ನಾಡಧ್ವಜ ಹಾರಿಸಲು ಸರ್ಕಾರದ ಹಿಂಜರಿಕೆ: ನೆಟ್ಟಿಗರಿಂದ ನಮ್ಮ ಧ್ವಜ ನಮ್ಮ ಹೆಮ್ಮೆ- ಟ್ವಿಟರ್ ಅಭಿಯಾನ

ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಧ್ವಜವನ್ನು ಹಾರಿಸದೇ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಲಾಗಿತ್ತು. ಇದು ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ #ನಮ್ಮಧ್ವಜ_ನಮ್ಮಹೆಮ್ಮೆ ಎಂಬ ಟ್ವಿಟರ್‌ ಅಭಿಯಾನಕ್ಕೆ ಕರೆ ನೀಡಿದೆ.
ನಾಡಧ್ವಜ ಹಾರಿಸಲು ಸರ್ಕಾರದ ಹಿಂಜರಿಕೆ: ನೆಟ್ಟಿಗರಿಂದ ನಮ್ಮ ಧ್ವಜ ನಮ್ಮ ಹೆಮ್ಮೆ- ಟ್ವಿಟರ್ ಅಭಿಯಾನ

ನವೆಂಬರ್‌ ಒಂದು ಕನ್ನಡ ರಾಜ್ಯೋತ್ಸವದಂದು ಕನ್ನಡ ಬಾವುಟ ಹಾರಿಸದೆ ಕೇವಲ ರಾಷ್ಟ್ರಧ್ವಜ ಹಾರಿಸಿ ನಾಡಧ್ವಜಕ್ಕೆ ಅವಮಾನ ಮಾಡಿದ ಘಟನೆ ವರದಿಯಾಗುತ್ತಿದ್ದಂತೆ ಕನ್ನಡಾಭಿಮಾನಿಗಳಿಂದ ರಾಜ್ಯ ಸರ್ಕಾರದ ನಡೆಗೆ ವಿರೋಧ ವ್ಯಕ್ತವಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸಾಮಾಜಿಕ ಜಾಲತಾಣದಲ್ಲಿ ರಾಜ್ಯ ಬಿಜೆಪಿ ಸರ್ಕಾರವನ್ನು ಹಲವಾರು ಕನ್ನಡಪರ ಹೋರಾಟಗಾರರು, ಕನ್ನಡ ಸಂಘಟನೆಗಳು ಖಂಡಿಸಿದ್ದು, ನಾಡಧ್ವಜಕ್ಕೆ ಗೌರವ ತೋರುವ ಸಲುವಾಗಿ ನಮ್ಮ ಧ್ವಜ ನಮ್ಮ ಹೆಮ್ಮೆ ಎಂಬ ಹ್ಯಾಷ್‌ಟ್ಯಾಗನ್ನು ಟ್ವಿಟರಿನಲ್ಲಿ ಟ್ರೆಂಡ್‌ ಮಾಡಿದ್ದಾರೆ.

ಕನ್ನಡ ರಾಜ್ಯೋತ್ಸವದಂದು ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ಧ್ವಜವನ್ನು ಹಾರಿಸದೇ ಕೇವಲ ರಾಷ್ಟ್ರಧ್ವಜ ಮಾತ್ರ ಹಾರಿಸಲಾಗಿತ್ತು. ಇದು ಕನ್ನಡ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ಬೆನ್ನಲ್ಲೇ ಕರ್ನಾಟಕ ರಕ್ಷಣಾ ವೇದಿಕೆ #ನಮ್ಮಧ್ವಜ_ನಮ್ಮಹೆಮ್ಮೆ ಎಂಬ ಟ್ವಿಟರ್‌ ಅಭಿಯಾನಕ್ಕೆ ಕರೆ ನೀಡಿದೆ. ಈ ಅಭಿಯಾನಕ್ಕೆ ಸಾವಿರಾರು ಕನ್ನಡಿಗರು ಜೊತೆಗೂಡಿದ್ದು ಕರ್ನಾಟಕದ ಟ್ರೆಂಡಿಂಗ್‌ನಲ್ಲಿ ಈ ಹ್ಯಾಷ್‌ಟ್ಯಾಗ್‌ ಮೊದಲನೇ ಸ್ಥಾನವನ್ನು ಪಡೆದುಕೊಂಡಿತ್ತು.

ಇನ್ನು ರಾಜ್ಯ ಸರ್ಕಾರದ ಕ್ರಮವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಖಂಡಿಸಿದ್ದು, ಕನ್ನಡ ರಾಜ್ಯೋತ್ಸವದ ದಿನ ನಾಡಧ್ವಜ ಹಾರಿಸದೆ ಹಲವಾರು ಜಿಲ್ಲಾಡಳಿತಗಳು ಅಗೌರವ ತೋರಿಸಿರುವುದು ಖಂಡನೀಯ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಮಕ್ಷಮದಲ್ಲಿಯೇ ನಾಡಧ್ವಜ ಹಾರಿಸಿರುವಾಗ ಜಿಲ್ಲಾಡಳಿತದ ಉಪೇಕ್ಷೇ ಯಾರ ಕುಮ್ಮಕ್ಕಿನಿಂದ ನಡೆಯಿತು ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜವನ್ನು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾರಿಸುವ ಸಂಪ್ರದಾಯವನ್ನು ಹಿಂದಿನ ಎಲ್ಲ ಸರ್ಕಾರಗಳು ಪಾಲಿಸುತ್ತಾ ಬಂದಿವೆ. ಕಳೆದ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರೇ ನಾಡಧ್ವಜ ಆರೋಹಣವನ್ನು ವಿರೋಧಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು.ನಾನು ಮುಖ್ಯಮಂತ್ರಿಯಾಗಿದ್ದಾಗ ತಜ್ಞರ ಸಮಿತಿಯನ್ನು ಆಧರಿಸಿ ನಾಡಧ್ವಜವನ್ನು ವಿನ್ಯಾಸ ಮಾಡಿ ಅಂಗೀಕಾರಕ್ಕಾಗಿ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆ. ಎರಡು ವರ್ಷಗಳಾದರೂ ಅದಕ್ಕೆ ಅಂಗೀಕಾರ ನೀಡದೆ ಇರುವುದು ಕರ್ನಾಟಕದ ನಾಡಧ್ವಜದ ಬಗ್ಗೆ ಬಿಜೆಪಿಗೆ ಇರುವ ಪೂರ್ವಗ್ರಹಕ್ಕೆ ಸಾಕ್ಷಿ ಎಂದಿದ್ದಾರೆ.

ನಾವೇನು ಪ್ರತ್ಯೇಕ ಧ್ವಜವನ್ನು ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಆಗಿರುವ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿಯ ಕೇಂದ್ರ ನಾಯಕರ ಅಭಿಪ್ರಾಯವೇನೇ ಇರಲಿ, ಆ ಪಕ್ಷದ ಸ್ಥಳೀಯ ನಾಯಕರು ಪ್ರಧಾನ ಮಂತ್ರಿ ಮೇಲೆ ಒತ್ತಡ ಹೇರಿ ಕರ್ನಾಟಕದ ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com