ವಿದ್ಯುಚಕ್ತಿ ದರವನ್ನು ವೈಜ್ಞಾನಿಕವಾಗಿ ಹೇಗೆ ಇಳಿಸಬಹುದೆಂಬ ಸಲಹೆ ನೀಡಲು ಸಿದ್ಧನಿದ್ದೇನೆ - ಸಿದ್ದರಾಮಯ್ಯ

ರಾಜ್ಯದಲ್ಲಿ ಸುಮಾರು 150 ರಿಂದ 200 ಮಿಲಿಯನ್ ಯುನಿಟ್‌ಗಳಷ್ಟು ವಿದ್ಯುಚ್ಛಕ್ತಿ ಗೆ ಬೇಡಿಕೆ ಇದೆ. ಇದರ ಎರಡರಷ್ಟು ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ
ವಿದ್ಯುಚಕ್ತಿ ದರವನ್ನು ವೈಜ್ಞಾನಿಕವಾಗಿ ಹೇಗೆ ಇಳಿಸಬಹುದೆಂಬ ಸಲಹೆ ನೀಡಲು ಸಿದ್ಧನಿದ್ದೇನೆ - ಸಿದ್ದರಾಮಯ್ಯ

ರಾಜ್ಯ ಸರ್ಕಾರ ವಿದ್ಯುತ್ ದರವನ್ನು ಏರಿಕೆ ಮಾಡಿರುವುದನ್ನು ವಿರೋಧಿಸಿರುವ ಸಿದ್ದರಾಮಯ್ಯ, ಕರೋನಾ ಸೋಂಕಿನಿಂದಾಗಿ ಸಂಕಷ್ಟಕ್ಕೀಡಾಗಿರುವ ರಾಜ್ಯದ ಜನರ ಗಾಯದ ಮೇಲೆ ಬರೆ ಎಳೆದಿದೆ. ಉದ್ಯೋಗಗಳನ್ನು ಕಳೆದುಕೊಂಡು ಆದಾಯವಿಲ್ಲದೆ ಜೀವನ ನಿರ್ವಹಣೆಗಾಗಿ ಪರದಾಡುತ್ತಿರುವ ಜನರಿಗೆ ನೆರವಾಗಬೇಕಾಗಿದ್ದ ಸರ್ಕಾರ ವಿದ್ಯುತ್ ದರ ಹೆಚ್ಚಿಸಿ ಅವರನ್ನು ಇನ್ನಷ್ಟು ಕಷ್ಟಕ್ಕೆ ನೂಕಿದೆ ಎಂದು ಹೇಳಿದ್ದಾರೆ.

ನಮ್ಮದೇ ವಿದ್ಯುತ್ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಿ ಕೇಂದ್ರದಿಂದ ಅಧಿಕ ದರದಲ್ಲಿ ವಿದ್ಯುತ್ ಖರೀದಿಸಿ ನಷ್ಟದ ಲೆಕ್ಕ ತೋರಿಸುತ್ತಿರುವ ರಾಜ್ಯ ಸರ್ಕಾರದ ಈ ಕಸರತ್ತಿನ ಹಿಂದೆ ಭ್ರಷ್ಟಾಚಾರದ ವಾಸನೆ ಬರತೊಡಗಿದೆ. ಬಿಜೆಪಿ ಸರ್ಕಾರದ ಹಿಂದಿನ ಅವಧಿಯಲ್ಲಿಯ ವಿದ್ಯುತ್ ಖರೀದಿಯ ಹಗರಣವನ್ನು ಜನ ನೆನಪು ಮಾಡಿಕೊಳ್ಳುವಂತಾಗಿದೆ. ನಮ್ಮ ಸರ್ಕಾರದ ಪ್ರಗತಿಪರ ವಿದ್ಯುತ್ ನೀತಿಯಿಂದಾಗಿ ರಾಜ್ಯ ವಿದ್ಯುತ್ ಉತ್ಪಾದನೆಯಲ್ಲಿ ಸ್ವಾವಲಂಬನೆಯನ್ನು ಸಾಧಿಸಿತ್ತು. ಬೇರೆ ರಾಜ್ಯಗಳು ಮತ್ತು ಕೇಂದ್ರ ಸರ್ಕಾರದ ಬಳಿ ವಿದ್ಯುತ್ ಗಾಗಿ ಮೊರೆ ಇಡುತ್ತಿದ್ದ ನಾವು ಇಂದು ಹೆಚ್ಚುವರಿ ವಿದ್ಯುತನ್ನು ಮಾರಾಟ ಮಾಡುವ ಸುಭದ್ರ ಸ್ಥಿತಿಯಲ್ಲಿದ್ದೇವೆ. ಹೀಗಿದ್ದರೂ ಯಾಕೆ ದರ ಏರಿಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ರಾಯಚೂರಿನ ಆರ್ ಟಿಪಿಎಸ್ ನಲ್ಲಿ ಉತ್ಪಾದನೆ ಸ್ಥಗಿತಗೊಳಿಸಲಾಗಿದೆ. ಖಾಸಗಿ ಕಂಪೆನಿಗಳು ಕಲ್ಲಿದ್ದಲು ಆಧಾರಿತ ವಿದ್ಯುತ್ ಉತ್ಪಾದನೆ ಹೆಚ್ಚಿಸಿವೆ. ಯಥೇಚ್ಚವಾಗಿ ಸೌರ ಮತ್ತು ಪವನ ವಿದ್ಯುತ್ ಕೂಡಾ ಲಭ್ಯ ಇದೆ. ಹೀಗಿದ್ದರೂ ಯುನಿಟ್ ಗೆ 50 ಪೈಸೆ ಹೆಚ್ಚು ನೀಡಿ ವಿದ್ಯುತ್ ಖರೀದಿಸುತ್ತಿರುವುದು ಯಾಕೆ? ಅನಗತ್ಯ ವಿದ್ಯುತ್ ಖರೀದಿಸಲು ಕೇಂದ್ರಕ್ಕೆ ರಾಜ್ಯ ಸರ್ಕಾರ ವಾರ್ಷಿಕ ಐದರಿಂದ ಆರು ಸಾವಿರ ಕೋಟಿ ನೀಡುತ್ತಿದೆ. ವಿದ್ಯುತ್ ಕೊರತೆ ಇದ್ದರೆ ರಾಯಚೂರಿನ ಆರ್ ಟಿಪಿಎಸ್ ಸ್ಥಾವರದಲ್ಲಿ ಉತ್ಪಾದನೆ ಶುರುಮಾಡಬಹುದಿತ್ತು. ಇದರಿಂದ ಹೆಚ್ಚುವರಿ ವಿದ್ಯುತ್ ಮಾರಾಟ ಮಾಡಲೂ ಅವಕಾಶ ಇತ್ತು. ವಿದ್ಯುತ್ ಖರೀದಿಗೆ ಯಾಕೆ ಇಷ್ಟು ಆಸಕ್ತಿ? ಎಂದು ಸಿದ್ದರಾಮಯ್ಯ ಕೇಳಿದ್ದಾರೆ.

ಕರೋನಾ ಪರಿಣಾಮದಿಂದಾಗಿ ಉದ್ಯಮ-ವ್ಯಾಪಾರಗಳು ನಷ್ಟದಲ್ಲಿರುವಾಗ ವಿದ್ಯುತ್ ದರವನ್ನು ಕಡಿಮೆಗೊಳಿಸಿ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಬೇಕಾಗಿದ್ದ ಸರ್ಕಾರ, ವಿವೇಚನಾರಹಿತವಾಗಿ ವಿದ್ಯುತ್ ದರ ಏರಿಸಿರುವುದು ಮೂರ್ಖ ತೀರ್ಮಾನ. ರಾಜ್ಯದಲ್ಲಿ ಸುಮಾರು 150 ರಿಂದ 200 ಮಿಲಿಯನ್ ಯುನಿಟ್‌ಗಳಷ್ಟು ವಿದ್ಯುಚ್ಛಕ್ತಿ ಗೆ ಬೇಡಿಕೆ ಇದೆ. ಇದರ ಎರಡರಷ್ಟು ವಿದ್ಯುತ್ ಉತ್ಪಾದನೆ ಮಾಡುವ ಸಾಮರ್ಥ್ಯ ನಮ್ಮ ರಾಜ್ಯಕ್ಕಿದೆ. ಇದರಲ್ಲಿ ಶೇ.40 ರಿಂದ 50 ರಷ್ಟು ನವೀಕರಿಸಬಹುದಾದ ಇಂಧನ ಮೂಲಗಳಾದ ಸೌರ ಮತ್ತು ಪವನ ವಿದ್ಯುತ್ ಮೂಲಗಳಿಂದ ಉತ್ಪಾದನೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಜಿ.ಎಸ್.ಟಿ, ನೋಟ್ ಬ್ಯಾನ್ ಮತ್ತು ಕರೋನಾ ಸಂಕಷ್ಟಗಳಿಂದ ನಲುಗಿರುವ ಕೈಗಾರಿಕೆಗಳು, ವಾಣಿಜ್ಯೋದ್ಯಮಗಳು ಮತ್ತು ಜನರ ಮೇಲೆ ವಿದ್ಯುತ್ ದರ ಏರಿಕೆಯ ಹೊರೆಯನ್ನು ಹೊರಿಸದೆ, ಇನ್ನಷ್ಟು ಇಳಿಸಿ ಆರ್ಥಿಕತೆಗೆ ಚೈತನ್ಯ ನೀಡಬೇಕೆಂದು ಆಗ್ರಹಿಸಿದ ಸಿದ್ದರಾಮಯ್ಯ, ವಿದ್ಯುಚಕ್ತಿ ದರವನ್ನು ವೈಜ್ಞಾನಿಕವಾಗಿ ಹೇಗೆ ಇಳಿಸಬಹುದೆಂಬ ಬಗ್ಗೆ ಸರ್ಕಾರ ಬಯಸಿದರೆ ಸಲಹೆ ನೀಡಲು ಸಿದ್ಧನಿದ್ದೇನೆ ಎಂದಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com