ಮರಮಕಲ್ ನೇಮಕ ರದ್ದು: ವಿಜಯೇಂದ್ರ ದಿಗ್ವಿಜಯಕ್ಕೆ ಮತ್ತೊಂದು ಗರಿ!

ಮರಮಕಲ್ ಅವರ ನೇಮಕ ರದ್ದತಿಯ ಈ ಬೆಳವಣಿಗೆ ಏಕಕಾಲಕ್ಕೆ ಸಿಎಂ ಯಡಿಯೂರಪ್ಪ ಅವರ ಕೇಂದ್ರಿತ ರಾಜಕೀಯ ವಲಯ ಮತ್ತು ಅವರ ಕುಟುಂಬದ ರಾಜಕೀಯ-ವ್ಯವಹಾರಿಕ ವಲಯದ ಮೇಲಿನ ಹಿಡಿತದ ವಿಷಯದಲ್ಲಿ ವಿಜಯೇಂದ್ರ ಸಾಧಿಸಿರುವ ಮತ್ತೊಂದು ಮೈಲಿಗಲ್ಲು
ಮರಮಕಲ್ ನೇಮಕ ರದ್ದು: ವಿಜಯೇಂದ್ರ ದಿಗ್ವಿಜಯಕ್ಕೆ ಮತ್ತೊಂದು ಗರಿ!

ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಹಿರಿಯ ಪತ್ರಕರ್ತ ಎಂ ಬಿ ಮರಮಕಲ್ ಆ ಸ್ಥಾನದಿಂದ ಹೊರಬಿದ್ದಿದ್ದಾರೆ.

ದಶಕಗಳ ಕಾಲ ಪತ್ರಿಕೋದ್ಯಮದಲ್ಲಿ ಕೆಲಸ ಮಾಡಿದ್ದ ಅವರು ರಾಜ್ಯದಲ್ಲಿ ಈ ಮೊದಲು ಅಸ್ತಿತ್ವದಲ್ಲಿದ್ದ ಜೆಡಿಎಸ್- ಕಾಂಗ್ರೆಸ್ ಸರ್ಕಾರವನ್ನು ಆಪರೇಷನ್ ಕಮಲದ ಮೂಲಕ ಕೆಡವಿ, ಬಿಜೆಪಿ ಸರ್ಕಾರವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರಮಾಪ್ತ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದ ಮರಮಕಲ್, ಆ ಕಾರಣಕ್ಕಾಗಿ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದೇ ಹೆಚ್ಚು. ಆದರೆ ಇದೀಗ ಅವರ ಆ ಕೊಡುಗೆಯನ್ನು ಮೊಟಕುಗೊಳಿಸಿ, ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ಬಿಡುಗಡೆ ಮಾಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೇಳಿದೆ. ನವೆಂಬರ್ 13ರಿಂದಲೇ ಜಾರಿಗೆ ಬರುವಂತೆ ರಾಜಕೀಯ ಕಾರ್ಯದರ್ಶಿಯಾಗಿ ಮರಮಕಲ್ ನೇಮಕವನ್ನು ರದ್ದುಪಡಿಸಲಾಗಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ ಈಗ ಕುತೂಹಲ ಮೂಡಿಸಿರುವುದು ಮಾಜಿ ರಾಜಕೀಯ ಕಾರ್ಯದರ್ಶಿಯಾಗಿ ಮರಮಕಲ್ ನಿರ್ಗಮನವಲ್ಲ. ಬದಲಾಗಿ ಅವರು ನಿರ್ಗಮನದ ಹಿಂದಿರುವ ಸಂಗತಿ. ಪ್ರಮುಖವಾಗಿ ಮರಮಕಲ್ ನಿರ್ಗಮನದ ಹಿಂದೆ ಸಿಎಂ ಯಡಿಯೂರಪ್ಪ ಕುಟುಂಬದ ಅವಕೃಪೆ ಕಾರಣವಿದೆ. ಅದರಲ್ಲೂ ಆಡಳಿತದಲ್ಲಿ ಸಿಎಂ ಕುಟುಂಬದ ಹಸ್ತಕ್ಷೇಪದ ಬಗ್ಗೆ ಮತ್ತು ಭವಿಷ್ಯದಲ್ಲಿ ಅದು ತಂದೊಡ್ಡಬಹುದಾದ ಅಪಾಯದ ಬಗ್ಗೆ ಮರಮಕಲ್ ಅವರ ಕಾಳಜಿಯೇ ಅವರಿಗೆ ಮುಳುವಾಯಿತು. ಯಡಿಯೂರಪ್ಪ ಅವರಿಗೆ ಈ ಹಿಂದಿನ ಅವಧಿಯಲ್ಲಿ ಕುಟುಂಬದ ಆಡಳಿತ ಹಸ್ತಕ್ಷೇಪ ಮತ್ತು ಅದರಿಂದಾಗಿ ಅವರು ಎದುರಿಸಿದ ಸಂಕಷ್ಟ ಮತ್ತೆ ಮರುಕಳಿಸುವುದು ಬೇಡ ಎಂಬ ಹಿನ್ನೆಲೆಯಲ್ಲಿ ಅವರ ಸಲಹೆಗಳೇ ತಿರುಗುಬಾಣವಾದವು ಎಂಬುದು ರಾಜಕೀಯ ಮತ್ತು ಮಾಧ್ಯಮ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿ.

ನೇಮಕವಾದ ತಮ್ಮ ಹುದ್ದೆಗೆ ತಕ್ಕಂತೆ ಸಿಎಂಗೆ ರಾಜಕೀಯ ಸಲಹೆ ನೀಡುವ ಜೊತೆಗೆ, ಅವರ ಕುಟುಂಬದ ಆಂತರಿಕ ವಿಷಯದಲ್ಲಿ ಕೂಡ ಸಲಹೆಗಾರರು ಮೂಗು ತೂರಿಸತೊಡಗಿದ್ದರು. ಅದರಲ್ಲೂ ಕುಟುಂಬದ ರಾಜಕೀಯ ನಿರ್ಧಾರಗಳಲ್ಲಿ ನಿರ್ಣಾಯಕರಾಗಿರುವ ಸಿಎಂ ಪುತ್ರ ವಿಜಯೇಂದ್ರ ಅವರ ವಿಷಯದಲ್ಲಿಯೇ ಅವರು ಮೂಗು ತೂರಿಸುತ್ತಿದ್ದರು. ನೇಮಕಾತಿ, ವರ್ಗಾವಣೆಯಂತಹ ಸಾಮಾನ್ಯ ವಿಷಯಗಳಿಂದ ಹಿಡಿದು ಪ್ರಮುಖ ರಾಜಕೀಯ ಮತ್ತು ವ್ಯವಹಾರಿಕ ವಿಷಯಗಳವರೆಗೆ ಸಲಹೆಗಾರರು, ಸಿಎಂ ಅವರ ‘ಹಿತ ಕಾಯುವ ಉದ್ದೇಶ’ವನ್ನೇ ಮುಂದಿಟ್ಟುಕೊಂಡು ಸಿಎಂ ಗೆ ನಿರಂತರ ಎಚ್ಚರಿಕೆ ನೀಡುತ್ತಿದ್ದರು. ಇದು ಸಹಜವಾಗೇ ಅಧಿಕಾರದ ಕುರ್ಚಿಯನ್ನೇ ಅಸ್ತ್ರವಾಗಿಟ್ಟುಕೊಂಡು ವಿವಿಧ ವ್ಯವಹಾರ-ವಹಿವಾಟು ಆಸಕ್ತಿವಹಿಸಿದ್ದ ಕುಟುಂಬದವರಿಗೆ ನುಂಗಲಾರದ ತುಪ್ಪವಾಗಿ ಪರಿಣಮಿಸಿತ್ತು. ಹಾಗಾಗಿ, ಸಿಎಂ ಕುಟುಂಬದೊಳಗೇ ಸಲಹೆಗಾರರ ಸಲಹೆಯ ವಿರುದ್ಧ ಬಂಡಾಯದ ಬಿರುಗಾಳಿ ಎದ್ದಿತ್ತು ಎನ್ನಲಾಗುತ್ತಿದೆ.

ಇದೀಗ ಶಿರಾ ಮತ್ತು ಆರ್ ಆರ್ ನಗರ ಉಪ ಚುನಾವಣೆಯ ಯಶಸ್ವಿ ಕಾರ್ಯತಂತ್ರದ ಬಳಿಕ ಒಂದು ರೀತಿಯಲ್ಲಿ ಪ್ರಶ್ನಾತೀತ ನಾಯಕರಾಗಿ ಬೆಳೆದುನಿಂತಿರುವ ಸಿಎಂ ಪುತ್ರ, ಮತ್ತು ಸದ್ಯ ರಾಜ್ಯರಾಜಕಾರಣದ ಪ್ರಭಾವಿ ಯುವ ನಾಯಕ ಬಿ ವೈ ವಿಜಯೇಂದ್ರ, ಸಿಎಂ ರಾಜಕೀಯ ಸಲಹೆಗಾರರ ಸಲಹೆಯ ಅಗತ್ಯ ಇನ್ನು ಬೇಕಿಲ್ಲ ಎಂದು ಹೇಳಿದ್ದಾರೆ. ಸ್ವತಃ ಸಿಎಂ ಅವರೇ ಈ ಬಗ್ಗೆ ಸಹಮತ ಹೊಂದಿರದೇ ಇದ್ದರೂ, ವಿಜಯೇಂದ್ರ ಈ ವಿಷಯದಲ್ಲಿ ಪಟ್ಟು ಸಡಿಲಿಸದೇ ಈ ನಿರ್ಧಾರ ಕೈಗೊಂಡಿದ್ದಾರೆ. ಆ ಮೂಲಕ ಆಡಳಿತದ ವಿಷಯದಲ್ಲಿ ತಮಗೆ ಅನುಕೂಲಕರ ವಾತಾವರಣಕ್ಕೆ ಅಡ್ಡಿಯಾಗಿದ್ದ ಏಕೈಕ ತೊಡಕನ್ನೂ ನಿವಾಳಿಸಿದ್ದಾರೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ಜೊತೆಗೆ ಇದು ಕೇವಲ ಮರಮಕಲ್ ಅಥವಾ ರಾಜಕೀಯ ಕಾರ್ಯದರ್ಶಿಗೆ ಸೀಮಿತ ಬೆಳವಣಿಗೆ ಮಾತ್ರವಲ್ಲ; ರಾಜ್ಯ ರಾಜಕಾರಣದಲ್ಲಿ ಅತಿ ವೇಗದಲ್ಲಿ ಪ್ರವರ್ಧನಮಾನಕ್ಕೆ ಬಂದಿರುವ ವಿಜಯೇಂದ್ರ, ಕೇವಲ ಸಿಎಂ ಕುಟುಂಬದ ಅಥವಾ ಅವರಿಗೆ ನೇರವಾಗಿ ಸಂಬಂಧಿಸಿದ ವೈಯಕ್ತಿಕ ರಾಜಕೀಯ ನಿರ್ಧಾರಗಳ ವಿಷಯದಲ್ಲಿ ಮಾತ್ರವಲ್ಲ; ಒಟ್ಟಾರೆ ಆಡಳಿತ ಮತ್ತು ರಾಜ್ಯ ರಾಜಕಾರಣದ ವಿಷಯದಲ್ಲಿ ಅವರ ಹಿಡಿತ ಬಿಗಿಯಾಗುತ್ತಿರುವುದರ ಸೂಚನೆ ಕೂಡ ಎಂದೂ ಹೇಳಲಾಗುತ್ತಿದೆ.

ಇಷ್ಟು ದಿನ ಸೂಪರ್ ಸಿಎಂ ಎನಿಸಿಕೊಂಡಿದ್ದ ವಿಜಯೇಂದ್ರ, ಶಿರಾ ಮತ್ತು ಆರ್ ಆರ್ ನಗರ ಚುನಾವಣೆಯ ಅನಿರೀಕ್ಷಿತ ಗೆಲುವಿನ ಬಳಿಕ ಇಡೀ ಯಶಸ್ಸಿನ ಗರಿ ತಾವೊಬ್ಬರೇ ಮುಡಿದುಕೊಂಡಿದ್ದಾರೆ. ಆ ಮೂಲಕ ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯಲ್ಲಿ ಸದ್ಯದ ಧ್ರವತಾರೆ ಎನಿಸಿಕೊಂಡಿದ್ದು, ಬಿಜೆಪಿಯ ಸಂಘಟನಾತ್ಮಕ ಪ್ರಭಾವವನ್ನೂ ಮೀರಿ ವೈಯಕ್ತಿಕ ವರ್ಚಸ್ಸು ವೃದ್ಧಿಸಿಕೊಂಡಿದ್ದಾರೆ. ಆ ದೃಷ್ಟಿಯಲ್ಲಿ ತಂದೆ ಯಡಿಯೂರಪ್ಪ ಅವರ ಹಾದಿಯಲ್ಲೇ ಸಾಗಿರುವ ವಿಜಯೇಂದ್ರ ಅವರ ವೇಗ ಮಾತ್ರ ಅನಿರೀಕ್ಷಿತ. ಆ ವೇಗದ ಬಿರುಸಿಗೆ ಅಡ್ಡಗಾಲಾಗಿದ್ದ ರಾಜಕೀಯ ಸಲಹೆಗಾರರಂಥ ಅಡೆತಡೆಗಳನ್ನು ನಿವಾರಿಸಿಕೊಳ್ಳುವುದು ಹೇಗೆ ಎಂಬುದನ್ನು ಅವರು ಈಗಾಗಲೇ ಕರಗತಮಾಡಿಕೊಂಡಿದ್ದಾರೆ. ಒಂದು ಕಾಲದಲ್ಲಿ ಯಡಿಯೂರಪ್ಪ ಅವರ ಪರಮಾಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪ್ರಭಾವಿ ನಾಯಕಿ ಶೋಭಾ ಕರಂದ್ಲಾಜೆಯವರನ್ನು ಕೂಡ ಹಂತಹಂತವಾಗಿ ದೂರ ಸರಿಸುವ ಮೂಲಕ ಅಧಿಕಾರದ ಶಕ್ತಿಕೇಂದ್ರದ ಪರಿಧಿಯಿಂದ ಹೊರಗಿಡುವಲ್ಲಿ ಯಶಸ್ವಿಯಾಗಿರುವ ಅವರು, ಇದೀಗ ಮರಮಕಲ್ ವಿಷಯದಲ್ಲಿ ಕೂಡ ಅದನ್ನೇ ಮಾಡಿದ್ದಾರೆ ಎಂಬುದು ಬಿಜೆಪಿ ಆಂತರಿಕ ಮೂಲಗಳ ವಿಶ್ಲೇಷಣೆ.

ಹಾಗಾಗಿ ಮರಮಕಲ್ ಅವರ ನೇಮಕ ರದ್ದತಿಯ ಈ ಬೆಳವಣಿಗೆ ಏಕಕಾಲಕ್ಕೆ ಸಿಎಂ ಯಡಿಯೂರಪ್ಪ ಅವರ ಕೇಂದ್ರಿತ ರಾಜಕೀಯ ವಲಯ ಮತ್ತು ಅವರ ಕುಟುಂಬದ ರಾಜಕೀಯ-ವ್ಯವಹಾರಿಕ ವಲಯದ ಮೇಲಿನ ಹಿಡಿತದ ವಿಷಯದಲ್ಲಿ ವಿಜಯೇಂದ್ರ ಸಾಧಿಸಿರುವ ಮತ್ತೊಂದು ಮೈಲಿಗಲ್ಲು. ಇನ್ನು ಆ ಎರಡೂ ವಲಯಗಳು ವಿಜಯೇಂದ್ರ ಅವರ ಆಡುಂಬೊಲ. ಅವರೇ ಅಲ್ಲಿನ್ನು ಸೂತ್ರಧಾರ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com