ರಾಜಕೀಯ ಪ್ರತಿಷ್ಠೆಯ ಸಂಘರ್ಷವಾಗಿ ಬದಲಾಯಿತೆ ಸಿಗಂದೂರು ವಿವಾದ?

ಅಂತಿಮವಾಗಿ ರಾಜಕೀಯ ನಾಯಕರ ಪರಸ್ಪರ ಸವಾಲು- ಪ್ರತಿ ಸವಾಲು, ಹೇಳಿಕೆ- ಪ್ರತಿ ಹೇಳಿಕೆಗಳ ನಡುವೆ ಸಿಗಂದೂರು ದೇವಾಲಯದ ಆಡಳಿತ ಈಗಿನದಕ್ಕಿಂತ ಇನ್ನಷ್ಟು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು. ದೊಡ್ಡ ಮಟ್ಟದ ಹಣಕಾಸು ಮತ್ತು ಅಭಯಾರಣ್ಯ ಅರಣ್ಯ ಭೂಮಿ ಅಕ್ರಮಗಳೂ ಆಡಳಿತದ ಪಾಲಿಗೆ ತಿರುಗುಬಾಣವಾಗುವ ಸಾಧ್ಯತೆ ಇಲ್ಲದೇ ಇಲ್ಲ!
ರಾಜಕೀಯ ಪ್ರತಿಷ್ಠೆಯ ಸಂಘರ್ಷವಾಗಿ ಬದಲಾಯಿತೆ ಸಿಗಂದೂರು ವಿವಾದ?

ಸಿಗಂದೂರು ದೇವಾಲಯದ ಹುಂಡಿ ಕಾಸು ವರ್ಸಸ್ ತಟ್ಟೆಕಾಸು ನಡುವಿನ ಸಂಘರ್ಷ ಇದೀಗ ಮಲೆನಾಡಿನ ಎರಡು ಪ್ರಮುಖ ಸಮುದಾಯ ಮತ್ತು ಎರಡು ರಾಜಕೀಯ ಶಕ್ತಿಗಳ ನಡುವಿನ ಸಂಘರ್ಷವಾಗಿ ಬದಲಾಗಿದೆ.

ದೇವಾಲಯದ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವಿನ ದೇವಾಲಯದ ಹಣಕಾಸಿನ ಹಂಚಿಕೆಯ ವಿವಾದ ಹಾದಿಬೀದಿ ರಂಪಾಟವಾಗಿ, ಪರಸ್ಪರರ ವಿರುದ್ಧ ದೂರು- ಪ್ರತಿ ದೂರು, ದೇವಾಲಯದಲ್ಲೇ ಮಾರಾಮಾರಿಗಳು ನಡೆದು ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳು ಅಕ್ಟೋಬರ್ ಮೂರನೇ ವಾರ ದೇವಾಲಯ ಆಡಳಿತ ಉಸ್ತುವಾರಿಗೆ ಸಮಿತಿ ರಚಿಸಿದ್ದರು. ಕಳೆದ ವಾರ ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ ನೇತೃತ್ವದಲ್ಲಿ ನಡೆದ ಆ ಸಮಿತಿಯ ಮೊದಲ ಸಭೆಯಲ್ಲಿ ದೇವಾಲಯ ಉಸ್ತುವಾರಿಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ, ಅಲ್ಲಿನ ಹಣಕಾಸು ಮತ್ತು ಕಾಣಿಕೆ ವಸ್ತುಗಳು ಸೇರಿದಂತೆ ಎಲ್ಲಾ ವ್ಯವಹಾರಿಕ ವಿಷಯಗಳನ್ನೂ ನಿರ್ವಹಿಸಲು ಅಧಿಕೃತವಾಗಿ ಒಪ್ಪಿಗೆ ನೀಡಲಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆ ಮೂಲಕ ದೇವಾಲಯದ ಆಡಳಿತ ದಶಕಗಳ ಬಳಿಕ ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಆರ್ಚಕ ಶೇಷಗಿರಿ ಭಟ್ ಅವರ ಕೈತಪ್ಪಿತ್ತು. ಶಿವಮೊಗ್ಗದಲ್ಲಿ ನಡೆದ ಆ ಸಭೆಯಲ್ಲಿ ಇದ್ದ ಈ ಇಬ್ಬರು ಸಭೆಯ ನಿರ್ಣಯದ ವೇಳೆ ಅವಡುಗಚ್ಚಿ ಕೂತಿದ್ದರು. ಆದರೆ, ಮಾರನೇ ದಿನವೇ ಧರ್ಮದರ್ಶಿಗಳು ತಮ್ಮ ಸಮುದಾಯದ ಕಾರ್ಯಕ್ರಮವೊಂದರಲ್ಲಿ ದೇವಾಲಯವನ್ನು ಜಿಲ್ಲಾಡಳಿತ ತಮ್ಮಿಂದ ಕಿತ್ತುಕೊಂಡಿದೆ. ಸಮುದಾಯದ ದೇವಾಲಯವನ್ನು ಉಳಿಸಿಕೊಳ್ಳಲು ಹೋರಾಟಕ್ಕಿಳಿಯಬೇಕು. ಸಮುದಾಯದ ಶಕ್ತಿ ಏನೆಂದು ತೋರಿಸಬೇಕು. ಹೋರಾಟಕ್ಕೆ ಬಲ ತುಂಬಲು ಏನೆಲ್ಲೋ ಬೇಕೋ ಅದೆಲ್ಲವನ್ನೂ ಮಾಡುವುದಾಗಿ ಘೋಷಿಸಿದ್ದರು. ಆ ಮೂಲಕ ಜಿಲ್ಲಾಡಳಿತದ ವಿರುದ್ಧ ಮೊದಲ ಬಾರಿ ಆಕ್ರೋಶ ಹೊರಹಾಕಿದ್ದರು.

ರಾಜಕೀಯ ಪ್ರತಿಷ್ಠೆಯ ಸಂಘರ್ಷವಾಗಿ ಬದಲಾಯಿತೆ ಸಿಗಂದೂರು ವಿವಾದ?
ಸಿಗಂದೂರು ಉಸ್ತುವಾರಿಗೆ ಡಿಸಿ ಸಮಿತಿ: ಪರಿಸರ ಧ್ವಂಸಕ್ಕೂ ಬೀಳಬೇಕಿದೆ ಬ್ರೇಕ್!

ಆ ಬಳಿಕ ಈಡಿಗ ಸಮುದಾಯದ ಹಿರಿಯ ನಾಯಕ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಿದ ಸಮುದಾಯದ ಮುಖಂಡರು ದೇವಾಲಯವನ್ನು ಸರ್ಕಾರ ಜಿಲ್ಲಾಧಿಕಾರಿಗಳ ಉಸ್ತುವಾರಿಗೆ ವಹಿಸಿರುವುದು ಸರಿಯಲ್ಲ. ಕೂಡಲೇ ವಾಪಸು ಧರ್ಮದರ್ಶಿಗಳಿಗೆ ನೀಡದೇಹೋದರೆ ಸಮುದಾಯ ಬೀದಿಗಿಳಿದ ಹೋರಾಟ ನಡೆಸಲಿದೆ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದ್ದರು. ಅದರ ಬೆನ್ನಲ್ಲೇ ಮಾಧ್ಯಮಗಳಿಗೆ ಸರಣಿ ಹೇಳಿಕೆ ನೀಡಿದ ಸಾಗರದ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ , ಜಿಲ್ಲಾಧಿಕಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ದೇವಾಸ್ಥಾನದಲ್ಲಿ ಎರಡು ಗುಂಪು ನಡುವೆ ಜಗಳವಾದ ಕೂಡಲೇ ಎಲ್ಲಾ ದೇವಾಲಯಗಳನ್ನೂ, ಮಠಗಳನ್ನೂ ಸರ್ಕಾರ ತನ್ನ ವಶಕ್ಕೆ ಪಡೆದಿದೆಯೇ? ನಮ್ಮ ಸಮುದಾಯದ ಸಂಘಟನೆಯನ್ನು ಅಘೋಷಿತ ಸಂಘಟನೆ ಎಂದು ಜಿಲ್ಲಾಧಿಕಾರಿಗಳು ಅವಮಾನಿಸಿದ್ದಾರೆ. ಶಾಸಕ ಹರತಾಳು ಹಾಲಪ್ಪ, ಸುಡಗಾಡು ಸಂಘ ಎಂದು ನಿಂದಿಸಿದ್ದಾರೆ. ರಾಜ್ಯದಲ್ಲಿ 55 ಲಕ್ಷ ಜನಸಂಖ್ಯೆ ಇರುವ ಒಂದು ಸಮುದಾಯದ ಜಾತಿ ಸಂಘಟನೆಯನ್ನು ಅಘೋಷಿತ ಸಂಘಟನೆ ಎನ್ನುವುದು ಸರಿಯೇ? ಕೂಡಲೇ ಸಮಿತಿ ರದ್ದುಪಡಿಸಿ ದೇವಾಲಯವನ್ನು ಸಮುದಾಯದ ರಾಮಪ್ಪ ಅವರ ಸುಪರ್ದಿಗೆ ವಹಿಸದೇ ಹೋದರೆ, 25 ಸಾವಿರ ಮಂದಿಯನ್ನು ಸೇರಿಸಿ ದೊಡ್ಡ ಹೋರಾಟ ನಡೆಸಲಾಗುವುದು ಎಂದು ಹೇಳಿದ್ದಾರೆ.

ಈ ನಡುವೆ, ಸೊರಬದ ಮಾಜಿ ಶಾಸಕ ಮಧು ಬಂಗಾರಪ್ಪ ಕೂಡ ಸಾಗರ ಶಾಸಕ ಹರತಾಳು ಹಾಲಪ್ಪ ವಿರುದ್ಧ ಟೀಕೆ ಮಾಡಿದ್ದು, ದೇವಾಲಯದ ವಿಷಯದಲ್ಲಿ ಅವರು ಸಮುದಾಯದ ಪರ ನಿಂತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿವಾದದ ಆರಂಭದಲ್ಲಿ ದೇವಾಲಯ ಮುಜರಾಯಿಗೆ ವಹಿಸಬೇಕು ಎಂದು ಮೊಟ್ಟಮೊದಲ ಬಾರಿಗೆ ಸರ್ಕಾರದ ಹಸ್ತಕ್ಷೇಪದ ಕುರಿತ ಚರ್ಚೆ ಹುಟ್ಟುಹಾಕಿದ್ದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಕೂಡ ಈಗ ತಮ್ಮದೇ ಹೇಳಿಕೆಯ ತದ್ವಿರುದ್ಧ ದಿಕ್ಕಿನಲ್ಲಿ ಬಹಿರಂಗ ಹೇಳಿಕೆ ಕರೆ ನೀಡಿದ್ದಾರೆ.

ಅದೇ ಹೊತ್ತಿಗೆ ದೇವಾಲಯದ ಹುಂಡಿ ಕಾಸು, ಕಾಣಿಕೆ ಮತ್ತು ತಟ್ಟೆಕಾಸು, ಪೂಜಾ ಸೇವಾ ಹಣಕಾಸಿನ ವಿಷಯದಲ್ಲಿ ಈಡಿಗ ಸಮುದಾಯದ ಧರ್ಮದರ್ಶಿ ರಾಮಪ್ಪ ಮತ್ತು ಹವ್ಯಕ ಬ್ರಾಹ್ಮಣ ಸಮುದಾಯದ ಪ್ರಧಾನ ಅರ್ಚಕ ಶೇಷಗಿರಿ ಭಟ್ ನಡುವಿನ ವೈಯಕ್ತಿಕ ವಿವಾದವನ್ನು ಆಯಾ ಸಮುದಾಯಗಳ ನಡುವಿನ ಸಂಘರ್ಷ, ಒಂದು ಸಮುದಾಯ ಮತ್ತೊಂದು ಸಮುದಾಯಕ್ಕೆ ಬಗೆಯುತ್ತಿರುವ ದ್ರೋಹ, ದಬ್ಬಾಳಿಕೆ ಎಂದು ಬಿಂಬಿಸುವ ಪ್ರಯತ್ನಗಳು ಬಿರುಸುಗೊಂಡಿವೆ. ಆದರೆ, ಹಾಗೆ ಹೇಳುವ ಮಂದಿ ದೇವಾಲಯವನ್ನು ಯಾವುದೇ ಸಮುದಾಯದ ಆಸ್ತಿಯಾಗಿ ಮಾಡಲು ಮಾತ್ರ ಸಿದ್ಧರಿಲ್ಲ. ಬದಲಾಗಿ ಸಮುದಾಯದ ಹೆಸರಿನಲ್ಲಿ ಈ ಹಿಂದಿನಂತೆಯೇ ವ್ಯಕ್ತಿಗಳ ಒಡೆತನಕ್ಕೆ ದೇವಾಲಯವನ್ನು ವಹಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ರಾಜಕೀಯ ಪ್ರತಿಷ್ಠೆಯ ಸಂಘರ್ಷವಾಗಿ ಬದಲಾಯಿತೆ ಸಿಗಂದೂರು ವಿವಾದ?
ಸಿಗಂದೂರು ಉಸ್ತುವಾರಿಗೆ ಡಿಸಿ ಸಮಿತಿ: ಪರಿಸರ ಧ್ವಂಸಕ್ಕೂ ಬೀಳಬೇಕಿದೆ ಬ್ರೇಕ್!

ಈ ನಡುವೆ; ಜಾತಿ ಸಂಘರ್ಷದ ಆಯಾಮಕ್ಕೆ ಮತ್ತೊಂದು ಹಿನ್ನಡೆಯ ಸಂಗತಿ ಎಂದರೆ; ಒಂದು ಕಡೆ, ಸ್ವತಃ ದೇವಾಲಯ ತಮ್ಮ ಮನೆತನಕ್ಕೆ ಸೇರಿದ್ದು ಎನ್ನುತ್ತಿರುವ ಮತ್ತು ಸಂಬಂಧದಲ್ಲಿ ಧರ್ಮದರ್ಶಿಗಳಿಗೆ ಸೋದರಳಿಯ ಆಗಿರುವ ಶಾಸಕ ಹರತಾಳು ಹಾಲಪ್ಪ ಕೂಡ ದೇವಾಲಯದ ಅವ್ಯವಹಾರಗಳ ಬಗ್ಗೆ, ಹಣಕಾಸಿನ ಅಕ್ರಮಗಳ ಬಗ್ಗೆ ಮಾತನಾಡಿದ್ದಾರೆ ಮತ್ತು ಸ್ವತಃ ಜಿಲ್ಲಾಧಿಕಾರಿ ಸಮಿತಿ ಉಸ್ತುವಾರಿಯನ್ನು ಸಭೆಯಲ್ಲಿ ಭಾಗವಹಿಸಿ ಅಧಿಕೃತವಾಗಿ ಬೆಂಬಲಿಸಿದ್ದಾರೆ. ಮತ್ತೊಂದು ದೇವಾಲಯದ ಧರ್ಮದರ್ಶಿಗಳು ಮತ್ತು ಮಲೆನಾಡಿನ ಪ್ರಭಾವಿ ಹವ್ಯಕ ಮಠಾಧೀಶರ ಪೂರ್ವಾಶ್ರಮದ ತಂದೆಯ ನಡುವಿನ ಆಪ್ತತೆತೆ ಮತ್ತು ಈಗಲೂ ಅವರಿಬ್ಬರ ನಡುವೆ ವಿವಾದದ ವಿಷಯದಲ್ಲಿ ಸಲಹೆ, ಮಾರ್ಗದರ್ಶನ ನಡೆಯುತ್ತಿದೆ ಎಂಬ ಮಾತುಗಳು ಈ ಜಾತಿ ಸಂಘರ್ಷ, ದಬ್ಬಾಳಿಕೆಯ ವಾದದ ಕುರಿತು ಸಾರ್ವಜನಿಕ ಚರ್ಚೆಗೆ ಗ್ರಾಸ ಒದಗಿಸಿವೆ.

ಜಾತಿ ಸಂಘರ್ಷದ ಜೊತೆಗೆ ವಿವಾದ ಈಗ ಮತ್ತೊಂದು ಮಜಲು ಪಡೆದುಕೊಂಡಿದ್ದು, ಮಲೆನಾಡಿನ ಎರಡು ಪ್ರಬಲ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ರಾಜಕೀಯ ಸಂಘರ್ಷವಾಗಿಯೂ ಹೊರಹೊಮ್ಮುತ್ತಿದೆ. ಈವರೆಗೆ ಬಹುತೇಕ ವಿವಾದದ ವಿಷಯದಲ್ಲಿ ಮೌನವಾಗಿದ್ದ ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮತ್ತು ಮಧು ಬಂಗಾರಪ್ಪ ಅವರೊಂದಿಗೆ ವಿವಾದದ ಕುರಿತು ಪರಸ್ಪರ ತದ್ವಿರುದ್ಧ ಹೇಳಿಕೆಗಳನ್ನು ನೀಡಿದ್ದ ಕಾಗೋಡು ತಿಮ್ಮಪ್ಪ ದೇವಾಲಯ ಧರ್ಮದರ್ಶಿಯವರ ಉಸ್ತುವಾರಿಗೆ ವಾಪಸ್ಸಾಗಬೇಕು ಎಂಬ ಗುಂಪಿನ ನೇತೃತ್ವ ವಹಿಸಿದ್ದಾರೆ. ಹಾಗಾಗಿ ಸಾಗರ ಮತ್ತು ಸೊರಬ ಕ್ಷೇತ್ರಗಳ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಒಂದು ಗುಂಪಿನ ಪರವಾಗಿದ್ದಾರೆ ಎಂಬ ಚಿತ್ರಣ ಸಿಗುತ್ತಿದೆ. ಮತ್ತೊಂದು ಕಡೆ; ಬಿಜೆಪಿ ಶಾಸಕರಾಗಿರುವ ಅದೇ ಸಮುದಾಯದ ಹಾಲಪ್ಪ ಮತ್ತು ಸೊರಬದ ಕುಮಾರ್ ಬಂಗಾರಪ್ಪ ಸರ್ಕಾರದ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಜೊತೆಗೆ ಮುಖ್ಯಮಂತ್ರಿಯವರ ಆಪ್ತರಾದ ಮಲೆನಾಡು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗುರುಮೂರ್ತಿ ಹಾಗೂ ಸ್ವತಃ ಸಿಎಂ ಪುತ್ರ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರು ಜಿಲ್ಲಾಡಳಿತ ಮತ್ತು ಸರ್ಕಾರದ ನಡೆಯನ್ನು ಬೆಂಬಲಿಸಿದ್ದಾರೆ.

ರಾಜಕೀಯ ಪ್ರತಿಷ್ಠೆಯ ಸಂಘರ್ಷವಾಗಿ ಬದಲಾಯಿತೆ ಸಿಗಂದೂರು ವಿವಾದ?
ಸಿಗಂದೂರು ಚೌಡೇಶ್ವರಿ ಸನ್ನಿಧಿಯಲ್ಲಿ ತಟ್ಟೆಕಾಸಿನ ಬಿರುಗಾಳಿ!

ಹಾಗಾಗಿ, ಒಂದು ರೀತಿಯಲ್ಲಿ ಈ ವಿವಾದ ಜಿಲ್ಲೆಯ ಎರಡು ಪ್ರಬಲ ರಾಜಕೀಯ ಪಕ್ಷಗಳ ನಡುವಿನ ಸಂಘರ್ಷದ ಸ್ವರೂಪ ಪಡೆಯುತ್ತಿದೆ. ಈ ನಡುವೆ, ಸಾಗರ ಮತ್ತು ಸೊರಬ ವಿಧಾನಸಭಾ ಕ್ಷೇತ್ರಗಳ ರಾಜಕಾರಣದಲ್ಲಿ ದೇವಾಲಯದ ಆಡಳಿತ ಇತ್ತೀಚಿನ ಚುನಾವಣಾ ರಾಜಕಾರಣದಲ್ಲಿ ಹಸ್ತಕ್ಷೇಪ ನಡೆಸಿದ ಹಿನ್ನೆಲೆಯಲ್ಲಿ ಈ ಇಡೀ ವಿವಾದ ಭುಗಿಲೆದ್ದಿದೆ. ಇಲ್ಲವಾದಲ್ಲಿ ಬಹುಶಃ ಇತ್ತೀಚಿನ ವರ್ಷಗಳಲ್ಲಿ ಧರ್ಮದರ್ಶಿಗಳು ಮತ್ತು ಪ್ರಧಾನ ಅರ್ಚಕರ ನಡುವಿನ ಹಣಕಾಸಿನ ಬಿಕ್ಕಟ್ಟಿನಂತೆಯೇ ಕೆಲ ದಿನಗಳ ಬಳಿಕ, ಕೆಲವು ಹೊಂದಾಣಿಕೆಯ ಮೂಲಕ ವಿವಾದ ತಾನೇತಾನಾಗಿ ಶಮನವಾಗುತ್ತಿತ್ತು. ಚುನಾವಣಾ ರಾಜಕಾರಣದಲ್ಲಿ ದೇವಾಲಯದ ಭಕ್ತರ ಕಾಣಿಕೆಯ ಹಣದ ಪ್ರಭಾವದಿಂದ ಸೋಲು-ಗೆಲುವು ಕಂಡವರು ಈಗ ಈ ಸಂದರ್ಭದಲ್ಲಿ ತಮ್ಮ ತಮ್ಮ ರಾಜಕೀಯ ಲಾಭ ಪಡೆಯಲು ಪೈಪೋಟಿಗಿಳಿದಿದ್ದಾರೆ. ಕೆಲವರಿಗೆ ತಮ್ಮ ಸೋಲಿನ ಹಿಂದೆ ಹುಂಡಿ ಹಣ ಕೆಲಸ ಮಾಡಿದ ಸೇಡಿದ್ದರೆ, ಮತ್ತೆ ಕೆಲವರಿಗೆ ಭವಿಷ್ಯದ ರಾಜಕೀಯಕ್ಕೆ ಅದೇ ಹುಂಡಿ ಹಣ ಅಡ್ಡಗಾಲಾಗುವ ಆತಂಕವಿದೆ. ಹಾಗಾಗಿ ದೇವಾಲಯದ ವಿವಾದಕ್ಕೂ, ಹುಂಡಿ ಹಣ ಮತಪೆಟ್ಟಿಗೆಗಳ ಮೇಲೆ ಪ್ರಭಾವ ಬೀರುವುದಕ್ಕೂ ಬಹಳಷ್ಟು ನಂಟಿದೆ ಎಂಬ ಮಾತೂ ಕೇಳಿಬರತೊಡಗಿದೆ.

ಆದರೆ, ಅಂತಿಮವಾಗಿ ರಾಜಕೀಯ ನಾಯಕರ ಪರಸ್ಪರ ಸವಾಲು- ಪ್ರತಿ ಸವಾಲು, ಹೇಳಿಕೆ- ಪ್ರತಿ ಹೇಳಿಕೆಗಳ ನಡುವೆ ಸಿಗಂದೂರು ದೇವಾಲಯದ ಆಡಳಿತ ಈಗಿನದಕ್ಕಿಂತ ಇನ್ನಷ್ಟು ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆಗಳನ್ನೂ ತಳ್ಳಿಹಾಕಲಾಗದು. ದೊಡ್ಡ ಮಟ್ಟದ ಹಣಕಾಸಿನ ವಿಷಯವಷ್ಟೇ ಅಲ್ಲದೆ, ಅಭಯಾರಣ್ಯ ಅರಣ್ಯ ಭೂಮಿ ಅಕ್ರಮಗಳೂ ಆಡಳಿತದ ಪಾಲಿಗೆ ತಿರುಗುಬಾಣವಾಗುವ ಸಾಧ್ಯತೆ ಇಲ್ಲದೇ ಇಲ್ಲ ಎಂಬ ಗುಸುಗುಸು ಕೂಡ ಉಭಯ ಗುಂಪುಗಳ ನಡುವೆ ಕೇಳಿಬರುತ್ತಿದೆ.

ಒಟ್ಟಾರೆ ದಿನದಿಂದ ದಿನಕ್ಕೆ ಸಿಗಂದೂರು ವಿವಾದ ಹೊಸ ಹೊಸ ಆಮಾಯಗಳನ್ನು ಪಡೆಯುತ್ತಿದ್ದು, ಭಕ್ತಿ, ಆರಾಧನೆ, ಉಪಾಸನೆಗೆ ಸುದ್ದಿಯಾಗಬೇಕಿದ್ದ ಯಾತ್ರಾ ಸ್ಥಳ, ಈಗ ರಾಜಕೀಯ ಮೇಲಾಟ, ಜಾತಿ-ಸಮುದಾಯ ಸಂಘರ್ಷ, ಸಾಲುಸಾಲು ಅಕ್ರಮಗಳಿಂದ ಸದ್ದು ಮಾಡತೊಡಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com