ಮರಾಠಾ ನಿಗಮ ಘೋಷಣೆ ಬೆನ್ನಲ್ಲೇ ಬೆಳಗಾವಿ ನಮ್ಮದು ಎಂದ ಮಹಾರಾಷ್ಟ್ರ!

ಮರಾಠಾ ಅಭಿವೃದ್ಧಿ ನಿಗಮದಂತಹ ವ್ಯವಸ್ಥೆಯನ್ನು ಹುಟ್ಟುಹಾಕುವ ಮೂಲಕ, ಕರ್ನಾಟಕದ ಭೌಗೋಳಿಕ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಮರಾಠಿಗರು ಇದ್ದಾರೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡ ಬೆನ್ನಲ್ಲೇ, ಅತ್ತ ಕಡೆಯಿಂದ ಮತ್ತೊಮ್ಮೆ ಅಂತಹ ಪ್ರಚೋದನಕಾರಿ ಮಾತು ಹೊರಬಿದ್ದಿರುವುದು ಹೊಸ ಬೆಳವಣಿಗೆ.
ಮರಾಠಾ ನಿಗಮ ಘೋಷಣೆ ಬೆನ್ನಲ್ಲೇ ಬೆಳಗಾವಿ ನಮ್ಮದು ಎಂದ ಮಹಾರಾಷ್ಟ್ರ!

ಬೆಳಗಾವಿ ವಿಷಯದಲ್ಲಿ ಮಹಾರಾಷ್ಟ್ರ ಮತ್ತೊಮ್ಮೆ ಕ್ಯಾತೆ ತೆಗೆದಿದ್ದು, ಬಾಳಾ ಠಾಕ್ರೆ ಸ್ಮರಣೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಲ್ಲಿನ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ “ಬೆಳಗಾವಿ, ಕಾರವಾರ ಮತ್ತು ನಿಪ್ಪಾಣಿ ಸೇರಿದಂತೆ ಅಖಂಡ ಮಹಾರಾಷ್ಟ್ರ ರಚಿಸುವುದು ಬಾಳಾ ಸಾಹೇಬ್ ಠಾಕ್ರೆಯವರ ಕನಸಾಗಿತ್ತು. ಅವರ ಕನಸನ್ನು ನನಸು ಮಾಡಲು ಎಲ್ಲರೂ ಶಪಥ ಮಾಡೋಣ” ಎಂದು ಹೇಳಲಾಗಿದೆ.

ಮಹಾರಾಷ್ಟ್ರ ಡಿಸಿಎಂ ಅವರ ಈ ಮಾತುಗಳು ಸಹಜವಾಗೇ ಕನ್ನಡಿಗರನ್ನು ಕೆರಳಿಸಿದ್ದು, ಈಗಾಗಲೇ ಗಡಿ ವಿವಾದದ ಕುರಿತು ಮಹಾಜನ್ ವರದಿಯೇ ಅಂತಿಮ. ವಾಸ್ತವವಾಗಿ ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕಾದ ಹಲವು ಪ್ರದೇಶಗಳು ಈಗಲೂ ಮಹಾರಾಷ್ಟ್ರದಲ್ಲಿವೆ. ಆದರೂ ಈಗ ಇಂತಹ ಪ್ರಚೋದನಕಾರಿ ಹೇಳಿಕೆಯ ಮೂಲಕ ಮಹಾರಾಷ್ಟ್ರ ಮತ್ತೊಮ್ಮೆ ಕನ್ನಡಿಗರ ಸಹನೆ ಪರೀಕ್ಷಿಸುತ್ತಿದೆ ಎಂದು ಕನ್ನಡ ಸಂಘಟನೆಗಳು ಕಿಡಿಕಾರಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಒಂದು ಕಡೆ ಕರ್ನಾಟಕ ಸರ್ಕಾರ, ಮರಾಠಾ ಅಭಿವೃದ್ಧಿ ನಿಗಮ ರಚನೆಯ ಮೂಲಕ ಕನ್ನಡ ನಾಡಿನಲ್ಲೇ ಮರಾಠಿ ಭಾಷಿಗ ಸಮುದಾಯಕ್ಕೆ ವಿಶೇಷ ಸವಲತ್ತು, ಆದ್ಯತೆ ನೀಡುತ್ತಿರುವ ಸಂಗತಿ ಕನ್ನಡಿಗರನ್ನು ರೊಚ್ಚಿಗೆಬ್ಬಿಸಿದ್ದರೆ, ಮತ್ತೊಂದು ಕಡೆ ಮಹಾರಾಷ್ಟ್ರ ಸರ್ಕಾರ ಕನ್ನಡ ನಾಡಿನ ಅವಿಭಾಜ್ಯ ಅಂಗವಾಗಿರುವ ಪ್ರದೇಶಗಳನ್ನು ತನ್ನವು ಎಂದು ಹೇಳಿರುವುದೇ ಅಲ್ಲದೆ, ಅವುಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಂಡು ಅಖಂಡ ಮಹಾರಾಷ್ಟ್ರ ರಚಿಸಲು ಕಟಿಬದ್ಧರಾಗೋಣ ಎಂದು ಮರಾಠಿಗರಿಗೆ ಕರೆ ನೀಡಿದೆ. ಸಹಜವಾಗೇ ಈ ಎರಡೂ ಬೆಳವಣಿಗೆಗಳು ಕನ್ನಡ ಹೋರಾಟಗಾರರು ಮತ್ತು ಕನ್ನಡಪರ ಚಿಂತಕರನ್ನು ಆತಂಕಕ್ಕೆ ದೂಡಿವೆ.

ಈ ನಡುವೆ ಮಹಾರಾಷ್ಟ್ರ ಡಿಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕರ್ನಾಟಕ ಸಿಎಂ ಬಿ ಎಸ್ ಯಡಿಯೂರಪ್ಪ, “ಮಹಾರಾಷ್ಟ್ರ ಉಪ ಮುಖ್ಯಮಂತ್ರಿಗಳ ಹೇಳಿಕೆಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ಈ ವಿಷಯದಲ್ಲಿ ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬುದು ಇಡೀ ಜಗತ್ತಿಗೇ ಗೊತ್ತಿದೆ. ನಮ್ಮ ರಾಜ್ಯದಲ್ಲಿ ಮರಾಠಿಗರು ಕನ್ನಡಿಗರಂತೆಯೇ ಇದ್ದಾರೆ. ವಿಶ್ವಕನ್ನಡ ಸಮ್ಮೇಳನದಂತಹ ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದರು. ಜೊತೆಗೆ ಈಗ ನಾವು ಮರಾಠಿಗರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನೇ ಆರಂಭಿಸಿದ್ದೇವೆ. ಪರಿಸ್ಥಿತಿ ಹೀಗಿರುವಾಗ ಅಜಿತ್ ಪವರ್ ಇಂತಹ ಬೆಂಕಿ ಹಚ್ಚುವ ಹೇಳಿಕೆ ನೀಡಬಾರದು. ಭವಿಷ್ಯದಲ್ಲಿ ಕೂಡ ಇಂತಹ ಹೇಳಿಕೆ ನೀಡಕೂಡದು ಎಂದು ಅವರಿಗೆ ಎಚ್ಚರಿಕೆ ನೀಡುತ್ತೇನೆ” ಎಂದು ಪ್ರಬಲ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ, ಕಾರವಾರ, ನಿಪ್ಪಾಳಿ ಸೇರಿದಂತೆ ಗಡಿಭಾಗದ ಹಲವು ಪ್ರದೇಶಗಳ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಅಲ್ಲಿನ ರಾಜಕೀಯ ಮತ್ತು ಭಾಷಾ ಸಂಘಟನೆಗಳು ತಗಾದೆ ತೆಗೆಯುವುದು ಹೊಸದೇನಲ್ಲ. ಆದರೆ, ಈಗ ಕರ್ನಾಟಕ ಬಿಜೆಪಿ ಸರ್ಕಾರ ಕೇವಲ ಚುನಾವಣೆ ಗೆಲುವೊಂದನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮರಾಠಾ ಅಭಿವೃದ್ಧಿ ನಿಗಮದಂತಹ ಅಧಿಕೃತ ವ್ಯವಸ್ಥೆಯನ್ನು ಹುಟ್ಟುಹಾಕುವ ಮೂಲಕ, ಕರ್ನಾಟಕದ ಭೌಗೋಳಿಕ ಪ್ರದೇಶದಲ್ಲಿ ಗಣನೀಯ ಪ್ರಮಾಣದಲ್ಲಿ ಮರಾಠಿಗರು ಇದ್ದಾರೆ ಎಂಬುದನ್ನು ಅಧಿಕೃತವಾಗಿ ಒಪ್ಪಿಕೊಂಡ ಬೆನ್ನಲ್ಲೇ, ಅತ್ತ ಕಡೆಯಿಂದ ಮತ್ತೊಮ್ಮೆ ಅಂತಹ ಪ್ರಚೋದನಕಾರಿ ಮಾತು ಹೊರಬಿದ್ದಿರುವುದು ಹೊಸ ಬೆಳವಣಿಗೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com