ಜನತೆಗೆ ನೀಡಿದ ಭರವಸೆ ಈಡೇರಿಸಲು ಯಾವುದೇ ಹೋರಾಟಕ್ಕೂ ಸಿದ್ದ -ಕುಮಾರಸ್ವಾಮಿ

ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಶಿರಾ ಪಟ್ಟಣದಲ್ಲಿ ಪ್ರಚಾರ ನಡೆಸಿದ ಕುಮಾರಸ್ವಾಮಿ, ತಾಲ್ಲೂಕಿನ ಜನತೆಗೆ ನೀಡಿರುವ ಭರವಸೆಯನ್ನು ಈಡೇರಿಸಲು ತಾನು ಯಾವುದೇ ಹೋರಾಟಕ್ಕೂ ಸಿದ್ದ ಎಂದು ಹೇಳಿದ್ದಾರೆ
ಜನತೆಗೆ ನೀಡಿದ ಭರವಸೆ ಈಡೇರಿಸಲು ಯಾವುದೇ ಹೋರಾಟಕ್ಕೂ ಸಿದ್ದ -ಕುಮಾರಸ್ವಾಮಿ

ತುಮಕೂರು- ಉಪಚುನಾವಣೆ ಮುಗಿದ ಬಳಿಕ ಶಿರಾ ತಾಲ್ಲೂಕಿನಲ್ಲಿರುವ 65 ಕೆರೆಗಳಿಗೆ ನೀರು ತುಂಬಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡದಿದ್ದರೆ, ಪಟ್ಟಣದಿಂದ ಬೆಂಗಳೂರಿನ ವಿಧಾನಸೌಧವರೆಗೆ ಪಾದಯಾತ್ರೆ ನಡೆಸುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಉಪಚುನಾವಣೆ ಹಿನ್ನೆಲೆ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಪರವಾಗಿ ಶಿರಾ ಪಟ್ಟಣದಲ್ಲಿ ಪ್ರಚಾರ ನಡೆಸಿದ ಕುಮಾರಸ್ವಾಮಿ, ತಾಲ್ಲೂಕಿನ ಜನತೆಗೆ ನೀಡಿರುವ ಭರವಸೆಯನ್ನು ಈಡೇರಿಸಲು ತಾನು ಯಾವುದೇ ಹೋರಾಟಕ್ಕೂ ಸಿದ್ದ ಎಂದು ಹೇಳಿದ್ದಾರೆ.

ಸಿರಾ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರ ನಡೆಸಿದ ಕುಮಾರಸ್ವಾಮಿ
ಸಿರಾ ಜೆಡಿಎಸ್‌ ಅಭ್ಯರ್ಥಿ ಅಮ್ಮಾಜಮ್ಮ ಪರ ಪ್ರಚಾರ ನಡೆಸಿದ ಕುಮಾರಸ್ವಾಮಿ

2006ರಲ್ಲಿ ನಾನು ಮುಖ್ಯಮಂತ್ರಿಯಾದ ವೇಳೆ ಶಿರಾದಲ್ಲಿ ಕುಡಿಯುವ ನೀರಿನ ತೊಂದರೆ ನೀಗಿಸಲು ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಕೈಗೆತ್ತಿಕೊಂಡಿದ್ದೆ. ಹಲವು ವರ್ಷಗಳಾದರೂ ಈ ಯೋಜನೆ ಅನುಷ್ಠಾನವಾಗದಿರುವುದು ಅತ್ಯಂತ ನೋವಿನ ಸಂಗತಿ. ಚುನಾವಣೆ ಮುಗಿದ ತಕ್ಷಣ ಸರ್ಕಾರ ಯೋಜನೆ ಅನುಷ್ಠಾನ ಮಾಡದಿದ್ದರೆ ತಾಲ್ಲೂಕಿನ ಜನತೆ ಪರವಾಗಿ ಬೆಂಗಳೂರಿನ ವಿಧಾನಸೌಧದವರೆಗೂ ಪಾದಯಾತ್ರೆ ನಡೆಸುತ್ತೇನೆ ಎಂದಿದ್ದಾರೆ

ನಾನು ಮುಖ್ಯಮಂತ್ರಿಯಾದ ವೇಳೆ ತಾಲ್ಲೂಕಿನ ಹೊನ್ನಗಾನಹಳ್ಳಿ ಗ್ರಾಮದಲ್ಲಿ ಗ್ರಾಮವಾಸ್ತವ್ಯ ಮಾಡಿದ್ದೆ. ಅಂದು ಮದಲೂರು ಕೆರೆ ವೀಕ್ಷಣೆ ನಡೆಸಿದ ವೇಳೆ ನೀರಿನ ಸಮಸ್ಯೆ ಇರುವುದು ಅರಿವಾಯಿತು. ಅಂದೇ ನಾನು ಕೆರೆಗಳಿಗೆ ನೀರು ತುಂಬಿಸಬೇಕೆಂಬ ತೀರ್ಮಾನ ಮಾಡಿದ್ದೇ ಎಂದು ಹೇಳಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಬೆಂಗಳೂರಿಗೆ ಹಿಂತಿರುಗಿದ ನಂತರ ಸಭೆ ನಡೆಸಿ ಶಿರಾದಲ್ಲಿರುವ ಎಲ್ಲಾ ಕೆರೆಗಳಿಗೆ ನೀರು ತುಂಬಿಸಲು ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೆ ಎಂದು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸುಮಾರು 850 ಕೋಟಿ ವೆಚ್ಚದಲ್ಲಿ ತಾಲ್ಲೂಕಿನಲ್ಲಿ ಕೆರೆಗಳಿಗೆ ನೀರು ತುಂಬಿಸಲು ಸಿಕಾನ್ ಎಂಬ ಖಾಸಗಿ ಕಂಪನಿಗೆ ನೀಡಲಾಗಿತ್ತು. ಆದರೆ ಆ ವೇಳೆಗೆ ನನ್ನ ಅಧಿಕಾರಾವಧಿ ಮುಗಿದ ಕಾರಣ ಯೋಜನೆ ನೆನೆಗುದಿಗೆ ಬಿದ್ದಿದೆ ಎಂದು ವಿಷಾದ ವ್ಯಕ್ತಪಡಿಸಿದ ಕುಮಾರಸ್ವಾಮಿ, ಹೇಮಾವತಿ ನದಿಯಿಂದ ನೀರು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಭದ್ರ ಮೇಲ್ದಂಡೆ ಯೋಜನೆಯಿಂದ ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ 19 ಟಿಎಂಸಿ ನೀರು ಬಳಸಿಕೊಂಡು ಯೋಜನೆಯನ್ನು ಅನುಷ್ಟಾನ ಮಾಡಲು ನಮ್ಮ ಸರ್ಕಾರ ತೀರ್ಮಾನಿಸಿತ್ತು ಎಂದು ತಿಳಿಸಿದ್ದಾರೆ.

ಚಿತ್ರದುರ್ಗದಲ್ಲಿ ಹಲವು ವರ್ಷಗಳಿಂದ ಕುಡಿಯುವ ನೀರಿಗಾಗಿ ಹೋರಾಟ ನಡೆಸುತ್ತಿದ್ದರು. ಹೀಗಾಗಿ ಸುಮಾರು ಒಂದೂವರೆ ಲಕ್ಷ ಹೆಕ್ಟೇರ್ ನೀರಾವರಿ ಪ್ರದೇಶಕ್ಕೆ ಭದ್ರತಾ ಮೇಲ್ದಂಡೆ ಯೋಜನೆಯಿಂದ 4,500 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿತ್ತು. ಐದು ವರ್ಷ ಆಡಳಿತ ನಡೆಸಿದ ಬಿಜೆಪಿಯವರು ಹಾಗೂ ಕಾಂಗ್ರೆಸಿಗರು ತಾಲ್ಲೂಕಿನ ಅಭಿವೃದ್ಧಿ ಬಗ್ಗೆ ಗಮನಕೊಡಲಿಲ್ಲ. ಈಗ ಉಪಚುನಾವಣೆ ಬಂದಿದೆ ಎಂಬ ಒಂದೇ ಕಾರಣಕ್ಕಾಗಿ ಕೆರೆಗಳಿಗೆ ನೀರು ತುಂಬಿಸುವ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಅಧಿಕಾರದಲ್ಲಿದ್ದಾಗ ಈ ಕೆಲಸವನ್ನು ಏಕೆ ಮಾಡಲಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಹಿಂದಿನ ಕಾಂಗ್ರೆಸ್ ಅವಧಿಯಲ್ಲಿ ಸ್ವತಃ ಸಣ್ಣ ನೀರಾವರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಟಿ.ಬಿ.ಜಯಚಂದ್ರ ಅವರು ತಾಲ್ಲೂಕಿನಲ್ಲಿರುವ ಎಷ್ಟು ಕೆರೆಗಳಿಗೆ ನೀರು ತುಂಬಿಸಿದರು. ಅಂದು ನೀವು ತಾಲ್ಲೂಕಿನ ಅಭಿವೃದ್ಧಿಗೆ ಗಮನಹರಿಸಿದ್ದರೆ ಇಂದು ಜನತೆ ಕುಡಿಯುವ ನೀರಿಗೆ ಪರಿತಪಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತೇ ಎಂದು ಹರಿಹಾಯ್ದರು.

ಹಲವಾರು ವರ್ಷಗಳಿಂದ ಶಿರಾವನ್ನು ಎಲ್ಲ ರಾಜಕೀಯ ಪಕ್ಷಗಳು ಕಡೆಗಣನೆ ಮಾಡಿವೆ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂದು ನಿಶ್ಚಯಿಸಿದ್ದೇನೆ. ತಾಲೂಕಿನ ಸಮಸ್ಯೆಗೆ ಇತಿಶ್ರೀ ಹಾಡುತ್ತೇನೆ ಎಂದು ವಾಗ್ದಾನ ಮಾಡಿದ್ದಾರೆ.

ನವೆಂಬರ್ 3ರಂದು ನಡೆಯಲಿರುವ ಉಪಚುನಾವಣೆಯಲ್ಲಿ ಕ್ಷೇತ್ರದ ಜನತೆ ಯಾವುದೇ ಆಸೆ ಆಮಿಷಗಳು, ಸುಳ್ಳು ಆಶ್ವಾಸನೆಗಳು, ಪೊಳ್ಳು ಭರವಸೆಗಳಿಗೆ ಬಲಿಯಾಗಬೇಡಿ. ನಮ್ಮ ಪಕ್ಷದ ಅಭ್ಯರ್ಥಿಯಾಗಿರುವ ಅಮ್ಮಾಜಮ್ಮ ಅವರಿಗೆ ನಿಮ್ಮ ಅಮೂಲ್ಯವಾದ ಮತ ನೀಡಿ ಹೆಚ್ಚಿನ ಮತಗಳಿಂದ ಆಯ್ಕೆ ಮಾಡಿ ಎಂದು ಕರೆ ನೀಡಿದ್ದಾರೆ.

ನಾನು ಈಗ ಏನು ವಾಗ್ದಾನ ಮಾಡಿದ್ದೇನೋ ಅದನ್ನು ಖಂಡಿತ ಈಡೇರಿಸಿಕೊಡುತ್ತೇನೆ. ಜೆಡಿಎಸ್‍ನ ಮೇಲೆ ಭರವಸೆಯಿಟ್ಟು ನಮ್ಮನ್ನು ಕೈಹಿಡಿಯಿರಿ ಎಂದು ಕುಮಾರಸ್ವಾಮಿ ಜನತೆಗೆ ಮನವಿ ಮಾಡಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com