ಬೆಂಗಳೂರು ದುಸ್ಥಿತಿಗೆ ಕಾಂಗ್ರೆಸ್ ಕಾರಣವೆಂದ ರಾಜೀವ್‌ ಚಂದ್ರಶೇಖರ್‌;‌ ಹಿಂದಿನ BJP ಸರ್ಕಾರ ಮಾಡಿದ್ದೇನು?

ಬೆಂಗಳೂರಿನ ಅಭಿವೃದ್ದಿಯನ್ನು ಯಾವ ರೀತಿ ಮಾಡುತ್ತೇವೆಂಬ ಕುರಿತು ಮಾತನಾಡದ ಬಿಜೆಪಿ ನಾಯಕರ ಸಾಲಿಗೆ ಇನ್ನೊಂದು ಸೇರ್ಪಡೆ ರಾಜೀವ್‌ ಚಂದ್ರಶೇಖರ್‌. ಇದರ ಹೊರತಾಗಿ ಅವರು ಬೇರೆ ಏನನ್ನೂ ಸಾಧಿಸಲಿಲ್ಲ.
ಬೆಂಗಳೂರು ದುಸ್ಥಿತಿಗೆ ಕಾಂಗ್ರೆಸ್ ಕಾರಣವೆಂದ ರಾಜೀವ್‌ ಚಂದ್ರಶೇಖರ್‌;‌ ಹಿಂದಿನ BJP ಸರ್ಕಾರ ಮಾಡಿದ್ದೇನು?

ತಮ್ಮ ತಪ್ಪುಗಳನ್ನು ಇತರರ ಮೇಲೆ ಹೊರಿಸುವುದು ಬಿಜೆಪಿ ಸರ್ಕಾರದ ಹಳೇ ಚಾಳಿ. ಕೇಂದ್ರದಲ್ಲಿ ಯಾವುದಾದರೂ ಯೋಜನೆ ಹಳಿ ತಪ್ಪಿದರೆ ಅದಕ್ಕೆ ದೇಶದ ಮೊದಲ ಪ್ರಧಾನಿ ಜವಾಹರ್‌ ಲಾಲ್‌ ನೆಹರೂ ಅವರೇ ಕಾರಣರಾಗುತ್ತಾರೆ. ಅವರ ಮೇಲೆ ಗೂಬೆ ಕೂರಿಸುವುದು ಬಿಜೆಪಿಯ ನಾಯಕರು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪದ್ದತಿ. ಇದನ್ನು ಈಗಲೂ ಮುಂದುವರೆಸುತ್ತಾ ಬಂದಿರುವ ನಾಯಕರಿಗೆ ಒಂದು ಶಹಬ್ಬಾಸ್‌ಗಿರಿ ನೀಡಲೇಬೇಕು.

ಈಗ ಹಳೆಯ ಕಾಂಗ್ರೆಸ್‌ ಸರ್ಕಾರದ ಮೇಲೆ ಗೂಬೆ ಕೂರಿಸುವ ಜವಾಬ್ದಾರಿಯನ್ನು ತನ್ನ ಮೇಲೆ ಹೊತ್ತುಕೊಂಡುವರು, ಬಿಜೆಪಿಯ ರಾಜ್ಯಸಭಾ ಸಂಸದ ರಾಜೀವ್‌ ಚಂದ್ರಶೇಖರ್‌ ಅವರು. ಕಳೆದ ವಾರ ಬೆಂಗಳೂರಿನಾದ್ಯಂತ ಸುರಿದ ಭಾರೆ ಮಳೆಗೆ ನೀರು ರಸ್ತೆಗೆ ನುಗ್ಗಿದ್ದಕ್ಕೆ ಹಿಂದಿನ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬೆಂಗಳೂರನ್ನು ನೋಡಲು ಸಾಧ್ಯವಿಲ್ಲ. ಹಿಂದಿನ ಕಾಂಗ್ರೆಸ್‌ ಸರ್ಕಾರದಲ್ಲಿ ನಡೆದ ಒತ್ತುವರಿ ಮತ್ತು ಅಕ್ರಮ ಕಟ್ಟಡ ನಿರ್ಮಾಣದಿಂದಾಗಿ ಬೆಂಗಳೂರಿಗೆ ಈ ಪರಿಸ್ಥಿತಿ ಒದಗಿ ಬಂದಿದೆ ಎಂದು ಅವರು ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕಳೆದ ಶುಕ್ರವಾರ ಸುರಿದ ಭಾರಿ ಮಳೆಗೆ ಸುಮಾರು 300 ಮನೆಗಳಿಗೆ ನೀರು ನುಗ್ಗಿದ್ದು, 500 ವಾಹನಗಳು ಕೊಚ್ಚಿ ಹೋಗಿದ್ದವು. ಗುರುದತ್ತಾ ಲೇಔಟ್‌, ದತ್ತಾತ್ರೆಯ ನಗರ, ಕೋರಮಂಗಲ ಮತ್ತು ಹೊಸಕೆರೆ ಹಳ್ಳಿ ಮುಂತಾದ ಪ್ರದೇಶಗಳು ನೀರಿನಿಂದ ಆವೃತವಾಗಿದ್ದವು. ರಾಜರಾಜೇಶ್ವರಿ ನಗರದ ಭೀಮನಕಟ್ಟೆ ಒಡೆದು 20 ಮನೆಗಳಿಗೆ ಹಾನಿಯುಂಟಾಗಿತ್ತು. ಇಂತಹ ಮಳೆಯನ್ನು ನಾವು ನಿರೀಕ್ಷಿಸಿಯೇ ಇರಲಿಲ್ಲ ಎಂದು ಬಿಬಿಎಂಪಿ ಕಮಿಷನರ್‌ ಮಂಜುನಾಥ್‌ ಪ್ರಸಾದ್‌ ಅವರು ಹೇಳಿದ್ದರು.

ನಿರೀಕ್ಷಿಸದೆಯೇ ಇರುವ ಮಳೆಗೆ ರಾಜೀವ್‌ ಚಂದ್ರಶೇಖರ್‌ ಅವರು ಹಿಂದಿನ ಕಾಂಗ್ರೆಸ್‌ ಸರ್ಕಾರವನ್ನು ಹೊಣೆಗಾರರನ್ನಾಗಿಸಿದ್ದಾರೆ. ಇದು ಕೇವಲ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರವೇ ಕಾರಣ ಎಂದು ಹೇಳಿರುವುದು ಅತ್ಯಂತ ಬೇಜವಾಬ್ದಾರಿಯುತ ಹೇಳಿಕೆ. ಏಕೆಂದರೆ, ಬೆಂಗಳೂರಿನ ಇಂದಿನ ಪರಿಸ್ಥಿತಿಗೆ ಈ ಹಿಂದಿನ ಎಲ್ಲಾ ಸರ್ಕಾರಗಳು ಕಾರಣ. ಕೇವಲ ಕಾಂಗ್ರೆಸ್‌ ಮಾತ್ರವಲ್ಲಿ. ಅದರ ಹಿಂದೆ ಮೂವರು ಸಿಎಂಗಳಿದ್ದ ಬಿಜೆಪಿ ಸರ್ಕಾರವೂ ಅಷ್ಟೇ ಕಾರಣವಾಗುತ್ತದೆ.

ಹಾಗೆ ನೋಡಿದರೆ, ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದಾಗ ಬೆಂಗಳೂರಿನ ಅಭಿವೃದ್ದಿಗೆ ಸಾಕಷ್ಟು ಅನುದಾನವನ್ನು ನೀಡಲಾಗಿತ್ತು. ಅಂದಿನ ಬೆಂಗಳೂರು ನಗರಾಭಿವೃದ್ದಿ ಸಚಿವರಾಗಿದ್ದ ಕೆ ಜೆ ಜಾರ್ಜ್‌ ಅವರ ನೇತೃತ್ವದಲ್ಲಿ ಸುಮಾರು ರೂ. 10,300 ಕೋಟಿಯಷ್ಟು ಅನುದಾನವನ್ನು ಬೆಂಗಳೂರಿನ ಅಭಿವೃದ್ದಿಗಾಗಿ ನೀಡಲಾಗಿತ್ತು. ರಸ್ತೆ ಅಭಿವೃದ್ದಿ ಅದರಲ್ಲೂ ಮುಖ್ಯವಾಗಿ ವೈಟ್‌ ಟಾಪಿಂಗ್‌ ಕಾಮಗಾರಿ ಈ ಸಂದರ್ಭದಲ್ಲಿ ಆರಂಭಿಸಲಾಗಿತ್ತು, ಬೆಂಗಳೂರಿನ ಬಹುತೇಕ ರಸ್ತೆಗಳು ಅಭಿವೃದ್ದಿಯ ಹಂತದೆಡೆಗೆ ಸಾಗಿದ್ದವು.

ಬಿಬಿಎಂಪಿಯಿಂದ ಸುಮಾರು 15,000 ರಸ್ತೆಯ ಹೊಂಡಗಳನ್ನು ಮುಚ್ಚುವ ಕ್ರಮವನ್ನು ಕೈಗೊಳ್ಳಲಾಗಿತ್ತು. ಇದರ ಜೊತೆಗೆ ಚರಂಡಿಯಲ್ಲಿ ತುಂಬಿರುವ ಹೂಳು ಮತ್ತು ಕಸ ಕಡ್ಡಿಗಳನ್ನು ಹೊರತೆಗೆದು ಸ್ವಚ್ಚಗೊಳಿಸುವ ಕೆಲಸವನ್ನೂ ಮಾಡಲಾಗಿತ್ತು.

ಅದರಲ್ಲೂ ಹವಾಮಾನ ಇಲಾಖೆಯ ವರದಿಯ ಪ್ರಕಾರ 2017ರ ಆಗಸ್ಟ್‌ ತಿಂಗಳಲ್ಲಿ ಸುರಿದ ಮಳೆ 1890ರ ಆಗಸ್ಟ್‌ನ ನಂತರ ಅಂದೇ ಮೊದಲ ಬಾರಿ. ಆಗಸ್ಟ್‌ 15, 2017ರಂದು ಸಂಜೆ ಮೂರರಿಂದ ಆರು ಗಂಟೆಯವರೆಗೆ ಸುರಿದ ಮಳೆ ತುಂಬಾ ಭಯಾನಕವಾಗಿತ್ತು. ಇಂತಹ ಸಂದರ್ಭದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿ ನಿಜಕ್ಕೂ ಬೆಂಗಳೂರನ್ನು ತಲ್ಲಣಗೊಳಿಸಿತ್ತು. ಸಂಪೂರ್ಣವಾಗಿ ಅತಂತ್ರಗೊಂಡಿದ್ದ ಬೆಂಗಳೂರನ್ನು ಮತ್ತೆ ಸಹಜ ಸ್ಥಿತಿಗೆ ಮರಳಿಸುವ ಕೆಲಸವನ್ನು ಅಂದಿನ ಸಿದ್ದರಾಮಯ್ಯ ಸರ್ಕಾರ ಮಾಡಿತ್ತು. ಸುಮಾರು 400 ಕಿಲೋಮೀಟರ್‌ಗಳಷ್ಟು ಉದ್ದದ ಚರಂಡಿಯನ್ನು ಹೊಸದಾಗಿ ನಿರ್ಮಿಸಲಾಗಿತ್ತು. ಇದರಿಂದಾಗಿ ಬೆಂಗಳೂರಿನ ಒಳ ಚರಂಡಿ ವ್ಯವಸ್ಥೆ ವ್ಯವಸ್ಥಿತವಾಗಿ ತಯಾರಾಗಿತ್ತು.

ಆದರೆ, ಇದಕ್ಕೂ ಹಿಂದೆ ಅಂದರೆ, 2008ರಿಂದ 2013ರವರೆಗೆ ಮೂರು ಸಿಎಂಗಳನ್ನು ಹೊಂದಿದ್ದ ಬಿಜೆಪಿ ಸರ್ಕಾರ ಭಾರೀ ಮಳೆಗೆ ಎಷ್ಟು ಸಿದ್ದವಾಗಿತ್ತು ಮತ್ತು ಆ ಸಂದರ್ಭದಲ್ಲಿ ಆದಂತಹ ಒತ್ತುವರಿ ಎಷ್ಟರ ಮಟ್ಟದ್ದು ಎಂದು ಲೆಕ್ಕ ಹಾಕುವಷ್ಟು ಸಮಯ ಹಾಗೂ ಸಮಾಧಾನ ರಾಜೀವ್‌ ಚಂದ್ರಶೇಖರ್‌ ಅವರಿಗೆ ಇರಲಿಲ್ಲ ಎಂದನಿಸುತ್ತದೆ.

2008ರಿಂದ 2013ರ ವರೆಗೆ ನಡೆದಿರುವ ಚರಂಡಿ ಕಾಮಗಾರಿಯ ಪ್ರಗತಿ ನಿಜಕ್ಕೂ ಶೋಚನೀಯ, ಇಂದು ಬೆಂಗಳೂರು ಪ್ರತೀ ಗಂಟೆಗೆ ಸುಮಾರು 90 ಮಿಲಿಮೀಟರ್‌ನಷ್ಟು ಮಳೆಯನ್ನು ತಡೆಯುವ ಶಕ್ತಿ ಹೊಂದಿದೆ. ಆದರೆ, ಇದೇ ಬೆಂಗಳೂರಿನಲ್ಲಿ 2012-13ರಲ್ಲಿ ಪ್ರತೀ ಗಂಟೆಗೆ 45 ಮಿಲಿಮೀಟರ್‌ನಷ್ಟು ಮಳೆಯನ್ನು ತಡೆಯುವ ಶಕ್ತಿ ಮಾತ್ರ ಇತ್ತು. 5 ವರ್ಷದ ಆಡಳಿತವಿದ್ದರೂ ಒಳ ಚರಂಡಿ ವ್ಯವಸ್ಥೆಯನ್ನು ಸುಧಾರಿಸುವ ಗೋಜಿಗೆ ಅಂದಿನ ಬಿಜೆಪಿ ಸರ್ಕಾರ ಹೋಗಿರಲಿಲ್ಲ.

ಇನ್ನು ಕಾಂಗ್ರೆಸ್‌ ಸರ್ಕಾರ ಆಡಳಿತದಲ್ಲಿದ್ದಾಗ ಬೆಂಗಳೂರಿನಲ್ಲಿ ಒತ್ತುವರಿಯಾಗಿದ್ದ ಪ್ರದೇಶಗಳ ಕುರಿತು ಸಮೀಕ್ಷೆಯನ್ನು ನಡೆಸಿತ್ತು. ಕೆ ಬಿ ಕೋಳಿವಾಡ ಅವರ ನೇತೃತ್ವದ ಸಮಿತಿ ಇದರ ವರದಿಯನ್ನು ನೀಡಿತ್ತು. ವರದಿಯ ಪ್ರಕಾರ ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸುಮಾರು 10,472 ಎಕರೆಯಷ್ಟು ಪ್ರದೇಶ ಒತ್ತುವರಿಯಾಗಿತ್ತು. ಇದರಲ್ಲಿ ಖಾಸಗಿ ವ್ಯಕ್ತಿಗಳ ಪಾಲು 7,185 ಎಕರೆ. ಇಷ್ಟೂ ಒತ್ತುವರಿ ಕೇವಲ ಸಿದ್ದರಾಮಯ್ಯ ಸರ್ಕಾರವಿದ್ದಾಗ ಆಯಿತೇ?

ಈ ಹಿಂದೆ ಸಾವಿರಾರು ಎಕರೆಗಳಿಗೆ ಹಬ್ಬಿದ್ದ ಕಾಡು ಈಗ ಒತ್ತುವರಿಯಿಂದಾಗಿ ಸಾಕಷ್ಟು ಕಡಿಮೆಯಾಗಿದೆ. 2010ರಲ್ಲಿ ಲೋಕಾಯುಕ್ತ ಸಂಸ್ಥೆಗೆ ಅಂದಿನ ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸುವೋ ಮೋಟೊ ಕೇಸು ದಾಖಲಿಸಲು ಅನುಮತಿ ನೀಡಿದ್ದಲ್ಲಿ, ತುರಹಳ್ಳಿ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿದವರ ವಿರುದ್ದ ಕ್ರಮ ಕೈಗೊಳ್ಳಲು ಅವಕಾಶವಿತ್ತು. ಆದರೆ, ಆ ಕೆಲಸ ಅನಗತ್ಯವಾಗಿ ವಿಳಂಬವಾಗಿತ್ತು.

ಇಷ್ಟು ಮಾತ್ರವಲ್ಲದೇ, ಯಡಿಯೂರು ಕೆರೆ ಒತ್ತುವರಿಯೂ ಸರ್ಕಾರದ ಗಮನಕ್ಕೆ ಬಂದಿದ್ದರೂ, ಅದನ್ನು ತೆರವುಗೊಳಿಸುವ ಪ್ರಯತ್ನ ಸರ್ಕಾರದಿಂದ ಆಗಿರಲಿಲ್ಲ. ಯಡಿಯೂರು ಕೆರೆಯ 8 ಎಕರೆ 2 ಗುಂಟೆ ಜಾಗವನ್ನು ಒತ್ತವರಿ ಮಾಡಲಾಗಿತ್ತು. ಟ್ಯಾಂಕ್‌ ಬಂಡ್‌ ಪ್ರದೇಶದಲ್ಲಿಯೂ ಸುಮಾರು 6 ಎಕರೆಯಷ್ಟು ಒತ್ತುವರಿಯಾಗಿತ್ತು. ಖಾಸಗಿಯವರು ಈ ಭೂಮಿಯನ್ನು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಂಡಿದ್ದರು. ಇದು ಕೂಡಾ ಇಂದಿನ ಬೆಂಗಳೂರಿನ ದುಸ್ಥಿತಿಗೆ ಕಾರಣ.

ಇನ್ನು ವೈಟ್‌ಫೀಲ್ಡ್‌ ಬಳಿ ಸುಮಾರು 40 ಎಕರೆಯಷ್ಟು ಸರ್ಕಾರಿ ಜಮೀನನ್ನು ಒತ್ತುವರಿ ಮಾಡಲಾಗಿತ್ತು. 2011ರಲ್ಲಿ ಕರ್ನಾಟಕ ಸರ್ಕಾರದ ಹಿಂದಿನ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಬಾಲಸುಬ್ರಹ್ಮಣ್ಯಂ ಅವರು ನೀಡಿದ ವರದಿಯನ್ನು ಅಚ್ಚು ಹಾಕಿಸಲು ಕೂಡಾ ಅಂದಿನ ಬಿಜೆಪಿ ಸರ್ಕಾರ ಹಿಂದೇಟು ಹಾಕಿತ್ತು. “ಸುಮಾರು ರೂ. 2,20,000 ಖರ್ಚು ಮಾಡಿ ನಾನೇ ಪ್ರಿಂಟ್‌ ಮಾಡಿದೆ,” ಎಂದು ಬಾಲಸುಬ್ರಹ್ಮಣ್ಯಂ ನೋವು ತೋಡಿಕೊಂಡಿದ್ದರು.

2012ರಲ್ಲಿ ಅಂದಿನ ಅರಣ್ಯ ಸಚಿವರಾಗಿದ್ದ ಸಿ ಪಿ ಯೋಗೇಶ್ವರ್‌ ಅವರು ಸುಮಾರು 7,000 ಕೋಟಿಯಷ್ಟು ಬೆಲೆ ಬಾಳುವ ಭೂಮಿ ಒತ್ತುವರಿಯಾಗಿದೆ ಎಂದು ಒಪ್ಪಿಕೊಂಡಿದ್ದರು.

ಇಷ್ಟೆಲ್ಲಾ ನಿದರ್ಶನಗಳು ಕಣ್ಣಿನ ಮುಂದೆ ಇದ್ದರೂ, ಬಿಜೆಪಿ ನಾಯಕರಿಗೆ ಇನ್ನೂ ನೆಹರೂ ಮತ್ತು ಸಿದ್ದರಾಮಯ್ಯನವರೇ ಕಣ್ಣಿಗೆ ಕಾಣುತ್ತಾರೆ. ಕಳ್ಳನಿಗೆ ಒಂದು ಪಿಳ್ಳೆ ನೆವ ಎನ್ನುವ ಹಾಗೇ ತಾವು ಮಾಡಿರುವ ತಪ್ಪುಗಳನ್ನು ಮುಚ್ಚಿ ಹಾಕಲು ಬಿಜೆಪಿ ನಾಯಕರಿಗೆ ಒಂದು ನೆವ ಬೇಕಷ್ಟೇ. ಅದರ ಹೊರತಾಗಿ, ಅಭಿವೃದ್ದಿಯನ್ನು ಯಾವ ರೀತಿ ಮಾಡುತ್ತೇವೆಂಬ ಕುರಿತು ಮಾತನಾಡದ ಬಿಜೆಪಿ ನಾಯಕರ ಸಾಲಿಗೆ ಇನ್ನೊಂದು ಸೇರ್ಪಡೆ ರಾಜೀವ್‌ ಚಂದ್ರಶೇಖರ್‌. ಇದರ ಹೊರತಾಗಿ ಅವರು ಬೇರೆ ಏನನ್ನೂ ಸಾಧಿಸಲಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com