ಕೋವಿಡಾತಂಕದ ಮಧ್ಯೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಬೇಕಾಗಿತ್ತಾ? - ತೋಂಟದ ಸಿದ್ಧರಾಮ ಸ್ವಾಮಿ ಪ್ರಶ್ನೆ

ಈಗಾಗಲೇ ಅನೇಕ ನಿಗಮ-ಮಂಡಳಿ, ಅಕಾಡೆಮಿಗಳನ್ನು ಸರ್ಕಾರ ಸ್ಥಾಪಿಸಿದೆ. ಅನೇಕ ನಿಗಮ-ಮಂಡಳಿಗಳು ಅನುದಾನ ಕೊರತೆಯಿಂದ ನಲುಗುತ್ತಿವೆ. ಕೆಲವು ಸರ್ಕಾರಕ್ಕೆ ಬಿಳೆಯಾನೆಯಂತಾಗಿವೆ ಎಂದು ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ
ಕೋವಿಡಾತಂಕದ ಮಧ್ಯೆ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಬೇಕಾಗಿತ್ತಾ? - ತೋಂಟದ ಸಿದ್ಧರಾಮ ಸ್ವಾಮಿ ಪ್ರಶ್ನೆ

ಮುಖ್ಯಮಂತ್ರಿ ಶ್ರೀ ಬಿ.ಎಸ್. ಯಡಿಯೂರಪ್ಪನವರು ಇದೀಗ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಘೋಷಣೆ ಮಾಡಿದ್ದಾರೆ. ಅದಕ್ಕೆ ಹಲವರು ಆಕ್ಷೇಪವನ್ನು ಎತ್ತಿದ್ದು ಗದುಗಿನ ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಇದಕ್ಕೆ ಯಾವುದೇ ಗೊತ್ತು ಗುರಿಗಳಾಗಲಿ, ಸ್ಪಷ್ಟತೆಯಾಗಲಿ ಕಂಡುಬರುತ್ತಿಲ್ಲ ಎಂದಿದ್ದಾರೆ.

ಶ್ರೀಗಳ ಅಭಿಪ್ರಾಯವನ್ನು ಹಲವರು ಸಮರ್ಥಿಸಿಕೊಂಡಿದ್ದು, ಕೋವಿಡಾತಂಕವೂ ಇನ್ನು ಕೊನೆಯಾಗಿಲ್ಲ ಅದರ ಮಧ್ಯೆ ಇವೆಲ್ಲ ಘೋಷಣೆಗಳು ಯಾಕೆ? ಮತ ಓಲೈಕೆಗೋ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಿದ್ದಾರೆ.

ಈ ಬಗ್ಗೆ ಶ್ರೀಗಳನ್ನು ಪ್ರತಿಧ್ವನಿ ತಂಡ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ:

ಈ ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನವನ್ನು ಘೋಷಿಸಿಲ್ಲ ಮತ್ತು ಬಿಡುಗಡೆ ಮಾಡಿಲ್ಲ. ಅಷ್ಟೇ ಅಲ್ಲದೆ ಇದರ ಪ್ರಯೋಜನ ಯಾರಿಗೆ? ಇದರ ಫಲಾನುಭವಿಗಳು ಯಾರು ಎಂಬುದು ಸಂದಿಗ್ಧವಾಗಿದೆ. ಇತ್ತೀಚೆಗೆ ಚುನಾವಣೆಯ ಸಂದರ್ಭದಲ್ಲಿ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿದ್ದು, ಅದು ಗೊಲ್ಲ ಅಭಿವೃದ್ಧಿ ನಿಗಮವೊ? ಅಥವಾ ಕಾಡುಗೊಲ್ಲ ಅಭಿವೃದ್ಧಿ ನಿಗಮವೊ? ಎಂಬ ಸಂದೇಹ ಉಂಟಾಗಿ ಆ ಸಮುದಾಯದಲ್ಲಿ ಗೊಂದಲವನ್ನುಂಟು ಮಾಡಿದೆ. ಅದೇ ರೀತಿ ಈ ಅಭಿವೃದ್ಧಿ ನಿಗಮದ ಪ್ರಯೋಜನ ಯಾರಿಗೆ? ಇದು ವೀರಶೈವರಿಗೊ? ಲಿಂಗಾಯತರಿಗೊ? ಅಥವಾ ವೀರಶೈವ ಲಿಂಗಾಯತ ಎಂದು ಸ್ಪಷ್ಟವಾಗಿ ಪ್ರಮಾಣಪತ್ರ ಪಡೆದವರಿಗೊ? ಎಂಬುದು ತಿಳಿದಿಲ್ಲ. ಬಹಳಷ್ಟು ಲಿಂಗಾಯತರ ಜಾತಿ ಪ್ರಮಾಣಪತ್ರದಲ್ಲಿ ‘ಹಿಂದೂ ಲಿಂಗಾಯತ’ ಎಂದಿದೆ. ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಪ್ರಯೋಜನ ಈ ಲಿಂಗಾಯತರಿಗೆ ದೊರೆಯಬಹುದೇ ಎಂಬುದು ಸಂದೇಹಾಸ್ಪದ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ರಚಿಸಿದ ಈ ನಿಗಮವನ್ನು ಕುರಿತು ಸಾರ್ವಜನಿಕ ಚರ್ಚೆಯ ಅಗತ್ಯವಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈಗಾಗಲೇ ಅನೇಕ ನಿಗಮ-ಮಂಡಳಿ, ಅಕಾಡೆಮಿಗಳನ್ನು ಸರ್ಕಾರ ಸ್ಥಾಪಿಸಿದೆ. ಅನೇಕ ನಿಗಮ-ಮಂಡಳಿಗಳು ಅನುದಾನ ಕೊರತೆಯಿಂದ ನಲುಗುತ್ತಿವೆ. ಕೆಲವು ಸರ್ಕಾರಕ್ಕೆ ಬಿಳೆಯಾನೆಯಂತಾಗಿವೆ. ಅವುಗಳ ನಿರ್ವಹಣೆಯೆ ಕಷ್ಟವಾಗಿದೆ. ಮೇಲಾಗಿ ಅಭಿವೃದ್ಧಿ ನಿಗಮಗಳಿಂದ ಸಣ್ಣ-ಪುಟ್ಟ ಸಮುದಾಯಗಳಿಗೆ ಮಾತ್ರ ಪ್ರಯೋಜನವಾಗಬಹುದು. ಈ ಹಿನ್ನೆಲೆಯಲ್ಲಿ ಈ ಅಭಿವೃದ್ಧಿ ನಿಗಮವು ಬಹುಸಂಖ್ಯಾತ ಲಿಂಗಾಯತರಿಗೆ ಎಷ್ಟು ಪ್ರಯೋಜನಕಾರಿಯಾದೀತು ಎಂಬುದನ್ನು ಕಾಯ್ದು ನೋಡಬೇಕಾಗಿದೆ. ಲಿಂಗಾಯತರು ಕರ್ನಾಟಕದಲ್ಲಿ ಬಹುಸಂಖ್ಯಾತ ಸಮುದಾಯವಾಗಿದ್ದು, ಅವರಿಗೆ ಹೆಚ್ಚಿನ ಮೀಸಲಾತಿಯ ಅವಶ್ಯಕತೆ ಇದೆ. ನೆರೆಯ ಮಹಾರಾಷ್ಟ್ರದಲ್ಲಿ ಸರ್ಕಾರ ಅಲ್ಲಿಯ ಬಹುಸಂಖ್ಯಾತ ಮರಾಠಾ ಸಮುದಾಯಕ್ಕೆ ಪ್ರತಿಶತ 16 ರಷ್ಟು ಮೀಸಲಾತಿ ಘೋಷಿಸಿದಂತೆ ಲಿಂಗಾಯತರಿಗೆ ಮೀಸಲಾತಿ ಘೋಷಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಸರ್ಕಾರವನ್ನು ಆಗ್ರಹಿಸಿದರು.

ಉತ್ತರ ಕರ್ನಾಟಕದ ಹಲವು ನಗರ ಮತ್ತು ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು ಈ ನಿಗಮ ಸದ್ಯ ಬೇಕಾಗಿತ್ತಾ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಅದರ ಮಧ್ಯೆ ಬಿಜೆಪಿಯ ಶಾಸಕರು ಟ್ವೀಟರ್ ನಲ್ಲಿ ಮುಖ್ಯಮಂತ್ರಿಗಳ ಘೋಷಣೆಯನ್ನು ಸ್ವಾಗತಿಸಿದರೆ ಹಲವು ಜನರು ಪಕ್ಷಾತೀತವಾಗಿ ಇದರ ಬಗ್ಗೆ ಅಸಮ್ಮತಿ ವ್ಯಕ್ತಪಡಿಸುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com