ಕಾಲೇಜು ಆರಂಭಕ್ಕೆ ತೋರುವ ಆಸಕ್ತಿ, ಸುರಕ್ಷತೆಗೆ ಇಲ್ಲವಾಯಿತೆ?

ಕೋವಿಡ್ ಆರಂಭದಿಂದ ಈವರೆಗೆ ಪ್ರತಿ ಹಂತದಲ್ಲೂ ತನ್ನ ಹೊಣೆಗಾರಿಕೆಯಿಂದು ನುಣುಚಿಕೊಳ್ಳುತ್ತಲೇ ಇರುವ ಸರ್ಕಾರ, ಈಗ ಪದವಿ ತರಗತಿಗಳ ಆರಂಭದ ವಿಷಯದಲ್ಲಿ ಕೂಡ ನಾಮಕಾವಸ್ಥೆಯ ಮಾರ್ಗಸೂಚಿ ಹೊರಡಿಸಿ ಕೈತೊಳೆದುಕೊಂಡಿದೆ.
ಕಾಲೇಜು ಆರಂಭಕ್ಕೆ ತೋರುವ ಆಸಕ್ತಿ, ಸುರಕ್ಷತೆಗೆ ಇಲ್ಲವಾಯಿತೆ?

ಬರೋಬ್ಬರಿ ಎಂಟು ತಿಂಗಳ ಬಳಿಕ ನಾಳೆಯಿಂದ ರಾಜ್ಯದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳು ಆರಂಭವಾಗಲಿವೆ.

ಕೋವಿಡ್ ಪ್ರಕರಣಗಳು ಎರಡು ತಿಂಗಳ ಇಳಿಕೆಯ ಬಳಿಕ ಮತ್ತೆ ಏರುಗತಿಯಲ್ಲಿರುವಾಗಲೇ ಸರ್ಕಾರ ತರಗತಿ ಪುನರಾರಂಭಕ್ಕೆ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ತರಗತಿಗೆ ಹಾಜರಾಗಲು ಕೋವಿಡ್ ಪರೀಕ್ಷೆಯ ನೆಗೇಟಿವ್ ವರದಿ ಕಡ್ಡಾಯ, ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆ, ಕಾಲೇಜಿನ ಪ್ರವೇಶದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮತ್ತಿತರ ಮುಂಜಾಗ್ರತಾ ಕ್ರಮಗಳನ್ನು ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯಲ್ಲಿ ಕಡ್ಡಾಯವಾಗಿ ಪಾಲಿಸಲು ಹೇಳಲಾಗಿದೆ.

ಆದರೆ, ನವೆಂಬರ್ 6 ಹೊತ್ತಿಗೇ ಈ ಎಲ್ಲಾ ಮಾರ್ಗಸೂಚಿಗಳನ್ನು ಹೊರಡಿಸಿ, ಕಾಲೇಜು ಮತ್ತು ವಿದ್ಯಾರ್ಥಿನಿಲಯಗಳಿಗೂ ಸುತ್ತೋಲೆ ಕಳಿಸಲಾಗಿದ್ದರೂ, ಈವರೆಗೆ ಮಾರ್ಗಸೂಚಿಯ ಅನ್ವಯ ತರಗತಿ, ಶೌಚಾಲಯ ಮುಂತಾದವು ಸೇರಿದಂತೆ ಕಾಲೇಜು ಕಟ್ಟಡಗಳ ಸ್ಯಾನಿಟೈಸೇಷನ್, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆ, ಸ್ಯಾನಿಟೈಸರ್ ವ್ಯವಸ್ಥೆ ಮುಂತಾದವನ್ನು ಮಾಡುವಲ್ಲಿ ಶಿಕ್ಷಣ ಇಲಾಖೆ ಮತ್ತು ಸರ್ಕಾರ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತೆಗೆದುಕೊಂಡಿಲ್ಲ. ಆರಂಭದಲ್ಲಿ ಕೇವಲ ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ನೇರ ತರಗತಿಗಳನ್ನು ನಡೆಸಲಾಗುವುದು, ಉಳಿದ ತರಗತಿ ವಿದ್ಯಾರ್ಥಿಗಳಿಗೆ ಆನ್ ಲೈನ್ ಶಿಕ್ಷಣ ಮುಂದುವರಿಯಲಿದೆ ಎಂದು ಹೇಳಿದ್ದರೂ, ಕನಿಷ್ಟ ತರಗತಿಗೆ ಹಾಜರಾಗುವ ಆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಸುರಕ್ಷತೆಯ ವಿಷಯದಲ್ಲಿ ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಪರಿಶೀಲಿಸಿದರೆ ಆಘಾತಕಾರಿ ಸಂಗತಿಗಳು ಬೆಳಕಿಗೆ ಬರುತ್ತಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಸ್ಯಾನಿಟೈಸೇಷನ್ ವ್ಯವಸ್ಥೆ ಕೊನೇ ದಿನದವರೆಗೂ ನಡೆದೇ ಇಲ್ಲ. ಇನ್ನು ಹಾಸ್ಟೆಲ್ ಗಳಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಎಂಟು ತಿಂಗಳಿಂದ ಜನಬಳಕೆ ಇಲ್ಲದೆ ಪಾಳುಬಿದ್ದಿರುವ ಕಟ್ಟಡಗಳನ್ನು ಶುಚಿಗೊಳಿಸಲೇ ವಾರಗಟ್ಟಲೆ ಹಿಡಿಯುತ್ತಿದೆ. ಜೊತೆಗೆ ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸರ್ ಬಳಕೆಯಂತಹ ಪ್ರಾಥಮಿಕ ವಿಷಯಗಳನ್ನು ಅನುಸರಿಸಿ ಎಷ್ಟು ಮಕ್ಕಳಿಗೆ ಹಾಸ್ಟೆಲುಗಳಲ್ಲಿ ಪ್ರವೇಶ ಅವಕಾಶ ನೀಡಬಹುದು ಎಂಬ ಬಗ್ಗೆ ಸರ್ಕಾರ ಮತ್ತು ಯುಜಿಸಿ ನಡುವೆ ಸಹಮತವಿಲ್ಲ. ಒಂದು ಕಡೆ ಹಾಸ್ಟೆಲಿನ ಒಂದು ಕೊಠಡಿಗೆ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ ನೀಡಬೇಕು ಎಂದು ಯುಜಿಸಿ ಹೇಳಿದ್ದರೆ, ಮತ್ತೊಂದು ಕಡೆ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಅವಕಾಶ ನೀಡಬಹುದು ಎಂದು ರಾಜ್ಯ ಸಮಾಜ ಕಲ್ಯಾಣ ಇಲಾಖೆ ತಿಳಿಸಿದೆ. ಸದ್ಯಕ್ಕೆ ರಾಜ್ಯದ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಮತ್ತು ಕೆಲವು ಕಾಲೇಜು ಆಡಳಿತ ಮಂಡಳಿಗಳ ವ್ಯಾಪ್ತಿಗೆ ಒಳಪಡುವ ಹಾಸ್ಟೆಲುಗಳಲ್ಲಿ ಒಂದೊಂದು ಕೊಠಡಿಯಲ್ಲಿ ಕನಿಷ್ಟವ3-8 ಮಂದಿ ವಿದ್ಯಾರ್ಥಿಗಳು ಇರುವುದು ಈ ಹಿಂದಿನ ವಾಡಿಕೆ. ಹಾಗಾಗಿ ಈ ವಿಷಯದಲ್ಲಿ ಈಗ ಯುಜಿಸಿ ಮಾರ್ಗಸೂಚಿ ಅನುಸರಿಸಬೇಕೆ ಅಥವಾ ರಾಜ್ಯ ಸರ್ಕಾರದ ಸೂಚನೆ ಪಾಲಿಸಬೇಕೆ ಎಂಬ ಗೊಂದಲ ಹಾಸ್ಟೆಲ್ ಮೇಲ್ವಿಚಾರಕರು ಮತ್ತು ಇತರೆ ಸಿಬ್ಬಂದಿಯನ್ನು ಕಾಡುತ್ತಿರುವ ಗೊಂದಲ.

ಈ ನಡುವೆ, ಕಾಲೇಜು ಮತ್ತು ಹಾಸ್ಟೆಲ್ ಆವರಣದೊಳಗಿನ ಈ ಸಮಸ್ಯೆಗಳಲ್ಲದೆ, ಮುಖ್ಯವಾಗಿ ವಿದ್ಯಾರ್ಥಿಗಳು ಮತ್ತು ಬೋಧಕರನ್ನು ಕಾಡುತ್ತಿರುವ ಪ್ರಮುಖ ಸಮಸ್ಯೆ, ಕೋವಿಡ್ ಪರೀಕ್ಷೆಯದ್ದು! ಕಾಲೇಜಿಗೆ ಹಾಜರಾಗಲು ವಿದ್ಯಾರ್ಥಿಗಳು ಮತ್ತು ಬೋಧಕರಿಬ್ಬರಿಗೂ ನೆಗೇಟಿವ್ ವರದಿ ಕಡ್ಡಾಯಗೊಳಿಸಲಾಗಿದೆ. ಆದರೆ, ನವೆಂಬರ್ 6ರಂದು ಈ ಕುರಿತ ಲಿಖಿತ ಮಾರ್ಗಸೂಚಿ ಹೊರಡಿಸಿದ ದಿನದಿಂದ ಈ ಹತ್ತು ದಿನಗಳಲ್ಲಿ ಸರ್ಕಾರವಾಗಲೀ, ಕಾಲೇಜು ಶಿಕ್ಷಣ ಇಲಾಖೆಯಾಗಲೀ ಕೇವಲ ಸೂಚನೆ, ಸುತ್ತೋಲೆಗೆ ಸೀಮಿತವಾಗಿದೆಯೇ ವಿನಃ ಅಕ್ಷರಶಃ ತಳಮಟ್ಟದಲ್ಲಿ ಆ ತನ್ನ ಸುತ್ತೋಲೆಗಳನ್ನು ಜಾರಿಗೊಳಿಸುವಲ್ಲಿ ಇರುವ ವಾಸ್ತವಿಕ ಸವಾಲು ಮತ್ತು ಸಮಸ್ಯೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ!

ಸರಿ ಸುಮಾರು ಒಂದು ಕೋಟಿಯಷ್ಟಿರುವ ರಾಜ್ಯದ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಕರೋನಾ ಪರೀಕ್ಷೆ ಕಡ್ಡಾಯಗೊಳಿಸಿರುವ ಸರ್ಕಾರ, ಆ ಬಗ್ಗೆ ಯಾವ ವ್ಯವಸ್ಥೆಗಳನ್ನು ಮಾಡಿದೆ ಎಂದರೆ ಉತ್ತರ ಶೂನ್ಯ. ಕನಿಷ್ಟ ಅಂತಿಮ ಪದವಿ ಮತ್ತು ಅಂತಿಮ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮಾತ್ರ ಸದ್ಯ ತರಗತಿಗೆ ಹಾಜರಾಗುತ್ತಾರೆ. ಅವರಿಗೆಷ್ಟೇ ಕೋವಿಡ್ ಪರೀಕ್ಷೆ ಕಡ್ಡಾಯ ಎಂದುಕೊಂಡರೂ ಆ ಸಂಖ್ಯೆ ಕೂಡ 20-25 ಲಕ್ಷ ಮೀರಲಿದೆ. ಅಷ್ಟು ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅತಿ ಕಡಿಮೆ ಅವಧಿಯಲ್ಲಿ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡಲು ಯಾವ ವ್ಯವಸ್ಥೆಯೂ ಆಗಿಲ್ಲ. ಸರ್ಕಾರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಅಥವಾ ಖಾಸಗೀ ಲ್ಯಾಬ್ ಗಳಲ್ಲಿ ಆರ್ ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಲು ಹೇಳಿ ಕೈತೊಳೆದುಕೊಂಡಿದೆ. ಆದರೆ, ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ದಿಢೀರನೇ ಪರೀಕ್ಷಾ ಕೇಂದ್ರಗಳ ಮುಂದು ಜಮಾಯಿಸಿದರೆ ಆಗಬಹುದಾದ ಜನಸಂದಣಿ, ಸಕಾಲಿಕ ಪರೀಕ್ಷೆಗೆ ಅಗತ್ಯ ಪ್ರಮಾಣ ಪರೀಕ್ಷಾ ಕಿಟ್ ಲಭ್ಯತೆ ಮುಂತಾದ ವಿಷಯಗಳ ಬಗ್ಗೆ ಸರ್ಕಾರ ಯಾವುದೇ ಚಿಂತನೆ ನಡೆಸಿಲ್ಲ.

ಹಾಗಾಗಿ ಸರ್ಕಾರದ ಇಂತಹ ಹೊಣೆಗೇಡಿ ತೀರ್ಮಾನದಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಇತರ ಪರೀಕ್ಷಾ ಕೇಂದ್ರಗಳಲ್ಲಿ ನೂಕುನುಗ್ಗಲು ಆಗಬಹುದು. ಹಾಗಾದಲ್ಲಿ ಕರೋನಾ ತಡೆಯುವ ಬದಲು, ಇಂತಹ ಸ್ಥಳಗಳೇ ಕರೋನಾ ಹರಡುವ ಜಾಗಗಳಾಗಿ ಮಾರ್ಪಾಡಾಗಬಹುದಾಗಿದೆ ಎಂಬ ಆತಂಕವಿದೆ. ಈ ನಡುವೆ, ವಿದ್ಯಾರ್ಥಿಗಳು ಮತ್ತು ಪೋಷಕರ ಈ ಆತಂಕದ ಬಗ್ಗೆ ಮಾಧ್ಯಮಗಳು ಪ್ರಶ್ನಿಸತೊಡಗಿದ ಹಿನ್ನೆಲೆಯಲ್ಲಿ ಕಾಲೇಜು ಶಿಕ್ಷಣ ಇಲಾಖೆ, ಗೊಂದಲಕ್ಕೊಳಗಾಗಿದ್ದು, ಸೋಮವಾರ ಮಧ್ಯಾಹ್ನದ ಹೊತ್ತಿಗೆ ಕಾಲೇಜುಗಳಲ್ಲಿಯೇ ರ್ಯಾಪಿಡ್ ಆಂಟಿಜೆನ್ ಪರೀಕ್ಷಾ ಘಟಕ ತೆರೆಯಲು ಆರೋಗ್ಯಾಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಕೋರಿದೆ. ಕಾಲೇಜು ಶಿಕ್ಷಣ ಇಲಾಖೆಯ ಶಿವಮೊಗ್ಗ ಪ್ರಾದೇಶಿಕ ಜಂಟಿ ನಿರ್ದೇಶಕ ಕೆ ಸಿ ವೀರಭದ್ರಯ್ಯ ಅವರು ಪ್ರತಿಧ್ವನಿ ಜೊತೆ ಮಾತನಾಡಿ, “ಸರ್ಕಾರದ ಸೂಚನೆಯಂತೆ ಇಲಾಖೆ ನಾಳೆಯಿಂದ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಂಡಿದೆ. ಇಂದು(ಸೋಮವಾರ) ಜಿಲ್ಲಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಾಧ್ಯವಿದ್ದಲ್ಲಿ ಕಾಲೇಜುಗಳಲ್ಲಿ ಕೋವಿಡ್ ಪರೀಕ್ಷೆ ನಡೆಸಲು ಸೂಚಿಸಲಾಗಿದೆ” ಎಂದಿದ್ದಾರೆ.

ಆದರೆ, ಕಾಲೇಜುಗಳ ಸಂಖ್ಯೆ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಮಿತಿಯಲ್ಲಿ ಅದು ಸಾಧ್ಯವೇ ಎಂಬುದನ್ನು ಕಾದುನೋಡಬೇಕಿದೆ. ಮತ್ತೊಂದು ಪ್ರಮುಖ ತೊಡಕು; ಕೋವಿಡ್ ಪರೀಕ್ಷೆಯ ವೆಚ್ಚದ ಕುರಿತದ್ದು, ವಿದ್ಯಾರ್ಥಿಗಳಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಪರೀಕ್ಷೆ ಮಾಡಲಾಗುವುದೆ? ಇನ್ನು ಇಲಾಖೆಯ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಮಾಡಿಸಲು ಸಾಧ್ಯವಾಗದೇ ಇದ್ದಲ್ಲಿ ಪರ್ಯಾಯವೇನು? ಎಂಬ ಪ್ರಶ್ನೆಯೂ ಕಾಡುತ್ತಿದೆ.

ಈ ನಡುವೆ ಒಮ್ಮೆ ಪರೀಕ್ಷೆ ಮಾಡಿಸಿ ನೆಗೇಟಿವ್ ಬಂದ ಬಳಿಕ ಆ ವಿದ್ಯಾರ್ಥಿ ಮನೆ ಅಥವಾ ಹಾಸ್ಟೆಲಿನಿಂದ ಕಾಲೇಜಿಗೆ ನಿತ್ಯ ಸಂಚರಿಸುವಾಗ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬರುವುದಿಲ್ಲ ಎಂಬುದಕ್ಕೆ ಯಾವ ಖಾತರಿ ಇದೆ? ಹಾಗಾಗಿ ಒಮ್ಮೆ ಪರೀಕ್ಷೆ ಮಾಡಿಸಿಕೊಂಡರೆ ಸಾಕೆ ಅಥವಾ ನಿಯಮಿತವಾಗಿ ಆಗಾಗ ಪರೀಕ್ಷೆ ನಡೆಸಬೇಕಾಗುತ್ತದೆಯೇ? ಎಂಬ ಗೊಂದಲಗಳೂ ಇವೆ.

ಆದರೆ, ಇಂತಹ ಯಾವ ಗೊಂದಲ, ಪ್ರಶ್ನೆಗಳಿಗೂ ಸರ್ಕಾರದ ಬಳಿಯಾಗಲೀ, ಅಧಿಕಾರಿಗಳ ಬಳಿಯಾಗಲೀ ಉತ್ತರವಿಲ್ಲ. ಹಾಗಾಗಿ ಕೋವಿಡ್ ಆರಂಭದಿಂದ ಈವರೆಗೆ ಪ್ರತಿ ಹಂತದಲ್ಲೂ ತನ್ನ ಹೊಣೆಗಾರಿಕೆಯಿಂದು ನುಣುಚಿಕೊಳ್ಳುತ್ತಲೇ ಇರುವ ಸರ್ಕಾರ, ಈಗ ಪದವಿ ತರಗತಿಗಳ ಆರಂಭದ ವಿಷಯದಲ್ಲಿ ಕೂಡ ನಾಮಕಾವಸ್ಥೆಯ ಮಾರ್ಗಸೂಚಿ ಹೊರಡಿಸಿ ಕೈತೊಳೆದುಕೊಂಡಿದೆ. ಪ್ರಾಯೋಗಿಕ ಮತ್ತು ವಾಸ್ತವಿಕ ಸಮಸ್ಯೆ- ಗೊಂದಲಗಳ ಬಗ್ಗೆಯಾಗಲೀ, ಕರ್ಚುವೆಚ್ಚದ ಬಗ್ಗೆಯಾಗಲೀ, ವಿದ್ಯಾರ್ಥಿ, ಬೋಧಕರು ಮತ್ತು ಪೋಷಕರ ಆತಂಕಗಳ ಬಗ್ಗೆಯಾಗಲೀ ತಲೆಕೆಡಿಸಿಕೊಂಡಿಲ್ಲ. ತರಗತಿ ಆರಂಭಿಸುತ್ತೇವೆ, ಇನ್ನು ನೀವುಂಟು ಕೋವಿಡ್ ಉಂಟು ಎಂಬುದು ಸರ್ಕಾರದ ಸದ್ಯದ ವರಸೆ!

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com