ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?

ಬದಲಾವಣೆಯ ಪರ್ವ ಈಗ ತಾನೇ ಆರಂಭವಾಗಿದೆ. ಅತ್ತ ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಧ್ರುವತಾರೆಯಂತೆ ಮೇಲೇರುತ್ತಿದ್ದಂತೆ ಅದೇ ವೇಗದಲ್ಲಿ ಸಿಎಂ ಕಚೇರಿಯಲ್ಲೂ ಇನ್ನಷ್ಟು ಬದಲಾವಣೆಗಳಾಗಲಿವೆ. ಹಾಗೇ ಈ ಬದಲಾವಣೆಗಳಿಗೆ ಮುಂದಿನ ದಿನಗಳಲ್ಲಿ ಸ್ವತಃ ರಾಜ್ಯ ಬಿಜೆಪಿ ಕೂಡ ಹೊರತಲ್ಲ ಎಂಬುದು ವಿಜಯೇಂದ್ರ ಬಳಗದ ಅಂತರಂಗದ ವಿಶ್ವಾಸ!
ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?

ರಾಜ್ಯ ರಾಜಕಾರಣದಲ್ಲಿ ಒಂದು ಕಡೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ದೆಹಲಿಯ ಗ್ರೀನ್ ಸಿಗ್ನಲ್ ಸಿಗದ ಸಂಗತಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಹೊತ್ತಿಗೇ, ಇತ್ತ ಮುಖ್ಯಮಂತ್ರಿಗಳ ಕಚೇರಿಯಲ್ಲೇ ಎದ್ದಿರುವ ಬಿರುಗಾಳಿಗೆ ಘಟಾನುಘಟಿಗಳು ತರಗೆಲೆಗಳಂತೆ ತೂರಿಹೋಗತೊಡಗಿದ್ದಾರೆ.

ಮೂರು ಮೂರು ಬಾರಿ ದೆಹಲಿಗೆ ಹೋಗಿ ವರಿಷ್ಠರ ಮನೆಯ ಕಂಬ ಸುತ್ತಿ ಬಂದರೂ ಸಂಪುಟ ಪುನರ್ ರಚನೆಗಿರಲಿ ಕನಿಷ್ಟ ವಿಸ್ತರಣೆಗೂ ಅವರು ಹೂಂ ಎನ್ನಲೂ ಇಲ್ಲ; ಉಹೂಂ ಎನ್ನಲೂ ಇಲ್ಲ. ಮೂರು ದಿನಗಳ ಇತ್ತಿಚಿನ ಗಡುವು ಕೂಡ ಮುಗಿದು, ಸಚಿವ ಸ್ಥಾನಾಕಾಂಕ್ಷಿಗಳ ಒತ್ತಡ, ಗೋಗರೆತ, ಹಪಾಹಪಿ, ಗುಪ್ತ ಸಭೆಗಳು ಮುಖ್ಯಮಂತ್ರಿಗಳನ್ನು ಅಕ್ಷರಶಃ ಕೆಂಡದ ಮೇಲೆ ಕೂರಿಸಿಬಿಟ್ಟಿವೆ. ಇಂತಹ ಹೊತ್ತಲ್ಲಿ; ಹೊರ ಬೇಗುದಿ ಸಾಲದೆಂಬಂತೆ ಮನೆಯೊಳಗೆ ಸಂಘರ್ಷದ ‘ಕಾವೇರಿ’ದೆ. ಸಿಎಂ ಕಚೇರಿಯೊಳಗೇ ಎದ್ದಿರುವ ಈ ಬೆಂಕಿ ಬಿರುಗಾಳಿಗೆ ರಾಜ್ಯ ಪತ್ರಿಕೋದ್ಯಮದ ದಿಗ್ಗಜರು ಸೇರಿದಂತೆ ಸ್ವತಃ ಈ ಸರ್ಕಾರ ಅಸ್ತಿತ್ವಕ್ಕೆ ಬರಲು ಪ್ರತ್ಯಕ್ಷ-ಪರೋಕ್ಷ ಶ್ರಮಿಸಿದವರೇ ಬೆಂದು ಹೊರಬಿದ್ದಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಹತ್ತು ದಿನಗಳಿಂದ ದಿನಕ್ಕೊಂದು ಸೋಡಾ ಚೀಟಿ ಸುದ್ದಿಗಳಿಗಾಗೇ ಚರ್ಚೆಯಲ್ಲಿರುವ ಸಿಎಂ ಕಚೇರಿಯಿಂದ ಹೀಗೆ ಹೊರಬಿದ್ದವರಲ್ಲಿ ಸ್ವತಃ ಆಪರೇಷನ್ ಕಮಲದ ಸೂತ್ರಧಾರಿಗಳಾಗಿ ಹಗಲಿರುಳು ಬೆವರು ಸುರಿಸಿದ ಹಿರಿಯ ಪತ್ರಕರ್ತರು, ದಶಕಗಳ ಕಾಲ ಯಡಿಯೂರಪ್ಪ ಅವರೊಂದಿಗೆ ಆಪ್ತ ನಂಟು ಹೊಂದಿದ್ದವರೂ ಇದ್ದಾರೆ ಎಂಬುದು ಆ ಬೆಂಕಿ ಬಿರುಗಾಳಿಯ ಬಿರುಸು ಎಷ್ಟು ತೀವ್ರವಾಗಿದೆ ಎಂಬುದಕ್ಕೆ ನಿದರ್ಶನ.

ಆಪರೇಷನ್ ಕಮಲದ ತಂತ್ರಗಾರರಲ್ಲಿ ಪ್ರಮುಖರಾದ ಮಾಜಿ ಪತ್ರಕರ್ತ ಎಂ ಬಿ ಮರಮಕಲ್, ಯಡಿಯೂರಪ್ಪ ಮತ್ತು ಅವರ ಪುತ್ರ ವಿಜಯೇಂದ್ರ ಅವರ ಆಪ್ತ ಸಲಹೆಗಾರರಾಗಿದ್ದ ಮಾಜಿ ಪತ್ರಕರ್ತ ಮಹದೇವ ಪ್ರಕಾಶ್, ವಾರ್ತಾ ಇಲಾಖೆಯ ಮೂಲಕ ಸಿಎಂ ಸಾಮಾಜಿಕ ಜಾಲ ತಾಣ ನಿರ್ವಹಣೆ ಮಾಡುತ್ತಿದ್ದ ಜಿ ಎನ್ ಮೋಹನ್ ಸೇರಿದಂತೆ ಈಗಾಗಲೇ ಮೂವರು ಘಟಾಘಟಿಗಳು ಸಿಎಂ ಕಚೇರಿಯಿಂದ ಗೇಟ್ ಪಾಸ್ ಪಡೆದುಕೊಂಡಿದ್ದಾರೆ. ಆ ಪೈಕಿ ಮರಮಕಲ್ ಅವರನ್ನಂತೂ ಅಕ್ಷರಶಃ ನೇಮಕ ರದ್ದು ಮಾಡಿ ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಹೊರಹಾಕಿದ್ದರೆ, ಮಹದೇವ ಪ್ರಕಾಶ್ ಮಾಧ್ಯಮ ಸಲಹೆಗಾರರ ಸ್ಥಾನಕ್ಕೆ ತಾವಾಗಿಯೇ ರಾಜೀನಾಮೆ ನೀಡುವಂತೆ ಮಾಡಲಾಗಿದೆ.

ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?
ಮರಮಕಲ್ ನೇಮಕ ರದ್ದು: ವಿಜಯೇಂದ್ರ ದಿಗ್ವಿಜಯಕ್ಕೆ ಮತ್ತೊಂದು ಗರಿ!

ಈ ನಡುವೆ, ಆಪರೇಷನ್ ಕಮಲಕ್ಕೆ ಶತಾಯಗತಾಯ ಶ್ರಮಿಸಿದವರುಗಳೆಲ್ಲಾ ಸಿಎಂ ಆಪ್ತ ವಲಯದಿಂದ ಹೀಗೆ ಸಾಲುಸಾಲಾಗಿ ಹೊರಬೀಳುತ್ತಿರುವ ಹೊತ್ತಲ್ಲೇ, ಮತ್ತೊಬ್ಬ ಪ್ರಮುಖ ಆಪರೇಷನ್ ಕಮಲ ಸೂತ್ರಧಾರಿ ಮತ್ತು ದಶಕಗಳ ಕಾಲ ಯಡಿಯೂರಪ್ಪನವರ ಮಾನಸಪುತ್ರನೆಂದೇ ಗುರುತಿಸಿಕೊಂಡಿದ್ದ ಎನ್ ಆರ್ ಸಂತೋಷ್ ಗೆ ಕೂಡ ಗೇಟ್ ಪಾಸ್ ಕೊಡಲು ನಿರ್ಧರಿಸಲಾಗಿದೆ. ನೀವಾಗಿಯೇ ರಾಜೀನಾಮೆ ನೀಡಿ ಹೊರನಡೆಯಿರಿ. ಇಲ್ಲವೇ ನಾವೇ ನೇಮಕಾತಿ ರದ್ದು ಮಾಡಿ ವಜಾ ಮಾಡುತ್ತೇವೆ ಎಂದು ತಾಕೀತು ಮಾಡಲಾಗಿದೆ. ಹಾಗಾಗಿ ಒಂದೆರಡು ದಿನಗಳಲ್ಲಿ ಸಂತೋಷ್ ಕೂಡ ಬೆನ್ನು ತಿರುಗಿಸಲಿದ್ದಾರೆ ಎಂಬ ಸುದ್ದಿ ಸ್ವತಃ ಸಿಎಂ ಆಪ್ತ ವಲಯದಿಂದಲೇ ಹೊರಬಿದ್ದಿದೆ.

ಆಪರೇಷನ್ ಕಮಲದ ವೇಳೆ ಕಾಂಗ್ರೆಸ್ ಶಾಸಕರನ್ನು ಮುಂಬೈಗೆ ಕರೆದೊಯ್ದು ಅವರನ್ನು ತಿಂಗಳುಗಟ್ಟಲೆ ಅಲ್ಲಿ ಇಟ್ಟು ನಿರ್ವಹಿಸುವಲ್ಲಿ ಸಂತೋಷ್ ಪ್ರಮುಖ ಪಾತ್ರವಹಿಸಿದ್ದರು. ಹಾಗೆ ನೋಡಿದರೆ, ಯಡಿಯೂರಪ್ಪ ಈ ಅವಧಿಯಲ್ಲಿ ಸಿಎಂ ಆಗಲು ಸಂತೋಷ್ ತೆಗೆದುಕೊಂಡ ರಿಸ್ಕ್ ದೊಡ್ಡದಿತ್ತು ಎಂಬ ಮಾತುಗಳು ಇವೆ. ಆ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಯಡಿಯೂರಪ್ಪ ತಮಗಾಗಿ ‘ದುಡಿದ’ ತಮ್ಮ ಶಿಷ್ಯನ ಋಣ ತೀರಿಸಲೆಂದೇ ಕಳೆದ ವರ್ಷ ಹಲವರ ಪ್ರಬಲ ವಿರೋಧದ ನಡುವೆಯೂ ರಾಜಕೀಯ ಕಾರ್ಯದರ್ಶಿ ಸ್ಥಾನ ನೀಡಿ ಸಂಪುಟ ದರ್ಜೆಯ ಸ್ಥಾನಮಾನ ದಯಪಾಲಿಸಿದ್ದರು. ಆದರೆ, ಇದೀಗ ಅಂತಹ ಸಂತೋಷ್ ಅವರನ್ನೇ ಯಡಿಯೂರಪ್ಪ ಆಪ್ತ ವಲಯದಿಂದ ಹೊರಹಾಕಲು ಕ್ಷಣಗಣನೆ ಆರಂಭವಾಗಿದೆ.

ಆದರೆ, ಸ್ವತಃ ಯಡಿಯೂರಪ್ಪ ಅವರೇ ನೇಮಕ ಮಾಡಿದ್ದ ಮತ್ತು ಅವರೊಂದಿಗೆ ದಶಕಗಳಿಂದ ಗುರುತಿಸಿಕೊಂಡಿದ್ದವರನ್ನು ಹೀಗೆ ಏಕಾಏಕಿ ಕಿತ್ತು ಹಾಕುತ್ತಿರುವುದರ ಹಿಂದಿನ ಕಾರಣ ಮಾತ್ರ ನಿಗೂಢವಾಗೇ ಇದೆ. ಯಡಿಯೂರಪ್ಪ ಅವರೇ ಈ ಪ್ರಮುಖರ ಸಾಧನೆಗಳನ್ನು ನೋಡಿ ನಿಮ್ಮ ಉಪಕಾರ ಸಾಕು ಹೊರಡಿ ಎಂದು ಹೊರದಬ್ಬಿದ್ದಾರೆಯೇ? ಅಥವಾ ಯಡಿಯೂರಪ್ಪ ಅವರ ಈ ಬಳಗದ ವಿರುದ್ಧ ಅವರದೇ ಮನೆಯೊಳಗೇ ಕತ್ತಿ ಮಸೆಯಲಾಯಿತೆ? ಉಪಚುನಾವಣೆಗಳ ಮೇಲೆ ಚುನಾವಣೆಗಳನ್ನು ಗೆದ್ದು ದಿಗ್ವಿಜಯ ಮೆರೆದು ಕುಟುಂಬದೊಳಗೆ ಮತ್ತು ಬಿಜೆಪಿಯ ವಲಯದಲ್ಲಿ ಪ್ರಶ್ನಾತೀತ ನಾಯಕನಾಗಿ ಹೊರಹೊಮ್ಮುತ್ತಿರುವ ವಿಜಯೇಂದ್ರ ಕೆಂಗಣ್ಣಿಗೆ ಗುರಿಯಾಗಿ ಈ ಪ್ರಮುಖರ ಹೀಗೆ ಹೀನಾಯವಾಗಿ ಹೊರಬಿದ್ದರೆ? ಅಥವಾ ಎಡಪಂಥ, ಪ್ರಗತಿಪರತೆಯ ಸೋಗಿನ ಜೊತೆಗೆ ಬಲಪಂಥೀಯ ಸರ್ಕಾರಗಳ ಸಕಲ ಸವಲತ್ತುಗಳನ್ನೂ ಜಾಣತನದಲ್ಲಿ ಬುಟ್ಟಿಗೆ ಹಾಕಿಕೊಳ್ಳುವ ಕಲೆ ಕರಗತ ಮಾಡಿಕೊಂಡಿರುವ ಇವರುಗಳ ವಿರುದ್ಧ ಕೇಶವಕೃಪಾದಿಂದಲೇ ಹೂಡಿದ್ದ ತಂತ್ರಕ್ಕೆ ಹೀಗೆ ಇವರು ತರಗೆಲೆಗಳಾಗಿ ಹೋದರೆ? ಎಂಬುದು ಮಾತ್ರ ಸ್ಪಷ್ಟವಾಗಬೇಕಿರುವ ಪ್ರಶ್ನೆಗಳು.

ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?
ಊಹಾಪೋಹಗಳಿಗೆ ಕಾರಣವಾದ ಸಿಎಂ ಮಾಧ್ಯಮ ಸಲಹೆಗಾರ ಮಹಾದೇವ ಪ್ರಕಾಶ್ ರಾಜೀನಾಮೆ

ಈ ನಡುವೆ, ಸಿಎಂ ಕಚೇರಿಯ ಆಯಕಟ್ಟಿನ ಸ್ಥಾನಗಳಲ್ಲಿದ್ದ ಇವರುಗಳ ಕಾರ್ಯಕ್ಷಮತೆ ಯುವರಾಜ ವಿಜಯೇಂದ್ರ ಅವರ ವೇಗಕ್ಕೆ ಹೊಂದಾಣಿಕೆಯಾಗಿಲ್ಲ. ಹಾಗಾಗಿ ಯಡಿಯೂರಪ್ಪ ಅವರಿಗೆ ಮನವೊಲಿಸಿ, ವಿಜಯೇಂದ್ರ ಅವರೇ ಈ ವಿಷಯದಲ್ಲಿ ನಿರ್ಧಾರ ಕೈಗೊಂಡಿದ್ದಾರೆ. ತಮ್ಮ ತಂದೆಗಾಗಿ ಈ ಪತ್ರಕರ್ತರು, ಪ್ರಗತಿಪರರು ಮಾಡಿದ ಸೇವೆಗೆ ಒಂದು ವರ್ಷದ ಅವಧಿಯ ಅವರ ಸ್ಥಾನಮಾನಗಳ ಬೆಲೆ ಹೆಚ್ಚಾಯಿತು. ಮುಂದೆ ಇವರಿಂದ ತನಗೆ ಏನೂ ಆಗಬೇಕಿಲ್ಲ. ಬೆಂಗಳೂರಿನಿಂದ ದೆಹಲಿಯ ವರಿಷ್ಠರವರೆಗೆ ನೇರ ಸಂಪರ್ಕ ಪಡೆಯುವಷ್ಟು ಬೆಳೆದ ತನಗೆ ಆ ವೇಗಕ್ಕೆ ತಕ್ಕಂಥವರ ಪಡೆಯೇ ಬೇಕು. ಜೊತೆಗೆ ಸಿಎಂ ಕಚೇರಿಯನ್ನು ಇಡಿಯಾಗಿ ತನ್ನ ಹಿಡಿತಕ್ಕೆ ತೆಗೆದುಕೊಳ್ಳಬೇಕು ಎಂಬ ಪ್ರಯತ್ನದಲ್ಲಿರುವ ಆರ್ ಎಸ್ ಎಸ್, ಬೇಳೂರು ಸುದರ್ಶನ್ ಅವರಂಥವರನ್ನು ಮಾಧ್ಯಮ ಸಲಹೆಗಾರರಂಥ ಆಯಕಟ್ಟಿನ ಸ್ಥಾನಕ್ಕೆ ಕೂರಿಸಲು ಕೂಡ ಈ ಗುಂಪು ಅಡ್ಡಿಯಾಗಿತ್ತು. ಆ ಹಿನ್ನೆಲೆಯಲ್ಲಿ ಅತ್ತ ಆರ್ ಎಸ್ ಎಸ್ ಕಣ್ಣಲ್ಲೂ ಕಸದಂತಾಗಿದ್ದ ಇವರುಗಳನ್ನು ದೂರ ಮಾಡುವುದು ಈಗ ಅನಿವಾರ್ಯ ಎಂಬ ನಿಲುವಿಗೆ ಬಂದೇ ವಿಜಯೇಂದ್ರ ಈ ನಿರ್ಧಾರ ಕೈಗೊಂಡಿದ್ದಾರೆ. ಸಂತೋಷ್ ವಿಷಯದಲ್ಲಿ ಕೂಡ ಅದೇ ವರಸೆ ಪ್ರಯೋಗವಾಗಿದೆ ಎನ್ನಲಾಗುತ್ತಿದೆ.

ಸಿಎಂ ಕಚೇರಿ ಬದಲಾವಣೆ ಪರ್ವ: ಎನ್ ಆರ್ ಸಂತೋಷ್ ರಾಜೀನಾಮೆ ಕ್ಷಣಗಣನೆ?
ಸಂಪುಟ ಪುನರ್ ರಚನೆ ನೆಪದಲ್ಲಿ ಕುರ್ಚಿ ಮತ್ತು ಪುತ್ರನ ಉಳಿವಿಗಾಗಿ BSY ದೆಹಲಿ ಯಾತ್ರೆ

ಹಾಗಾಗಿ, ಬದಲಾವಣೆಯ ಪರ್ವ ಈಗ ತಾನೇ ಆರಂಭವಾಗಿದೆ. ಅತ್ತ ವಿಜಯೇಂದ್ರ ರಾಜ್ಯ ರಾಜಕಾರಣದಲ್ಲಿ ಧ್ರುವತಾರೆಯಂತೆ ಮೇಲೇರುತ್ತಿದ್ದಂತೆ ಅದೇ ವೇಗದಲ್ಲಿ ಸಿಎಂ ಕಚೇರಿಯಲ್ಲೂ ಇನ್ನಷ್ಟು ಬದಲಾವಣೆಗಳಾಗಲಿವೆ. ಹಾಗೇ ಈ ಬದಲಾವಣೆಗಳಿಗೆ ಮುಂದಿನ ದಿನಗಳಲ್ಲಿ ಸ್ವತಃ ರಾಜ್ಯ ಬಿಜೆಪಿ ಕೂಡ ಹೊರತಲ್ಲ ಎಂಬುದು ವಿಜಯೇಂದ್ರ ಬಳಗದ ಅಂತರಂಗದ ವಿಶ್ವಾಸ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com