ವಿದ್ಯುತ್ ಖರೀದಿಯಲ್ಲಿ ರಾಜ್ಯ ಸರಕಾರದಿಂದ 3400 ಕೋಟಿ ಬೃಹತ್ ಹಗರಣ: AAP

ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರ ಹೊರೆ ಹಾಕುತ್ತಿದೆ. ಅಲ್ಲದೆ ವಿದ್ಯುತ್‌ ಖರೀದಿಯಲ್ಲಿ ಬಿಜೆಪಿ ಸರಕಾರದಿಂದ 3400 ಕೋಟಿ ರೂಪಾಯಿಗಳ ಬೃಹತ್‌ ಹಗರಣ ನಡೆದಿದೆ
ವಿದ್ಯುತ್ ಖರೀದಿಯಲ್ಲಿ ರಾಜ್ಯ ಸರಕಾರದಿಂದ 3400 ಕೋಟಿ ಬೃಹತ್ ಹಗರಣ: AAP

ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರಕಾರ ಹೊರೆ ಹೊರಿಸಿದೆಂದು ಆರೋಪಿಸಿರುವ ಆಮ್‌ ಆದ್ಮಿ ಪಕ್ಷ, ಕಳೆದ 10 ವರ್ಷಗಳಲ್ಲಿ ವಿದ್ಯುತ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.

ಅದಾನಿಗೆ ಅನುಕೂಲ ಮಾಡಲು 6 ಕೋಟಿ ಕನ್ನಡಿಗರ ಮೇಲೆ ಬಿಜೆಪಿ ಸರ್ಕಾರ ಹೊರೆ ಹಾಕುತ್ತಿದೆ. ಅಲ್ಲದೆ ವಿದ್ಯುತ್‌ ಖರೀದಿಯಲ್ಲಿ ಬಿಜೆಪಿ ಸರಕಾರದಿಂದ 3400 ಕೋಟಿ ರೂಪಾಯಿಗಳ ಬೃಹತ್‌ ಹಗರಣ ನಡೆದಿದೆ ಎಂದು ಆಮ್‌ ಆದ್ಮಿ ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆರೋಪಿಸಿದ್ದಾರೆ.

ಬೆಂಗಳೂರಿನಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ 12 ನೇ ತಾರೀಕಿನಂದು ಶಾಕ್‌ ಬೇಡಾ ಎನ್ನುವ ಅಭಿಯಾನವನ್ನು ಆಮ್ ಆದ್ಮಿ ಪಕ್ಷ ಪ್ರಾರಂಭಿಸಿತ್ತು ಮತ್ತು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ "ಬಿಲ್ ಕಡಿಮೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ" ಎಂದು 19ನೇ ತಾರೀಕಿನಂದು ಸವಾಲು ಹಾಕಿತ್ತು, ಈ ಸವಾಲಿಗೆ ಕಿಂಚಿತ್ತೂ ಸ್ಪಂದಿಸದ ಸರ್ಕಾರದ ಮೌನಕ್ಕೆ ಕಾರಣ ಏನು ಎಂದು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಪತ್ರಿಕಾ ಗೋಷ್ಠಿಯಲ್ಲಿ, ಸರ್ಕಾರವು ಹೇಗೆ ಹೆಚ್ಚಿಗೆ ಹಣ ಕೊಟ್ಟು ವಿದ್ಯುತ್ ಖರೀದಿ ಮಾಡುತ್ತಿದೆ ಮತ್ತು ಪ್ರಸರಣ, ವಿತರಣೆ ವೇಳೆ ಆಗುತ್ತಿರುವ ನಷ್ಟ ಮತ್ತು ಕಳ್ಳತನವನ್ನು ನಿಯಂತ್ರಿಸುತ್ತಿಲ್ಲ, ಈ ಭ್ರಷ್ಟ ಮತ್ತು ಅಸಮರ್ಥ ಅಧಿಕಾರಿಗಳು, ರಾಜಕಾರಣಿಗಳೆಲ್ಲ ಸೇರಿ ಈ ಹೊರೆಯನ್ನು ಹೇಗೆ ಜನ ಸಾಮಾನ್ಯರ ಮೇಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದೆವು. ಇಂತಹ ಸಂಕಷ್ಟದ ಸಮಯದಲ್ಲಿ ಜನರ ಲೂಟಿ ಹೊಡೆಯುತ್ತಿರುವ ಬಿಜೆಪಿ ನೇತೃತ್ವದ ಕರ್ನಾಟಕ ಸರ್ಕಾರ ಹೇಗೆ ಅದಾನಿ ಕಂಪೆನಿಯ ಜೇಬು ತುಂಬಿಸಲು ಹೊರಟಿದೆ‌ ಎಂದು ಅವರು ಹೇಳಿದ್ದಾರೆ.

ಆಮ್‌ ಆದ್ಮಿ ಪಕ್ಷದ ಆರೋಪಗಳು

1. ಉಡುಪಿ ವಿದ್ಯುತ್ ಸ್ಥಾವರ 2010 ರಲ್ಲಿ 600 ಮೆಗಾವ್ಯಾಟ್ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದನ್ನು 2014 ರಲ್ಲಿ ಅದಾನಿ ಪವರ್ ಖರೀದಿಸಿತು. ಪ್ರಸ್ತುತ 2000 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿದ್ದು ಅದರಲ್ಲಿ 1800 ಮೆಗಾವ್ಯಾಟ್ (90%) ಅನ್ನು ಸರ್ಕಾರ ಖರೀದಿಸುತ್ತಿದೆ.

2. 2018 ರಲ್ಲಿ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗದ (ಸಿಇಆರ್‌ಸಿ) ಪ್ರಕಾರ ರಾಷ್ಟ್ರೀಯ ಸರಾಸರಿ ವಿದ್ಯುತ್ ಖರೀದಿ ವೆಚ್ಚ (ಎನ್‌ಎಪಿಸಿ) ಯುನಿಟ್‌ಗೆ 3.53 ರೂ. ಮತ್ತು ಕಳೆದ ಐದು ವರ್ಷಗಳಲ್ಲಿ ಸರಾಸರಿ ಹೆಚ್ಚಳವು ವರ್ಷಕ್ಕೆ 2% ಕ್ಕಿಂತ ಕಡಿಮೆಯಿದೆ.

3. ಅದಾನಿ ಪವರ್ ಒಡೆತನದ ಉಡುಪಿ ಪವರ್‌ಗೆ ಕಳೆದ ಎರಡು ವರ್ಷಗಳಲ್ಲಿ ವಿದ್ಯುತ್ ಖರೀದಿ ಬೆಲೆಯಲ್ಲಿ 42% ಹೆಚ್ಚಳ ಮಾಡಿ ಕರ್ನಾಟಕ ಸರ್ಕಾರಕ್ಕೆ ಮಾರಾಟ ಮಾಡಿದೆ- 2018 ರಲ್ಲಿ ಪ್ರತಿ ಯೂನಿಟ್‌ಗೆ 4.76 ರೂ.ಗಳಿಂದ 2020 ರಲ್ಲಿ 6.80 ರೂ.ಗೆ ಏರಿಸಿದ್ದು. ಇದು ಬೆಸ್ಕಾಂಗೆ ಸಾಕಷ್ಟು ಹೊರೆಯಾಗಿದೆ.

4. 2019ರಲ್ಲಿ ಅದಾನಿ ಕಂಪೆನಿಯಿಂದ ವಿದ್ಯುತ್ ಖರೀದಿಸಿದ ಒಟ್ಟು ಬಿಲ್ ರೂ 1224 ಕೋಟಿ. ಎಪಿಪಿಸಿ ಬೆಲೆಗೆ ಹೋಲಿಸಿದರೆ 563 ಕೋಟಿಗಳಷ್ಟು ಹೆಚ್ಚು ಪಾವತಿ ಮಾಡಿದೆ.

5. ಹೆಚ್ಚಿನ ದರಕ್ಕೆ ಕರ್ನಾಟಕ ಸರ್ಕಾರ ವಿದ್ಯುತ್ ಖರೀದಿಸಿದ ಈ ಎರಡು ವರ್ಷಗಳಲ್ಲಿ ಕಲ್ಲಿದ್ದಿಲಿನ ಬೆಲೆ 40% -50% ರಷ್ಟು ಕಡಿಮೆ ಆಗಿದೆ. ಇದರಿಂದ ಅದಾನಿ ಕಂಪೆನಿ ಸುಮಾರು 450 ಕೋಟಿ ರೂ ಹೆಚ್ಚುವರಿ ಲಾಭ ಮಾಡಿದೆ, ಆದರೂ ರಾಜ್ಯ ಬಿಜೆಪಿ ಸರ್ಕಾರ ಜನರ ಮೇಲೆ ವಿದ್ಯುತ್ ದರ ಹೆಚ್ಚಳದ ಮೂಲಕ ಈ ಹೊರೆ ಹಾಕಿದೆ.

6. ಶೇ 6 ವಿದ್ಯುತ್ ದರದ ಹೆಚ್ಚಳದ ಮೌಲ್ಯ ಸುಮಾರು 250 ಕೋಟಿ ರೂಪಾಯಿ. ಇದನ್ನು ಗ್ರಾಹಕರಿಂದ ಸುಲಿಗೆ ಮಾಡಲಾಗಿದೆ. ಇದು ಅದಾನಿಯ ಜೇಬು ತುಂಬಿಸಿದೆ ಹೊರತು ಸರ್ಕಾರದ್ದಲ್ಲ.

7. ಪ್ರತಿ ವರ್ಷ ಶೇ 10 ಹೆಚ್ಚು ಹಣ ಕೊಟ್ಟು ಖರೀದಿಸಿರುವ ಕೇಂದ್ರೀಯ ವಿದ್ಯುತ್ ನಿಯಂತ್ರಣ ಆಯೋಗ (ಸಿಇಆರ್‌ಸಿ) ತಿಳಿಸಿರುವ ಸರಾಸರಿ ಬೆಲೆಗಿಂತ 2.5 ಹೆಚ್ಚಿನ ಮೊತ್ತವನ್ನು ಪಾವತಿ ಮಾಡಲಾಗಿದೆ.

ಕಳೆದ 10 ವರ್ಷಗಳಿಂದ ಇಂದನ ಇಲಾಖೆಯ ಸಚಿವಗಿರಿಗೆ ನಡೆದಿರುವ ಪೈಪೋಟಿಯನ್ನೆ ನೋಡಿದರೆ ಎಷ್ಟರ ಮಟ್ಟಿಗೆ ಜನರನ್ನು ಸುಲಿಗೆ ಮಾಡಲಾಗಿದೆ ಎಂಬುದು ತಿಳಿಯುತ್ತದೆ. ಇಂಧನ ಇಲಾಖೆಯ ಸಚಿವರಾಗಿ ಅಧಿಕಾರ ಅನುಭವಿಸಿದ ಬಿಜೆಪಿಯ ಶೋಬಾ ಕರಂದ್ಲಾಜೆ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಜೆಡಿಎಸ್‌ನ ಎಚ್.ಡಿ.ರೇವಣ್ಣ, ಈಗ ಮುಖ್ಯಮಂತ್ರಿ ಯಡಿಯೂರಪ್ಪನವರು ಎಲ್ಲರೂ ಜನರ ಬೆನ್ನಿಗೆ ಚೂರಿ ಹಾಕಿದವರೇ. ಕೇಂದ್ರ ವಿದ್ಯುತ್ ನಿಯಂತ್ರಣ ಆಯೋಗ 2020 ರ ಸೆಪ್ಟೆಂಬರ್ ನಲ್ಲಿ ನೀಡಿದ ವರದಿಯ ಪ್ರಕಾರ ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆ ಮಾಡುವ 168 ಸ್ಥಾವರಗಳು ನಮ್ಮ ದೇಶದಲ್ಲಿ ಇದ್ದು ಪ್ರತಿ ಕಿಲೋ ವ್ಯಾಟ್‌ಗೆ 4.07 ರೂ ಖರ್ಚಾಗುತ್ತದೆ ಎಂದು ತಿಳಿಸಿದೆ. ಆದರೆ ನಮ್ಮ ಕರ್ನಾಟಕ ಸರ್ಕಾರ ಹೆಚ್ಚುವರಿ ಹಣ ನೀಡಿ ಖರೀದಿಸಿದೆ ಎಂದು ಅವರು ತಿಳಿಸಿದ್ದಾರೆ.

ಇನ್‌ಸ್ಟಿಟ್ಯೂಟ್ ಫಾರ್ ಎನರ್ಜಿ ಎಕನಾಮಿಕ್ಸ್ ಅಂಡ್ ಪಾಲಿಸಿ ಅನಾಲಿಸಿಸ್ ನಡೆಸಿದ ಅಧ್ಯಯನದ ಪ್ರಕಾರ ಕಡಿಮೆ ವೆಚ್ಚದಲ್ಲಿ ಅಗ್ಗದ ಮತ್ತು ನವೀಕರಿಸಬಹುದಾದ ವಿದ್ಯುತ್ ಲಭ್ಯವಿದೆ ಆದರೂ ಸರ್ಕಾರಕ್ಕೆ ಉಡುಪಿಯ ಅದಾನಿ ಒಡೆತನದ ವಿದ್ಯುತ್ ಕಂಪೆನಿ ಮೇಲೆ ಏಕೆ ಮೋಹ? ಕಳೆದ 10 ವರ್ಷಗಳಲ್ಲಿ ವಿದ್ಯುತ್ ಖರೀದಿಯಲ್ಲಿ ಆಗಿರುವ ಭ್ರಷ್ಟಾಚಾರದ ಕುರಿತು ನ್ಯಾಯಾಂಗ ತನಿಖೆ ಆಗಬೇಕು ಎಂದು ಆಮ್ ಆದ್ಮಿ ಪಕ್ಷ ಒತ್ತಾಯಿಸುತ್ತದೆ ಎಂದು ಹೇಳಿದ್ದಾರೆ.

Attachment
PDF
Udupi Power loot.pdf
Preview

ಆಮ್ ಆದ್ಮಿ ಪಕ್ಷದ ಪ್ರಮುಖ ಒತ್ತಾಯಗಳು

1.ವಿದ್ಯುತ್ ದರ ಹೆಚ್ಚಳವನ್ನು ಈ ಕೂಡಲೇ ಸರ್ಕಾರ ಕಡಿಮೆ ಮಾಡಬೇಕು.

2.ಅದಾನಿ ಕಂಪೆನಿ ಒಡೆತನದ ಉಡುಪಿ ಪವರ್‌ನ ಸಂಪೂರ್ಣ ಲೆಕ್ಕ ಪರಿಶೋಧನೆ ನಡೆಸುವಂತೆ ಆದೇಶ ನೀಡಬೇಕು.

3.ಸರ್ಕಾರ ಹೆಚ್ಚುವರಿಯಾಗಿ ಪಾವತಿಸಿರುವ ಹಣವನ್ನು ಹಿಂಪಡೆಯಬೇಕು.

4.1600 ಮೆಗಾವ್ಯಾಟ್ ವಿದ್ಯುತ್ ನಮ್ಮ ರಾಜ್ಯದ ಬಳಕೆಗೆ ಈಗಾಗಲೇ ಹೆಚ್ಚುವರಿ ಆಗಿದ್ದು, ಇದು ಬೇಕೆ ಬೇಡವೇ ಎಂದು ತಕ್ಷಣ ಪರಿಶೀಲನೆ ನಡೆಸಬೇಕು.

5.ಏಕೆಂದರೆ ಈಗಾಗಲೇ ಸಾಕಷ್ಟು ವಿದ್ಯುತ್ ನಮ್ಮ ರಾಜ್ಯದಲ್ಲಿ ಅಗ್ಗದ ಬೆಲೆಗೆ ಲಭ್ಯವಿದೆ.

6.ಸುಲಿಗೆ ಮಾಡಿರುವ ಅದಾನಿ ಕಂಪೆನಿಯಿಂದ ಹಣವನ್ನು ವಸೂಲಿ ಮಾಡಿ ಆ ಲಾಭವನ್ನು ಜನರಿಗೆ ತಲುಪಿಸಬೇಕು.

7.ಮತ್ತೊಮ್ಮೆ ಆಮ್ ಆದ್ಮಿ ಪಕ್ಷ ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತಿದ್ದು "ಬಿಲ್ ಕಡಿಮೆ ಮಾಡಿ, ಇಲ್ಲ ಜಾಗ ಖಾಲಿ ಮಾಡಿ" ಎಂದು ಪುನರುಚ್ಚರಿಸುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಆಮ್‌ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್‌ ದಾಸರಿ, ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ಸದಂ ಉಪಸ್ಥಿತರಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com