ಲವ್‌ ಜಿಹಾದ್‌ ತಡೆಗೆ ಕಾನೂನು ಜಾರಿ; ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ

ಸಂಬಂಧಪಟ್ಟ ಅಧಿಕಾರಿಗಳಲ್ಲಿ ಹಾಗೂ ಪಕ್ಷದ ಮುಖಂಡರಲ್ಲಿ ಚರ್ಚಿಸಿ ಲವ್‌ ಜಿಹಾದ್‌ ನಿಷೇಧ ಕಾನೂನು ಜಾರಿಗೆ ತರುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅರವಿಂದ ಲಿಂಬಾವಳಿ ತಿಳಿಸಿದ್ದಾರೆ.
ಲವ್‌ ಜಿಹಾದ್‌ ತಡೆಗೆ ಕಾನೂನು ಜಾರಿ; ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿ ಒಮ್ಮತದ ನಿರ್ಧಾರ

ಲವ್‌ ಜಿಹಾದ್‌ ಕುರಿತಾಗಿ ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್‌ ಸರ್ಕಾರ ಕಾನೂನು ತರಲು ಯೋಜನೆ ರೂಪಿಸಿದ ನಂತರ ಕರ್ನಾಟಕದಲ್ಲಿಯೂ ಇದೇ ಕೂಗು ಜೋರಾಗಿ ಕೇಳಿ ಬರುತ್ತಿದೆ. ಸಚಿವ ಸಿ ಟಿ ರವಿ, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವು ನಾಯಕರು ಲವ್‌ ಜಿಹಾದ್‌ ತಡೆಗೆ ಕಾನೂನು ಜಾಋಿಗೊಳಿಸಬೇಕೆಂದು ಒತ್ತಾಯಿಸುತ್ತಿದ್ದಾರೆ.

ಬಿಜೆಪಿ ಕೋರ್‌ ಕಮಿಟಿ ಸಭೆಯಲ್ಲಿಯೂ ಈ ಮಾತು ಪ್ರಸ್ತಾಪವಾಗಿದ್ದು, ಕೋರ್‌ ಕಮಿಟಿಯ ಎಲ್ಲಾ ಸದಸ್ಯರು ಲವ್‌ ಜಿಹಾದ್‌ ತಡೆಗೆ ಕಾನೂನು ಜಾರಿಗೊಳಿಸಬೇಕೆಂದು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಭೆಯ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯ ಘಟಕ್‌ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಅವರು, ಮದುವೆಗಳಿಗಾಗಿ ಮತಾಂತರಗೊಳ್ಳುವುದನ್ನು ನಿಷೇಧಿಸಲು ರಾಜ್ಯದಲ್ಲಿ ಕಠಿಣ ಕಾನೂನು ತರುವ ಅಗತ್ಯವಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳಲ್ಲಿ ಹಾಗೂ ಪಕ್ಷದ ಮುಖಂಡರಲ್ಲಿ ಚರ್ಚಿಸಿ ಈ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಇನ್ನು ಗೋಹತ್ಯೆ ನಿಷೇಧ ಕಾಯ್ದೆ ಕುರಿತಾಗಿಯೂ ಚರ್ಚೆ ನಡೆದಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವಿದ್ದಾಗ ನಿರ್ಲಕ್ಷಿಸಲಾಗಿದ್ದ ಗೋ ಹತ್ಯೆ ನಿಷೇಧ ಕಾನೂನನ್ನು ಮತ್ತೆ ಜಾರಿಗೆ ತರಲು ಚಿಂತಿಸಲಾಗಿದೆ. ಪ್ರಸ್ತುತ ವಿದ್ಯಾಮಾನಗಳನ್ನು ಗಮನದಲ್ಲಿಟ್ಟುಕೊಂಡು ಈ ಕಾನೂನು ಜಾರಿಗೆ ತರುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಲಿಂಬಾವಳಿ ಅವರು ಹೇಳಿದ್ದಾರೆ.

ಅಶೋಕ್‌ ಗಸ್ತಿ ಅವರ ಮರಣದಿಂದಾಗಿ ತೆರವಾಗಿರುವ ರಾಜ್ಯಸಭಾ ಸ್ಥಾನಕ್ಕೆ ಡಿಸೆಂಬರ್‌ 1ರಂದು ನಡೆಯಲಿರುವ ಚುನಾವಣೆಯ ಕುರಿತು ಕೂಡ ಚರ್ಚೆ ನಡೆಸಲಾಗಿದ್ದು, “ರಾಜ್ಯದಿಂದ 3-4 ಆಕಾಂಕ್ಷಿಗಳ ಹೆಸರನ್ನು ಬಿಜೆಪಿ ಹೈಕಮಾಂಡ್‌ಗೆ ನೀಡಲಾಗುವುದು. ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಆಕಾಂಕ್ಷಿಗಳ ಹೆಸರನ್ನು ಅಂತಿಮಗೊಳಿಸಲಾಗುವುದು. ಚುನಾವಣೆಗೆ ಸ್ಪರ್ಧಿಸುವವರ ಹೆಸರನ್ನು ಬಿಜೆಪಿಯ ಚುನಾವಣಾ ಸಮಿತಿಯು ನಿರ್ಧರಿಸಲಿದೆ,” ಅರವಿಂದ ಲಿಂಬಾವಳಿ ಮಾಹಿತಿ ನೀಡಿದ್ದಾರೆ.

ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕುರಿತಾಗಿಯೂ ಮಾತನಾಡಿರುವ ಲಿಂಬಾವಳಿ ಅವರು, “ಮುಂದಿನ ಎರಡುವರೆ ವರ್ಷಗಳಿಗೆ ಯಡಿಯೂರಪ್ಪ ಅವರೇ ನಮ್ಮ ಮುಖ್ಯಮಂತ್ರಿಗಳಾಗಿರುತ್ತಾರೆ. ಸದ್ಯಕ್ಕೆ ನಾಯಕತ್ವ ಬದಲಾವಣೆಯ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಸಿದ್ದರಾಮಯ್ಯನವರ ಹೇಳಿಕೆ ಅವರ ಕಲ್ಪನೆಯ ಒಂದು ಭಾಗವಷ್ಟೇ. ಪಕ್ಷದ ವಿಚಾರಕ್ಕೆ ಬಂದರೆ, ನಳಿನ್‌ ಕುಮಾರ್‌ ಕಟೀಲ್‌ ಅವರು ನಮ್ಮ ಅಧ್ಯಕ್ಷರಾಗಿರುತ್ತಾರೆ,” ಎಂದವರು ಹೇಳಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com