ಸಿಎಂ ಆಪ್ತ ಸಂತೋಷ್ ಗೆ ದಿಢೀರ್ ಬೆಳವಣಿಗೆಯ ಹಿಂದಿನ ರಹಸ್ಯವೇ ಕುತ್ತಾಯಿತೆ?

ಪ್ರಕರಣದ ಕುರಿತು ಸರಿಯಾದ ತನಿಖೆ ನಡೆದಲ್ಲಿ ಸಂತೋಷ್ ಎಂಬ ಮೂವತ್ತೊಂದರ ಹರೆಯದ ವ್ಯಕ್ತಿ ಏಕಾಏಕಿ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಏರಿದ ದಿಢೀರ್ ರಾಜಕೀಯ ಬೆಳವಣಿಗೆ ಮತ್ತು ಅದರ ಹಿಂದಿನ ಹಕೀಕತ್ತುಗಳು ಕೂಡ ಬಯಲಾಗಬಹುದು.
ಸಿಎಂ ಆಪ್ತ ಸಂತೋಷ್ ಗೆ ದಿಢೀರ್ ಬೆಳವಣಿಗೆಯ ಹಿಂದಿನ ರಹಸ್ಯವೇ ಕುತ್ತಾಯಿತೆ?

ರಾಜ್ಯ ಬಿಜೆಪಿಯ ಬೆಳವಣಿಗೆಗಳು ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿರುವ ನಡುವೆಯೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವಲ್ಲಿ ಸಾಕಷ್ಟು ಶ್ರಮಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಆಪ್ತ ಸಹಾಯಕ ಎನ್ ಆರ್ ಸಂತೋಷ್ ಆತ್ಮಹತ್ಯೆ ಯತ್ನ ನಡೆಸಿರುವುದು ಬಿಕ್ಕಟ್ಟುಗಳನ್ನು ಇನ್ನಷ್ಟು ಗೋಜಲುಗೊಳಿಸಿದೆ.

ಒಂದು ಕಡೆ ಸಂಪುಟ ಪುನರ್ ರಚನೆ, ವಿಸ್ತರಣೆಗಳ ವಿಷಯದಲ್ಲಿ ಒಂದು ಕಡೆ ಬಿಜೆಪಿಯ ದೆಹಲಿ ಮತ್ತು ಬೆಂಗಳೂರು ಶಕ್ತಿಕೇಂದ್ರಗಳ ಸಂಘರ್ಷ ತಾರಕಕ್ಕೇರಿದ್ದರೆ, ಮತ್ತೊಂದು ಕಡೆ ಮುಖ್ಯಮಂತ್ರಿಗಳ ಆಪ್ತ ವಲಯದ ಒಳಸುಳಿಗಳೇ ಬಿರುಗಾಳಿಗಳಾಗಿ ಬದಲಾಗಿದ್ದವು. ಸದ್ಯ ಯಡಿಯೂರಪ್ಪ ಸರ್ಕಾರ ಮತ್ತು ಸಂಪುಟ ಪುನರ್ ರಚನೆಯ ಪ್ರಯತ್ನಗಳಿಗೆ ದೊಡ್ಡ ಸವಾಲಾಗಿರುವ ಕೆಲವು ಬೆಳವಣಿಗೆಗಳೇ, ಆ ಸರ್ಕಾರ ಬರಲು ಮತ್ತು ಅವರು ಮುಖ್ಯಮಂತ್ರಿಯಾಗಲು ಪ್ರಮುಖ ಪಾತ್ರ ವಹಿಸಿದ್ದ ವ್ಯಕ್ತಿಗಳ ಸುತ್ತ ಹಲವು ಸುಳಿಗಳು ಸುತ್ತಿಕೊಂಡಿದ್ದವು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಕಡೆ ಮೂವರು ಪತ್ರಕರ್ತರು ಒಬ್ಬರ ಮೇಲೊಬ್ಬರಂತೆ ಸರದಿಯಲ್ಲಿ ಯಡಿಯೂರಪ್ಪ ಆಪ್ತವಲಯದ ವಿವಿಧ ಹುದ್ದೆಗಳಿಂದ ಹೊರಬಿದ್ದರೆ, ಮತ್ತೊಬ್ಬ ಪ್ರಮುಖ ಆಪ್ತ ಆರ್ ಎನ್ ಸಂತೋಷ್ ಕೂಡ ಹೊರಬೀಳಲಿದ್ದಾರೆ ಎಂಬ ಸುದ್ದಿಗಳು ಹರಡಿದ್ದವು. ಜೊತೆಗೆ ಸರ್ಕಾರದ ಮೂಲ ಕಾರಣವಾದ ವಲಸಿಗ ಶಾಸಕರು ಮತ್ತು ಸಚಿವರ ಕೂಡ ಪ್ರತ್ಯೇಕ ರಹಸ್ಯ ಸಭೆಗಳನ್ನು ಮಾಡಿ ತಮ್ಮ ಒಗ್ಗಟ್ಟು ಕಾಯ್ದುಕೊಂಡು ಬಂದವರೆಲ್ಲರಿಗೂ ಸಚಿವ ಸ್ಥಾನ ಖಾತ್ರಿಪಡಿಸಿಕೊಳ್ಳುವ ತಂತ್ರ ಹೆಣೆಯತೊಡಗಿದ್ದರು. ವಲಸಿಗರ ನಾಯಕ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಕೂತು ವರಿಷ್ಠರು ಮತ್ತು ಯಡಿಯೂರಪ್ಪ ವಿರೋಧಿ ಬಣದ ಸೂತ್ರಧಾರರ ಜೊತೆ ಮಾತುಕತೆ ನಡೆಸುತ್ತಿರುವ ಹೊತ್ತಿಗೇ ಶುಕ್ರವಾರ ಬೆಂಗಳೂರಿನಲ್ಲಿ ಅವರ ಗುಂಪಿನ ನಾಯಕರು ಹೀಗೆ ಪ್ರತ್ಯೇಕ ಸಭೆಗಳಲ್ಲಿ ನಿರತರಾಗಿದ್ದರು.

ಒಂದು ಕಡೆ ಲಿಂಗಾಯತ ಮೀಸಲಾತಿ ಮತ್ತು ಒಬಿಸಿ ಸ್ಥಾನಮಾನದ ಅಸ್ತ್ರ ಪ್ರಯೋಗಿಸಿ ಪಕ್ಷದ ದೆಹಲಿಯ ವರಿಷ್ಠರ ದಿಢೀರ್ ಯೂ ಟರ್ನ್ ಹೊರಡಿಸಿದ ಬೆನ್ನಲ್ಲೇ, ಆ ವಿಷಯದ ಕುರಿತ ಸಂಪುಟ ಸಭೆಯ ತೀರ್ಮಾನಕ್ಕೆ ಬ್ರೇಕ್ ಬಿದ್ದಿತ್ತು. ಜೊತೆಗೆ ಸಂಪುಟ ಪುನರ್ ರಚನೆಗೆ ಹಸಿರು ನಿಶಾನೆ ತೋರಿದ್ಧಾರೆ ಎಂದೂ ಹೇಳಲಾಗಿತ್ತು. ಈ ನಡುವೆ, ವೀರಶೈವ-ಲಿಂಗಾಯತ ಮಠಾಧೀಶರುಗಳು ಕೊಟ್ಟ ಮಾತು ಉಳಿಸಿಕೊಳ್ಳುವಂತೆ ಯಡಿಯೂರಪ್ಪ ಅವರಿಗೆ ಪಟ್ಟು ಹಿಡಿದಿದ್ದರು. ಪತ್ರಿಕಾಗೋಷ್ಠಿ ನಡೆಸಿ 24 ತಾಸುಗಳ ಗಡುವು ಕೊಟ್ಟು 2ಎ ಮೀಸಲಾತಿ ಘೋಷಿಸದೇ ಹೋದರೆ ಪಾದಯಾತ್ರೆ, ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದರು.

ಹೀಗೆ ಹಲವು ಕ್ಷಿಪ್ರ ಬೆಳವಣಿಗೆಗಳಿಗೆ ಶುಕ್ರವಾರ ಸಾಕ್ಷಿಯಾಗಿತ್ತು. ಅದರ ಬೆನ್ನಲ್ಲೇ ಸಂಜೆ ಹೊತ್ತಿಗೆ ಯಡಿಯೂರಪ್ಪ ಅವರ ಪರಮಾಪ್ತ ಹಾಗೂ ರಾಜಕೀಯ ಕಾರ್ಯದರ್ಶಿ ಎನ್ ಆರ್ ಸಂತೋಷ್ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಆತಂಕದ ಸುದ್ದಿ ಹೊರಬಿತ್ತು. ಆ ಮೂಲಕ ಅವರ ಆ ಸ್ಥಿತಿಗೆ ನಿಜವಾಗಿಯೂ ಕಾರಣವೇನು? ವೈಯಕ್ತಿಕ ಸಮಸ್ಯೆಯೇ? ರಾಜ್ಯ ರಾಜಕಾರಣದ ಬೆಳವಣಿಗೆಗಳೇ? ಹುದ್ದೆ ಕಳೆದುಕೊಳ್ಳುವ ಆತಂಕವೇ? ಅಥವಾ ರಾಜಕೀಯ ಮತ್ತು ವೈಯಕ್ತಿಕವಾಗಿ ಅವರು ರಾಜ್ಯದ ಪ್ರಭಾವಿಗಳೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಂದಿದ್ದ ವ್ಯತಿರಿಕ್ತ ಸಂಬಂಧಗಳೇ ? ಎಂಬ ಪ್ರಶ್ನೆಗಳು ಎದ್ದಿವೆ. ಜೊತೆಗೆ ಈ ಹಿಂದೆ ಸಚಿವ ಕೆ ಎಸ್ ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಕೇಳಿಬಂದಿದ್ದಂತೆಯೇ ಈಗಲೂ ಮತ್ತೊಂದು ವಿಡಿಯೋ ಸಂಗತಿ ಕೂಡ ಆತ್ಮಹತ್ಯೆಯ ಹಿಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿಎಂ ಆಪ್ತ ಸಂತೋಷ್ ಗೆ ದಿಢೀರ್ ಬೆಳವಣಿಗೆಯ ಹಿಂದಿನ ರಹಸ್ಯವೇ ಕುತ್ತಾಯಿತೆ?
ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ CM ರಾಜಕೀಯ ಕಾರ್ಯದರ್ಶಿ ಆತ್ಮಹತ್ಯೆ ಯತ್ನ

ಮುಖ್ಯವಾಗಿ ಮುಖ್ಯಮಂತ್ರಿಗಳ ಆಪ್ತ ಸಹಾಯಕನಾಗಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಂತೋಷ್, ವೈಯಕ್ತಿಕವಾಗಿಯೂ ಯಡಿಯೂರಪ್ಪ ಅವರಿಗೆ ಹತ್ತಿರದ ಸಂಬಂಧಿ. ತಿಪಟೂರು ತಾಲೂಕು ನೊಣವಿನಕೆರೆ ಮೂಲದ ಅವರು, ಬಿಎಸ್ ವೈ ಅವರ ಅಕ್ಕನ ಮೊಮ್ಮಗ. ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಮತ್ತು ಆರ್ ಎಸ್ಎಸ್ ಚಟುವಟಿಕೆಗಳ ಮೂಲಕ ರಾಜಕೀಯ ಸಂಪರ್ಕ ಬೆಳೆಸಿಕೊಂಡಿದ್ದ ಸಂತೋಷ್, ಯಡಿಯೂರಪ್ಪ ಆಪ್ತ ಸಹಾಯಕ ಸ್ಥಾನದಿಂದ ಸಿದ್ದಲಿಂಗಸ್ವಾಮಿ ದೂರವಾದ ಬಳಿಕ ಆ ಸ್ಥಾನಕ್ಕೆ ಬಂದಿದ್ದರು.

ಆದರೆ, ಮೊದಲ ಬಾರಿ ರಾಜ್ಯಾದ್ಯಂತ ಅವರ ಹೆಸರು ಕೇಳಿಬಂದಿದ್ದು ಮಾತ್ರ ಇಂತಹದ್ದೇ ಒಂದು ಪ್ರಕರಣದಲ್ಲಿ. ಒಂದು ರಹಸ್ಯ ಸಿಡಿ ವಿಷಯದಲ್ಲಿ ಮತ್ತೊಬ್ಬ ಬಿಜೆಪಿ ನಾಯಕ ಮತ್ತು ಯಡಿಯೂರಪ್ಪ ಪ್ರತಿಸ್ಪರ್ಧಿ ಕೆ ಎಸ್ ಈಶ್ವರಪ್ಪ ಆಪ್ತಸಹಾಯಕ ವಿನಯ್ ಅಪಹರಣ ಪ್ರಕರಣದಲ್ಲಿ ಸಂತೋಷ್ ತನಿಖೆ ಎದುರಿಸಿದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದು, ಪರಸ್ಪರ ರಾಜೀ ಮೂಲಕ ಪ್ರಕರಣ ಇತ್ಯರ್ಥವಾಗಿದೆ ಎನ್ನಲಾಗಿತ್ತು. ಆ ಪ್ರಕರಣದಲ್ಲಿ ತಿಂಗಳುಗಟ್ಟಲೆ ಹೈಡ್ರಾಮ ನಡೆದು, ಇಬ್ಬರು ಪ್ರಮುಖರ ಆಪ್ತಸಹಾಯಕರ ನಡುವಿನ ಈ ಅಪಹರಣ, ಕೇಸು, ಕೋರ್ಟು ಪ್ರಹಸನದಲ್ಲಿ ಸ್ವತಃ ಯಡಿಯೂರಪ್ಪ ಅವರಿಗೂ ವಿಚಾರಣೆಗೆ ಹಾಜರಾಗುವಂತೆ ಸಿಸಿಬಿ ನೋಟೀಸ್ ನೀಡಿತ್ತು. ಜೊತೆಗೆ ಇದು ಆಪ್ತ ಸಹಾಯಕರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ; ಆಗ ಪರಸ್ಪರ ಕತ್ತಿ ಮಸೆಯುತ್ತಿದ್ದ ಇಬ್ಬರು ನಾಯಕರ ನಡುವಿನ ಹಗ್ಗಜಗ್ಗಾಟದ ಸಂಗತಿ ಕೂಡ ಎಂಬ ಮಾತೂ ಕೇಳಿಬಂದಿತ್ತು. ಅಲ್ಲದೆ, ಆ ಸಿಡಿ ಹಿಂದಿನ ರಹಸ್ಯ ಕೂಡ ಸಾಕಷ್ಟು ಚರ್ಚೆಗೆ ಒಳಗಾಗಿತ್ತು.

ಸಿಎಂ ಆಪ್ತ ಸಂತೋಷ್ ಗೆ ದಿಢೀರ್ ಬೆಳವಣಿಗೆಯ ಹಿಂದಿನ ರಹಸ್ಯವೇ ಕುತ್ತಾಯಿತೆ?
ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?

ರಾಯಣ್ಣ ಬ್ರಿಗೇಡ್ ಎಂಬ ರಾಜಕೀಯ ಶಕ್ತಿಪ್ರದರ್ಶನದ ಕೆ ಎಸ್ ಈಶ್ವರಪ್ಪ ಅವರ ರಾಜಕೀಯ ಅಸ್ತ್ರ ನಿಧಾನಕ್ಕೆ ಬದಿಗೆ ಸರಿದಂತೆ ಯಡಿಯೂರಪ್ಪ ಮತ್ತು ಅವರ ನಡುವಿನ ಶೀತಲ ಸಮರವೂ ಶಮನಗೊಂಡಿತ್ತು. ಕಾಕತಾಳೀಯ ಎಂಬಂತೆ ಅವರ ಆಪ್ತ ಸಹಾಯಕರ ನಡುವಿನ ಈ ಅಪಹರಣ ಪ್ರಕರಣ ಕೂಡ ಇದ್ದಕ್ಕಿದ್ದಂತೆ ಸದ್ದಡಗಿತ್ತು.

ಆ ಬಳಿಕ ಮತ್ತೆ ಸಂತೋಷ್ ಹೆಸರು ಮುಂಚೂಣಿಗೆ ಬಂದದ್ದು ಕಾಂಗ್ರೆಸ್- ಜೆಡಿಎಸ್ ಸರ್ಕಾರವನ್ನು ಉರುಳಿಸಲು ನಡೆದ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ. ಬಂಡಾಯ ಶಾಸಕರನ್ನು ಬೆಂಗಳೂರಿನಿಂದ ಮುಂಬೈಗೆ ವಿಮಾನದಲ್ಲಿ ಸಾಗಿಸಿ, ಅವರನ್ನು ತಿಂಗಳುಗಟ್ಟಲೆ ಅಲ್ಲಿ ಬಚ್ಚಿಟ್ಟು ಅವರ ಬೇಕುಬೇಡಗಳನ್ನು ನಿರ್ವಹಣೆ ಮಾಡಿದ ಕೀರ್ತಿ ಸಂತೋಷ್ ಗೇ ಸಂದಿತ್ತು. ಆನ್ ಕ್ಯಾಮರಾ ಕೂಡ ಅವರು ಬಂಡಾಯ ಶಾಸಕರನ್ನು ಹಿಡಿದು ವಿಮಾನಕ್ಕೆ ಹತ್ತಿಸಿದ ದೃಶ್ಯಾವಳಿಗಳು ಬಿತ್ತರವಾಗುತ್ತಲೇ ಸಂತೋಷ್ ಇಡೀ ಆಪರೇಷನ್ ಕಮಲದ ಕಟ್ಟಾಳುವಾಗಿ ಹೊರಹೊಮ್ಮಿದ್ದರು.

ಬಳಿಕ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದು, ಯಡಿಯೂರಪ್ಪ ಮುಖ್ಯಮಂತ್ರಿ ಗಾದಿಗೆ ಏರುತ್ತಲೇ ತಮ್ಮ ಆ ‘ಶ್ರಮ’ಕ್ಕೆ ತಕ್ಕ ಪ್ರತಿಫಲ ನಿರೀಕ್ಷಿಸಿದ್ದರು. ಆದರೆ, ಬಹುತೇಕ ಕಳೆದ ಮಾರ್ಚ್ ವರೆಗೆ ತಿಂಗಳ ಕಾಲ ಅವರ ಆ ನಿರೀಕ್ಷೆ ನಿರೀಕ್ಷೆಯಾಗೇ ಉಳಿದುಬಿಟ್ಟಿತ್ತು. ಕಳೆದ ಮಾರ್ಚ್ ನಲ್ಲಿ ದಿಢೀರನೇ ಪಕ್ಷ ಮತ್ತು ಕುಟುಂಬದ ಹಲವರ ವಿರೋಧದ ನಡುವೆಯೂ ಯಡಿಯೂರಪ್ಪ, ಸಂತೋಷ್ ಅವರಿಗೆ ಆಪ್ತ ಸಹಾಯಕ ಸ್ಥಾನದಿಂದ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಬಡ್ತಿ ನೀಡಿದ್ದರು. ಆ ನೇಮಕ ಕೂಡ ದೊಡ್ಡಮಟ್ಟದಲ್ಲಿ ಸಿಎಂ ಕುಟುಂಬ ಮತ್ತು ಆಪ್ತ ವಲಯದಲ್ಲಿ ಅಸಮಾಧಾನ ಮತ್ತು ವಾಗ್ವಾದಕ್ಕೆ ಕಾರಣವಾಗಿತ್ತು ಎಂಬುದು ಬಹಿರಂಗವಾಗಿಯೇ ಎಲ್ಲರಿಗೂ ತಿಳಿದ ಸಂಗತಿ.

ಈ ನಡುವೆ ಇದೀಗ ಕಳೆದ ಎರಡು ವಾರಗಳಿಂದ ಯಡಿಯೂರಪ್ಪ ಅವರ ಆಪರೇಷನ್ ಕಮಲಕ್ಕೆ ನೆರವಾಗಿ ವಿವಿಧ ಹುದ್ದೆ ಪಡೆದು, ಬಳಿಕ ಅವರ ಪುತ್ರ ವಿಜಯೇಂದ್ರನ ಕೆಂಗಣ್ಣಿಗೆ ಗುರಿಯಾಗಿ ಹೊರನಡೆದ ಪತ್ರಕರ್ತರಂತೆಯೇ ಸಂತೋಷ್ ಕೂಡ ಹೊರಬೀಳಲಿದ್ದಾರೆ. ನವೆಂಬರ್ 25ರ ಒಳಗೆ ರಾಜೀನಾಮೆ ನೀಡಿ, ಇಲ್ಲವೇ ನಾವೇ ಕಿತ್ತು ಹಾಕಬೇಕಾಗುತ್ತದೆ ಎಂದು ಸಂತೋಷ್ ಗೆ ತಾಕೀತು ಮಾಡಲಾಗಿದೆ ಎಂಬ ವರದಿಗಳು ಕೇಳಿಬಂದಿದ್ದವು.

ಜೊತೆಗೆ ಸಂತೋಷ್, ಸರ್ಕಾರ ಅಸ್ತಿತ್ವಕ್ಕೆ ಬಂದು ಸುಮಾರು ಹತ್ತು ತಿಂಗಳ ‘ನಿರಂತರ ಪ್ರಯತ್ನ’ದ ಬಳಿಕ ದಕ್ಕಿಸಿಕೊಂಡಿದ್ದ ಈ ಸ್ಥಾನದ ಜೊತೆಗೆ, ರಾಜಕೀಯವಾಗಿಯೂ ತಮ್ಮ ಭವಿಷ್ಯ ಕೈತಪ್ಪಬಹುದು. ಈಗಾಗಲೇ ಪಕ್ಷದಲ್ಲಿ ತಮ್ಮ ವಿರುದ್ಧ ದೊಡ್ಡ ಮಟ್ಟದ ಅಸಮಾಧಾನ ಎದ್ದಿದೆ ಎಂದು ಆತಂಕಕ್ಕೀಡಾಗಿದ್ದರು. ಜೊತೆಗೆ ವೈಯಕ್ತಿಕವಾಗಿ ಕೆಲವು ಸಮಸ್ಯೆಗಳಲ್ಲಿ ಸಿಲುಕಿದ್ದರು. ವೈಯಕ್ತಿಕವಾಗಿ ಮಹಿಳೆಯೊಬ್ಬರೊಂದಿಗೆ ಇರುವ ವೀಡಿಯೋ ಪಕ್ಷದ ವರಿಷ್ಠರ ಕೈಗೆ ತಲುಪಿಸಿ ಅವರ ನೇಮಕ ರದ್ದು ಮಾಡುವಂತೆ ಪಕ್ಷದ ಒಳಗಿನಿಂದಲೇ ಒತ್ತಡ ಹೇರಲಾಗಿತ್ತು. ಈ ಸಂಗತಿಗಳು ಕೂಡ ಅವರನ್ನು ಸದ್ಯದ ವಿಪರೀತದ ಹೆಜ್ಜೆ ಇಡಲು ಪ್ರೇರೇಪಿಸಿರಬಹುದು ಎಂಬ ಮಾತೂ ಕೇಳಿಬರುತ್ತಿದೆ.

ಆ ಹಿನ್ನೆಲೆಯಲ್ಲಿ; ಪ್ರಕರಣದ ಕುರಿತು ಸರಿಯಾದ ತನಿಖೆ ನಡೆದಲ್ಲಿ ಸಂತೋಷ್ ಎಂಬ ಮೂವತ್ತೊಂದರ ಹರೆಯದ ವ್ಯಕ್ತಿ ಏಕಾಏಕಿ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಏರಿದ ದಿಢೀರ್ ರಾಜಕೀಯ ಬೆಳವಣಿಗೆ ಮತ್ತು ಅದರ ಹಿಂದಿನ ಹಕೀಕತ್ತುಗಳು ಕೂಡ ಬಯಲಾಗಬಹುದು. ಆದರೆ, ಅಂತಹದ್ದೊಂದು ನಿಷ್ಪಕ್ಷಪಾತ ತನಿಖೆಯನ್ನು ಅವರದೇ ಸರ್ಕಾರದಿಂದ ನಿರೀಕ್ಷಿಸಲು ಸಾಧ್ಯವೇ?

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com