ಒಕ್ಕಲಿಗ ನಾಯಕತ್ವನ್ನು ನಿರ್ಧರಿಸಲಿದೆಯೇ ಆರ್‌ ಆರ್‌ ನಗರ ಉಪಚುನಾವಣೆ?

ಈ ಉಪಚುನಾವಣೆ ರಾಜ್ಯದ ಸರ್ಕಾರದಲ್ಲಿ ಯಾವುದೇ ಮಾರ್ಪಾಡುಗಳನ್ನು ತರದೇ ಹೋದರೂ ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿ ಜೆಡಿಎಸ್‌ಗೆ ತಮ್ಮ ಅಸ್ತಿತ್ವದ ಪ್ರಶ್ನೆಯಾಗಿರಲಿದೆ.
ಒಕ್ಕಲಿಗ ನಾಯಕತ್ವನ್ನು ನಿರ್ಧರಿಸಲಿದೆಯೇ ಆರ್‌ ಆರ್‌ ನಗರ ಉಪಚುನಾವಣೆ?

ರಾಜ್ಯದಲ್ಲಿ ತೀವ್ರ ಕಾವೇರಿದ ಶಿರಾ ಹಾಗೂ ರಾಜರಾಜೇಶ್ವರಿ ನಗರ ಉಪಚುನಾವಣೆ ಹಲವು ಕಾರಣಗಳಿಗೆ ಮುಖ್ಯವಾಗಿದೆ. ಹಾಗಾಗಿಯೇ ಚುನಾವಣೆಯ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ.

ಈ ಉಪಚುನಾವಣೆ ರಾಜ್ಯದ ಸರ್ಕಾರದಲ್ಲಿ ಯಾವುದೇ ಮಾರ್ಪಾಡುಗಳನ್ನು ತರದೇ ಹೋದರೂ ರಾಜಕೀಯ ಪಕ್ಷಗಳಿಗೆ ತಮ್ಮ ಅಸ್ತಿತ್ವದ ಪ್ರಶ್ನೆಯಾಗಿರಲಿದೆ. ಹೇಗಾದರೂ ಈ ಉಪಚುನಾವಣೆ ಗೆಲ್ಲಲೇ ಬೇಕೆಂಬ ಉದ್ದೇಶದಿಂದ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಮೂರು ಪಕ್ಷಗಳೂ ಒಕ್ಕಲಿಗರ ಹಿಂದೆ ಬಿದ್ದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಅದರಲ್ಲೂ ಆರ್‌ ಆರ್‌ ನಗರ ಕ್ಷೇತ್ರದಲ್ಲಿ ಒಕ್ಕಲಿಗರ ಮತ ನಿರ್ಣಾಯಕ ಆಗಿರುವುದರಿಂದ ಪಕ್ಷಗಳು ಒಕ್ಕಲಿಗರ ಹಿಂದೆ ಬಿದ್ದಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕಾಂಗ್ರೆಸ್‌ ಪಕ್ಷದಿಂದ ಒಕ್ಕಲಿಗ ಸಮುದಾಯವರೇ ಆದ ಡಿಕೆ ಶಿವಕುಮಾರ್‌ ಪ್ರಬಲಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಜೆಡಿಎಸ್‌, ತನ್ನ ಸಾಂಪ್ರದಾಯಿಕ ಮತಬ್ಯಾಂಕ್‌ ಆದ ಒಕ್ಕಲಿಗರ ಮೇಲೆ ಹಕ್ಕುಸ್ವಾಮ್ಯ ಭದ್ರಪಡಿಸಲು ಪ್ರಯತ್ನಿಸುತ್ತಿದೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌, ಈಗಾಗಲೇ ಒಕ್ಕಲಿಗರೊಳಗೂ ತನ್ನ ಪ್ರಭಾವ ಬೀರುತ್ತಿರುವುದು ಜೆಡಿಎಸ್‌ ಆತಂಕಕ್ಕೆ ಕಾರಣವಾಗಿದೆ. ಒಕ್ಕಲಿಗರೊಳಗಿನ ನಾಯಕತ್ವ ತಮ್ಮಿಂದ ಕಸಿದುಹೋಗುವ ಭಯದಲ್ಲಿದೆ ಜೆಡಿಎಸ್. ಹಾಗಾಗಿಯೇ, ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ನಿಖಿಲ್‌ ಕುಮಾರಸ್ವಾಮಿ, ʼʼಯಾವತ್ತೂ ಎಚ್‌ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿಯೇ ಒಕ್ಕಲಿಗರ ನಾಯಕರಾಗಿರುತ್ತಾರೆ, ಅವರಿಂದ ಈ ಸ್ಥಾನವನ್ನು ಕಿತ್ತುಕೊಳ್ಳಲು ಯಾರಿಂದಲೂ ಸಾಧ್ಯವಿಲ್ಲʼʼ ಎಂಬ ಹೇಳಿಕೆ ನೀಡಿ ‌ʼಒಕ್ಕಲಿಗ ನಾಯಕʼ ಸ್ಥಾನದ ಅಭದ್ರತೆಯನ್ನು ಹೊರಗೆಡವಿದ್ದಾರೆ.

ಒಕ್ಕಲಿಗ ನಾಯಕತ್ವನ್ನು ನಿರ್ಧರಿಸಲಿದೆಯೇ ಆರ್‌ ಆರ್‌ ನಗರ ಉಪಚುನಾವಣೆ?
ಒಕ್ಕಲಿಗ ಸಚಿವರ ಪೈಪೋಟಿ ಮಧ್ಯೆ ಇತರೆ ಸಚಿವರು ಹೈರಾಣ

ರಾಜರಾಜೇಶ್ವರಿ ನಗರದಲ್ಲಿ ಮುನಿರತ್ನರನ್ನು ನಿಲ್ಲಿಸಿ ಗೆದ್ದುಕೊಂಡಿದ್ದ ಕಾಂಗ್ರೆಸ್‌ ಈ ಬಾರಿ ಒಕ್ಕಲಿಗ ಅಭ್ಯರ್ಥಿ ಕುಸುಮಾರನ್ನು ಕಣಕ್ಕಿಳಿಸಿ ಪರೀಕ್ಷೆ ಎದುರಿಸುತ್ತಿದೆ. ಈ ಕಾರಣಕ್ಕೆ ಆರ್‌ಆರ್‌ ನಗರದಲ್ಲಿ ಸೋಲುವ ಭಯ ಮುನಿರತ್ನರಿಗೂ ಕಾಡುತ್ತಿದೆ. ಹಾಗಾಗಿಯೇ ಕಣ್ಣೀರು ಹರಿಸಿ ಭಾವನಾತ್ಮಕವಾಗಿ ಮತದಾರರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ.

ಕುಸುಮಾ ಗೆದ್ದರೆ, ವೈಯಕ್ತಿಕವಾಗಿ ಡಿಕೆ ಶಿವಕುಮಾರ್‌ ಗೆದ್ದಂತೆ. ಕುಸುಮಾರ ಗೆಲುವಿನ ಮೂಲಕ ಒಕ್ಕಲಿಗರೊಳಗಿನ ಪ್ರಭಾವಿ ನಾಯಕರಾಗಿ ಡಿಕೆಶಿ ʼಅಧಿಕೃತವಾಗಿʼ ಹೊರ ಹೊಮ್ಮುವ ಸಾಧ್ಯತೆ ಇದೆ. ಜೆಡಿಎಸ್‌ ಅನ್ನು ಮೀರಿ ಒಕ್ಕಲಿಗರ ಮತವನ್ನು ತನ್ನ ಪಕ್ಷದ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಡಿಕೆಶಿಗೂ ಇದು ನಿರ್ಣಾಯಕ ಸಂಧರ್ಭ. ಹಾಗಾಗಿಯೇ ಜೆಡಿಎಸ್‌ ಗೆ ಕುಸುಮಾರಿಗಿಂತ ಮುನಿರತ್ನ ಗೆದ್ದರೆ ಪ್ರಯೋಜನ ಹೆಚ್ಚು.

ಇನ್ನು ಬಿಜೆಪಿ ಕೂಡಾ, ಜಾತಿ ದಾಳವನ್ನೇ ಹೂಡಿದ್ದು, ಬಿಜೆಪಿಗೆ ರಾಜಕೀಯವಾಗಿ ಡಿಕೆಶಿ ಪ್ರಬಲರಾಗುವುದು ಇಷ್ಟವಿಲ್ಲ. ಹೀಗಾಗಿ ಆರ್‌ ಅಶೋಕ್‌, ಕೆ ಸುಧಾಕರ್‌, ಅಶ್ವಥ್‌ ನಾರಾಯಣ್‌ರಂತಹ ಒಕ್ಕಲಿಗ ಹಿನ್ನೆಲೆಯುಳ್ಳ ನಾಯಕರನ್ನೇ ಪ್ರಚಾರ ಕಣದಲ್ಲಿ ಹೆಚ್ಚಾಗಿ ಇಳಿಸಿದೆ.

ಒಕ್ಕಲಿಗ ನಾಯಕತ್ವನ್ನು ನಿರ್ಧರಿಸಲಿದೆಯೇ ಆರ್‌ ಆರ್‌ ನಗರ ಉಪಚುನಾವಣೆ?
ಒಕ್ಕಲಿಗ ಪ್ರಾಬಲ್ಯದ ಕ್ಷೇತ್ರಗಳತ್ತಲೂ ಬಿಜೆಪಿ ಚಿತ್ತ

ಪ್ರಸ್ತುತ ಆರೋಗ್ಯ ಸಚಿವರಾಗಿರುವ ಕಾಂಗ್ರೆಸ್‌ ಮಾಜಿ ಶಾಸಕ ಕೆ ಸುಧಾಕರ್‌, ಒಕ್ಕಲಿಗರನ್ನು ಕಾಂಗ್ರೆಸ್‌ನಿಂದ ವಿಮುಖಗೊಳಿಸುವ ಪ್ರಯತ್ನ ಮಾಡಿದ್ದು, ಪಕ್ಷದೊಳಗಿನ ಒಕ್ಕಲಿಗ ನಾಯಕರ ಕಾಳಜಿಯನ್ನೇ ವಹಿಸದ ಕಾಂಗ್ರೆಸ್‌, ಒಕ್ಕಲಿಗ ಮತದಾರರ ಬೇಡಿಕೆಗಳನ್ನು ಪೂರೈಸುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಈ ಮೂಲಕ ತಾನು ಕಾಂಗ್ರೆಸ್‌ ತೊರೆಯಲು ಅಲ್ಲಿನ ನಿರ್ಲಕ್ಷ್ಯವೇ ಎಂಬಂತೆ ಬಿಂಬಿಸಿಕೊಂಡು ಒಕ್ಕಲಿಗ ಮತದಾರರನ್ನು ಬಿಜೆಪಿಯೆಡೆಗೆ ಸೆಳೆಯಲು ಯತ್ನಿಸಸುತ್ತಿದ್ದಾರೆ.

ರಾಜರಾಜೇಶ್ವರಿ ನಗರದಲ್ಲಿ 4.60 ಲಕ್ಷ ಮತದಾರರಿದ್ದಾರೆ. ಅವರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತದಾರರು ಒಕ್ಕಲಿಗರೇ ಎಂಬುವುದು ಗಮನಾರ್ಹ. ಒಕ್ಕಲಿಗರ ವಿಶ್ವಾಸವನ್ನು ಗೆದ್ದುಕೊಂಡ ಪಕ್ಷ ಸುಲಭವಾಗಿ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿದೆ. ಒಂದರ್ಥದಲ್ಲಿ ಆರ್‌ಆರ್‌ ನಗರ ಕ್ಷೇತ್ರದಲ್ಲಿ ಗೆದ್ದ ಪಕ್ಷವೇ ಒಕ್ಕಲಿಗರನ್ನು ಗೆದ್ದುಕೊಂಡಂತೆಯೇ ಸರಿ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ.

ಕಳೆದ ಬಾರಿ ಆರ್‌ಆರ್‌ ನಗರದಲ್ಲಿ ಮುನಿರತ್ನ ವಿರುದ್ಧ ಸೋತಿದ್ದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಹಾಗೂ ಬೆಂಬಲಿಗರಿಗೆ ಮುನಿರತ್ನಗೆ ಬಿಜೆಪಿ ಟಿಕೆಟ್‌ ನೀಡಿರುವುದರಲ್ಲಿ ಅಸಮಾಧಾನ ಇದೆ. ಮುನಿರತ್ನ ಕಾಂಗ್ರೆಸ್‌ ಶಾಸಕರಾಗಿದ್ದಾಗ ಬಿಜೆಪಿ ಕಾರ್ಯಕರ್ತರಿಗೆ ಹಲವು ಕಾರಣಗಳಿಂದ ಅವರ ಮೇಲೆ ಅಸಹನೆ ಇತ್ತು. ʼಇದೀಗ ಅದೇ ವ್ಯಕ್ತಿಯ ಗೆಲುವಿಗೆ ನಾವು ದುಡಿಯಬೇಕೆ.?ʼ ಎಂಬ ಪ್ರಶ್ನೆಯನ್ನು ಆರ್‌ ಆರ್‌ ನಗರ ಬಿಜೆಪಿ ಕಾರ್ಯಕರ್ತರು ಎತ್ತಿದ್ದಾರೆ ಎಂದು ಪಡಸಾಲೆ ಮಾತನಾಡುತ್ತಿದೆ.

ಮುನಿರತ್ನ ಗೆಲ್ಲುವುದು ಇಷ್ಟವಿಲ್ಲದ ಬಿಜೆಪಿ ಕಾರ್ಯಕರ್ತರು ಈ ಬಾರಿ ನೋಟಾಗೆ ಮತಚಲಾಯಿಸಲು ಸನ್ನದ್ದಗೊಂಡಿದ್ದಾರೆ ಎನ್ನಲಾಗಿದೆ. ನೋಟಾಗೆ ಬೀಳುವ ಮತವೆಲ್ಲಾ ಕಾಂಗ್ರೆಸ್‌ಗೆ ವರದಾನವಾಗಲಿದೆ. ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ ಕೈಯಲ್ಲಿರುವ ಮತ, ಡಿಕೆ ಸಹೋದರರು ತಮ್ಮ ಛಾಪಿನಿಂದ ಸೆಳೆದುಕೊಳ್ಳುವ ಒಕ್ಕಲಿಗರ ಮತ, ಹಾಗೂ ಬಿಜೆಪಿ ಅಭ್ಯರ್ಥಿ ಪರ ʼಬೀಳದʼ ಬಿಜೆಪಿ ಕಾರ್ಯಕರ್ತರ ಮತ, ಇದು ಕಾಂಗ್ರೆಸ್‌ ಗೆಲುವಿಗೆ ಮುಖ್ಯ ಮೂರು ಅಂಶವಾಗಲಿದೆ. ಈ ಲೆಕ್ಕಾಚಾರದಲ್ಲಿ ಮತ ಚಲಾವಣೆಯಾದರೆ ಅದು ಜೆಡಿಎಸ್‌ಗೆ ತೀರಾ ಹಿನ್ನೆಡೆಯಾಗಲಿದೆ. ಮುಖ್ಯವಾಗಿ ಒಕ್ಕಲಿಗರ ನಾಯಕತ್ವ ವಿಚಾರದಲ್ಲಿ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com