ಬಿಎಸ್‌ವೈ ನಂತರ ಸಮರ್ಥ ನಾಯಕನ ಹುಡುಕಾಟದಲ್ಲಿದೆ ಲಿಂಗಾಯತ-ವೀರಶೈವ ಸಮಾಜ

ರಾಜ್ಯದಲ್ಲಿ ಬಿಜೆಪಿಯನ್ನು ಆರಂಭದಿಂದಲೂ ಪೋಷಿಸಿ ಬೆಳೆಸಿ, ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರ ಪಾತ್ರ ಬಹಳ ಮಹತ್ವದ್ದು. ಅವರಷ್ಟು ಬದ್ದತೆಯಿಂದ ಪಕ್ಷವನ್ನು ಸಂಘಟಿಸಿ, ಸಮಾಜವನ್ನು ಮೇಲಕ್ಕೆತ್ತುವ ವ್ಯಕ್ತಿಯ ಹುಡುಕಾಟದಲ್ಲಿ ಲಿಂಗಾಯತ ಸಮಾಜದ ನಾಯಕರು ನಿರತರಾಗಿದ್ದಾರೆ.
ಬಿಎಸ್‌ವೈ ನಂತರ ಸಮರ್ಥ ನಾಯಕನ ಹುಡುಕಾಟದಲ್ಲಿದೆ ಲಿಂಗಾಯತ-ವೀರಶೈವ ಸಮಾಜ

ರಾಜ್ಯದಲ್ಲಿ ಬಿಜೆಪಿ ಸರ್ಕಾರದ ನಾಯಕತ್ವ ಬದಲಾವಣೆಯ ಕುರಿತು ಇದ್ದಂತಹ ಅನುಮಾನಗಳು ಇನ್ನಷ್ಟು ದಟ್ಟವಾಗುತ್ತಿವೆ. ರಾಜ್ಯದಲ್ಲಿ ಯಡಿಯೂರಪ್ಪನವರ ನಂತರ ಕೂಡಾ ಲಿಂಗಾಯತ ಸಮಾಜದ ನಾಯಕರೇ ಮುಖ್ಯಮಂತ್ರಿಗಳಾಗಬೇಕು ಎಂಬ ಬೇಡಿಕೆ ತೀವ್ರವಾಗುತ್ತಿದೆ. ಇದರೊಂದಿಗೆ ಸರ್ಕಾರದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪದವಿಯಿಂದ ಕೆಳಗಿಸಲು ಸಾಕಷ್ಟು ಕಸರತ್ತುಗಳು ಕೂಡಾ ನಡೆಯುತ್ತಿವೆ.

ಭಾನುವಾರ ರಾಜ್ಯದ ಲಿಂಗಾಯತ-ವೀರಶೈವ ಸಮನ್ವಯ ವೇದಿಕೆಯು ಲಿಂಗಾಯತ-ವೀರಶೈವ ಸಮಾಜದ ಭವಿಷ್ಯದ ರಾಜಕೀಯ ನಾಯಕ ಯಾರು? ಎಂಬ ವಿಚಾರದ ಕುರಿತು ಚರ್ಚಿಸಲು ಸಂವಾದ ಗೋಷ್ಟಿಯನ್ನು ಏರ್ಪಡಿಸಿತ್ತು. ಈ ಗೋಷ್ಟಿಯ ನಂತರ ಮಾತನಾಡಿದ ಸಮಾಜದ ಮುಖಂಡರು ಮುಂದಿನ ಲಿಂಗಾಯತ ಸಮಾಜನವನ್ನು ಪ್ರತಿನಿಧಿಸುವ ನಾಯಕರಿಗೆ ಇರಬೇಕಾದ ಮೂರು ಪ್ರಮುಖ ಗುಣಗಳನ್ನು ಒತ್ತಿ ಹೇಳಿದ್ದಾರೆ.

ಮೊದಲನೇಯದು, ಮುಂದೆ ಬರುವಂತಹ ʼಲಿಂಗಾಯತʼ ಮುಖ್ಯಮಂತ್ರಿಗಳ ವರ್ಚಸ್ಸು ಸ್ವಚ್ಚವಾಗಿರಬೇಕು. ಹಣ ಮತ್ತು ಹಣ್ಣಿನಂತಹ ಯಾವುದೇ ದೌರ್ಬಲ್ಯಗಳು ಆ ವ್ಯಕ್ತಿಗೆ ಇರಬಾರದು. ಯಾವುದೇ ರೀತಿಯ ಕಳಂಕವನ್ನು ಹೊಂದಿರದ ವ್ಯಕ್ತಿ ಮುಂದಿನ ಸಿಎಂ ಆಗಬೇಕು.

ಎರಡನೇಯದು, ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುವ ವ್ಯಕ್ತಿಗೆ ನಾಯಕ ಸ್ಥಾನ ನೀಡಬಾರದು. ಸಂಪೂರ್ಣ ರಾಜ್ಯದಲ್ಲಿ ಅವರ ವರ್ಚಸ್ಸು ಇರಬೇಕು. ಇದರೊಂದಿಗೆ ಸಮಾಜದ ಎಲ್ಲಾ ವರ್ಗಗಳ ಜನರನ್ನು ಸಮಾನ ದೃಷ್ಟಿಯಿಂದ ನೋಡುವಂತಹ ವ್ಯಕ್ತಿಯಾಗಿರಬೇಕು.

ಮೂರನೇಯದು, ದಣಿವರಿಯದ ನಾಯಕನ ಅಗತ್ಯ ಲಿಂಗಾಯಿತ ಸಮಾಜಕ್ಕಿದೆ. ಆಯ್ಕೆಯಾಗುವ ವ್ಯಕ್ತಿಯು ದಿನದ 24 ಗಂಟೆಗಳೂ ಕೆಲಸ ಮಾಡುವಂತಹ ಶಕ್ತಿಯನ್ನು ಹೊಂದಿರಬೇಕು, ಎಂದು ಲಿಂಗಾಯತ-ವೀರಶೈವ ಸಮನ್ವಯ ವೇದಿಕೆಯ ನಾಯಕರು ಒಮ್ಮತದ ನಿರ್ಣಯವನ್ನು ತಾಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಪತ್ರಿಕಾಗೋಷ್ಟಿಯಲ್ಲಿದ್ದ ಪತ್ರಕರ್ತರೊಬ್ಬರು, ಇದು ಸಿಎಂ ಯಡಿಯೂರಪ್ಪ ಅವರ ವಿರುದ್ದ ನಡೆಸುತ್ತಿರುವ ಸಭೆಯೇ? ಎಂದು ಪ್ರಶ್ನಿಸಿದಕ್ಕೆ, ಇದು ಯಾರ ವಿರುದ್ದವೂ ನಡೆದ ಸಭೆಯಲ್ಲ. ಮಾಧ್ಯಮಗಳಲ್ಲಿ ನಾಯಕತ್ವ ಬದಲಾವಣೆಯ ಕುರಿತು ಮಾತನಾಡುತ್ತಾ ಇರುವುದರಿಂದ, ಬದಲಾಗುವುದಾದರೆ ಒಬ್ಬ ಸಮರ್ಥ ʼಲಿಂಗಾಯತʼ ನಾಯಕನನ್ನು ಹುಡುಕಿ ಕೊಡಿ ಅಂತ ಹೈಕಮಾಂಡ್‌ಗೆ ಸಂದೇಶ ನೀಡುತ್ತಿದ್ದೇವೆ, ಎಂದು ಲಿಂಗಾಯತ-ವೀರಶೈವ ಸಮನ್ವಯ ವೇದಿಕೆಯ ನಾಯಕರು ಹೇಳಿದ್ದಾರೆ.

ಆದರೆ, ಯಡಿಯೂರಪ್ಪನವರಂತಹ ವರ್ಚಸ್ವಿ ನಾಯಕನ್ನು ಸಿಎಂ ಪದವಿಯಿಂದ ಕೆಳಗೆ ಇಳಿಸಿದಲ್ಲಿ, ನಂತರ ಆ ಸ್ಥಾನವನ್ನು ತುಂಬುವಂತಹ ವ್ಯಕ್ತಿ ಅಷ್ಟು ಸುಲಭದಲ್ಲಿ ಸಿಗುವುದು ಸಾಧ್ಯವಲ್ಲ. ಏಕೆಂದರೆ, ರಾಜ್ಯದಲ್ಲಿ ಬಿಜೆಪಿಯನ್ನು ಆರಂಭದಿಂದಲೂ ಪೋಷಿಸಿ ಬೆಳೆಸಿ, ಅಧಿಕಾರಕ್ಕೆ ತರುವಲ್ಲಿ ಯಡಿಯೂರಪ್ಪನವರ ಪಾತ್ರ ಬಹಳ ಮಹತ್ವದ್ದು. ಅವರಷ್ಟು ಬದ್ದತೆಯಿಂದ ಪಕ್ಷವನ್ನು ಸಂಘಟಿಸಿ, ಸಮಾಜವನ್ನು ಮೇಲಕ್ಕೆತ್ತುವ ವ್ಯಕ್ತಿಯ ಹುಡುಕಾಟದಲ್ಲಿ ಲಿಂಗಾಯತ ಸಮಾಜದ ನಾಯಕರು ನಿರತರಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com