ಬಿಜೆಪಿ ನಾಯಕರ ದ್ವಂದ್ವ ನೀತಿಗಳನ್ನು ಮತದಾರರು ಅರಿತುಕೊಳ್ಳಬೇಕು – ಕುಸುಮಾ

ಬಿಜೆಪಿ ಪಕ್ಷದ ನಾಯಕರು ಹೇಳುವುದೊಂದು ಮಾಡುವುದೊಂದು. ಮುಖ್ಯವಾಗಿ ಮಹಿಳಾ ದೌರ್ಜನ್ಯದ ವಿಚಾರವಾಗಿ ಬಿಜೆಪಿ ಮುಖಂಡರ ದ್ವಂದ್ವ ನೀತಿಗಳನ್ನು ಮತದಾರರು ಅರಿತುಕೊಳ್ಳಬೇಕಾಗಿದೆ ಎಂದು ರಾಜರಾಜೇಶ್ವರಿ ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಪ್ರತಿಧ್ವನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಬಿಜೆಪಿ ನಾಯಕರ ದ್ವಂದ್ವ ನೀತಿಗಳನ್ನು ಮತದಾರರು ಅರಿತುಕೊಳ್ಳಬೇಕು – ಕುಸುಮಾ

ರಾಜರಾಜೇಶ್ವರಿ ನಗರದಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಅದೃಷ್ಟ ಪರೀಕ್ಷೆಗೆ ನಿಂತಿರುವ ಕುಸುಮಾ ಹನುಮಂತರಾಯಪ್ಪ ಅವರ ಪ್ರತಿಧ್ವನಿಯೊಂದಿಗಿನ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿರುವುದು ಹಾಗೂ ಸೋಲು ಗೆಲುವಿನ ಲೆಕ್ಕಾಚಾರ ಒತ್ತಡವನ್ನು ಉಂಟು ಮಾಡುತ್ತಿದೆಯೇ?

ಒತ್ತಡ ಎಂದು ಅನಿಸುತ್ತಿಲ್ಲ. ಖುಶಿ ಆಗ್ತಾ ಇದೆ. ಎಲ್ಲಿ ಮತಪ್ರಚಾರಕ್ಕೆ ಹೋದರೂ, ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಅವರ ಮನೆಯ ಮಗಳ ಹಾಗೇ ಜನರು ನನ್ನನ್ನು ಸ್ವೀಕರಿಸಿದ್ದಾರೆ. ಹಾಗಾಗಿ ನಾನು ಒತ್ತಡದಲ್ಲಿಲ್ಲ. ನಾನು ಸೋಲು ಗೆಲುವಿನ ಬಗ್ಗೆ ಯಾವುದೇ ಆಲೋಚನೆ ಇಟ್ಟುಕೊಂಡಿಲ್ಲ. ಜನರನ್ನು ಯಾವ ರೀತಿ ತಲುಪಬಹುದು ಎಂಬ ಕುರಿತಾಗಿ ಮಾತ್ರ ನಾನು ಯೋಚನೆ ಮಾಡುತ್ತಾ ಇದ್ದೇನೆ.

ಜನರ ಸೇವೆ ಮಾಡಲು ರಾಜಕೀಯಕ್ಕೇ ಏಕೆ ಬರಬೇಕಾಯಿತು? ಶಿಕ್ಷಕರಾಗಿದ್ದುಕೊಂಡು ಅಥವಾ ನಿಮ್ಮ NGO ಮುಖಾಂತರ ಜನರ ಸೇವೆ ಮಾಡಬಹುದಿತ್ತು.

ನಾನು ರಾಜಕೀಯಕ್ಕೇ ಬರಬೇಕು ಅಂತ ಈ ಹಿಂದೆ ಸಮಾಜ ಸೇವೆ ಮಾಡಲಿಲ್ಲ. ನನ್ನ ಕೈಲಾದಷ್ಟು ಸಹಾಯ ಮಾಡ್ತಾ ಬಂದಿದ್ದೆ ಅಷ್ಟೇ. ರಾಜಕಾರಣಿಯೇ ಆಗಬೇಕು ಅಂತ ನಾನು ಯಾವತ್ತೂ ಯೋಜನೆಗಳನ್ನು ಹಾಕಿಕೊಂಡಿರಲಿಲ್ಲ. ವಿದ್ಯಾವಂತ ಹೆಣ್ಣು ಮಕ್ಕಳು ದೇಶದಲ್ಲಿ ನಡೆಯುತ್ತಿರುವ ದೌರ್ಜ್ನ್ಯದ ವಿರುದ್ದ ದನಿ ಎತ್ತಬೇಕು. ಅಂತಹ ಅವಕಾಶ ನನಗೆ ಸಿಕ್ಕಿದೆ. ನಾನು ಅದನ್ನು ಉಪಯೋಗಿಸಿಕೊಂಡಿದ್ದೀನಿ. ಚುನಾವಣಾ ರಾಜಕೀಯ ನನ್ನ ಮುಖ್ಯ ಉದ್ದೇಶ ಅಲ್ಲ. ನನ್ನ ಮುಖ್ಯ ತತ್ವ ಜನರ ಸೇವೆ ಮಾತ್ರ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಪತಿ ಡಿ ಕೆ ರವಿ ಅವರ ಸಾವಿಗೆ ಕಾಂಗ್ರೆಸ್‌ ನಾಯಕರು ಕಾರಣ ಎಂಬ ಅಪವಾದಗಳಿದ್ದವು, ಆದರೆ, ನೀವು ಕಾಂಗ್ರೆಸ್‌ ಪಕ್ಷವನ್ನೇ ಆಯ್ಕೆ ಮಾಡಿಕೊಂಡಿದ್ದೀರಾ? ಯಾಕೆ?

ರವಿ ಅವರು ತೀರಿಕೊಂಡರು, ಹೌದು. ಎಲ್ಲರಿಗೂ ಒಂದು ಸ್ಪಷ್ಟತೆ ಬೇಕಿತ್ತು. ಏಕೆ ಈ ಥರ ಆಯಿತು ಅನ್ನುವುದನ್ನು ಪತ್ತೆ ಹಚ್ಚಲು ಸಿಬಿಐ ತನಿಖೆ ಮಾಡಲಾಗಿದೆ. ತನಿಖೆಯ ವರದಿಯಲ್ಲಿ ಎಲ್ಲಿಯೂ ಕಾಂಗ್ರೆಸ್‌ ಪಕ್ಷದ ನಾಯಕರಾಗಲಿ, ನಾನಾಗಲಿ ಅಥವಾ ನನ್ನ ಕುಟುಂಬವಾಗಲಿ ಡಿ ಕೆ ರವಿ ಅವರ ಸಾವಿಗೆ ಕಾರಣ ಎಂದು ಹೇಳಲಿಲ್ಲ. ಹೀಗಾಗಿ, ಯಾವುದೇ ಆಧಾರ ಇಲ್ಲದೇ ಒಬ್ಬರನ್ನು ಅಪರಾಧಿ ಎಂದು ಕರೆಯುವುದು ಸರಿಯಲ್ಲ. ಕಾಂಗ್ರೆಸ್‌ ಪಕ್ಷ ಏನೂ ಮಾಡಲಿಲ್ಲ ಎಂದಾನ ನಾನು ಯಾಕೆ ಕಾಂಗ್ರೆಸ್‌ ಪಕ್ಷ ಸೇರಬಾರದು?

ನೀವು ಈ ಚುನಾವಣೆಯಲ್ಲಿ ಸ್ಪರ್ಧಿಸಲು, ನಿಮ್ಮ ಅತ್ತೆಯವರಿಂದಲೇ ವಿರೋಧ ಕೇಳಿ ಬಂದಿತ್ತು. ಡಿ ಕೆ ರವಿ ಅವರ ಹೆಸರನ್ನು ಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂದು ಹೇಳಿದ್ದರು. ಕುಟುಂಬದವರೇ ಕೈ ಹಿಡಿಯದಿದ್ದಾಗ, ಮತದಾರರು ಕೈ ಹಿಡಿಯುತ್ತಾರೆ ಎನ್ನುವ ಭರವಸೆ ನಿಮಗಿದೆಯೇ?

ತುಂಬಾ ದಿನದಿಂದ ನನಗೆ ಅನಿಸುವುದ ಏನೆಂದರೆ, ಇದನ್ನು ಇನ್ನೂ ಹೇಳ್ತಾ ಬರ್ಬೇಕಲ್ಲಾ ಎಂದು. ನಾನು ರವಿ ಅವರನ್ನು ಕಾನೂನುಬದ್ದವಾಗಿ ಮತ್ತು ಧರ್ಮಬದ್ದವಾಗಿ ಮದುವೆಯಾದವಳು. ಈಗಲೂ ಯಾರದರೂ ನನ್ನ ಗಂಡನ ಹೆಸರನ್ನು ಕೇಳಿದರೆ, ನಾನು ಅವರ ಹೆಸರೇ ಹೇಳಬೇಕು. ಆ ಹೆಸರನ್ನು ಬಳಸಿ ಅಥವಾ ಬಳಸಿಕೊಳ್ಬೇಡಿ ಅಂತ ಹೇಳೋದು ಎಷ್ಟು ಸಮಂಜಸ? ಪ್ರಪಂಚದ ಮುಂದೆ ನಾನು ರವಿ ಹೀಗಿ ಬದುಕಿದ್ವಿ ಅಂತ ಹೇಳುವ ಅವಶ್ಯಕತೆ ನನಗಿಲ್ಲ. ಅದು ನನಿಗೆ ಗೊತ್ತು ಅಷ್ಟು ಸಾಕು. ಅವರು ಈಗ ನಮ್ಮ ಜೊತೆಯಿಲ್ಲ ಎಂಬ ಕಾರಣಕ್ಕೆ ಅಫಿಡವಿಟ್‌ನಲ್ಲಿ ಅವರ ಹೆಸರು ನಮೂದಿಸಿಲ್ಲ ಹೊರತು ಬೇರೇನೂ ಕಾರಣವಿಲ್ಲ.

ಈ ಚುನಾವನೆಯಲ್ಲಿ ಜಾತಿ ರಾಜಕಾರಣ ನಿಮ್ಮ ಕೈ ಹಿಡಿಯುತ್ತೆ ಎನ್ನುವ ಭರವಸೆ ಇದೆಯೇ?

ಎಲ್ಲಾ ಜಾತಿ ಧರ್ಮ ಒಂದೇ ಎನ್ನುವುದು ನನ್ನ ಸಿದ್ದಾಂತ. ನಾನು ಯಾವ ಜಾತಿಯಿಂದ ಬಂದಿದ್ದೇನೆ ಎನ್ನುವುದು ನಿಮ್ಮ ಪ್ರಶ್ನೆಯಾದರೆ, ನಾನೊಬ್ಬಳು ಒಕ್ಕಲಿಗ ಹೆಣ್ಣು ಮಗಳು. ಈ ಕುರಿತು ನನಗೆ ಹೆಮ್ಮೆಯಿದೆ. ಆದರೆ, ಚುನಾವಣೆಯಲ್ಲಿ ಗೆಲ್ಲೋಕೆ ಇದೇ ಪ್ರಮುಖ ಅಂಶ ಎಂದು ನಾನು ಅಂದ್ಕೊಂಡಿಲ್ಲ. ಎಲ್ಲಾ ಜಾತಿಗಳೂ ಒಂದೇ, ನಾನು ಒಕ್ಕಲಿಗಳು ಎಂದು ಚುನಾವಣೆಗೆ ನಿಲ್ಲುವುದು ತಪ್ಪಾಗುತ್ತೆ.

ಎಲ್ಲಾ ಯುವ ರಾಜಕೀಯ ನಾಯಕರು ಚುನಾವಣೆಗೆ ನಿಂತಾಗ ವ್ಯವಸ್ಥೆಯನ್ನೇ ಬದಲಾಯಿಸುತ್ತೇವೆ ಎಂಬ ಹುಮ್ಮಸ್ಸಿನಿಂದ ಬರುತ್ತಾರೆ. ನಂತರ ತಾವೇ ವ್ಯವಸ್ಥೆಯೊಂದಿಗೆ ಬೆರೆತು ಹೋಗುತ್ತಾರೆ. ಹೀಗಿರುವಾಗ, ಯುವಕರು ರಾಜಕೀಯಕ್ಕೆ ಬರುವ ಕುರಿತು ನಿಮ್ಮ ಅಭಿಪ್ರಾಯ ಏನು?

ನೀವು ಹೇಳ್ತಾ ಇರೋದು ಸರಿ. ಆದರೆ, ನನ್ನ ಪ್ರಕಾರ ಇನ್ನೂ ಹೆಚ್ಚಿನ ಯುವಕರು, ಯುವ ಮಹಿಳೆಯರು ರಾಜಕೀಯಕ್ಕೆ ಬರಬೇಕು. ನಾನೊಬ್ಬಳೇ ಎಲ್ಲಾ ಸರಿ ಮಾಡ್ತೀನಿ ಅಂದರೆ ತಪ್ಪಾಗುತ್ತೆ. ಎಲ್ಲರ ಸಂಘಟಿತ ಪ್ರಯತ್ನದಿಂದ ಮಾತ್ರ ಬದಲಾವಣೆ ಸಾಧ್ಯ. ವ್ಯವಸ್ಥೆಯೊಳಗಡೆ ಇರುವಂತಹ ಸಮಾನ ಮನಸ್ಕರ ಜೊತೆ ಸೇರಿ ವ್ಯವಸ್ಥೆಯನ್ನು ಬದಲಾಯಿಸಬಹುದು ಎಂದು ನನ್ನ ಅನಿಸಿಕೆ.

ನಿಮ್ಮ ಕ್ಷೇತ್ರದಲ್ಲಿ ಏನು ಬದಲಾವಣೆ ತರಲು ಬಯಸಿದ್ದೀರಾ?

ಕೋವಿಡ್‌ ಸಂಕಷ್ಟದಲ್ಲಿರುವಾಗಲೇ ಬಂದಿರುವ ಉಪಚುನಾವಣೆ ಇದು. ಜನರು ಈಗಾಗಲೇ ಸಾಕಷ್ಟು ನೋವುಗಳನ್ನು ಅನುಭವಿಸಿದ್ದಾರೆ. ಕೆಲಸ ಕಳೆದುಕೊಂಡಿದ್ದಾರೆ, ಕೆಲಸ ಇರುವವರಿಗೆ ಸಂಬಳ ಸಿಗುತ್ತಿಲ್ಲ. ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಆ ಸಮಸ್ಯೆಗಳನ್ನು ಯಾವ ರೀತಿ ನಿಭಾಯಿಸಬಲ್ಲೆ, ನನ್ನಿಂದ ಏನು ಸಾಧ್ಯವಾಗುತ್ತದೆ, ಸರ್ಕಾರ ಏನಾದರೂ ಯೋಜನೆಗಳನ್ನು ತಂದಲ್ಲಿ ಅದನ್ನು ಯಾವ ರೀತಿ ಅನುಷ್ಟಾನಗೊಳಿಸಬಹುದು ಎನ್ನುವುದರ ಕುರಿತು ಮೊದಲು ನನ್ನ ಗಮನ ಇರುತ್ತೆ. ಶಿಕ್ಷಣದ ಕುರಿತು ಹೆಚ್ಚು ಆಸಕ್ತಿ ಇರುವುದರಿಂದ ಶಿಕ್ಷಣ ಕ್ಷೇತ್ರದಲ್ಲಿ ಏನು ಕೊಡುಗೆ ಕೊಡಬಹುದು ಎಂಬ ವಿಚಾರವೂ ಗಮನದಲ್ಲಿದೆ. ಮೂಲಭೂತ ಸೌಕರ್ಯಗಳ ಜೊತೆ ನಮ್ಮ ಪರಿಸರವನ್ನು ಯಾವ ರೀತಿ ಕಾಪಾಡಿಕೊಳ್ಳಬಹುದು ಎಂಬುದರ ಕುರಿತಾಗಿಯೂ ಬದಲಾವಣೆಯನ್ನು ತರಬೇಕಿದೆ. ನಮ್ಮ ಕ್ಷೇತ್ರದಲ್ಲೇ ಇರುವ ವೃಷಭಾವತಿ ನದಿ ಹಿಂದೆ ಎಷ್ಟು ಸ್ವಚ್ಚವಾಗಿತ್ತು ಎಂಬುದರ ಬಗ್ಗೆ ನಮ್ಮ ಹಿರಿಯರು ಹೇಳುತ್ತಾರೆ. ಈಗ ಆ ನದಿಯ ದಂಡೆಯ ಸಮೀಪವೂ ಹೋಗಲು ಆಗುವುದಿಲ್ಲ. ಇಂತಹ ವಿಚಾರಗಳಲ್ಲಿಯೂ ಬದಲಾವಣೆ ತರಬೇಕಿದೆ.

ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ಬಗ್ಗೆ ಮಾತನಾಡುವುದಾದರೆ, ಮುನಿರತ್ನ ಅವರೊಂದಿಗೆ ಸಾಕಷ್ಟು ಜನ ಬೆಂಬಲಿಗರು ಬಿಜೆಪಿ ಪಕ್ಷದ ಕಡೆಗೆ ವಾಲಿರುವ ಸಾಧ್ಯತೆಯಿದೆ. ಹೀಗಿರುವಾಗ ನಿಮ್ಮ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲಿದೆ ಎಂದು ನಿಮಗೆ ಅನಿಸುವುದಿಲ್ಲವೇ?

ಮುನಿರತ್ನ ಅವರು ಕಾಂಗ್ರೆಸ್‌ನಿಂದಲ ಎರಟು ಬಾರಿ ಆಯ್ಕೆಯಾಗಿದ್ದಾರೆ. ಕುಸುಮಾ ಕೇಳಿದ್ದಕ್ಕೆ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆ ಬಂದಿಲ್ಲ. ಅತವಾ ಕಾಂಗ್ರೆಸ್‌ ಕಾರ್ಯಕರ್ತರು ಕೇಳಿದ್ದಾರೆ ಅಂತ ಚುನಾವಣೆ ಬಂದಿಲ್ಲ. ಕ್ಷೇತ್ರದ ಜನರಿಗೆ ಇಲ್ಲಿ ಯಾಕೆ ಚುನಾವಣೇ ಬಂದಿದೆ ಎಂದು ಚೆನ್ನಾಗಿ ತಿಳಿದಿದೆ. ಮುನಿರತ್ನ ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕಷಾಂತರ ಆದ ಕಾರಣಕ್ಕೆ ಇಂದು ಈ ಚುನಾವಣೆ ಬಂದಿದೆ. ಜನರಿಗೆ ಅದರ ಅರಿವಿದೆ. ಕಾಂಗ್ರೆಸ್‌ನ ನಿಷ್ಟಾವಂತ ಕಾರ್ಯಕರ್ತರು ಎಂದಿಗೂ ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವುದಿಲ್ಲ. ನನ್ನ ಪಕ್ಷದ ನಾಯಕರ ಹಾಗೂ ಕಾರ್ಯಕರ್ತರ ಮೇಲೆ ನನಗೆ ಅಪಾರ ನಂಬಿಕೆಯಿದೆ. ಹಾಗಾಗಿ ನನ್ನ ಬಲ ಕಡಿಮೆಯಾಗಿದೆ ಅಂತ ನನಿಗೆ ಅನ್ನಿಸ್ತಿಲ್ಲ.

ಅಂದ್ರೆ ನೀವು ಹೇಳುವ ಪ್ರಕಾರ, ಮುನಿರತ್ನ ಅವರು ಕಾಂಗ್ರೆಸ್‌ ಪಕ್ಷಕ್ಕೆ ಹಾಗೂ ಅದರ ಸಿದ್ದಾಂತಗಳಿಗೆ ಬದ್ದರಾಗಿರಲಿಲ್ಲ ಎಂದರ್ಥವೇ?

ನಮ್ಮ ಪಕ್ಷದ ಹಿರಿಯ ನಾಯಕರು ಕೂಡಾ ಇಂತಹ ಒಬ್ಬ ನಾಯಕನಿಗೆ ಟಿಕೆಟ್‌ ಕೊಟ್ಟಿದ್ದು ನಮ್ಮಿಂದಾದ ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಈ ಕುರಿತಾಗಿ ನಾನು ಹೆಚ್ಚು ಮಾತನಾಡಲು ಹೋಗುವುದಿಲ್ಲ.

ಮತದಾರರ ನಕಲಿ ಗುರುತಿನ ಚೀಟಿಯನ್ನು ಮಾಡಿದ್ದರ ಕುರಿತಾಗಿ ಮುನಿರತ್ನ ಅವರನ್ನು ಪ್ರಧಾನಿ ಮೋದಿಯವರೇ ಬಹಿರಂಗ ಸಭೆಯಲ್ಲಿ ಟೀಕಿಸಿದ್ದರು. ಈಗ ಅವರಿಗೇ ಬಿಜೆಪಿ ಮಣೆ ಹಾಕಿದೆ. ಈ ಕುರಿತಾಗಿ ಏನು ಹೇಳ್ತಿರಾ?

ಬಿಜೆಪಿಯ ಇಂತಹ ದ್ವಂದ್ವ ನೀತಿಗಳು ಮತದಾರರಿಗೆ ಅರ್ಥ ಆಗಿದೆ. ಹಾಗಾಗಿ ಜನರು ಅದನ್ನು ತೀರ್ಮಾನ ಮಾಡ್ತಾರೆ.

ಬಿಜೆಪಿ ನಾಯಕರ ದ್ವಂದ್ವ ನೀತಿಗಳನ್ನು ಮತದಾರರು ಅರಿತುಕೊಳ್ಳಬೇಕು – ಕುಸುಮಾ
ಉಪಚುನಾವಣೆ: ಕಾಂಗ್ರೆಸ್‌ ʼಕೈʼ ಹಿಡಿಯುವುದೇ ಡಿಕೆಶಿ ಜಾತಿ ಲೆಕ್ಕಾಚಾರ?

ಯಾವ ಯಾವ ದ್ವಂದ್ವ ನೀತಿಗಳನ್ನು ಜನರು ಗಮನಿಸಬೇಕಾಗಿದೆ?

ಒಂದು ಹೆಣ್ಣಾಗಿ ನನಗೆ ಅನ್ನಿಸುವುದು, ಈ ದೇಶದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಶೋಷಣೆ ದೌರ್ಜನ್ಯದ ಕುರಿತು ಬಿಜೆಪಿಯವರು ಮಾತನಾಡುವುದು ಬೇರೆ ಆದರೆ, ನಡೆಯುತ್ತಿರುವ ಘಟನೆಗಳೇ ಬೇರೆ. ಮಹಿಳೆಯರ ಸಬಲೀಕರಣದ ಕುರಿತಾಗಿ ಆಡುವ ಮಾತುಗಳು ಎಷ್ಟರ ಮಟ್ಟಿಗೆ ಸತ್ಯ ಎಂಬುದನ್ನು ಜನರು ಗಮನಿಸಬೇಕಾಗಿದೆ. ಯಾವ ರೀತಿ ಮಹಿಳೆಯರನ್ನು ದೈಹಿಕ ಹಾಗೂ ಮಾನಸಿಕ ಶೋಷಣೆಗೆ ಒಳಪಡಿಸಲಾಗುತ್ತಿದೆ ಎಂಬುದನ್ನು ಜನರು ಗಮನಿಸಬೇಕಾಗಿದೆ.

ನೀವು ನಾಮಪತ್ರ ಸಲ್ಲಿಸಿದ ತಕ್ಷಣವೇ, ನಿಮ್ಮ ವಿರುದ್ದ FIR ದಾಖಲಾಗಿದೆ. ಈ ಕುರಿತಾಗಿ ಏನು ಹೇಳ್ತಿರಾ?

ಕಳೆದ ಐದು ವರ್ಷಗಳಿಂದ ಈ ರೀತಿಯ ಪ್ರಯತ್ನಗಳು ಬಹಳ ನಡೆದಿವೆ. ನನ್ನನ್ನು ಸಾಕಷ್ಟು ಬಾರಿ ಗುರಿಯಾಗಿಸಲಾಗಿದೆ. ಇದು ಏನೂ ಹೊಸದಲ್ಲ. ಆದರೆ, ಈಗ ಏನು ರಾಜರಾಜೇಶ್ವರಿ ನಗರದ ಬಿಬಿಎಂಪಿ ಕಚೇರಿಯ ಒಳಗೆ ನಡೆಯಿತು, ಅದು ಖಂಡಿತವಾಗಿಯೂ ದೌರ್ಜನ್ಯ ಅಂತಲೇ ಅನ್ನಿಸುತ್ತದೆ. ಆಡಳಿತ ಪಕ್ಷದ ʼನಿಯಮ ಉಲ್ಲಂಘನೆʼಯ ವ್ಯಾಖ್ಯಾನದ ಪ್ರಖಾರ ಬಿಜೆಪಿಯ ಹಿರಿಯ ನಾಯಕರೇ ಅಲ್ಲಿ ನಿಯಮ ಉಲ್ಲಂಘನೆ ಮಾಡುತ್ತಿದ್ದರು. ಅದು ಮಾಧ್ಯಮಗಳಲ್ಲಿಯೂ ರೆಕಾರ್ಡ್‌ ಆಗಿದೆ. ಆದರೆ, ಎಲ್ಲರನ್ನೂ ಬಿಟ್ಟು ನನ್ನ ಮೇಲೆ ಮಾತ್ರ FIR ಹಾಕಿದ್ದಾರೆ ಅಂದ್ರೆ, ಎಲ್ಲೋ ನನ್ನನ್ನೇ ಟಾರ್ಗೆಟ್‌ ಮಾಡ್ತಾ ಇದ್ದಾರೆ ಅಂ ತ ಅನ್ನಿಸುತ್ತದೆ. ಈ ರೀತಿಯ ಶೋಷಣೆಯನ್ನೇ ಜನರ ಮುಂದೆ ತರಲು ಬಯಸುತ್ತೇನೆ. ನಿರ್ಜನ ಪ್ರದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ದೈಹಿಕವಾಗಿ ಶೋಷಣೆ ನಡೆಯುತ್ತಿರುವುದು ಮಾತ್ರವಲ್ಲ, ಇಷ್ಟು ಜನರ ಮುಂದೆ ಬಹಿರಂಗವಾಗಿಯೇ ಶೋಷಣೆ ನಡೆಯುತ್ತೆ ಎಂಬುದನ್ನು ಜನರ ಮುಂದೆ ತರ ಬೇಕಾಗಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಅವರು ನಿಮ್ಮ ಬಗ್ಗೆ ಮಾತನಾಡುವಾಗ ಪ್ರತೀ ಬಾರಿಯೂ ವಿದ್ಯಾವಂತೆ ಎಂಬ ಪದ ಬಳಸ್ತಾರೆ. ಕಾಂಗ್ರೆಸ್‌ನಲ್ಲಿ ಎಲ್ಲಾ ವಿದ್ಯಾವಂತರಿಗೂ ಈ ರೀತಿ ಅವಕಾಶ ಸಿಗುತ್ತಾ ಇಲ್ಲ ಇದು ಕೇವಲ ಕುಸುಮಾ ಅವರಿಗೆ ಮಾತ್ರ ಸೀಮಿತವೇ?

ಖಂಡಿತವಾಗಿಯೂ ಸಿಗುತ್ತದೆ. ಇದು ಕೇವಲ ನನಗಾಗಿ ಮಾತ್ರ ಸಿಕ್ಕಿರುವ ಅವಕಾಶವಲ್ಲ. ನಮ್ಮ ಪಕ್ಷದಲ್ಲೇ ಬಹಳಷ್ಟು ಜನ ವಿದ್ಯಾವಂತರಿದ್ದಾರೆ. ಎಲ್ಲರಿಗೂ ಅವಕಾಶ ಸಿಕ್ಕುತ್ತೆ. ನನಗೆ ಏಕೆ ಈ ಚುನಾವಣೆಗೆ ಅವಕಾಶ ಸಿಕ್ಕಿತು ಎಂದರೆ, ನನ್ನದು ಇದೇ ಕ್ಷೇತ್ರ ಅಗಿರುವುದರಿಂದ ಹಾಗೂ ನನ್ನ ತಂದೆ ಇಲ್ಲಿಯ ಜನಪ್ರತಿನಿಧಿಯಾಗಿದ್ದರಾದ್ದರಿಂದ ಜನರಿಗೆ ನನ್ನ ತಂದೆಯ ಪರಿಚಯವಿದೆ. ಇಲ್ಲಿನ ಉದ್ದಗಲದ ಕುರಿತ ಮಾಹಿತಿಯಿದೆ. ಹಾಗಾಗಿ ಈ ಅವಕಾಶ ನನಗೆ ಸಿಕ್ಕಿದೆ.

ನೀವು ಚುನಾವಣೆಯಲ್ಲಿ ಸ್ಪರ್ದಿಸುತ್ತಿದ್ದೀರಾ ಎಂದು ತಿಳಿದಾಗ, ನಿಮ್ಮ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳ ಪ್ರತಿಕ್ರಿಯೆ ಹೇಗಿತ್ತು?

ತುಂಬಾ ಖುಶಿಪಟ್ಟಿದ್ದಾರೆ. ಈಗಲೂ ನನಗೆ ಮೆಸೇಜ್‌ ಮಾಡ್ತಾ ಇದ್ದಾರೆ. ನನ್ನ ಸಹೋದ್ಯೋಗಿಗಳನ್ನು ಪ್ರನಿಧಿಸುತ್ತಿದ್ದೇನೆಂದು ಅವರು ಕೂಡಾ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ. ತುಂಬಾ ಜನ ವಿದ್ಯಾರ್ಥಿಗಳು ಕರೆ ಮಾಡಿ ಅಥವಾ ಮುಖತಃ ಭೇಟಿ ಮಾಡಿ ಶುಭಾಷಯ ಕೋರುತ್ತಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com