ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಲ್ಲಿ ದೆಹಲಿಯ ಆಸ್ಪತ್ರೆಗಳು!

ರಾಜಧಾನಿಯ ಎಲ್ಲಾ ಕೋವಿಡ್ ಆಸ್ಪತ್ರೆಗಳೂ ಕೂಡ ವೈದ್ಯರ ಕೊರತೆಯನ್ನು ಎದುರಿಸುತ್ತಿವೆ. ಸಿಬ್ಬಂದಿಗಳ ಕೊರತೆಯು ಯಾವುದೇ ಸಮಯದಲ್ಲಿ ಆಸ್ಪತ್ರೆಗಳಿಗೆ ಕಠಿಣ ಸವಾಲಾಗಿರುತ್ತದೆಯಾದರೂ, ಸಾಂಕ್ರಾಮಿಕ ಸಮಯದಲ್ಲಿ ಇದು ಇನ್ನೂ ಹೆಚ್ಚಿನ ಸವಾಲನ್ನು ಒಡ್ಡಿದೆ
ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಲ್ಲಿ  ದೆಹಲಿಯ ಆಸ್ಪತ್ರೆಗಳು!

ಇಡೀ ಜಗತ್ತನ್ನೇ ತಲ್ಲಣಗೊಳಿಸಿದ ಕರೋನ ವೈರಸ್ ಸಾಂಕ್ರಮಿಕವು ಈಗ ದೇಶದ ಕೆಲವೆಡೆಗಳಲ್ಲಿ ಕಡಿಮೆ ಆಗುತ್ತಿದೆ. ಮತ್ತೊಂದೆಡೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕರೋನ ಸಾಂಕ್ರಮಿಕ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ. ಇಡೀ ದೇಶವೇ ಹತ್ತಾರು ಪೂರಕ ಕ್ರಮಗಳೊಂದಿಗೆ ಕರೋನ ವಿರುದ್ದ ಹೋರಾಡಿ ಅದನ್ನು ಮಣಿಸುವ ಸಂದರ್ಭದಲ್ಲಿ ಈ ಏರಿಕೆ ಕಂಡು ಬಂದಿರುವುದು ನಿಜಕ್ಕೂ ಆಘಾತಕಾರಿ ಆಗಿದೆ. ಈ ನಡುವೆ ದೆಹಲಿಯ ಎಲ್ಲ ಆಸ್ಪತ್ರೆಗಳಲ್ಲೂ ವೈದ್ಯರ ಕೊರತೆ ಇರುವ ವಿಷಯ ಬಹಿರಂಗವಾಗಿದ್ದು ಜನರ ಆರೋಗ್ಯವನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.

ಕೋವಿಡ್ ವಿರುದ್ದ ಹೋರಾಟ ಯಶಸ್ವಿ ಆಗಬೇಕಾದರೆ ವೈದ್ಯಕೀಯ ಸಿಬ್ಬಂದಿ , ಉಪಕರಣಗಳು ಅತೀ ಅವಶ್ಯಕ. ಆದರೆ ದೆಹಲಿ ಸರ್ಕಾರದ ಗುರು ತೇಜ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆ ಮತ್ತು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಿಂದ ಹಿಡಿದು, ಕೇಂದ್ರ ಸರ್ಕಾರ ನಡೆಸುತ್ತಿರುವ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು (ಎಲ್ಎಚ್ಎಂಸಿ) ವರೆಗೆ, ರಾಜಧಾನಿಯ ಎಲ್ಲಾ ಕೋವಿಡ್ ಆಸ್ಪತ್ರೆಗಳೂ ಕೂಡ ವೈದ್ಯರ ಕೊರತೆಯನ್ನು ಎದುರಿಸುತ್ತಿವೆ. ಸಿಬ್ಬಂದಿಗಳ ಕೊರತೆಯು ಯಾವುದೇ ಸಮಯದಲ್ಲಿ ಆಸ್ಪತ್ರೆಗಳಿಗೆ ಕಠಿಣ ಸವಾಲಾಗಿರುತ್ತದೆಯಾದರೂ, ಸಾಂಕ್ರಾಮಿಕ ಸಮಯದಲ್ಲಿ ಇದು ಇನ್ನೂ ಹೆಚ್ಚಿನ ಸವಾಲನ್ನು ಒಡ್ಡಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಾಮಾನ್ಯವಾಗಿ 8 ಘಂಟೆಗಳಷ್ಟು ಕೆಲಸದ ಶಿಪ್ಟ್ ಹೊಂದಿರುವ ವೈದ್ಯರು ಇದೀಗ ವೈದ್ಯರ ಕೊರತೆಯಿಂದ ಅನಿವಾರ್ಯವಾಗಿ 14 ಘಂಟೆಗಳಷ್ಟು ದೀರ್ಘ ಕಾಲ ಬಿಡುವಿಲ್ಲದೆ ಸೇವೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ. ದೆಹಲಿಯ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಅವರು ನಗರದ ಆಸ್ಪತ್ರೆಗಳಾದ್ಯಂತ ಪರಿಸ್ಥಿತಿಯನ್ನು ಪರಿಶೀಲಿಸಲು ಮಂಗಳವಾರ ಸಂಜೆ ನಡೆಸಿದ ಸಭೆಯಲ್ಲಿ ಒಂದೆರಡು ಆಸ್ಪತ್ರೆಗಳು ಸಿಬ್ಬಂದಿ ಮತ್ತು ವೈದ್ಯರ ಕೊರತೆಯ ವಿಷಯವನ್ನು ಎತ್ತಿ ಹೇಳಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸಿಬ್ಬಂದಿ ವೈದ್ಯರ ನೇಮಕಕ್ಕೆ ಯಾವುದೇ ಟೈಮ್ಲೈನ್ ಅನ್ನು ನಿಗದಿ ಪಡಿಸದಿದ್ದರೂ ಈ ಆಸ್ಪತ್ರೆಗಳಿಗೆ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ದೆಹಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗದ ವಿಶೇಷ ಕಾರ್ಯದರ್ಶಿ ಬುಧವಾರ ರಾತ್ರಿ ಹೊರಡಿಸಿದ ಆದೇಶದಲ್ಲಿ ದೆಹಲಿ ಸರ್ಕಾರದ ಅಧೀನದಲ್ಲಿರುವ ಕೋವಿಡ್ -19 ಆಸ್ಪತ್ರೆಗಳು 4 ಮತ್ತು 5 ನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಗಳು, ಇಂಟರ್ನಿಗಳು ಮತ್ತು ಬಿಡಿಎಸ್ (ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ) ವೈದ್ಯರನ್ನು ಕರ್ತವ್ಯ ನಿರತ ವೈದ್ಯರಿಗೆ ಸಹಾಯ ಮಾಡಲು ತೊಡಗಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ವೈದ್ಯರಿಗೆ 8 ಗಂಟೆಗಳ ಶಿಫ್ಟ್ಗೆ ಒಂದು ಸಾವಿರ ರೂ ಮತ್ತು 12-ಗಂಟೆಗಳ ಶಿಫ್ಟ್ಗೆ ೨೦೦೦ ರೂಪಾಯಿಗಳ ಗೌರವ ಧನ ನೀಡುವುದಾಗಿ ತಿಳಿಸಲಾಗಿದೆ. ಈ ಗೌರವ ಧನವು ಅವರ ಸ್ಟೈಫಂಡ್ಗಿಂತ ಹೆಚ್ಚಾಗಿದೆ.

ದೆಹಲಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ವೃತ್ತಿಪರರ ಕೊರತೆಯು ಈಗ ಹೆಚ್ಚಾಗಿದ್ದು, ಬಹಳಷ್ಟು ವೈದ್ಯರ ಪ್ರಕಾರ, ರೋಗಿಗಳು ರೋಗದ ಉಲ್ಪಣಗೊಂಡ ನಂತರ ಆಸ್ಪತ್ರೆಗಳಿಗೆ ಆಗಮಿಸುತ್ತಿದ್ದಾರೆ. ಕರ್ತವ್ಯದಲ್ಲಿರುವ ವೈದ್ಯರು ವಾಡಿಕೆಯಂತೆ ತಮ್ಮನ್ನು ತಾವು ಕ್ವಾರಂಟೈನ್ ನಲ್ಲಿ ಇರಿಸಿಕೊಳ್ಳಬೇಕಾಗಿದೆ. ಇನ್ನೂ ಕೆಲವು ವೈದ್ಯರು ರೋಗಕ್ಕೆ ತುತ್ತಾದ ನಂತರ ಕರ್ತವ್ಯದಿಂದ ಹೊರಗುಳಿಯುತ್ತಾರೆ.

ವೈದ್ಯರ ಕೊರತೆಯ ಬಗ್ಗೆ ಮಾತನಾಡಿದ ಜಿಟಿಬಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಆರ್ ಎಸ್ ರೌಟೆಲ್ಲಾ, ಇನ್ನು ಮುಂದೆ ಹೆಚ್ಚುತ್ತಿರುವ ರೋಗಿಗಳಿಗೆ ಚಿಕಿತ್ಸೆ ನೀಡುವುದು ಕಷ್ಟವಿದೆ ಎನ್ನುತ್ತಾರೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೇ ನಾವು ಇದನ್ನು ನಿಭಾಯಿಸುತ್ತಿದ್ದೇವೆ ಮತ್ತು ಇತ್ತೀಚಿನ ಉಲ್ಬಣದಿಂದಾಗಿ ನಮ್ಮ ಎಲ್ಲಾ ಐಸಿಯು ಬೆಡ್ ಗಳೂ ಭರ್ತಿ ಆಗಿರುವುದರಿಂದ ವೈದ್ಯರು ಕೋವಿಡ್ ವಾರ್ಡ್ ಗಳಲ್ಲೆ ಹೆಚ್ಚಿನ ನಿಗಾವಹಿಸಿ ಚಿಕಿತ್ಸೆ ನೀಡುತಿದ್ದಾರೆ. ಇದು ಹೆಚ್ಚಿನ ಕೆಲಸದ ಹೊರೆಯಾಗಿದೆ ಎಂದರು. ಇಲ್ಲಿ 253 ವೈದ್ಯರ ಹುದ್ದೆಗಳಲ್ಲಿ ಕನಿಷ್ಠ 62 ಹುದ್ದೆಗಳು ಖಾಲಿ ಇವೆ. ಕಳೆದ ಜುಲೈನಲ್ಲಿ ನಮಗೆ 95 ವೈದ್ಯರ ಕೊರತೆ ಇತ್ತು. ಸಂದರ್ಶನಗಳ ಮೂಲಕ ನಾವು ಕೆಲವರನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ. ಆದರೆ ಕೊರತೆ ಇನ್ನೂ ಇದೆ ಎಂದು ಆಸ್ಪತ್ರೆಯ ಕೋವಿಡ್ -19 ಇನ್ಚಾರ್ಜ್ ಡಾ.ರಾಜೇಶ್ ಕಲ್ರಾ ಹೇಳಿದರು.

ಇನ್ನು ರಾಜೀವ್ ಗಾಂಧಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (RGSSH), ೨೦೦ ವೈದ್ಯರ ಹುದ್ದೆಗಳಲ್ಲಿ ೭೦ ವೈದ್ಯರು ಮಾತ್ರ ಇದ್ದಾರೆ. RGSSH ವೈದ್ಯಕೀಯ ನಿರ್ದೇಶಕ ಬಿ.ಎಲ್. ಶೆರ್ವಾಲ್ ವೈದ್ಯರ ಕೊರತೆಯನ್ನು ಪದೇ ಪದೇ ಸರ್ಕಾರಕ್ಕೆ ತಿಳಿಸಲಾಗಿದೆ ಎಂದು ಹೇಳಿದರು. ಆರೋಗ್ಯ ಸಚಿವರು ನಿನ್ನೆ ಸಭೆ ಕರೆದಿದ್ದಾಗ 20 ತಜ್ಞರು ಮತ್ತು ಇನ್ನೂ 60 ಹಿರಿಯ ವೈದ್ಯರನ್ನು ನೇಮಿಸಲು ನಾವು ಒತ್ತಾಯಿಸಿದ್ದೇವೆ ಎಂದು ಅವರು ಹೇಳಿದರು.

ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜಿನಲ್ಲಿ (ಎಲ್ಎಚ್ಎಂಸಿ) ಕೂಡ ವೈದ್ಯರ ಕೊರತೆ ಇದ್ದು, ಇದು ಕೋವಿಡ್ -19 ಸೌಲಭ್ಯವೂ ಆಗಿದೆ. ಸರ್ಕಾರದ ಆದೇಶದ ಪ್ರಕಾರ ಪ್ರತೀ ಆರು ಐಸಿಯು ಹಾಸಿಗೆ ರೋಗಿಗಳಿಗೆ ಒಬ್ಬ ನಿವಾಸಿ ವೈದ್ಯರನ್ನು ಮತ್ತು ಪ್ರತಿ ಐಸಿಯು ಹಾಸಿಗೆಗೆ ಒಬ್ಬ ದಾದಿಯನ್ನು ನಿಯೋಜಿಸಬೇಕು. ಸಾಮಾನ್ಯ ಕೋವಿಡ್ -19 ವಾರ್ಡ್ನಲ್ಲಿ, ಇದು 10 ರೋಗಿಗಳಿಗೆ ಒಬ್ಬ ನಿವಾಸಿ ವೈದ್ಯರು ಮತ್ತು ಎರಡು ಹಾಸಿಗೆಗಳಿಗೆ ಒಬ್ಬ ದಾದಿ ಇರಬೇಕು ಎಂದು ಆಸ್ಪತ್ರೆ ನಿರ್ದೇಶಕ ಡಾ ಮಾಥುರ್ ಹೇಳಿದರು. ಆದರೆ ವೈದ್ಯರ ಕೊರತೆಯಿಂದಾಗಿ, ಪ್ರತಿ ವೈದ್ಯರು ಇಂದು 20 ಹಾಸಿಗೆಗಳ ರೋಗಿಗಳನ್ನು ನೋಡಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು. ಕೋವಿಡ್-19 ನ ಖಾಸಗಿ ಸೌಲಭ್ಯವಾದ ಸರೋಜ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ, 45 ವೈದ್ಯರು ಸಾಂಕ್ರಾಮಿಕ ರೋಗದ ಮಧ್ಯೆ ಸಂಪೂರ್ಣ ಕೆಲಸದ ಹೊಣೆಯನ್ನು ನಿರ್ವಹಿಸುತ್ತಿದ್ದಾರೆ. ವೈದ್ಯರು ನಿರಂತರವಾಗಿ ಬಿಡುವಿಲ್ಲದ ಕರ್ತವ್ಯದಲ್ಲಿದ್ದಾರೆ, ಕೊರತೆಯನ್ನು ಗಮನಿಸಿದರೆ, ನಾವು ಹೊರಗಿನ ಏಜೆನ್ಸಿಗಳಿಂದ ನೇಮಕ ಮಾಡುವ ಮೂಲಕ ನಿರ್ವಹಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಧೀರಜ್ ಮಲಿಕ್ ಹೇಳಿದರು.

ದೆಹಲಿಯ ಅತಿದೊಡ್ಡ ಕೋವಿಡ್ -19 ಆಸ್ಪತ್ರೆಗಳಲ್ಲಿ ಒಂದಾಗಿರುವ ಲೋಕ ನಾಯಕ ಜಯ ಪ್ರಕಾಶ್ (LNJP) ಆಸ್ಪತ್ರೆ ಈ ಜೂನ್ನಲ್ಲಿ 30 ವೈದ್ಯರ ಸ್ಥಾನಗಳನ್ನು ಭರ್ತಿ ಮಾಡಲು ಜಾಹೀರಾತುಗಳನ್ನು ನೀಡಿತು. ಆದರೆ ಕೇವಲ ಮೂರು ವೈದ್ಯರನ್ನು ಮಾತ್ರ ನೇಮಕ ಮಾಡಿಕೊಳ್ಳಲಾಗಿದೆ. LNJP ವೈದ್ಯಕೀಯ ನಿರ್ದೇಶಕ ಡಾ. ಸುರೇಶ್ ಕುಮಾರ್ ಅವರು ಸರ್ಕಾರವು ನಮಗೆ ಹೆಚ್ಚಿನ ವೈದ್ಯರನ್ನು ಒದಗಿಸಿದ್ದರಿಂದ ಜೂನ್ ಗಿಂತಲೂ ಪರಿಸ್ಥಿತಿ ಉತ್ತಮವಾಗಿದೆ, ಆದರೆ ಸಾಂಕ್ರಾಮಿಕ ರೋಗದ ಅವಧಿಯಲ್ಲಿ, ಆಸ್ಪತ್ರೆಯ 200 ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು ಕೋವಿಡ್ -19 ಪಾಸಿಟಿವ್ ಹೊಂದಿದ್ದು, ಈ ಪೈಕಿ ಐವರು ವೈದ್ಯರನ್ನು ಪ್ರಸ್ತುತ ಆಸ್ಪತ್ರೆಯಲ್ಲಿಯೇ ದಾಖಲಿಸಲಾಗಿದೆ ಎಂದರು. ರಾಜಧಾನಿಯ ಮತ್ತೊಂದು ಪ್ರಮುಖ ಕೋವಿಡ್ -19 ಆಸ್ಪತ್ರೆಯಾದ ಸಫ್ದರ್ಜಂಗ್ ಆಸ್ಪತ್ರೆ, ಯು ಕಳೆದ ಜೂನ್ ನಲ್ಲಷ್ಟೆ ೧೭೭ ವೈದ್ಯರನ್ನು ನೇಮಕ ಮಾಡಿಕೊಂಡಿದೆ ಆದರೂ ವೈದ್ಯರ ಕೊರತೆ ಎದುರಿಸುತ್ತಿದೆ .

.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com