ ಕುತೂಹಲ ಮೂಡಿಸಿದೆ.

ಡಿಸೆಂಬರ್ 7ರ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಅಧಿವೇಶನಕ್ಕೆ ಮುನ್ನವೇ ಕಾರ್ಯಕಾರಿಣಿ ಕರೆಯಲಾಗಿದ್ದು, ಅಲ್ಲಿ ಬಿಜೆಪಿ ಮತ್ತು ಸರ್ಕಾರ ಎದುರಿಸುತ್ತಿರುವ ಸದ್ಯದ ಈ ಬಿಕ್ಕಟ್ಟುಗಳಿಗೆ ಒಂದು ಪರಿಹಾರ ಸಿಗಲಿದೆ. ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಕ್ಷದ ದೆಹಲಿ ವರಿಷ್ಠರ ಸೂತ್ರ ಹೊತ್ತೇ ಅರುಣ್ ಸಿಂಗ್ ಆಗಮಿಸುತ್ತಿದ್ದಾರೆ. ಕಳೆದ ವಾರದ ಪಕ್ಷದ ಬೆಳವಣಿಗೆಗಳನ್ನು ಮತ್ತು ನಾಯಕತ್ವ ಬದಲಾವಣೆಯ ತೆರೆಮರೆಯ ಯತ್ನಗಳಿಗೆ ಮತ್ತು ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ತೋರದ ತಮ್ಮ ನಡೆಗೆ ಪ್ರತಿಯಾಗಿ ಸಿಎಂ ಯಡಿಯೂರಪ್ಪ ಉರುಳಿಸಿದ ನಿಗಮ-ಮಂಡಳಿ ನೇಮಕ ಮತ್ತು ಲಿಂಗಾಯತ ಮೀಸಲಾತಿ ದಾಳಗಳನ್ನೂ ಗಮನದಲ್ಲಿಟ್ಟುಕೊಂಡೇ ವರಿಷ್ಠರು ಆ ಸೂತ್ರ ಹೆಣೆದಿದ್ದಾರೆ. ಹಾಗಾಗಿ ಎಲ್ಲಾ ಗೊಂದಲಗಳು ಬಗೆಹರಿದು ಭಾನುವಾರಕ್ಕೆ ಮುಂಚೆಯೇ ಸಂಪುಟ ಪುನರ್ ರಚನೆಗೆ ನಡೆಯಬಹುದು ಎಂಬುದು ಬಿಜೆಪಿ ಆಂತರಿಕ ವಲಯದ ಲೆಕ್ಕಾಚಾರ.

ಆದರೆ, ಸಿಎಂ ಯಡಿಯೂರಪ್ಪ ಪಟ್ಟು ಹಿಡಿದಿರುವಂತೆ ಸಂಪುಟ ಪುನರ್ ರಚನೆಯಾಗಿ, ಅವರು ಸಂಪುಟಕ್ಕೆ ತೆಗೆದುಕೊಳ್ಳಬೇಕು ಎಂದುಕೊಂಡವರಿಗೆ ಸ್ಥಾನ ಸಿಗಲಿದೆಯೇ? ಅವರು ತಮ್ಮ ಸಂಪುಟದಿಂದ ಕೈಬಿಡಬೇಕು ಎಂದು ಪಟ್ಟಿ ಮಾಡಿಕೊಂಡವರು ಹೊರಬೀಳಲಿದ್ದಾರೆಯೇ? ಎಂಬುದು ಸದ್ಯಕ್ಕೆ ನಿಗೂಢವಾಗೇ ಉಳಿದಿದೆ. ಪ್ರಮುಖವಾಗಿ ಶಶಿಕಲಾ ಜೊಲ್ಲೆ, ಜಗದೀಶ್ ಶೆಟ್ಟರ್, ಕೋಟಾ ಶ್ರೀನಿವಾಸಪೂಜಾರಿ, ಪ್ರಭು ಚವ್ಹಾಣ್, ಸಿಸಿ ಪಾಟೀಲ್ ಸೇರಿದಂತೆ ಏಳೆಂಟು ಮಂದಿಯನ್ನು ಸಂಪುಟದಿಂದ ಕೈಬಿಟ್ಟು, ಆ ತೆರವಾಗುವ ಆ ಸ್ಥಾನಗಳ ಜೊತೆಗೆ ಈಗಾಗಲೇ ಖಾಲಿ ಇರುವ ಏಳು ಸ್ಥಾನಗಳೂ ಸೇರಿದಂತೆ ಒಟ್ಟು 10-12 ಮಂದಿ ಹೊಸಬರಿಗೆ ಅವಕಾಶ ನೀಡುವುದು. ಎರಡು-ಮೂರು ಸ್ಥಾನಗಳನ್ನು ಖಾಲಿ ಉಳಿಸಿಕೊಂಡಿರುವುದು ಎಂಬುದು ಯಡಿಯೂರಪ್ಪ ಅವರ ಲೆಕ್ಕಾಚಾರ.

ಹಾಗಾಗಿ ಶಾಸಕ ಮುನಿರತ್ನ, ಎಂಬಿಟಿ ನಾಗರಾಜ್, ಆರ್ ಶಂಕರ್, ಸಿ ಪಿ ಯೋಗೀಶ್ವರ್ ಮತ್ತಿತರಿಗೆ ಸಚಿವ ಸ್ಥಾನದ ಅವಕಾಶ ಬಹುತೇಕ ಪಕ್ಕಾ. ಇನ್ನುಳಿದ ಸ್ಥಾನಗಳಿಗೆ ಪ್ರಬಲ ಲಾಬಿ ನಡೆಸುತ್ತಿರುವ ಉಮೇಶ್ ಕತ್ತಿ, ಬಸನಗೌಡ ಪಾಟೀಲ್ ಯತ್ನಾಳ್, ಎಂ ಪಿ ರೇಣುಕಾಚಾರ್ಯ, ಜಿ ಎಚ್ ತಿಪ್ಪಾರೆಡ್ಡಿ, ಮುರುಗೇಶ್ ನಿರಾಣಿ ಮತ್ತಿತರರಿಗೆ ಅವಕಾಶ ಸಿಗುವುದೇ ಅಥವಾ ಹರತಾಳು ಹಾಲಪ್ಪ, ನೆಹರೂ ಓಲೆಕಾರ್, ಶಿವನಗೌಡ ನಾಯಕ್, ರಾಜುಗೌಡ ನಾಯಕ್ ಮತ್ತಿತರರಿಗೆ ಅವಕಾಶ ಸಿಗುವುದೆ ಎಂಬುದನ್ನು ಕಾದುನೋಡಬೇಕಿದೆ. ಇನ್ನು ಹಲವು ಕಾರಣಗಳಿಂದಾಗಿ ಕಗ್ಗಂಟಾಗಿರುವ ಎಚ್ ವಿಶ್ವನಾಥ್ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ವಿಚಾರ ಕೂಡ ಕಾರ್ಯಕಾರಿಣಿಯ ವೇಳೆ ಸ್ಪಷ್ಟತೆ ಪಡೆಯುವ ಸಾಧ್ಯತೆ ಇದೆ.

ತಮ್ಮ ಪರಮಾಪ್ತರಾಗಿ ಗುರುತಿಸಿಕೊಂಡಿದ್ದ ನಿರಾಣಿ, ರೇಣುಕಾಚಾರ್ಯರಂಥವರೇ ತಮ್ಮಿಂದ ದೂರ ಸರಿಯುತ್ತಿರುವುದು ಸಿಎಂ ಯಡಿಯೂರಪ್ಪ ಅವರಿಗೆ ತಲೆನೋವಾಗಿದ್ದು, ವರಿಷ್ಠರು ಸಂಪುಟ ಪುನರ್ ರಚನೆಗೆ ಅವಕಾಶ ನಿರಾಕರಿಸುತ್ತಾ ತಮ್ಮ ವಿರುದ್ಧ ತಮ್ಮ ಆಪ್ತರೇ ಸಿಡಿದೇಳುವಂತೆ ಮಾಡುತ್ತಿದ್ದಾರೆ. ಆ ಮೂಲಕ ಪಕ್ಷದಲ್ಲಿ ತಮ್ಮ ಬಲ ಕುಗ್ಗಿಸಿ, ನಾಯಕತ್ವ ಬದಲಾವಣೆ ಮಾಡುವ ತಂತ್ರಗಾರಿಕೆಯ ಭಾಗವಾಗಿಯೇ ಸಂಪುಟ ಪುನರ್ ರಚನೆ ವಿಷಯದಲ್ಲಿ ಸತಾಯಿಸಲಾಗುತ್ತಿದೆ ಎಂಬುದನ್ನು ಅರಿತೇ ಅವರು ನಿಗಮ-ಮಂಡಳಿ ನೇಮಕ ಮತ್ತು ಲಿಂಗಾಯತ ಮೀಸಲಾತಿ ದಾಳ ಉರುಳಿಸಿದ್ದರು. ಆ ಹಿನ್ನೆಲೆಯಲ್ಲಿ ಪರಿಸ್ಥಿತಿ ಕೈಮೀರಬಹುದು ಎಂದು ಲಿಂಗಾಯತ ಮೀಸಲಾತಿ ವಿಷಯದಲ್ಲಿ ಕೂಡಲೇ ಮಧ್ಯಪ್ರವೇಶಿಸಿ ಸಂಪುಟ ಪುನರ್ ರಚನೆಯ ಸಿಎಂ ಬೇಡಿಕೆಗೆ ಅಸ್ತು ಎಂದಿದ್ದರು. ಜೊತೆಗೆ ನಾಯಕತ್ವ ಬದಲಾವಣೆಯ ಬೇಡಿಕೆಯನ್ನೂ ಬದಿಗೊತ್ತುವುದಾಗಿ ಹೇಳಿದ್ದರು. ಆ ಹಿನ್ನೆಲೆಯಲ್ಲಿ ಯಡಿಯೂರಪ್ಪ ಬೆಳಗಾವಿ ಕಾರ್ಯಕಾರಿಣಿಯಲ್ಲಿ ಪಟ್ಟು ಹಿಡಿದು ಸಂಪುಟ ಪುನರ್ ರಚನೆಯ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲಿದ್ದಾರೆ ಮತ್ತು ಮುಂದಿನ ಎರಡು ಮೂರು ದಿನದಲ್ಲೇ ಅದನ್ನು ಜಾರಿಗೂ ತರಲಿದ್ದಾರೆ ಎನ್ನಲಾಗುತ್ತಿದೆ.

ಆ ಹಿನ್ನೆಲೆಯಲ್ಲಿ ಸಹಜವಾಗೇ ಕುಂದಾ ನಗರಿಯ ಕಾರ್ಯಕಾರಿಣಿಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಕಾರ್ಯಕಾರಿಣಿಯ ಬೆನ್ನಲ್ಲೇ ಭಾನುವಾರದ ಹೊತ್ತಿಗೆ ಸಚಿವ ಸಂಪುಟ ಪುನರ್ ರಚನೆಯಾಗಲಿದೆ ಎಂಬ ನಿರೀಕ್ಷೆ ಗರಿಗೆದರಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com