ಭ್ರಷ್ಟರ ನೀಚರ ಪರವಾಗಿ ಮತ ಕೇಳುವ ಪರಿಸ್ಥಿತಿ RSS ಸ್ವಯಂ ಸೇವಕರಿಗೆ ಬಂದಿದೆ - ಹನುಮೇಗೌಡ

ಸುಮಾರು 45 ವರ್ಷಗಳ ಕಾಲ RSSನ ಭಾಗವಾಗಿದ್ದ ಹನುಮೇಗೌಡ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ವಿರುದ್ದ ಕಿಡಿಕಾರಿದ್ದಾರೆ. ದೇಶ ಸೇವೆಯ ಹೆಸರಿನಲ್ಲಿ ಸ್ಥಾಪಿತವಾಗಿರುವ ಆರ್‌ಎಸ್‌ಎಸ್‌ ಸಂಘಟನೆಯ ಕಾರ್ಯಕರ್ತರು ಇಂದು ಬಿಜೆಪಿ ನಾಯಕರ ಆದೇಶದ ಕಾರಣದಿಂದ ನೀಚರ ಪರವಾಗಿ ಮತ ಯಾಚನೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅವರ ಮಾತಿನ ಸಾರಾಂಶ ಇಲ್ಲಿದೆ.
ಭ್ರಷ್ಟರ ನೀಚರ ಪರವಾಗಿ ಮತ ಕೇಳುವ ಪರಿಸ್ಥಿತಿ RSS ಸ್ವಯಂ ಸೇವಕರಿಗೆ ಬಂದಿದೆ - ಹನುಮೇಗೌಡ

ಕಾಂಗ್ರೆಸ್ ಗಿಂತಲೂ ಕೆಟ್ಟ ಜೀವನಶೈಲಿ ಬಿಜೆಪಿ ನಾಯಕರದ್ದಾಗಿದೆ. ಸಿಟಿ ರವಿಗೆ ಈ ಹಿಂದೆ ಸೀಟಿಗೂ ದುಡ್ಡಿರಲಿಲ್ಲ ಎಂದು ಹಳೆಯ ಸ್ವಯಂ ಸೇವಕರು ಹೇಳುತ್ತಿದ್ದರು. ಇವತ್ತು ಕೋಟಿ ರವಿ, ಲೂಟಿ ರವಿ ಆಗಿದ್ದಾರೆಂದು ಹೇಳುತ್ತಾರೆ.

ಶೋಭಾ ಕರಂದ್ಲಾಜೆಯವರಿಗೆ ಒಂದು ಕೋಟಿ ರುಪಾಯಿ ಆಸ್ತಿ ಇರುವ ಹಾಗೆ ಯಡಿಯೂರಪ್ಪ ತಂದು ನಿಲ್ಲಿಸಿದರು. ನಂತರದ ದಿನದಲ್ಲಿ ಅವರ ಆಸ್ತಿ ನಾಲ್ಕು ಕೋಟಿಗೆ ಏರಿಕೆ ಆಯಿತು. ನಂತರದ ವರ್ಷಗಳಲ್ಲಿ ಅವರ ಆಸ್ತಿ ಏರುತ್ತಲೇ ಇದೆ. ಕಡಿಮೆ ಆಗುತ್ತಲೇ ಇಲ್ಲ. 160 ಎಕರೆ ಕಾಫಿ ತೋಟ ತೆಗೆದುಕೊಂಡಿರುವುದಾಗಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು. ಮುಖ್ಯವಾಗಿ, ಮೋದಿಯವರ ಬುಡದಲ್ಲೇ ಕುಳಿತಿರುವ ಸದಾನಂದ ಗೌಡ ಅವರ ಆಸ್ತಿ ಸುಮಾರು ಆರು ತಿಂಗಳಲ್ಲೇ ಐದಾರು ಕೋಟಿ ಏರಿಕೆ ಆಯಿತು. ಇವರು ನಿಸ್ವಾರ್ಥಿಗಳಾಗಿದ್ದರೆ, ಸೇವಾ ಮನೋಭಾವ ಹೊಂದಿದ್ದರೆ ಇವರ ಆಸ್ತಿಯೇಕೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗಬೇಕು?

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹೀಗೆ, ಸಂಘದಲ್ಲಿ ಪಳಗಿ ಬಿಜೆಪಿ ಸೇರಿದ ಪ್ರತಿಯೊಬ್ಬ ಸ್ವಯಂ ಸೇವಕರು ಲೂಟಿಯನ್ನು ಮಾಡಿ ಆಸ್ತಿಯಲ್ಲಿ ಏರಿಕೆಯಾಗುವುದು ಕಂಡಾಗ, ಕಾಂಗ್ರೆಸ್ ನವರು ಕಳ್ಳರು ಬಿಜೆಪಿಯವರು ಲೂಟಿಕೋರರು ಎಂದು ನನಗನ್ನಿಸಿತು. ಹಾಗಾಗಿ, ಬಿಜೆಪಿಯವರನ್ನು ವಿರೋಧಿಸುತ್ತಿದ್ದೀನಿ ಹಾಗೂ ನಿರಂತರವಾಗಿ ಹೋರಾಟ ಮಾಡುತ್ತಿದ್ದೇನೆ.

ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಬಂದಿರುವುದು, ಜನರ ತೆರಿಗೆ ಹಣವನ್ನು ವೆಚ್ಚ ಮಾಡುವ ಬಿಜೆಪಿಯವರ ಕುತಂತ್ರ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ನಿಜವಾದ ಕಾಳಜಿ ಇದ್ದಿದ್ದರೆ ಯಾವುದೇ ರೀತಿಯಲ್ಲೂ ಶಾಸಕರ ಖರೀದಿಗೆ ಮುಂದಾಗಬಾರದಿತ್ತು. ಇದು ಬಿಜೆಪಿಯವರ ಅತ್ಯಂತ ಬುದ್ದಿಗೇಡಿಯ ಕೆಲಸ.

ಇನ್ನು, ಮುನಿರತ್ನ ಅವರ ಮತಚೀಟಿಗಳ ಅಕ್ರಮವನ್ನು, ಗೂಂಡಾಗಿರಿಯನ್ನು ಬಿಜೆಪಿ ವಿರೋಧಿಸಿ ಈಗ ಅವರನ್ನೇ ಪಕ್ಷಕ್ಕೆ ಸೇರಿಸಿಕೊಂಡಿದೆ. ಭ್ರಷ್ಟ, ವಂಚಕ, ರೌಡಿ, ಸಮಾಜಕ್ಕೆ ಮಾರಕವಾದಂತಹ ಒಬ್ಬ ವ್ಯಕ್ತಿಯನ್ನು ಬಿಜೆಪಿಗೆ ಬರಮಾಡಿಕೊಳ್ಳುತ್ತೀರಿ ಅಂದರೆ ನಿಮ್ಮ ಪಕ್ಷದ ತತ್ವ ಸಿದ್ದಾಂತ ಎಲ್ಲಿದೆ? ಇದನ್ನು ಗಮನಿಸುವಾಗ, ಅಧಿಕಾರಕ್ಕೋಸ್ಕರ ಮಾಡಿರುವ ಬಿಜೆಪಿ ಕೃತ್ಯದಿಂದ ಈ ಚುನಾವಣೆ ಆಕಸ್ಮಿಕವಾಗಿ ಬಂದಿದೆ ಎಂಬುದು ಮನದಟ್ಟಾಗಿದೆ.

ದೇಶಭಕ್ತಿ, ಪ್ರಾಮಾಣಿಕತೆ, ನಿಸ್ವಾರ್ಥ, ಸೇವಾ ಮನೋಭಾವದ ಸಂಸ್ಕಾರವನ್ನು ಸಂಘ ಕಲಿಸಿಕೊಟ್ಟಿದೆ. ಸಮಾಜಕ್ಕೆ ಸರ್ವಸ್ವ, ಸ್ವಂತಕ್ಕೆ ಸ್ವಲ್ಪವೆಂದು ಸಂಘ ಹೇಳಿಕೊಟ್ಟಿದೆ. ಆದರೆ ಬಿಜೆಪಿಯಲ್ಲಿರುವ ಬಹುತೇಕರು ಸಮಾಜಕ್ಕೆ ಸ್ವಲ್ಪ, ಸ್ವಂತಕ್ಕೆ ಸರ್ವಸ್ವ ಅನ್ನುವ ರೀತಿಯಲ್ಲಿದ್ದಾರೆ.

ಗರಿ ಗರಿ ಚಡ್ಡಿ ಹಾಕಿದ್ದವರು ಭ್ರಷ್ಟರಾಗಿದ್ದಾರೆ. ಹದಿನೆಂಟು ಶಾಸಕರು, ಮಂತ್ರಿಗಳು ಸಾಲು ಸಾಲಾಗಿ ಜೈಲಿಗೆ ಹೋಗಿ ಬಂದರು. ಅಂತಹವರ ಸಾಲಿನಲ್ಲಿ ಇವರೊಬ್ಬ (ಮುನಿರತ್ನ) ಇದ್ದರೆ ಏನು? ಎಲ್ಲರೂ ಭ್ರಷ್ಟರೇ.. ಹಾಗಾಗಿ ಇವರನ್ನು ಬರಮಾಡಿಕೊಂಡರು.

ತ್ಯಾಗ, ಸೇವೆ, ಪ್ರಾಮಣಿಕತೆ ಎಂಬ ಮೂಲ ಸಿದ್ಧಾಂತವನ್ನು ಮೂಲೆಗೆಸೆದಿದ್ದಾರೆ. ಆದರೆ ನಾವು ಸ್ವಯಂ ಸೇವಕರು ಇದೇ ತ್ಯಾಗ, ಸೇವೆ ಹೆಸರಿನಲ್ಲಿ ಹಳ್ಳಿ ಹಳ್ಳಿಗಳಿಗೆ ಭೇಟಿ ಮಾಡಿ, ಮನೆ ಮನೆಯನ್ನೂ ಭೇಟಿಯಾಗಿ ಮತಬೇಡಿ, 2008 ರಲ್ಲಿ ಗೆಲ್ಲಿಸಿ ಕೊಟ್ಟೆವು. ಆದರೆ ಮೂರು ಜನ ಮಂತ್ರಿಗಳು ಪರಸ್ಪರ ಕಚ್ಚಾಡಿ, ರೆಸಾರ್ಟ್ ರಾಜಕಾರಣ ಮಾಡಿ ಸರ್ಕಾರವನ್ನು ಬೀಳಿಸಿದರು. ನಂತರದ ಚುನಾವಣೆಯಲ್ಲಿ ಪ್ರತಿಪಕ್ಷವಾಗಿಯೂ ಬರಲಿಲ್ಲ. ಇದೆಲ್ಲದರ ಆಧಾರದಲ್ಲಿ ಪಾಠ ಕಲಿಯಬೇಕಿತ್ತು, ಕಲಿಯಲಿಲ್ಲ. ಈಗ ಮತ್ತದೇ ಭ್ರಷ್ಟರಿಗೆ ಮತ ಯಾಚಿಸುವಲ್ಲಿಗೆ ಸ್ವಯಂ ಸೇವಕರ ಅವಸ್ಥೆ ತಲುಪಿದೆ.

ಸಂಘಕ್ಕೋಸ್ಕರ ಜೀವನ ಮುಡಿಪಾಗಿಟ್ಟಿರುವ ರವಿಕುಮಾರ್ ರಂತವರು, ಮುನಿರತ್ನರಂತವರಿಗೆ ಪ್ರಚಾರ ಮಾಡುತ್ತಿದ್ದಾರೆ. ಇದು ವಿಪರ್ಯಾಸ. ಕಮಲ ಹೂವಿನ ನೆರಳಲ್ಲಿ ತಮ್ಮ ಅಕ್ರಮವನ್ನು ಮುಚ್ಚಿಹಾಕಲು ಬಿಜೆಪಿಗೆ ಬಂದಿದ್ದಾರೆ. ಇಂತವರಿಗೆ ಪ್ರಚಾರ ಮಾಡುವವರಿಗೆ ಸ್ವಯಂ ಸೇವಕರು ಎಂದು ಹೇಳಿಕೊಳ್ಳಲು ಯಾವ ನೈತಿಕತೆ ಇದೆ? ಆದ್ದರಿಂದ ಉಪಚುನಾವಣೆಯಲ್ಲಿ ಈ ಇಬ್ಬರನ್ನೂ ಸೋಲಿಸಿ ಬಿಜೆಪಿಗೆ ಪಾಠ ಕಲಿಸಬೇಕು. ಬಿಜೆಪಿ ಈಗಾಗಲೇ ಅಹಂಕಾರದಿಂದ ತುಂಬಿ ನಿಂತಿದೆ.

ಆರ್ ಎಸ್ ಎಸ್ ಸ್ವಯಂ ಸೇವಕರಿಗೆ ಮೋಹ ಅಲ್ಲ ವ್ಯಾಮೋಹ ಇದೆ. ನಮ್ಮ ಬಿಜೆಪಿ ಎಂಬ ವ್ಯಾಮೋಹ ಇದೆ. ಅತ್ಯಾಚಾರಿಯಾದರೂ, ಕಳ್ಳನಾದರೂ ಇದೇ ವ್ಯಾಮೋಹದಿಂದ ಬಿಜೆಪಿ ಪರ ನಿಲ್ಲುತ್ತಾರೆ. ಇವರಿಗೆ ನಾಚಿಕೆ ಇಲ್ಲ. ಇಂದು ಅನೈತಿಕ ವ್ಯವಸ್ಥೆಯಲ್ಲಿ ಚುನಾವಣೆ ನಡೆಯುತ್ತಿದೆ. ಬಿಜೆಪಿ ಅಧಿಕಾರ ನಡೆಸುತ್ತಿರುವದರಿಂದ ಅಧಿಕಾರಿಗಳನ್ನು ತಮ್ಮ ಅಂಕೆಯಲ್ಲಿಟ್ಟುಕೊಂಡು ಚುನಾವಣೆ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ.

ಬಿಜೆಪಿಯಲ್ಲಿ ಹಣವಂತರಿಗೆಯೇ ಟಿಕೆಟ್ ನೀಡಲಾಗುತ್ತಿದೆ. ಅದು ಕಳೆದ ಮೂರು ನಾಲ್ಕು ಚುನಾವಣೆಯಲ್ಲಿ ಸಾಬೀತಾಗಿದೆ. ಪಕ್ಷದ ನಾಯಕರಿಗೆ ಕಾರ್ಯಕರ್ತರ ಬೆನ್ನೆಲುಬು ಮುರಿಯಬಾರದು ಎಂಬುವುದು ಇದ್ದಿದ್ದರೆ ತುಳಸಿ ಮುನಿರಾಜುಗೆ ಆರ್ ಆರ್ ನಗರ ಟಿಕೆಟ್ ನೀಡಬೇಕಿತ್ತು. ಇಷ್ಟೆಲ್ಲಾ ಹೋರಾಟ ಮಾಡಿದ ತುಳಸಿ ಮುನಿರಾಜ್ ಅವರನ್ನು ಬಿಟ್ಟು ಓರ್ವ ಪಕ್ಷಾಂತರಿ, ಭ್ರಷ್ಟ, ಅಯೋಗ್ಯನಿಗೆ ಟಿಕೆಟ್ ನೀಡಿದರೆ ಸ್ವಾಭಿಮಾನ ಇದ್ದವರು ಅದನ್ನು ಒಪ್ಪುವುದಿಲ್ಲ. ತನ್ನ ಹೋರಾಟಕ್ಕೆ ಅಪಮಾನ ಮಾಡಿದಂತಹ ಓರ್ವನಿಗೆ ಮತ ಕೇಳಬೇಕೆಂದು ತುಳಸಿ ಮುನಿರಾಜು ಅವರಲ್ಲಿ ಹೇಳುವ ಸಂಘದ ನಾಯಕರಿಗೆ, ಬಿಜೆಪಿ ಪ್ರಮುಖರಿಗೆ ಮೆದುಳಿಲ್ಲ. ಯಡಿಯೂರಪ್ಪ ರ ಅಧಿಕಾರದಾಸೆಗೆ ಕಾರ್ಯಕರ್ತರನ್ನು ಸರ್ವನಾಶ ಮಾಡುತ್ತಿದ್ದಾರೆ.

ಮೋದಿ ಬಂದ ತಕ್ಷಣ ಎಲ್ಲರೂ ಆಕಾಶದಲ್ಲಿ ಹಾರಾಡ್ತಿದ್ದಾರ? ಅದಕ್ಕೂ ಮೊದಲು ಎಲ್ಲರೂ ಕೆಸರಲ್ಲಿ ಹೂತು ಹೋಗಿದ್ದರಾ? ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶಕ್ಕೆ ಬರಬಾರದ ಬರಡು ಬಂದಿದೆ. ಒಂದು ಕಡೆ ಅತಿವೃಷ್ಟಿ, ಅನಾವೃಷ್ಟಿ, ನಿರುದ್ಯೋಗ ಇವೇ ಇದೆ ದೇಶದಲ್ಲಿ. ಬಿಜೆಪಿ ಆಸ್ವಾಸನೆ ನೀಡಿರುವ ಯಾವುದನ್ನೂ ಮಾಡಿಲ್ಲ. ಕೆಲಸಕ್ಕೆ ಬಾರದ 'ತಲಾಖ್ ನಿಷೇಧ' ಮತ್ತು ಆರ್ಟಿಕಲ್ 370 ರದ್ದತಿ ಬಿಟ್ಟರೆ ಏನೂ ಮಾಡಿಲ್ಲ. ಮೋದಿ ಮುಖ ನೋಡಿಕೊಂಡು ಇಲ್ಲಿ ವೋಟ್ ಹಾಕಬೇಕೆನ್ನುವವರಿಗೆ ಸ್ವಂತಿಕೆ ಇಲ್ಲ. ವರ್ಚಸ್ಸು ಇಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com