ಚುನಾವಣಾ ಪ್ರಚಾರ ರ‍್ಯಾಲಿ ವಿಚಾರದಲ್ಲಿ ಬಯಲಾದ ಡಾ. ಸುಧಾಕರ್‌ ದ್ವಂದ್ವ ನೀತಿ
ಕಾಂಗ್ರೆಸ್‌ ನಾಯಕರು ಮಾಡಿದ್ದು ಸರಿಯೋ? ಅಥವಾ ಬಿಜೆಪಿ ನಾಯಕರು ಮಾಡಿದ್ದು ಸರಿಯೋ? ಎಂಬುದು ಪ್ರಶ್ನೆಯಲ್ಲ. ಆದರೆ, ಆರೋಗ್ಯ ಸಚಿವರಾದವರಿಗೆ ತಮ್ಮ ಪಕ್ಷದ ನಾಯಕರು ಮಾಡಿದ ತಪ್ಪು ಕಣ್ಣಿಗೆ ಕಾಣದಿರುವುದು ಅಪಹಾಸ್ಯಕ್ಕೆ ಎಡೆ ಮಾಡಿಕೊಟ್ಟಂತಾಗಿದೆ.
ಚುನಾವಣಾ ಪ್ರಚಾರ ರ‍್ಯಾಲಿ ವಿಚಾರದಲ್ಲಿ ಬಯಲಾದ ಡಾ. ಸುಧಾಕರ್‌ ದ್ವಂದ್ವ ನೀತಿ

ಕರ್ನಾಟಕದಲ್ಲಿ ಉಪ ಚುಣಾವಣೆಯ ಕಾವು ಜೋರಾಗಿ ಹಬ್ಬುತ್ತಿದೆ. ಇದರ ನಡುವೆ, ಬಿಜೆಪಿ ಮತ್ತು ಕಾಂಗ್ರೆಸ್‌ನ ನಾಯಕರ ಮಾತಿನ ಸಮರ ಈಗಲೇ ತಾರಕಕ್ಕೇರಿದೆ. ಅದರಲ್ಲೂ ಹೊಸತಾಗಿ ಆರೋಗ್ಯ ಮಂತ್ರಿಯಾಗಿ ನೇಮಕವಾಗಿರುವ ಡಾ. ಸುಧಾಕರ್‌ ಅವರ ದ್ವಂದ್ವ ನೀತಿ ಈ ಬಾರಿಯ ಚುನಾವಣೆಯಲ್ಲಿ ಜಗಜ್ಜಾಹೀರಾಗಿದೆ.

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ನಾಯಕರು ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಿ ರ‍್ಯಾಲಿ ನಡೆಸಿದ್ದನ್ನು ಟೀಕಿಸಿದ್ದ ಡಾ. ಸುಧಾಕರ್‌ ಅವರಿಗೆ ತಮ್ಮದೇ ಪಕ್ಷದ ನಾಯಕರ ಜೊತೆಗಿದ್ದ ಜನಸ್ತೋಮ ಕಣ್ಣಿಗೆ ಕಾಣಿಸಲಿಲ್ಲ. ಕಾಂಗ್ರೆಸ್‌ ನಾಯಕರ ವಿರುದ್ದ ಮಾಡಿದ್ದ ಟ್ವೀಟ್‌ ಅನ್ನು ಚುನಾವಣಾ ಆಯೊಗಕ್ಕೂ ಟ್ಯಾಗ್‌ ಮಾಡಿರುವ ಸುಧಾಕರ್‌ ಅವರು, ಕಾಂಗ್ರೆಸ್‌ನ ರ‍್ಯಾಲಿಯ ಕುರಿತು ತಕರಾರು ಎತ್ತಿದ್ದರು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ಕರೋನಾ ಸಂದರ್ಭದಲ್ಲಿ ಪಾಲಿಸಬೇಕಾದ ಮುನ್ನೆಚ್ಚರಿಕೆಗಳನ್ನು ಗಾಳಿಗೆ ತೂರಿ ಇಂದು ಕಾಂಗ್ರೆಸ್ ಪಕ್ಷ ಶಿರಾದಲ್ಲಿ ನಡೆಸಿರುವ ಪ್ರಚಾರ ರ‍್ಯಾಲಿ ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆಯಾಗಿದೆ. ಅಷ್ಟೇ ಅಲ್ಲದೆ, ಈ ಬೇಜವಾಬ್ದಾರಿ ನಡೆಯಿಂದ ಕಾಂಗ್ರೆಸ್ ಪಕ್ಷ ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ದೂಡಿದೆ,” ಎಂದು ಡಾ. ಸುಧಾಕರ್‌ ತಮ್ಮ ಟ್ವಿಟರ್‌ ಖಾತೆಯಲ್ಲಿ ಬರೆದುಕೊಂಡಿದ್ದರು.

ಟ್ವೀಟ್‌ನೊಂದಿಗೆ ಕಾಂಗ್ರೆಸ್‌ ಕಾರ್ಯಕರ್ತರು ತಂಡೋಪತಂಡವಾಗಿ ರ‍್ಯಾಲಿಯಲ್ಲಿ ಪಾಲ್ಗೊಳ್ಳುತ್ತಿರುವ ಚಿತ್ರವನ್ನು ಕೂಡಾ ಹಾಕಲಾಗಿತ್ತು.

ಈ ಟ್ವೀಟ್‌ ಮಾಡಿ ಗಂಟೆ ಆಗಿವ ಮೊದಲೇ, ಉಪ ಮುಖ್ಯಮಂತ್ರಿ ಡಾ. ಅಶ್ವಥನಾರಾಯಣ ಹಾಗೂ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷ ಸಿಎಂ ಮಗ ಬಿ ವೈ ವಿಜಯೇಂದ್ರ ಅವರು ತಮ್ಮ ವೈಯಕ್ತಿಕ ಟ್ವಿಟರ್‌ ಖಾತೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್‌ ಗೌಡ ಅವರ ನಾಮಪತ್ರ ಸಲ್ಲಿಕೆಯ ಫೋಟೋವನ್ನು ಪೋಸ್ಟ್‌ ಮಾಡಿದ್ದರು. ಇಬ್ಬರು ಹಾಕಿರುವ ಫೋಟೋಗಳಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿರುವುದು ಕಂಡು ಬಂದಿದೆ.

ವಿಜಯೇಂದ್ರ ಅವರು ಮಾಡಿರುವ ಟ್ವೀಟ್‌ನಲ್ಲಿ “ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ನಾಮಪತ್ರ ಸಲ್ಲಿಸುವ ವೇಳೆ ರ‍್ಯಾಲಿಯಲ್ಲಿ ಭಾಗವಹಿಸಿದ್ದೆ. ಕ್ಷೇತ್ರದ ಜನತೆಯ ಅಭೂತಪೂರ್ವ ಬೆಂಬಲ ನಮ್ಮ ಪಕ್ಷದ ಮೇಲೆ ಹಾಗೂ ಅಭಿವೃದ್ಧಿಯ ಪರವಾದ ಅಲೆಯಿದ್ದು ವಿಜಯ ನಮ್ಮದಾಗಲಿದೆ,” ಎಂದು ಬರೆದುಕೊಂಡಿದ್ದಾರೆ.

ಉಪ ಮುಖ್ಯಮಂತ್ರಿ ಡಾ. ಸಿ ಎನ್‌ ಅಶ್ವತ್ಥನಾರಾಯಣ ಅವರು “ಶಿರಾದಲ್ಲಿ ಕಮಲ ಅರಳಲಿದೆ! ಬಿಜೆಪಿ ಪಕ್ಷದ ಅಭ್ಯರ್ಥಿ ಡಾ. ರಾಜೇಶ್ ಗೌಡ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಹಾಗೂ ಬಿ ವೈ ವಿಜಯೇಂದ್ರ ಅವರೊಂದಿಗೆ ರ‍್ಯಾಲಿಯಲ್ಲಿ ಪಾಲ್ಗೊಂಡೆ. ಜನತೆಯ ಅಭೂತಪೂರ್ವ ಬೆಂಬಲ ನಮಗಿದೆ,” ಎಂದು ಬರೆದುಕೊಂಡಿದ್ದಾರೆ.

ಸಾವಿರಾರು ಸಂಖ್ಯೆಯಲ್ಲಿ ಬಿಜೆಪಿ ಕಾರ್ಯಕರ್ತರು ಸೇರಿದ್ದರೂ, ಇದು ಆರೋಗ್ಯ ಸಚಿವರ ಕಣ್ಣಿಗೆ ಕಾಣದೇ ಇರುವುದು ನಿಜಕ್ಕೂ ಆಶ್ಚರ್ಯವೇ ಸರಿ. ಕಾಂಗ್ರೆಸ್‌ ಕಾರ್ಯಕರ್ತರು ಸೇರಿರುವ ಕಡೆ ಚುನಾವಣಾ ಆಯೋಗದ ನಿಯಮಗಳ ಉಲ್ಲಂಘನೆ ಆಗುತ್ತದೆ. ಆದರೆ, ಅದೇ ನಿಯಮಗಳು ಆಡಳಿತರೂಢ ಬಿಜೆಪಿ ಪಕ್ಷದ ನಾಯಕರಿಗೆ ಅನ್ವಯವಾಗುವುದಿಲ್ಲ.

ಇನ್ನು ಕರೋನಾ ಸೋಂಕು ಬಿಜೆಪಿ ಮತ್ತು ಕಾಂಗ್ರೆಸ್‌ ಕಾರ್ಯಕರ್ತರ ನಡುವೆ ಯಾವುದೇ ತಾರತಮ್ಯ ಮಾಡುವುದಿಲ್ಲ. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯನ್ನು ಅಪಾಯಕ್ಕೆ ದೂಡುವ ಕೆಲಸ ಬಿಜೆಪಿ ನಾಯಕರಿಂದಲೂ ನಡೆದಿದೆ.

ಇಲ್ಲಿ ಕಾಂಗ್ರೆಸ್‌ ನಾಯಕರು ಮಾಡಿದ್ದು ಸರಿಯೋ? ಅಥವಾ ಬಿಜೆಪಿ ನಾಯಕರು ಮಾಡಿದ್ದು ಸರಿಯೋ? ಎಂಬುದು ಪ್ರಶ್ನೆಯಲ್ಲ. ಆದರೆ, ಆರೋಗ್ಯ ಸಚಿವರಾದವರಿಗೆ ತಮ್ಮ ಪಕ್ಷದ ನಾಯಕರು ಮಾಡಿದ ತಪ್ಪು ಕಣ್ಣಿಗೆ ಕಾಣದಿರುವುದು ಅಪಹಾಸ್ಯಕ್ಕೆ ಎಡೆ ಮಾಡಿಕೊಟ್ಟಂತಾಗಿದೆ. ಬಿಜೆಪಿ ನಾಯಕರ ದ್ವಂದ್ವ ನೀತಿ ಇದರಿಂದಾಗಿ ಬಟಾ ಬಯಲಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com