ವಿವಾದಿತ ಸಿಗಂದೂರು ದೇವಾಲಯದ ಆಡಳಿತ ನಿರ್ವಹಣೆಗಾಗಿ ಜಿಲ್ಲಾಧಿಕಾರಿ ನೇತೃತ್ವದ ಹಂಗಾಮಿ ಆಡಳಿತ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ದೇವಾಲಯದಲ್ಲಿ ತಲೆದೋರಿರುವ ಗೊಂದಲದ ಹಿನ್ನೆಲೆಯಲ್ಲಿ ನಿತ್ಯದ ವ್ಯವಹಾರಗಳ ಜೊತೆಗೆ, ವ್ಯವಸ್ಥೆಯನ್ನು ಸುಸೂತ್ರಗೊಳಿಸುವ ಸಲುವಾಗಿ ಈ ಸಮಿತಿ ರಚಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ದೇವಾಲಯದ ಆಡಳಿತಕ್ಕೆ ಸಂಬಂಧಿಸಿದಂತೆ ಮೇಲ್ವಿಚಾರಣೆ ನಡೆಸಲು ಈ ಸಮಿತಿ ರಚನೆಯಾಗಿದ್ದು, ಜಿಲ್ಲಾಧಿಕಾರಿ, ಸಾಗರ ಉಪವಿಭಾಗಾಧಿಕಾರಿ, ಓರ್ವ ಸರ್ಕಾರಿ ಲೆಕ್ಕಾಧಿಕಾರಿ, ಧರ್ಮದರ್ಶಿ ರಾಮಪ್ಪ ಮತ್ತು ಪ್ರಧಾನ ಅರ್ಚಕರನ್ನೊಳಗೊಂಡ ಸಮಿತಿಯಲ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಕೆ ಎಸ್ ಈಶ್ವರಪ್ಪ, ಸಂಸದ ಬಿ ವೈ ರಾಘವೇಂದ್ರ, ಸಾಗರ ಶಾಸಕ ಹರತಾಳು ಹಾಲಪ್ಪ ಕೂಡ ಸದಸ್ಯರಾಗಿದ್ದಾರೆ.
ಸಮಿತಿಯ ಮೊದಲ ಸಭೆ ಮುಂದಿನ ವಾರ ನಡೆಯಲಿದ್ದು, ಆ ಸಭೆಯಲ್ಲಿ ದೇವಾಲಯದ ಆಡಳಿತವನ್ನು ಶಾಶ್ವತವಾಗಿ ಯಾರಿಗೆ ವಹಿಸಬೇಕು? ದೇವಾಲಯವನ್ನು ಸರ್ಕಾರದ ಮುಜರಾಯಿ ಇಲಾಖೆಗೆ ಹಸ್ತಾಂತರಿಸಬೇಕೆ ಅಥವಾ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿಗೇ ವಹಿಸಬೇಕೆ? ಅಥವಾ ದೇವಾಲಯದ ಭಾಗದ ಸಾರ್ವಜನಿಕರನ್ನೊಳಗೊಂಡ ಟ್ರಸ್ಟಿಗೆ ವಹಿಸಬೇಕೆ? ಅಥವಾ ಹಾಲಿ ಇರುವಂತೆ ಧರ್ಮದರ್ಶಿಗಳ ಉಸ್ತುವಾರಿಯನ್ನೇ ಮುಂದುವರಿಸಬೇಕೆ? ಎಂಬ ಬಗ್ಗೆ ಬಹುತೇಕ ಸ್ಪಷ್ಟ ತೀರ್ಮಾನಕ್ಕೆ ಬರುವ ನಿರೀಕ್ಷೆ ಇದೆ.
ಈ ನಡುವೆ, ಜಿಲ್ಲಾಧಿಕಾರಿಗಳು ತಮ್ಮ ನೇತೃತ್ವದ ತಾತ್ಕಾಲಿಕ ಉಸ್ತುವಾರಿ ಸಮಿತಿ ರಚಿಸಿ ಹೊರಡಿಸಿರುವ ಆದೇಶದಲ್ಲಿ ದೇವಾಲಯದ ಆಡಳಿತ ಮತ್ತು ಧರ್ಮದರ್ಶಿ ರಾಮಪ್ಪ ಅವರ ಟ್ರಸ್ಟುಗಳ ಆಡಳಿತ ವೈಖರಿ, ಅಲ್ಲಿ ಸದ್ಯ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವೆ ತಲೆದೋರಿಸುವ ವಿಷಮ ಪರಿಸ್ಥಿತಿ, ಭಕ್ತರು ಮತ್ತು ಆ ಭಾಗದ ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿರುವ ಬೆಳವಣಿಗೆಗಳು ಮುಂತಾದ ಜ್ವಲಂತ ಸಂಗತಿಗಳು ಮತ್ತು ಆ ಬಗ್ಗೆ ಸಾರ್ವಜನಿಕರು, ಸಂಘ-ಸಂಸ್ಥೆಗಳು ಮತ್ತು ವಿವಿಧ ಮಾಧ್ಯಮಗಳ ದೂರು, ವರದಿಗಳನ್ನು ಕೂಡ ಜಿಲ್ಲಾಧಿಕಾರಿಗಳು ಉಲ್ಲೇಖಿಸಿದ್ದಾರೆ.
ಪ್ರಮುಖವಾಗಿ, ದೇವಾಲಯದ ಅರಣ್ಯ ಅಕ್ರಮದ ಕುರಿತು ಸಂಚಲನ ಮೂಡಿಸಿದ ‘ಪ್ರತಿಧ್ವನಿ’ ವಿಶೇಷ ವರದಿಯಲ್ಲಿ ಪ್ರಸ್ತಾಪಿಸಿದ, ಶರಾವತಿ ಅಭಯಾರಣ್ಯದ ವ್ಯಾಪಕ ಅಕ್ರಮ ಒತ್ತುವರಿ ಮತ್ತು ಆ ಒತ್ತುವರಿ ತೆರವಿಗೆ ಈ ಹಿಂದೆ ಸಾಗರ ಉಪ ವಿಭಾಗಾಧಿಕಾರಿಗಳು ನೀಡಿದ ಆದೇಶವನ್ನು ಕೂಡ ಜಿಲ್ಲಾಧಿಕಾರಿಗಳು ಉಲ್ಲೇಖಿಸಿದ್ದಾರೆ. ದೇವಾಲಯ ಮತ್ತು ಅದರ ಪರಿಸರದಲ್ಲಿ ನಿರ್ಮಾಣವಾಗಿರುವ ಹಲವು ವಸತಿ ಗೃಹಗಳು, ಕಲ್ಯಾಣಮಂಟಪ, ಅಂಗಡಿಮುಂಗಟ್ಟುಗಳು, ಖಾಸಗೀ ಲಾಡ್ಜ್ ಗಳು, ಪಾರ್ಕಿಂಗ್ ಜಾಗ ಸೇರಿದಂತೆ ಹಲವು ಕಟ್ಟಡಗಳನ್ನು ಅಭಯಾರಣ್ಯದ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ದೇವಸ್ಥಾನವೂ ಸೇರಿದಂತೆ ಅಭಯಾರಣ್ಯ ಮತ್ತು ಅರಣ್ಯ ಕಾಯ್ದೆಗಳನ್ನು ಉಲ್ಲಂಘಿಸಿ ನಿರ್ಮಾಣವಾಗಿರುವ ಎಲ್ಲಾ ಕಟ್ಟಡಗಳನ್ನು ತೆರವುಗೊಳಿಸಲು ಉಪ ವಿಭಾಗಾಧಿಕಾರಿಗಳು ನೀಡಿದ ಆದೇಶ ಜಾರಿಯಾಗಿಲ್ಲ ಎಂಬ ವಿಷಯವನ್ನೂ ಪ್ರಸ್ತಾಪಿಸಲಾಗಿದೆ.
ಅಭಯಾರಣ್ಯ ಒತ್ತುವರಿಯ ಕುರಿತು ಸಾಗರದ ದಲಿತ ಸಂಘರ್ಷ ಸಮಿತಿ ಮತ್ತು ಇತರೆ ಕೆಲವು ಸಂಘಸಂಸ್ಥೆಗಳು ಮತ್ತು ಸಾರ್ವಜನಿಕರು ಈ ಹಿಂದೆ ಸಲ್ಲಿಸಿರುವ ದೂರುಗಳು ಮತ್ತು ನ್ಯಾಯಾಲಯದ ಮೊಕದ್ದಮೆಗಳ ಬಗ್ಗೆಯೂ ಜಿಲ್ಲಾಧಿಕಾರಿಗಳ ಅಧಿಸೂಚನೆಯಲ್ಲಿ ಪ್ರಸ್ತಾಪಿಸಲಾಗಿದೆ.
ಅಂದರೆ; ‘ಪ್ರತಿಧ್ವನಿ’ ದಾಖಲೆ ಸಹಿತ ವರದಿ ಮಾಡಿದ್ದ ಸಿಗಂದೂರು ದೇವಾಲಯದ ಭೂ ಅಕ್ರಮ ವಾಸ್ತವ ಸಂಗತಿ ಎಂಬುದನ್ನು ಈಗ ಸ್ವತಃ ಸರ್ಕಾರ ಕೂಡ ಒಪ್ಪಿಕೊಂಡಂತಾಗಿದೆ. ಅಲ್ಲದೆ, ದೇವಾಲಯದ ಇಡೀ ಪ್ರದೇಶ ಕಾರ್ಗಲ್ ವನ್ಯಜೀವಿ ವಲಯದ ವ್ಯಾಪ್ತಿಗೆ ಒಳಪಡುತ್ತದೆ. ಕಂದಾಯ ದಾಖಲೆಗಳಲ್ಲಿ ಸೊಪ್ಪಿನಬೆಟ್ಟ ಎಂದು ನಮೂದಾಗಿದ್ದರೂ, 1974ರಷ್ಟು ಹಿಂದೆಯೇ ಅದು ಶರಾವತಿ ಅಭಯಾರಣ್ಯದ ಭಾಗವಾಗಿದೆ ಎಂಬುದನ್ನೂ ಉಲ್ಲೇಖಿಸಲಾಗಿದೆ.
ಆ ಹಿನ್ನೆಲೆಯಲ್ಲಿ; ಜಾಗತಿಕ ಮಟ್ಟದಲ್ಲಿ ಅತಿ ಸೂಕ್ಷ್ಮ ಜೀವ ವೈವಿಧ್ಯತಾ ತಾಣವಾಗಿರುವ ಶರಾವತಿ ಕಣಿವೆಯ ಭಾಗವಾಗಿರುವ ಈ ಅಭಯಾರಣ್ಯವನ್ನು ಒತ್ತುವರಿ ಮಾಡಿರುವ ದೇವಸ್ಥಾನದ ಆಡಳಿತದ ವಿರುದ್ಧ ಅರಣ್ಯ ಇಲಾಖೆ, ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ? ದೇವಾಲಯದ ಹೆಸರಿನಲ್ಲಿ ನಡೆದಿರುವ ವ್ಯಾಪಕ ಅರಣ್ಯ ನಾಶ, ಗುಡ್ಡ ಸಮತಟ್ಟು ಮೂಲಕ ಆಗಿರುವ ಭೂ ರಚನೆಯ ನಾಶ, ಶರಾವತಿ ಹಿನ್ನೀರು ಕಣಿವೆ ಮುಚ್ಚಿ ಕಟ್ಟಡ ನಿರ್ಮಾಣ ಮಾಡಿರುವುದರಿಂದ ಶರಾವತಿ ನದಿ ಮತ್ತು ಒಟ್ಟಾರೆ ಕಣಿವೆಗೆ ಆಗಿರುವ ಪರಿಸರ ಹಾನಿಯ ಹಿನ್ನೆಲೆಯಲ್ಲಿ ಗಂಭೀರ ಅಪರಾಧ ಕೃತ್ಯಕ್ಕೆ ಯಾವ ಕ್ರಮ ಜರುಗಲಿದೆ? ಅಕ್ರಮ ಕಟ್ಟಡ ತೆರವಿಗೆ ತೆಗೆದುಕೊಳ್ಳಬಹುದಾದ ಕ್ರಮಗಳೇನು? ಎಂಬ ಪ್ರಶ್ನೆಗಳು ಎದ್ದಿವೆ.
ಈ ನಡುವೆ, ದೇವಾಲಯ ಆಡಳಿತ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾಧಿಕಾರಿಗಳ ಸಮಿತಿಯು ಆ ಪರಿಸರದಲ್ಲಿ ಈಗಲೂ ಮುಂದುವರಿದಿರುವ ವಿವಿಧ ಅಕ್ರಮ ನಿರ್ಮಾಣಗಳಿಗೆ ಕೂಡಲೇ ಬ್ರೇಕ್ ಹಾಕಿ, ಕಣಿವೆಯ ಅತಿ ಸೂಕ್ಷ್ಮ ಪರಿಸರ ರಕ್ಷಣೆಯ ನಿಟ್ಟಿನಲ್ಲಿ ತತಕ್ಷಣಕ್ಕೆ ಮುಂದಾಗಬೇಕಿದೆ. ಮುಖ್ಯವಾಗಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಾಣವಾಗಿರುವ ಮತ್ತು ನಿರ್ಮಾಣವಾಗುತ್ತಿರುವ ಸಾಲು ಸಾಲು ಖಾಸಗೀ ವಸತಿಗೃಹ, ಹೋಟೆಲ್ ಗಳಿಗೆ ಕಡಿವಾಣ ಹಾಕಬೇಕಿದೆ. ಆ ಮೂಲಕ ದೇವಾಲಯವನ್ನು ಮುಂದಿಟ್ಟುಕೊಂಡು ದಂಧೆ ಮಾಡುತ್ತಿರುವ ಮಂದಿಯ ದಾಹಕ್ಕೆ ಇಡೀ ಪರಿಸರ ಬಲಿಯಾಗುವುದನ್ನು ತಡೆಯಬೇಕು ಎಂದು ಕಳಸವಳ್ಳಿ ಭಾಗದ ನಾಗರಿಕರು ಆಗ್ರಹಿಸಿದ್ಧಾರೆ.
ಕಳೆದ ನಾಲ್ಕಾರು ವರ್ಷಗಳಿಂದ ಸಿಗಂದೂರು ದೇವಾಲಯ ಅಭಿವೃದ್ಧಿಯ ಕಾರ್ಯಗಳು ಸಮರೋಪಾದಿಯಲ್ಲಿ ನಡೆದಿವೆ. ಅದರ ಭಾಗವಾಗಿ ಬೃಹತ್ ಬೆಟ್ಟಗಳನ್ನು ಕಡಿದು, ಸಮತಟ್ಟು ಮಾಡಿ ಕಣಿವೆ ತಂಬಿಸಿ ದೊಡ್ಡ ದೊಡ್ಡ ಕಟ್ಟಡಗಳನ್ನು, ವಿಸ್ತಾರ ರಸ್ತೆಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಆಡಳಿತ ಮಂಡಳಿಯಷ್ಟೇ ಅಲ್ಲದೆ, ಕಾನೂನುಗಳನ್ನು ಕಾಯಬೇಕಾದ ಸರ್ಕಾರವೇ ಕಾನೂನು ಉಲ್ಲಂಘಿಸಿ ಅಭಯಾರಣ್ಯದ ಒಳಗೆ ವಿಸ್ತಾರ ರಸ್ತೆ ಮತ್ತು ಯಾತ್ರಿ ನಿವಾಸದಂತಹ ಬೃಹತ್ ಕಟ್ಟಡಗಳನ್ನು ನಿರ್ಮಿಸಿದೆ. ಈ ಎಲ್ಲವೂ ಒಂದು ಕಡೆಯಿಂದ ಸೂಕ್ಷ್ಮ ಪರಿಸರ ಪ್ರದೇಶದಲ್ಲಿ ನಡೆದ ಅಕ್ರಮಗಳೇ. ಈ ಅಕ್ರಮಗಳನ್ನು ಎಸಗಿರುವ ಪ್ರವಾಸೋದ್ಯಮ, ಪಿಡಬ್ಲ್ಯೂಡಿ ಮುಂತಾದ ಇಲಾಖೆಗಳ ವಿರುದ್ಧ ಯಾವೆಲ್ಲಾ ಕ್ರಮಗಳಾಗುತ್ತವೆ? ಎಂಬ ಪ್ರಶ್ನೆಯೂ ಎದ್ದಿದೆ.
ಏಕೆಂದರೆ; ಸಿಗಂದೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಈ ಸಾಲು ಸಾಲು ಪರಿಸರಘಾತಕ ಕೃತ್ಯಗಳು ಶರಾವತಿ ಕಣಿವೆಯ ಒಟ್ಟಾರೆ ಪರಿಸರದ ಮೇಲೆ ಎಂತಹ ಆಘಾತಕಾರಿ ಪರಿಣಾಮಗಳನ್ನು ಬೀರಿವೆ ಎಂಬುದಕ್ಕೆ ಕಳೆದ ವರ್ಷ ದೇವಾಲಯದಿಂದ ಕೇವಲ ಒಂದು ಕಿ.ಮೀ ಸಮೀಪದ ಕಳಸವಳ್ಳಿಯಲ್ಲಿ ಸುಮಾರು ಅರ್ಧ ಕಿ.ಮೀ ನಷ್ಟು ಗುಡ್ಡ ಕುಸಿತ ಉಂಟಾಗಿರುವುದೇ ಸಾಕ್ಷಿ. ಈ ಬಾರಿ ಕೂಡ ಆ ಸುತ್ತಮುತ್ತಲ ಪ್ರದೇಶಗಳಲ್ಲಿ ಲಘು ಕುಸಿತಗಳಾಗಿರುವ ವರದಿಗಳಿವೆ. ಆ ಹಿನ್ನೆಲೆಯಲ್ಲಿ ಪರಿಸರ ವಿರೋಧಿ ಚಟುವಟಿಕೆಗಳಿಗೆ ಕಡಿವಾಣ ಹಾಕದೇ ಇದ್ದಲ್ಲಿ ಮುಂದೆ ದೊಡ್ಡ ಅನಾಹುತಗಳು ಕಾದಿವೆ ಎಂಬುದನ್ನು ಜಿಲ್ಲಾಡಳಿತ ಗಮನಿಸಬೇಕಿದೆ.
ಆ ಹಿನ್ನೆಲೆಯಲ್ಲಿ ದೇವಾಲಯದ ಆಡಳಿತ ಉಸ್ತುವಾರಿ ವಹಿಸಿಕೊಂಡಿರುವ ಜಿಲ್ಲಾಧಿಕಾರಿಗಳ ಸಮಿತಿ, ಅಲ್ಲಿನ ಆಡಳಿತದಲ್ಲಿ ಹುಂಡಿ ಮತ್ತು ತಟ್ಟೆಕಾಸಿನ ವಿಷಯದಲ್ಲಿ ಧರ್ಮದರ್ಶಿ ಮತ್ತು ಪ್ರಧಾನ ಅರ್ಚಕರ ನಡುವಿನ ಕಿತ್ತಾಟಕ್ಕೆ ಮಾತ್ರವಲ್ಲದೆ, ಇಡೀ ಶರಾವತಿ ಕಣಿವೆಗೇ ಅಪಾಯ ಒಡ್ಡಿರುವ ಪರಿಸರ ವಿರೋಧಿ ಚಟುವಟಿಕೆಗಳಿಗೂ ತತಕ್ಷಣವೇ ಪೂರ್ಣವಿರಾಮ ಹಾಕುವ ಜರೂರಿದೆ.