ದುರಂಹಕಾರದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಿ: ನಿಖಿಲ್ ಕುಮಾರಸ್ವಾಮಿ

ಜೆಡಿಎಸ್‌ ಪಕ್ಷಕ್ಕೆ ಸಿಕ್ಕ ಅಲ್ಪಾವಧಿಯಲ್ಲಿಯೇ ಸಮಾಜಮುಖಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. 2018ರಲ್ಲಿ ಕುಮಾರಸ್ವಾಮಿಯವರಿಗೆ ಅಧಿಕಾರವನ್ನು ಕೊಟ್ಟ ಕಾಂಗ್ರೆಸ್‌, ಅಭಿವೃದ್ಧಿ ವಿಚಾರಗಳಲ್ಲಿ ಅವರ ಕೈಯನ್ನು ಕಟ್ಟಿ ಹಾಕಿತ್ತು.
ದುರಂಹಕಾರದ ರಾಷ್ಟ್ರೀಯ ಪಕ್ಷಗಳಿಗೆ ತಕ್ಕಪಾಠ ಕಲಿಸಿ: ನಿಖಿಲ್ ಕುಮಾರಸ್ವಾಮಿ

ಹಣದಿಂದ ಮತಗಳನ್ನು ಖರೀದಿಸುತ್ತೇವೆ ಎಂಬ ದುರಹಂಕಾರದ ಪರಮಾವಧಿಯಲ್ಲಿ ಬಿಜೆಪಿ, ಕಾಂಗ್ರೆಸ್‌ ಪಕ್ಷಗಳಿವೆ. ನಿಮ್ಮ ಮತಗಳನ್ನು ದುರುಪಯೋಗಪಡಿಸಿಕೊಂಡವರಿಗೆ ತಕ್ಕ ಪಾಠ ಕಲಿಸಿ ಎಂದು ಯುವ ಜನತದಾಳದ ರಾಜ್ಯಾಧ್ಯಕ್ಷ ಹಾಗೂ ನಟ ನಿಖಿಲ್‌ ಕುಮಾರಸ್ವಾಮಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಪರ ರೋಡ್‌ ಶೋ ನಡೆಸಿ ಮತಯಾಚಿಸಿದ ಅವರು, ಉತ್ತರ ಕರ್ನಾಟಕದಲ್ಲಿ ಪ್ರವಾಹ ಬಂದು ಜನರ ಬದುಕು ಕಷ್ಟದಲ್ಲಿದೆ. ಆದರೆ, ಸರಕಾರಕ್ಕೆ ಮಾತ್ರ ಚುನಾವಣೆಯೇ ಮುಖ್ಯವಾಗಿದೆ. ಕರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಕರ್ನಾಟಕ ರಾಷ್ಟ್ರದಲ್ಲಿಯೇ ಎರಡನೇ ಸ್ಥಾನಕ್ಕೆ ಬಂದು ನಿಂತಿದೆ ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಜೆಡಿಎಸ್‌ ಪಕ್ಷಕ್ಕೆ ಸಿಕ್ಕ ಅಲ್ಪಾವಧಿಯಲ್ಲಿಯೇ ಸಮಾಜಮುಖಿ ಅಭಿವೃದ್ಧಿ ಕೆಲಸಗಳನ್ನು ಮಾಡಿದೆ. 2018ರಲ್ಲಿ ಕುಮಾರಸ್ವಾಮಿಯವರಿಗೆ ಅಧಿಕಾರವನ್ನು ಕೊಟ್ಟ ಕಾಂಗ್ರೆಸ್‌, ಅಭಿವೃದ್ಧಿ ವಿಚಾರಗಳಲ್ಲಿ ಅವರ ಕೈಯನ್ನು ಕಟ್ಟಿ ಹಾಕಿತ್ತು. ದೇಶದ ಇತಿಹಾಸದಲ್ಲಿ ಯಾವುದೇ ಮುಖ್ಯಮಂತ್ರಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಿದ್ದಿಲ್ಲ. ಅದನ್ನು ಕುಮಾರಸ್ವಾಮಿಯವರು ಮಾಡಿ ತೋರಿಸಿದ್ದಾರೆ ಎಂದಿದ್ದಾರೆ.

ಯುವಕರು ರಾಜಕೀಯಕ್ಕೆ ಬರುವ ಮುಂಚೆ ಯೋಚನೆ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ. ಬೆಳಗ್ಗೆ ಒಂದು ಪಕ್ಷ, ಮಧ್ಯಾಹ್ನ ಒಂದು ಪಾರ್ಟಿ, ರಾತ್ರಿ ಒಂದು ಪಕ್ಷ ಅಂತಾ ಪಕ್ಷ ಬದಲಾಯಿಸುತ್ತಾರೆ. ನಾಳೆ ಬೆಳಗ್ಗೆ ಅವರಿಗೆ ನೀವು ಯಾವ ಪಕ್ಷ ಎಂದು ಕೇಳಿದರೆ, ಅವರು ಯೋಚನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದ ಅವರು, ನನ್ನ ಮತ್ತು ಮುನಿರತ್ನ ಸಂಬಂಧ ಕೇವಲ ಸಿನಿಮಾಗೆ ಮಾತ್ರ, ಸುಖಾಸುಮ್ಮನೆ ಗೊಂದಲ ಸೃಷ್ಟಿಸಬೇಡಿ ಎಂದು ಪುನರುಚ್ಛರಿಸಿದ್ದಾರೆ.

ಜೆಡಿಎಸ್‌ ಅಭ್ಯರ್ಥಿ ವಿ.ಕೃಷ್ಣಮೂರ್ತಿ ಮಾತನಾಡಿ, ಮುನಿರತ್ನ ಮೊದಲೇ ಸಿನಿಮಾ ನಿರ್ಮಾಪಕರು, ಅವರಿಗೆ ಕಣ್ಣೀರು ಹಾಕೋದು ಗೊತ್ತು, ಕಣ್ಣೀರು ಹಾಕಿಸೋದು ಗೊತ್ತು. ಕಾಂಗ್ರೆಸ್‌ನವರಿಗೆ ಎಲೆಕ್ಷನ್‌ ಬಂದಾಗ ಜಾತಿ ಮೇಲೆ ಪ್ರೀತಿ ಬಂದಿದೆ. ನಾನು ಕೂಡ ಒಕ್ಕಲಿಗನೇ ಆದರೆ, ಎಲ್ಲಿಯೂ ಒಕ್ಕಲಿಗ ಎಂಬ ಟ್ರಂಪ್‌ ಕಾರ್ಡ್‌ ಬಳಸಿಲ್ಲ. ರಾಷ್ಟ್ರೀಯ ಪಕ್ಷಗಳ ಕಿತ್ತಾಟ ನೋಡುತ್ತಿರುವ ಜನ ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇನ್ನು, ಮಾಜಿ ಪರಿಷತ್‌ ಸದಸ್ಯ ಟಿ.ಎ. ಶರವಣ ಮಾತನಾಡಿ, ಬಿಹಾರ ಚುನಾವಣೆಯಲ್ಲಿ ಬಿಜೆಪಿ ನಾಯಕರು ಹೇಳುತ್ತಾರೆ. ನಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದರೆ ಕೊರೊನಾ ಲಸಿಕೆಯನ್ನು ಉಚಿತವಾಗಿ ನೀಡುತ್ತೀವಿ ಎಂದು, ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತರದಿದ್ದರೆ ನಮ್ಮ ಜನರನ್ನು ಸಾಯಿಸುತ್ತೀರಾ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕರು ಜೆಡಿಎಸ್ ಪಕ್ಷವನ್ನು ಸಮಾಧಿ ಮಾಡುತ್ತೇವೆ ಎನ್ನುತ್ತಾರೆ. ರಾಜ್ಯದ 6.5 ಕೋಟಿ ಕನ್ನಡಿಗರು ನಮ್ಮ ಪರವಾಗಿ ಇರುವ ತನಕ ನಮ್ಮ ಪಕ್ಷ ಸಮಾಧಿ ಆಗಲ್ಲ. ದುಶ್ಯಾಸನನಂತಹ ಬಿಜೆಪಿ ಅಭ್ಯರ್ಥಿಗೆ ಮತ ಹಾಕಬೇಡಿ. ಕೊರೊನಾಗಿಂತಲೂ ಅಪಾಯಕಾರಿಯಾದ ಎರಡು ರಾಷ್ಟ್ರೀಯ ಪಕ್ಷಗಳನ್ನು ನಂಬಬೇಡಿ. ಅವರು ನೋಟು ಕೊಟ್ಟರೆ ತೆಗೆದುಕೊಳ್ಳಿ, ಕೃಷ್ಣಮೂರ್ತಿ ಅವರಿಗೆ ಮತ ಹಾಕಿ ಎಂದು ಹೇಳಿದ್ದಾರೆ.

ಯಶವಂತಪುರ, ಜೆಪಿ ಪಾರ್ಕ್‌, ಜಾಲಹಳ್ಳಿ ಹಾಗೂ ಎಚ್‌ಎಂಟಿ ವಾರ್ಡ್‌ಗಳಲ್ಲಿ ಜೆಡಿಎಸ್‌ ನಾಯಕರು ಬಹಿರಂಗ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರ ಜೆಡಿಎಸ್‌ ಘಟಕದ ಅಧ್ಯಕ್ಷ ಆರ್‌.ಪ್ರಕಾಶ್‌, ಆರ್‌ಆರ್‌ ನಗರ ಜೆಡಿಎಸ್‌ ಅಧ್ಯಕ್ಷ ಚನ್ನಕೇಶವಮೂರ್ತಿ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com