ಹುಣಸೂರು ಉಪ ಚುನಾವಣೆಯಲ್ಲಿ ನನ್ನ ಸೋಲಿಗೆ ಸಿ.ಪಿ.ಯೋಗೀಶ್ವರ್ ಹಾಗೂ ಎನ್.ಆರ್.ಸಂತೋಷ್ ಕಾರಣವೆಂದು ಮಾಜಿ ಸಚಿವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಶಾಸಕರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಶ್ವನಾಥ್, ಹುಣಸೂರು ಉಪ ಚುನಾವಣೆಯಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದಿಂದ ಚುನಾವಣಾ ಖರ್ಚಿಗಾಗಿ ನೀಡಿದ ದೊಡ್ಡಮಟ್ಟದ ಹಣವನ್ನು ಸಿ.ಪಿ. ಯೋಗೀಶ್ವರ್ ಹಾಗೂ ಎನ್.ಆರ್ ಸಂತೋಷ್ ಮೋಸದಿಂದ ಲಪಟಾಯಿಸಿರುವುದಾಗಿ ಆರೋಪಿಸಿದ್ದಾರೆ.
ಹುಣಸೂರಿನಲ್ಲಿ ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಅವರೇ ಕಾರಣ. ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡುವ ಮೊದಲೇ ತಾವೇ ಅಭ್ಯರ್ಥಿ ಎಂದು ಸೀರೆ, ಬಟ್ಟೆ ಹಂಚಿ ಪ್ರಚಾರ ನಡೆಸಿದರು. ನಾನು ಅಭ್ಯರ್ಥಿ ಎಂದು ಘೋಷಣೆಯಾದ ಮೇಲೂ ಪಕ್ಷದಿಂದ ಚುನಾವಣೆಗಾಗಿ ನನಗೆ ಹಣ ಸಿಕ್ಕಿಲ್ಲ. ನನಗೆ ಬಂದ ಹಣವನ್ನು ಯೋಗೇಶ್ವರ್ ಲಪಟಾಯಿಸಿದ್ದಾರೆ. ಹೀಗಾಗಿ ನನ್ನ ಸೋಲಿಗೆ ಇದೂ ಕಾರಣವಾಗಿದೆ. ಅಂತಹವರನ್ನು ಮುಖ್ಯಮಂತ್ರಿಯವರು ಮಂತ್ರಿ ಮಾಡುತ್ತೇನೆ ಎಂದು ಹೇಳಿಕೆ ನೀಡಿದರೆ ಹೇಗೆ ಎಂದು ವಿಶ್ವನಾಥ್ ಪ್ರಶ್ನಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಯೋಗೇಶ್ವರ್ ವಿರುದ್ಧ ಸಿಎಂ ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೂ ಲಿಖಿತವಾಗಿ ದೂರು ನೀಡಿದ್ದರು ಯಾವುದೇ ಪ್ರಯೋಜನವಾಗಿಲ್ಲ. ಇದರಿಂದಾಗಿ ನನಗೆ ತುಂಬಾ ಬೇಸರವಾಗಿದೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ವಿಶ್ವನಾಥ್, ಯಾರು ನಮ್ಮಿಂದ ಸಹಾಯ ಪಡೆದುಕೊಂಡು ಸರ್ಕಾರ ರಚನೆ ಮಾಡಿ ಅಧಿಕಾರ ಅನುಭವಿಸುತ್ತಿದ್ದಾರೋ ಅವರು ನಮ್ಮ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರಲಿಲ್ಲ. ವಿಧಾನ ಪರಿಷತ್ ಸದಸ್ಯತ್ವಕ್ಕೆ ಜೂನ್ ನಲ್ಲಿ ನಡೆದ ಚುನಾವಣೆ ವೇಳೆ ರಾಜ್ಯ ಕೋರ್ ಕಮಿಟಿ ಕಳುಹಿಸಿದ್ದ ಮೊದಲ ಪಟ್ಟಿಯಲ್ಲಿ ನನ್ನ ಹೆಸರಿತ್ತು. ಪಟ್ಟಿ ಬಿಡುಗಡೆಯಾದಾಗ ನನ್ನ ಹೆಸರು ಕೈ ಬಿಟ್ಟು ಹೋಗಿತ್ತು. ಯಾಕೆ ಹೀಗಾಯಿತು ಎಂದು ತಿಳಿಯಲಿಲ್ಲ. ಹಾಗೆ ನೋಡಿದರೆ ಸಂಘಪರಿವಾರದಿಂದ ನನಗೆ ಹೆಚ್ಚು ಸಹಕಾರ ಸಿಕ್ಕಿತ್ತು. ಆದರೆ ಈಗ ಕೋರ್ಟ್ ಗೆ ವಿಷಯ ಹೋದಾಗ ನಮಗೆ ಸಿಗಬೇಕಾದ ಸಹಕಾರ ಸಿಗಲಿಲ್ಲ. ಅಡ್ವೊಕೇಟ್ ಜನರಲ್ ಸರಿಯಾಗಿ ಮಾತನಾಡಿಸಲೂ ಅನಾದರ ತೋರಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಆದರೂ ನಾನು ಅದನೆಲ್ಲಾ ಎದುರಿಸಿ ನಿಲ್ಲುತ್ತೇನೆ. ವಿಧಾನ ಪರಿಷತ್ ಶಾಸಕ ಸ್ಥಾನವನ್ನು ಹೈಕೋರ್ಟ್ ಅನರ್ಹ ಮಾಡಿಲ್ಲ. ಹೀಗಾಗಿ ಹೈಕೋರ್ಟ್ ನೀಡಿರುವ ಮಧ್ಯಂತರ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುತ್ತೇನೆ. ಹಾಗೆಂದ ಮಾತ್ರಕ್ಕೆ ಸಚಿವ ಸ್ಥಾನಕ್ಕೆ ನಾನು ಕಾಯುತ್ತಿದ್ದೇನೆ ಎಂದಲ್ಲ. ನಾನು ರಾಜಕಾರಣವನ್ನು ವ್ಯವಹಾರವಾಗಿ ತೆಗೆದುಕೊಂಡಿಲ್ಲ ಸಾಂಸ್ಕೃತಿಕ ಹೋರಾಟವಾಗಿ ತೆಗೆದುಕೊಂಡವನು. ಸಚಿವನಾಗಿ ನನ್ನ ಕಾರ್ಯ ವೈಖರಿ ಜನತೆಗೆ ಗೊತ್ತಿದೆ ಎಂದು ಅವರು ಹೇಳಿದ್ದಾರೆ.
ಸಾರಾ ಮಹೇಶ್ ಅವರನ್ನು ಕೊಚ್ಚೆಗೆ ಹೋಲಿಸಿದ ಅವರು, ಸಾರಾ ಮಹೇಶ್ ಬಗ್ಗೆ ಮಾತನಾಡುವುದಿಲ್ಲ. ಆ ಕೊಚ್ಚೆ ಗುಂಡಿಗೆ ಕಲ್ಲೆಸೆದು ನನ್ನ ಶುಭ್ರ ವಸ್ತ್ರ ಮಲಿನ ಮಾಡಿಕೊಳ್ಳಲು ನಾನು ತಯಾರಿಲ್ಲ ಎಂದು ಹೇಳಿದ್ದಾರೆ.
ಕೆಲವು ನಾಯಕರು ನನ್ನ ಜತೆಗೂ ಇದ್ದಾರೆ. ರಮೇಶ್ ಜಾರಕಿಹೊಳಿ, ಆರ್.ಅಶೋಕ್, ಎಸ್ಟಿ. ಸೋಮಶೇಖರ್ ಸೇರಿದಂತೆ ಬಹುತೇಕ ನಾಯಕರು ನನಗೆ ಫೋನ್ ಮಾಡಿ ಬೆಂಬಲ ಸೂಚಿಸಿದ್ದಾರೆ ಎಂದು ಎಚ್ ವಿಶ್ವನಾಥ್ ಹೇಳಿದ್ದಾರೆ.