ಕರ್ನಾಟಕ ಬಂದ್‌ ಯಶಸ್ವಿಗೊಳಿಸುವಂತೆ ಕರೆ ನೀಡಿದ ಕರವೇ

ಬಂದ್ ವೇಳೆ ವೈದ್ಯಕೀಯ ಸೇವೆಗಳು, ಆಂಬುಲೆನ್ಸ್, ಔಷಧಿ ಅಂಗಡಿಗಳು, ಹಾಲು-ದಿನಪತ್ರಿಕೆ ಸರಬರಾಜಿನಂಥ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವುದಿಲ್ಲ, ಎಂದು ಕರವೇ ಹೇಳಿದೆ.
ಕರ್ನಾಟಕ ಬಂದ್‌ ಯಶಸ್ವಿಗೊಳಿಸುವಂತೆ ಕರೆ ನೀಡಿದ ಕರವೇ

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆ ಮತ್ತು ಶಾಸಕರುಗಳ ಕನ್ನಡ ವಿರೋಧಿ ನಡವಳಿಕೆಗಳ ಹಿನ್ನೆಲೆಯಲ್ಲಿ ಡಿಸೆಂಬರ್ 5 ರಂದು ಕರೆ ನೀಡಲಾಗಿರುವ 'ಕರ್ನಾಟಕ ಬಂದ್' ಯಶಸ್ವಿಗೊಳಿಸಲು ಕರ್ನಾಟಕ ರಕ್ಷಣಾ ವೇದಿಕೆ ಕರೆ ನೀಡಿದೆ.

ಈ ಕುರಿತಾಗಿ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ ಎ ನಾರಾಯಣ ಗೌಡ ಅವರು, ಕಾರ್ಯಕರ್ತರು ಡಿಸೆಂಬರ್ ಐದರಂದು ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಿದ್ದಾರೆ. ಅದೇ ರೀತಿ ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ/ ತಹಸೀಲ್ದಾರ್ ಕಚೇರಿಗಳಿಗೆ ಮುತ್ತಿಗೆ ಹಾಕಲಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಸಾವಿರಾರು ಕರವೇ ಕಾರ್ಯಕರ್ತರು ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆಯನ್ನು ದಾಖಲಿಸಲಿದ್ದಾರೆ, ಎಂದು ಹೇಳಿದ್ದಾರೆ.

ನಮ್ಮ ಪ್ರತಿಭಟನೆ ಯಾವುದೇ ಸಮಾಜದ ವಿರೋಧವಲ್ಲ, ಬದಲಾಗಿ ರಾಜಕೀಯ ಲಾಭಕ್ಕಾಗಿ ಸರ್ಕಾರ ನಡೆಸುತ್ತಿರುವ ಒಡೆದು ಆಳುವ ನೀತಿಗೆ ವಿರುದ್ಧ. ಹೀಗಾಗಿ ಯಾವುದೇ ಭಾಗದಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಅಹಿತಕರ ಘಟನೆಗಳು‌ ನಡೆಯದಂತೆ, ಶಾಂತಿಯುತ ಬಂದ್ ನಡೆಸಲು ಕಾರ್ಯಕರ್ತರಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಎಂದಿದ್ದಾರೆ.

“ಮರಾಠಾ ಪ್ರಾಧಿಕಾರ ರಚನೆ ಸಂಬಂಧ ಮುಖ್ಯಮಂತ್ರಿಗಳು ಕನ್ನಡಪರ ಸಂಘಟನೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತುಕತೆ ನಡೆಸಬಹುದಿತ್ತು. ಆದರೆ ಮುಖ್ಯಮಂತ್ರಿಗಳಾದಿಯಾಗಿ ಸರ್ಕಾರವನ್ನು‌‌ ನಡೆಸುತ್ತಿರುವವರು ಹುಂಬತನದಿಂದ ಆಕ್ರಮಣಕಾರಿ ಧೋರಣೆಯನ್ನು ಅನುಸರಿಸುತ್ತಿದ್ದಾರೆ. ಆಳುವ ಪಕ್ಷದ ಶಾಸಕರುಗಳೇ ನಾಲಿಗೆ ಹರಿಬಿಟ್ಟು ಕನ್ನಡಪರ ಸಂಘಟನೆಗಳನ್ನು ದೂಷಿಸುತ್ತಿದ್ದಾರೆ. ಈ ಕನ್ನಡದ್ರೋಹಿ ಶಾಸಕರುಗಳು ʼನಮಗೆ ಕನ್ನಡಿಗರ ಮತ ಬೇಕಿಲ್ಲʼ ಎಂಬಂಥ ಉದ್ಧಟತನದ ಹೇಳಿಕೆಗಳನ್ನೂ ನೀಡಿದ್ದಾರೆ. ಆದರೆ ದುರದೃಷ್ಟವಶಾತ್ ಈ ಹೇಳಿಕೆಗಳನ್ನು ಖಂಡಿಸದೆ ಸರ್ಕಾರ ಮೌನ ಸಮ್ಮತಿ‌ ನೀಡಿರುವುದು ಕನ್ನಡ ಕಾರ್ಯಕರ್ತರ‌ನ್ನು ಕೆರಳಿಸಿದೆ. ಈ ಹಿನ್ನೆಲೆಯಲ್ಲಿ 'ಕರ್ನಾಟಕ ಬಂದ್' ನಡೆಸಲು ಕಾರಣಕರ್ತರು ಸರ್ಕಾರದವರೇ ಹೊರತು ಕನ್ನಡಪರ ಸಂಘಟನೆಗಳಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕಿದೆ,” ಎಂದು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪುರಸಭೆ ಸದಸ್ಯ ಸ್ಥಾನದಿಂದ ಮುಖ್ಯಮಂತ್ರಿ ಸ್ಥಾನದವರೆಗೆ ತಲುಪಲು ಅವರು ಹೋರಾಟದ ಜೀವನವನ್ನು ಆಯ್ಕೆ ಮಾಡಿಕೊಂಡಿದ್ದೇ ಕಾರಣ. ಆದರೆ ಅವರೇ ಇಂದು ಹೋರಾಟಗಾರರಿಗೆ ಪೊಲೀಸರನ್ನು ಬಳಸಿಕೊಂಡು ಹೋರಾಟ ಹತ್ತಿಕ್ಕುವ ಬೆದರಿಕೆ ಒಡ್ಡುತ್ತಿದ್ದಾರೆ. ಮುಖ್ಯಮಂತ್ರಿಗಳು ಆತ್ಮವಿಮರ್ಶೆ ಮಾಡಿಕೊಂಡು ಈ ಬೆದರಿಕೆ ತಂತ್ರವನ್ನು ಕೈಬಿಟ್ಟು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಪ್ರಬುದ್ಧತೆ ಮೆರೆಯಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಬಂದ್ ವೇಳೆ ವೈದ್ಯಕೀಯ ಸೇವೆಗಳು, ಆಂಬುಲೆನ್ಸ್, ಔಷಧಿ ಅಂಗಡಿಗಳು, ಹಾಲು-ದಿನಪತ್ರಿಕೆ ಸರಬರಾಜಿನಂಥ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವುದಿಲ್ಲ. ಸಂಚಾರ ವ್ಯವಸ್ಥೆ ಸ್ಥಗಿತಗೊಳ್ಳುವುದರಿಂದ ನಾಗರಿಕರು ಡಿಸೆಂಬರ್ 5ರಂದು ಮನೆಯಲ್ಲೇ ಉಳಿದು ಬಂದ್ ಬೆಂಬಲಿಸಬೇಕೆಂದು ವೇದಿಕೆ ಮನವಿ ಮಾಡಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com