ಪ್ರಧಾನಿ ಮೋದಿಯಿಂದ ನನ್ನ ಯೋಜನೆಗಳು ಹೈಜಾಕ್: ಎಚ್ ಡಿ ಕುಮಾರಸ್ವಾಮಿ

ನಾನು 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸುವುದಕ್ಕೆ ಉತ್ತೇಜನ ನೀಡಿದೆ. ಅದನ್ನೇ ಈಗ ಆತ್ಮನಿರ್ಭರ ಭಾರತ ಎಂದು ಮೋದಿ ಹೇಳುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡಲು ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದೆ, ಈಗ ಮೋದಿ ಅವರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ.
ಪ್ರಧಾನಿ ಮೋದಿಯಿಂದ ನನ್ನ ಯೋಜನೆಗಳು ಹೈಜಾಕ್: ಎಚ್ ಡಿ ಕುಮಾರಸ್ವಾಮಿ

ನನ್ನ ಸರಕಾರದಲ್ಲಿ ಜಾರಿಗೆ ತಂದ ಯೋಜನೆಗಳನ್ನೇ ಹೈಜಾಕ್‌ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವುಗಳನ್ನು ತಮ್ಮ ಸ್ವಂತ ಯೋಜನೆಗಳು ಎಂಬಂತೆ ಈಗ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಪೀಣ್ಯದಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಸಿ ರಾಜರಾಜೇಶ್ವರಿ ನಗರ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ಮತಯಾಚಿಸಿ ಮಾತನಾಡಿದ ಕುಮಾರಸ್ವಾಮಿ, ನಾನು 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ ಸ್ಥಾಪಿಸುವುದಕ್ಕೆ ಉತ್ತೇಜನ ನೀಡಿದೆ. ಅದನ್ನೇ ಈಗ ಆತ್ಮನಿರ್ಭರ ಭಾರತ ಎಂದು ಮೋದಿ ಹೇಳುತ್ತಿದ್ದಾರೆ. ಬೀದಿ ಬದಿ ವ್ಯಾಪಾರಿಗಳಿಗೆ ಬಡ್ಡಿರಹಿತ ಸಾಲ ನೀಡಲು ಬಡವರ ಬಂಧು ಯೋಜನೆ ಜಾರಿಗೆ ತಂದಿದ್ದೆ, ಈಗ ಮೋದಿ ಅವರು 50 ಲಕ್ಷ ಬೀದಿ ಬದಿ ವ್ಯಾಪಾರಿಗಳಿಗೆ ಸಾಲ ನೀಡುತ್ತೇವೆ ಎಂದು ಘೋಷಣೆ ಮಾಡಿದ್ದಾರೆ. ಈ ದೇಶವನ್ನು ಬಾಂಗ್ಲಾದೇಶ, ವಿಯಾಟ್ನಾಂ ಜೊತೆ ಪೈಪೋಟಿ ನಡೆಸುವ ಹಂತಕ್ಕೆ ಮೋದಿ ತಂದಿದ್ದಾರೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜೆಡಿಎಸ್‌ ಕೇವಲ ಕೃಷಿಕರಿಗಾಗಿ ಇರುವ ಪಕ್ಷ ಅಲ್ಲ, ಕೈಗಾರಿಕೆಗಳ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದೆ. ಅದರಲ್ಲೂ ಬೆಂಗಳೂರಿನ ಪ್ರಗತಿಗೆ ನಮ್ಮ ಪಕ್ಷದ ಕೊಡುಗೆ ಅಪಾರ. ನಮ್ಮ ಮೆಟ್ರೋ, ಎಲಿವೇಟೆಡ್‌ ಕಾರಿಡಾರ್‌ನಂತಹ ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದು ನನ್ನ ಸರಕಾರದಲ್ಲಿ ಎಂದ ಅವರು, ಬೆಂಗಳೂರಿಗೆ ಕಾವೇರಿ ನೀರು ಸಿಗಲು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಾರಣ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ 6.5 ಕೋಟಿ ಕನ್ನಡಿಗರ ಭರವಸೆ ಈಡೇರಿಸಿಲ್ಲ. ಬದಲಾಗಿ ಅವರನ್ನು ಸಿಎಂ ಮಾಡಲು ಬೆಂಬಲ ನೀಡಿದ 17 ಶಾಸಕರ ಭರವಸೆ ಮಾತ್ರ ಈಡೇರಿಸಿದ್ದಾರೆ. ಬಿಜೆಪಿ ಪಕ್ಷ ಎರಡು ಕ್ಷೇತ್ರಗಳಲ್ಲಿ ಆರ್ಭಟದ ಪ್ರಚಾರ ನಡೆಸುತ್ತಿದೆ. ಆದರೆ, ಅಲ್ಲಿಗೆ ಬರುತ್ತಿರುವ ಯಾರು ಸ್ಥಳೀಯರಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಈಗಾಗಲೇ ಎರಡು ಕ್ಷೇತ್ರಗಳಲ್ಲಿ ನಾವು ಗೆದ್ದಿದ್ದೇವೆ ಎಂದು ಸಿಎಂ ಹೇಳುತ್ತಿರುವುದು ಸಂಶಯಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಇನ್ನು, ರಾಜರಾಜೇಶ್ವರಿ ನಗರದಲ್ಲಿ ರಾಷ್ಟ್ರೀಯ ಪಕ್ಷಗಳನ್ನು ಬಿಟ್ಟು ಪ್ರಾದೇಶಿಕ ಪಕ್ಷಕ್ಕೆ‌ ಅವಕಾಶ ನೀಡುವ ಅಲೆ ಕಾಣುತ್ತಾ ಇದೆ. ರಸ್ತೆಯಲ್ಲಿ ಪಟಾಕಿ ಹೊಡೆಯದೇ, ಅಬ್ಬರದ ಪ್ರಚಾರ ಮಾಡದೇ ಆತ್ಮೀಯವಾಗಿ ಜನರನ್ನು ಭೇಟಿ ನೀಡಿ ಮತ ಕೇಳಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ಇನ್ನು, ಈಗಾಗಲೇ ಸೀರೆ ಹಂಚುವ ಕಾರ್ಯಕ್ರಮ ಶುರು ಮಾಡಿದ್ದಾರೆ. ಇವರು ನ್ಯಾಯವಾಗಿ ಕೆಲಸ ಮಾಡಿದ್ದರೆ ಸೀರೆ, ಹಣ ಹಂಚಿ ವೋಟ್‌ ಕೇಳುವ ಪ್ರಮೇಯವೇ ಬರುತ್ತಿರಲಿಲ್ಲ ಎಂದು ತಿಳಿಸಿದರು.

ಆಗ ನಮ್ಮ ಪಕ್ಷದಲ್ಲಿದ್ದ ಹನುಮಂತರಾಯಪ್ಪ ಈಗ ಜಾತಿ ಹೆಸರು ಹೇಳುತ್ತಿದ್ದಾರೆ. ಹತ್ತು ವರ್ಷದಿಂದ ಒಕ್ಕಲಿಗರನ್ನು ಹಾಳು ಮಾಡಿರುವುದು ಯಾರು. ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ ಎಂದು ಹೇಳಿದ ಮಾಜಿ ಮುಖ್ಯಮಂತ್ರಿಗಳು ಕಾಂಗ್ರೆಸ್‌ನವರೇ ಒಬ್ಬ ವ್ಯಕ್ತಿಯನ್ನು ಕರೆದುಕೊಂಡು ಬಂದು ವೈಭವೀಕರಿಸಿ, ಈಗ ಅವರನ್ನೇ ನಂಬಬೇಡಿ ಎಂದು ಹೇಳುತ್ತಿದ್ದಾರೆ. ಯಾರನ್ನು ನಂಬಬೇಕು ಎನ್ನುವುದನ್ನು ಮತದಾರರು ಯೋಚಿಸಬೇಕು ಎಂದು ಹೇಳಿದ್ದಾರೆ.

ಇದೇ ಸಂದರ್ಭದಲ್ಲಿ ಮಾತನಾಡಿದ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್, ಬಿಜೆಪಿ ಸರ್ಕಾರ ಯಾವತ್ತಿಗೂ ಸ್ವಂತವಾಗಿ ರಚನೆಯಾಗಿಲ್ಲ. ಬೇರೆ ಪಕ್ಷದ ಶಾಸಕರ ರಾಜೀನಾಮೆ ಕೊಡಿಸಿ ಸರಕಾರ ರಚಿಸಿದ್ದಾರೆ. ಅದರಿಂದ ಮತ್ತೆ ಮತ್ತೆ ಚುನಾವಣೆಗಳು ಬರುತ್ತಿವೆ. ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದಿದೆ, ಕೊರೊನಾ ವೈರಸ್‌ನಿಂದ ಜನ ಸಾಯುತ್ತಿದ್ದಾರೆ. ಆದರೆ, ಸರಕಾರಕ್ಕೆ ಮಾತ್ರ ಚುನಾವಣೆ ಮುಖ್ಯವಾಗಿದೆ. ಯಾರಿಗೆ ಬೇಕಿತ್ತು ಈ ಚುನಾವಣೆ ಎಂದು ಪ್ರಶ್ನಿಸಿದ್ದಾರೆ.

ಲಕ್ಷಾಂತರ ಜನರಿಗೆ ಉದ್ಯೋಗ ನೀಡುತ್ತಿರುವ ಪೀಣ್ಯ ಇಂಡಸ್ಟ್ರೀಯಲ್ ಅಸೋಸಿಯೇಷನ್‌ಗಾಗಿ ಸರಕಾರ ಏನು ಮಾಡಿದೆ. ದ್ವೇಷದ ರಾಜಕೀಯ ಮಾಡುತ್ತಾ, ಕುಮಾರಸ್ವಾಮಿ ಅವರ ಸರ್ಕಾರ ಜಾರಿಗೆ ತಂದಿದ್ದ ಒಳ್ಳೆಯ ಯೋಜನೆಗಳನ್ನು ನಿಲ್ಲಿಸಿದರು. ಬೆಂಗಳೂರಿನ ಎಲ್ಲ ಕೆರೆಗಳ ಅಭಿವೃದ್ಧಿಗೆ ಕುಮಾರಣ್ಣ ಅನುದಾನ ನೀಡಿದ್ದರು. ಆದರೆ, ಅವರೆಲ್ಲಾ ಆ ಕೆರೆಗಳನ್ನು ಮಾರಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ಕೈಗಾರಿಕೋದ್ಯಮಿಗಳಿಗೆ ಅನುಕೂಲವಾಗುವ ಕಾರ್ಯಗಳನ್ನು ಖಂಡಿತವಾಗಿ ಮಾಡುತ್ತೇವೆ. ಈ ಬಾರಿ ಅವಕಾಶ ನೀಡಿ ಎಂದು ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮತಯಾಚಿಸಿದರು. ಈ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ರಮೇಶ್‌ಗೌಡ, ಮಾಜಿ ಪರಿಷತ್‌ ಸದಸ್ಯ ಟಿ.ಎ.ಶರವಣ, ಬೆಂಗಳೂರು ನಗರ ಜೆಡಿಎಸ್‌ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಬಿಬಿಎಂಪಿ ಮಾಜಿ ಸದಸ್ಯ ಅನ್ನದಾನಪ್ಪ, ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟ್‌ನ ಮಾಜಿ ಅಧ್ಯಕ್ಷರಾದ ಲತಾ ಹಾಗೂ ಹುಸ್ಸೇನ್‌ ಮತ್ತಿತರ ಉದ್ಯಮಿಗಳು ಇದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com