4,000 ಕೋಟಿ ರೂ. ಅಕ್ರಮದ ಐಎಂಎ ಹಗರಣದ ತನಿಖೆಗೆ ಸಂಬಂಧಿಸಿದಂತೆ ಸಂಸ್ಥೆಯ ಎಂಡಿ ಮತ್ತು ಸಿಇಒ ಮೊಹಮ್ಮದ್ ಮನ್ಸೂರ್ ಖಾನ್, ಹಲವಾರು ಹಿರಿಯ ಅಧಿಕಾರಿಗಳು ಸೇರಿದಂತೆ ಒಟ್ಟು 28 ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಬೆಂಗಳೂರಿನ ನ್ಯಾಯಾಲಯದಲ್ಲಿ ಪೂರಕ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದೆ.
ಹೆಮಂತ್ ನಿಂಬಲ್ಕರ್, (ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ಬೆಂಗಳೂರು ನಗರ ಪೊಲೀಸ್), ಅಜಯ್ ಹಿಲೋರಿ (ಪೊಲೀಸ್ ವರಿಷ್ಠಾಧಿಕಾರಿ, ಕರ್ನಾಟಕ ರಾಜ್ಯ ಮೀಸಲು ಪೊಲೀಸ್), ಇ.ಬಿ. ಶ್ರೀಧರ ಡೆಪ್ಯೂಟಿ ಎಸ್ಪಿ (ಸಿಐಡಿ), ಕಮರ್ಷಿಯಲ್ ಸ್ಟ್ರೀಟ್ ನ ಆಗಿನ ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಸ್ಟೇಷನ್ ಹೌಸ್ ಆಫೀಸರ್ ಎಂ ರಮೇಶ್ , ಕಮರ್ಷಿಯಲ್ ಸ್ಟ್ರೀಟ್ ನ ಆಗಿನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪಿ.ಗೌರಿಶಂಕರ್, ಮತ್ತು ಬೆಂಗಳೂರು ಉತ್ತರ ಉಪವಿಭಾಗದ ಆಗಿನ ಸಹಾಯಕ ಆಯುಕ್ತರಾದ ಎಲ್.ಸಿ. ನಾಗರಾಜ್ ಮೊದಲಾದ ಅಧಿಕಾರಿಗಳ ಹೆಸರನ್ನು ಸಿಬಿಐ ಚಾರ್ಜ್ಶೀಟ್ನಲ್ಲಿ ಹೆಸರಿಸಿದೆ.
ಐಎಂಎ ನಿರ್ದೇಶಕರಾದ ನಿಜಾಮುದ್ದೀನ್, ನಸೀರ್ ಹುಸೇನ್, ನವೀದ್ ಅಹ್ಮದ್ ನಟ್ಟಮ್ಕರ್, ವಸೀಮ್, ಅರ್ಷದ್ ಖಾನ್, ಮತ್ತು ಅಫ್ಸರ್ ಪಾಷಾ ಅವರ ಹೆಸರನ್ನೂ ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ಹೆಸರಿಸಿದೆ.
ಐಎಂಎ ವಿರುದ್ಧ ಬಂದ ದೂರುಗಳು ಮತ್ತು ಮಾಹಿತಿಯ ಬಗ್ಗೆ ಆಗಿನ ಕಂದಾಯ ಅಧಿಕಾರಿ ಮತ್ತು ಬೆಂಗಳೂರಿನ ಇತರ ಪೊಲೀಸ್ ಅಧಿಕಾರಿಗಳು ಸೇರಿ ವಿಚಾರಣೆ/ಪರಿಶೀಲನೆಗಳನ್ನು ಮುಚ್ಚಿ ಹಾಕಿದ್ದಾರೆ ಎಂದು ಸಿಬಿಐ ಆರೋಪಿಸಿದೆ.
ಆರೋಪಿಗಳ ವಿರುದ್ಧ ಕೆಪಿಐಡಿಎಫ್ಇ ಕಾಯ್ದೆ 2004 ಸೇರಿದಂತೆ ಕಾನೂನಿನಡಿಯಲ್ಲಿ ಅಗತ್ಯ ಕ್ರಮ ಕೈಗೊಂಡಿಲ್ಲ. ಬದಲಿಗೆ ಕ್ಲೀನ್ ಚಿಟ್ ನೀಡಿದ್ದಾರೆ ಮತ್ತು ಈ ಖಾಸಗಿ ಕಂಪನಿಯು ಯಾವುದೇ ಅಕ್ರಮ ಕೃತ್ಯಗಳಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿ ದೂರುಗಳನ್ನು ಮುಚ್ಚಿದ್ದಾರೆ ಎಂದು ಆರೋಪಿಸಲಾಗಿದೆ.
ಮಾಸಿಕ ಯೋಜನೆ, ಶಿಕ್ಷಣ ಯೋಜನೆ, ಮದುವೆ ಮುಂತಾದ ವಿವಿಧ ಯೋಜನೆಗಳ ಮೇಲೆ ಹೂಡಿಕೆ ರೂಪದಲ್ಲಿ ಜನರಿಂದ ಅಕ್ರಮವಾಗಿ ಹಣವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದ ಐಎಂಎ ಹಗರಣವು 2018 ರಲ್ಲಿ ಬೆಳಕಿಗೆ ಬಂದಿತ್ತು.
ಐಎಂಎ ನಿರ್ದೇಶಕರು ಮತ್ತು ಪ್ರವರ್ತಕರ ವಿರುದ್ಧ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಅದನ್ನು ಸಿಬಿಐಗೆ ವರ್ಗಾಯಿಸಲಾಯಿತು. ಈ ಹಗರಣವನ್ನು ತನಿಖೆ ನಡೆಸಲು ಸಿಬಿಐ ತನ್ನ ತನಿಖಾಧಿಕಾರಿಗಳನ್ನು ಒಳಗೊಂಡ ಬಹು ಶಿಸ್ತಿನ ತನಿಖಾ ತಂಡವನ್ನು (MDIT) ರಚಿಸಿತ್ತು, ಈ ತಂಡವು ಚಾರ್ಟರ್ಡ್ ಅಕೌಂಟೆಂಟ್ಸ್, ಫೊರೆನ್ಸಿಕ್ ಆಡಿಟರ್, ಕಂಪ್ಯೂಟರ್ ಫೊರೆನ್ಸಿಕ್ ತಜ್ಞರು ಮತ್ತು ಬ್ಯಾಂಕರ್ಗಳ ಸಹಾಯ ಪಡೆಯುತ್ತಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ನಾಲ್ಕು ಪ್ರಕರಣಗಳನ್ನು ದಾಖಲಿಸಿದೆ. ಐಎಂಎ ಹಗರಣ ಪ್ರಕರಣದಲ್ಲಿ ಸಿಬಿಐ ಈ ಹಿಂದೆಯೂ ಎರಡು ಚಾರ್ಜ್ಶೀಟ್ಗಳನ್ನು ಸಲ್ಲಿಸಿದೆ.
ಐಎಮ್ಎ ಹಗರಣದ ಮುಖ್ಯ ಆರೋಪಿ ಮೊಹಮ್ಮದ್ ಮನ್ಸೂರ್ ಖಾನ್ ಅವರನ್ನು ಕಳೆದ ವರ್ಷ ಜುಲೈ 19 ರಂದು ನವದೆಹಲಿಗೆ ಆಗಮಿಸಿದಾಗ ಬಂಧಿಸಲಾಗಿತ್ತು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.