ಗದುಗಿನಲ್ಲಿದೆ ಈಗ ಸಾಬರಮತಿ ಆಶ್ರಮ

ಸ್ವಾತಂತ್ರ್ಯ ಚಳವಳಿ ದೇಶಾದ್ಯಂತ ಪಸರಿಸಲು ಪಣತೊಟ್ಟಿದ್ದ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಾಲ್ಕು ತಿಂಗಳ ನಂತರ ೧೯೧೫ರ ಮೇ ೮ರಂದು ಕರ್ನಾಟಕಕ್ಕೆ ಭೇಟಿ ನೀಡಿದ್ದರು
ಗದುಗಿನಲ್ಲಿದೆ ಈಗ ಸಾಬರಮತಿ ಆಶ್ರಮ

ಗುಜರಾತಿನ ಸಾಬರಮತಿ ಆಶ್ರಮ ನೋಡಿಲ್ಲವೆಂದು ಬೇಸರವೇ…ಅಲ್ಲಿವರೆಗೂ ಹೋಗಲು ಬಲು ಕಷ್ಟ ಎಂಬ ಚಿಂತೆಯೇ… ಚಿಂತೆ ಬಿಡಿ, ಗದುಗಿನಲ್ಲೇ ಈಗ ಸಾಬರಮತಿ ಆಶ್ರಮದ ಪ್ರತಿರೂಪ ಸಿದ್ಧವಾಗಿದೆ. ಗುಜರಾತಿನ ಸಾಬರಮತಿ ಆಸ್ರಮ ಹೇಗಿದೆಯೋ ಹಾಗೆಯೇ ಇದನ್ನು ಕಟ್ಟಿದ್ದಾರೆ.

ಇದು ಗದುಗಿನ ಜಿಲ್ಲಾಸ್ಪತ್ರೆ ಹತ್ತಿರವಿದೆ. ಕರ್ನಾಟಕ ರಾಜ್ಯ ಗ್ರಾಮೀಣಾವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದ ಭವ್ಯ ಕಟ್ಟಡ ಹತ್ತಿರ ಸಾಬರ ಆಶ್ರಮದ ಪ್ರತಿರೂಪವನ್ನು ನಿರ್ಮಿಸಲಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಾಬರಮತಿ ಆಶ್ರಮದಲ್ಲಿ ಗಾಂಧಿ ಅವರ ಜನಪ್ರಿಯ ನುಡಿಗಳು ಮತ್ತು ಚಿತ್ರಗಳ ಮೂಲಕ ಅವರ ವಿಚಾರಧಾರೆಗಳನ್ನು ಜನರಿಗೆ ತಿಳಿಸಿಕೊಡುವ ಪ್ರಯತ್ನ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ವಿಷ್ಣುಕಾಂತ ಎಸ್.ಚಟಪಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರ್ಯ ಚಳವಳಿ ದೇಶಾದ್ಯಂತ ಪಸರಿಸಲು ಪಣತೊಟ್ಟಿದ್ದ ಮಹಾತ್ಮ ಗಾಂಧೀಜಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದ ನಾಲ್ಕು ತಿಂಗಳ ನಂತರ ೧೯೧೫ರ ಮೇ ೮ರಂದು ಕರ್ನಾಟಕ್ಕೆ ಭೇಟಿ ನೀಡಿದ್ದರು. ಇದಾದ ಬಳಿಕ ೧೯೨೦ರ ದಶಕದಲ್ಲಿ ಕರ್ನಾಟಕಕ್ಕೆ ಹಲವು ಬಾರಿ ಭೇಟಿ ನೀಡಿದ್ದಾರೆ. ಈ ಪೈಕಿ ಅವಿಭಜಿತ ಗದಗ ಜಿಲ್ಲೆಗೆ ಮಹಾತ್ಮ ೧೯೨೦ರ ನ.೧೧ ರಂದು ಭೇಟಿ ನೀಡಿದರು. ಅದು ತಮ್ಮ ೫೦ನೇ ವಯಸ್ಸಿನಲ್ಲಿ. ಈ ಐತಿಹಾಸಿಕ ಕ್ಷಣಕ್ಕೆ ಶತಮಾನೋತ್ಸವದ ಸಂಭ್ರಮ.

ದಕ್ಷಿಣ ಆಫ್ರಿಕಾದಲ್ಲಿ ವ್ಯಾಸಂಗ, ವಕೀಲಿ ವೃತ್ತಿ ಮಾಡುತ್ತಲೇ ಅಲ್ಲಿನ ವರ್ಣಬೇಧ ನೀತಿಯನ್ನು ವಿರೋಧಿಸಿ ಹೋರಾಟ ನಡೆಸಿದ್ದ ಗಾಂಧಿ ತನ್ನ ನೆಲವನ್ನು ಶೋಷಣೆ, ದಬ್ಬಾಳಿಕೆಯಿಂದ ಮುಕ್ತಗೊಳಿಸುವ ಹುರುಪಿನಿಂದ ಬಂದರು. ಈ ಕುರಿತು ಕರ್ನಾಟಕಕ್ಕೂ ಹಲವು ಬಾರಿ ಕಾಲಿಟ್ಟರು. ಗಾಂಧೀಜಿ ಅವರು ಗುಜರಾತನಿಂದ ತಮ್ಮ ಪ್ರಯಾಣ ಆರಂಭಿಸಿ ೧೯೨೦ರ ನ. ೭ ಮತ್ತು ೮ರಂದು ನಿಪ್ಪಾಣಿ ಮತ್ತು ಚಿಕ್ಕೊಡಿ ಮತ್ತು ನ. ೯ರಂದು ಬೆಳಗಾವಿಯಲ್ಲಿ ಸಭೆ ನಡೆಸಿದರು. ನಂತರ ನ. ೧೦ರ ನಸುಕಿನಲ್ಲಿ ಧಾರವಾಡಕ್ಕೆ ಆಗಮಿಸಿ ಅಂದು ಧಾರವಾಡದಲ್ಲಿ ತಂಗಿದ್ದರು.

ನ.೧೧ ರಂದು ಹುಬ್ಬಳ್ಳಿಯಲ್ಲಿ ಭಾಷಣ ಮಾಡಿ ನಂತರ ಗದಗ ನಗರದ ಬೆಟಗೇರಿಯ ಹೊಸಪೇಟೆ ಚೌಕ್ನಲ್ಲಿ, ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದರು. ಅಸಹಕಾರ ಆಂದೋಲನ, ಖಾದಿ ಸ್ವದೇಶಿ ಆಂದೋಲನ, ಖಾದಿ ಪ್ರಚಾರ ಪ್ರವಾಸಕ್ಕೆ ಆಗಮಿಸಿದ್ದ ಗಾಂಧೀಜಿಯವರು ಸಾರ್ವಜನಿಕರನ್ನು ಉದ್ದೇಶಿಸಿದ ಭಾಷಣ ಮಾಡಿದ್ದರು. ಸ್ವಾತಂತ್ರ್ಯ-ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಿದ್ದರು. ಬಾಪುವಿನ ಭೇಟಿ ವೇಳೆ ಬೆಟಗೇರಿಯ ಜನತೆ ಅಭೂತಪೂರ್ವಕವಾಗಿ ಬರಮಾಡಿಕೊಂಡಿದ್ದರಂತೆ. ನೂರಾರು ಯುವಜನರು ಅವರನ್ನು ಭೇಟಿಯಾಗಿ ಅವರ ಮಾತು ಕೇಳಲು ಉತ್ಸಾಹದಿಂದ ಬಂದಿದ್ದರು. ಗಾಂಧೀಜಿ ಎಲ್ಲ ವಲಯದ ಜನರನ್ನು ಮಾತನಾಡಿಸಿ ಸ್ವಾತಂತ್ರ‍್ಯ ಚಳವಳಿಯ ಕಾವು ಹೆಚ್ಚಿಸಿದ್ದರು. ಗಾಂಧೀಜಿ ಭೇಟಿಯ ನಂತರ, ಅವರಿಂದ ಪ್ರೇರಣೆ ಪಡೆದು, ಜಿಲ್ಲೆಯಲ್ಲಿ ಸಾಕಷ್ಟು ಜನರು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು.

ಐತಿಹಾಸಿಕ ದಿನದಂದು ಸಬರಮತಿ ಆಶ್ರಮ ಲೋಕಾರ್ಪಣೆ:

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ನಿರ್ಮಾಣಗೊಂಡ "ಸಬರಿಮತಿ ಆಶ್ರಮದ ಪ್ರತಿಕೃತಿ ಕಟ್ಟಡ ಲೋಕಾರ್ಪಣೆಯು ಗಾಂಧೀಜಿಯವರ ಗದಗ ಜಿಲ್ಲೆಗೆ ಕಾಲಿಟ್ಟು ನೂರು ವರ್ಷ ಪೂರೈಸುವ ನ.೧೧ ರ ಬುಧವಾರ ಬೆಳಗ್ಗೆ ೧೧ ಕ್ಕೆ ನೆರವೇರಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಲೋಕಾರ್ಪಣೆಗೊಳಿಸಿದರು. ಸಚಿವ ಸಿ.ಸಿ.ಪಾಟೀಲ, ಸಂಸದ ಶಿವಕುಮಾರ ಉದಾಶಿ, ಕಳಕಪ್ಪ ಬಂಡಿ, ಹೆಚ್.ಕೆ.ಪಾಟೀಲ, ರಾಮಣ್ಣ ಲಮಾಣಿ ಉಪಸ್ಥಿತರಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com