ದಂಡದ ರೂಪದಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ –HD ಕುಮಾರಸ್ವಾಮಿ ಕಿಡಿ

ದಂಡದ ರೂಪದಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ –HD ಕುಮಾರಸ್ವಾಮಿ ಕಿಡಿ

ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ

ಕೋವಿಡ್-19 ವೇಳೆ ಸಂಕಟಕ್ಕೆ ಒಳಗಾಗಿದ್ದ ಚಾಲಕರಿಗೆ ₹5000 ಕೊಡುವ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ ಸರ್ಕಾರ ಚಾಲಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿತ್ತು, ಆದರೆ ಅನುಷ್ಠಾನಕ್ಕೆ ತರಲಿಲ್ಲ.‌ ಚಾಲಕರಿಗೆ ಪರಿಹಾರ ಕೊಡದೆ ಮಾತು ತಪ್ಪಿದ ಸರ್ಕಾರ ಈಗ ದಂಡ ವಸೂಲಿಯ ನೆಪದಲ್ಲಿ ಚಾಲಕರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಕುಮಾರಸ್ವಾಮಿ, ಕಳೆದ ಏಳು ತಿಂಗಳಿಂದ ಸಂಪಾದನೆ ಇಲ್ಲದೆ ಹತಾಶರಾಗಿರುವ ರಿಕ್ಷಾ, ಕ್ಯಾಬ್ ಚಾಲಕರಿಗೆ ದಂಡದ ರೂಪದಲ್ಲಿ ಹಗಲು ದರೋಡೆ ಮಾಡುತ್ತಿರುವ ಸರ್ಕಾರ, ಕಠಿಣ ಕ್ರಮದಿಂದ ಬಡ ಚಾಲಕರ ಮೂರುಕಾಸಿನ ಮೇಲೂ ಕೆಂಗಣ್ಣು ಬೀರಿರುವುದು ರಾಕ್ಷಸೀ ಪ್ರವೃತ್ತಿ. ಬಡ ಚಾಲಕರ ಹಿಡಿಶಾಪ ಸರ್ಕಾರಕ್ಕೆ ತಗುಲುವ ಮುನ್ನವೇ ದರ್ಪ ದೌರ್ಜನ್ಯದ ಗದಾಪ್ರಹಾರ ತಕ್ಷಣವೇ ನಿಲ್ಲಿಸಬೇಕು. ಬೆಂದ ಮನೆಯಲ್ಲಿ ಗಳ ಅರಿಯುವ ಕೆಲಸ ಜವಾಬ್ದಾರಿಯುತ ಸರ್ಕಾರಕ್ಕೆ ಶೋಭೆಯಲ್ಲ. ಇಂತಹ ದುಂಡಾವರ್ತಿ ಪ್ರವೃತ್ತಿಯನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಚಾಲಕರ ಪರವಾಗಿ ಮಾತನಾಡಿದ್ದಾರೆ.

ಸೋಂಕು ಮತ್ತು ಲಾಕ್‌ಡೌನ್ ಪರಿಸ್ಥಿತಿಯಿಂದ ಸಂಪಾದನೆ ಇಲ್ಲದೆ ಕಂಗೆಟ್ಟಿರುವ ಆಟೋರಿಕ್ಷಾ ಚಾಲಕರು ಹಾಗೂ ಕ್ಯಾಬ್ ಡ್ರೈವರ್ ಗಳ ಮೇಲೆ ಮುಲಾಜಿಲ್ಲದೆ ದಂಡ ವಸೂಲಿ ಮಾಡುತ್ತಿರುವ ಸಂಚಾರಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ ಬಡ ಚಾಲಕರಿಗೆ ಬರಸಿಡಿಲು ಬಡಿದಂತಾಗಿದೆ. ಮಾಸ್ಕ್ ಧರಿಸಿದವರಿಗೆ ಕಾನೂನು-ಸುವ್ಯವಸ್ಥೆ ಹಾಗೂ ಸಂಚಾರಿ ಪೊಲೀಸರು ದಂಡ ವಸೂಲಿ ದಂಧೆಗೆ ಇಳಿದಿರುವುದು ನಾಗರಿಕರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ. ಜಾಗೃತಿ ಮೂಡಿಸಬೇಕಾದ ಪೊಲೀಸರು ವಾಹನ ತಪಾಸಣೆ ಹೆಸರಲ್ಲಿ ಬಡ ಚಾಲಕರನ್ನು ಸುಲಿಯುತ್ತಿರುವ ನಿರ್ದಾಕ್ಷಿಣ್ಯ ವರ್ತನೆ ಸರಿಯಲ್ಲ ಎಂದು ಅವರು ಹೇಳಿದ್ದಾರೆ.

ದಂಡದ ರೂಪದಲ್ಲಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆ –HD ಕುಮಾರಸ್ವಾಮಿ ಕಿಡಿ
ಕಳೆದ ವಾರದಲ್ಲಿ ಮಾಸ್ಕ್ ಧರಿಸದ 11 ಸಾವಿರಕ್ಕೂ ಹೆಚ್ಚು ಜನರಿಗೆ ದಂಡ

ಎಲ್ಲ ದಾಖಲಾತಿಗಳನ್ನು ತೋರಿಸಿದರೂ ಒಂದಲ್ಲಾ ಒಂದು ಕಾನೂನು ತಗಾದೆ ತೆಗೆದು ಚಾಲಕರನ್ನು ಹಗಲು ದರೋಡೆ ಮಾಡುತ್ತಿರುವುದನ್ನು ತಕ್ಷಣ ನಿಲ್ಲಿಸಬೇಕು. ಪೊಲೀಸರಿಗೆ ದಂಡ ವಸೂಲಿಗೆ ಟಾರ್ಗೆಟ್ ನೀಡಿರುವುದು ಈಗ ಗುಟ್ಟಾಗಿ ಉಳಿದಿಲ್ಲ. ಈಗಷ್ಟೇ ರಸ್ತೆಗೆ ಇಳಿದಿರುವ ಆಟೋರಿಕ್ಷಾ ಮತ್ತು ಕ್ಯಾಬ್ ಚಾಲಕರು ಪ್ರಯಾಣಿಕರ ಕೊರತೆಯಿಂದ ಒಂದೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಪೊಲೀಸರು ದಂಡ ವಸೂಲಿಯನ್ನೇ ಮೂಲಮಂತ್ರವಾಗಿರಿಸಿ ಕೊಂಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು ಎಂದು ಅವರು ಅಭಿಪ್ರಾಯಿಸಿದ್ದಾರೆ.

ಸರ್ಕಾರ ತಕ್ಷಣ ಚಾಲಕರನ್ನು ಸುಲಿಯುವ ನಿರ್ದಾಕ್ಷಿಣ್ಯ ಕ್ರಮಕ್ಕೆ ತಡೆಯೊಡ್ಡಿ ಔದಾರ್ಯ ತೋರುವ ಮೂಲಕ ಚಾಲಕರಿಗೆ ತುಸು ನೆಮ್ಮದಿ ನೀಡಬೇಕಾದ ತುರ್ತು ಅಗತ್ಯವಿದೆ. ಎಗ್ಗಿಲ್ಲದೆ ದಂಡ ವಸೂಲಿ ಮಾಡುವ ಪೋಲಿಸರ ಕ್ರಮದಿಂದ ಚಾಲಕರು ನಲುಗಿ ಹೋಗಿದ್ದಾರೆ. ಇಂತಹ ಕಡು ಕಷ್ಟಕಾಲದಲ್ಲಿ ಸರ್ಕಾರ ಮಾನವೀಯತೆಯನ್ನು ಪ್ರದರ್ಶಿಸಬೇಕು ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com