ತುಲಾ ಸಂಕ್ರಮಣಕ್ಕೆ ಸಾರ್ವಜನಿಕರಿಗೆ ನಿರ್ಬಂಧ; ಕೊಡವ ಜನಾಂಗದ ಆಕ್ಷೇಪ

ಸುಮಾರು ೨-೩ ಶತಮಾನಗಳಿಂದಲೂ ಪ್ರತೀ ವರ್ಷ ಕಾವೇರಿ ತುಲಾ ಸಂಕ್ರಮಣ ದಿನವಾದ ಅಕ್ಟೋಬರ್ 17 ರಂದು ಕಾವೇರಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾಳೆ ಎಂದು ನಂಬಿರುವ ಸಾವಿರಾರು ಭಕ್ತರು ಆ ದಿನದಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭೇಟಿ ಕೊಟ ...
ತುಲಾ ಸಂಕ್ರಮಣಕ್ಕೆ ಸಾರ್ವಜನಿಕರಿಗೆ ನಿರ್ಬಂಧ; ಕೊಡವ ಜನಾಂಗದ ಆಕ್ಷೇಪ

ವಿಶಿಷ್ಟ ಸಂಸ್ಕೃತಿಯ ಕೊಡವ ಜನಾಂಗಕ್ಕೆ ಇರುವ ಮೂರು ಹಬ್ಬಗಳಲ್ಲಿ ಕಾವೇರಿ ತುಲಾ ಸಂಕ್ರಮಣ, ಹುತ್ತರಿ ಮತ್ತು ಕೈಲ್ ಮುಹೂರ್ತವೇ ಪ್ರಧಾನವಾದುದು. ಕೊಡವರ ಕುಲ ದೈವ ಕಾವೇರಿ ತುಲಾ ಸಂಕ್ರಮಣದ ಆಚರಣೆಯನ್ನು ಪ್ರತಿಯೊಂದು ಕೊಡವ ಕುಟುಂಬವೂ ಆಚರಿಸುತ್ತದೆ. ಮನೆಯಲ್ಲಿ ಯಾರಾದರೂ ಮೃತ ಪಟ್ಟಾಗ ಪಿಂಡ ಪ್ರಧಾನ ಮಾಡುವುದೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿಯೇ. ಸಾವು ಸಂಭವಿಸಿದ ಮನೆಯವರೆಲ್ಲರೂ ಇಲ್ಲಿಗೆ ಕಡ್ಡಾಯವಾಗಿ ಭೇಟಿ ನೀಡಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಾರೆ. ಆಷ್ಟೇ ಅಲ್ಲ ಪ್ರತಿಯೊಬ್ಬ ಕೊಡವರ ಮನೆಯಲ್ಲೂ ತಲಕಾವೇರಿಯ ಚಿತ್ರ ಪಟ ಇದ್ದೇ ಇರುತ್ತದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸುಮಾರು ೨-೩ ಶತಮಾನಗಳಿಂದಲೂ ಪ್ರತೀ ವರ್ಷ ಕಾವೇರಿ ತುಲಾ ಸಂಕ್ರಮಣ ದಿನವಾದ ಅಕ್ಟೋಬರ್ 17 ರಂದು ಕಾವೇರಿ ತೀರ್ಥ ರೂಪಿಣಿಯಾಗಿ ಭಕ್ತರಿಗೆ ದರ್ಶನ ಕೊಡುತ್ತಾಳೆ ಎಂದು ನಂಬಿರುವ ಸಾವಿರಾರು ಭಕ್ತರು ಆ ದಿನದಂದು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭೇಟಿ ಕೊಟ್ಟು ಪುಣ್ಯ ಸ್ನಾನ ಮಾಡಿ ಪುನೀತರಾಗುತ್ತಾರೆ. ಆದರೆ ಈ ಬಾರಿ ಕೋವಿಡ್ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕರಿಗೆ ನಿರ್ಭಂಧ ವಿಧಿಸಿರುವುದರಿಂದ ತೀರ್ಥೋಧ್ಭವದ ಸಮಯಕ್ಕೆ (ಬೆಳಿಗ್ಗೆ 7.05 ಗಂಟೆ) ಯಾರನ್ನೂ ಒಳ ಬಿಡುವುದಿಲ್ಲ ಎಂದು ಜಿಲ್ಲಾಡಳಿತ ಪ್ರಕಟಿಸಿರುವುದು ಕೊಡವ ಜನಾಂಗದ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

ಕಾವೇರಿ ಮಾತೆಯ ನೈಜ ಭಕ್ತರನ್ನು ಕತ್ತಲೆಯಲ್ಲಿಟ್ಟು ಕಾವೇರಿ ತುಲಾಸಂಕ್ರಮಣ ಮಾಡುವ ಹುನ್ನಾರವನ್ನು ಅಖಿಲ ಕೊಡವ ಸಮಾಜ ಕೇಂದ್ರ ಸಮಿತಿ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ತೀವ್ರವಾಗಿ ಖಂಡಿಸಿದ್ದು ತೀರ್ಥೋದ್ಬವದಲ್ಲಿ ಮೂಲನಿವಾಸಿಗಳಿಗೆ ಮುಕ್ತ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತು ಜಂಟಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂಥ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಜಿಲ್ಲಾಡಳಿತ ಹಾಗೂ ಸರ್ಕಾರದ ನಡೆಯನ್ನು ಖಂಡಿಸಿದ್ದಾರೆ.

ತೀರ್ಥೋದ್ಬವಕ್ಕೆ ಕಾಲಾವಕಾಶವಿದ್ದರು ಕೊನೆಯ ಗಳಿಗೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಅಧಿಕವಾಗಿ ಭಕ್ತರು ಬರುತ್ತಾರೆ ಎಂಬ ಹಿನ್ನಲೆಯಲ್ಲಿ ತೀರ್ಥೋದ್ಬವ ಸಂದರ್ಭ ಸೀಮಿತ ಜನರನ್ನು ಬಿಟ್ಟರೆ ಇತರ ಯಾರಿಗೂ ಕ್ಷೇತ್ರದ ಒಳಗೆ ಪ್ರವೇಶವಿಲ್ಲ ಎನ್ನುವ ಆಜ್ಞೆ ಹೊರಡಿಸಿದ್ದು ಹಾಗೂ 9 ಅಥವಾ10 ಗಂಟೆಯ ನಂತರ ಕ್ಷೇತ್ರದ ಒಳಗೆ ಬಿಡುತ್ತಾರೆ ಎಂಬ ನಿಯಮ ಹೊರಡಿಸಿರುವುದು ಕಾವೇರಿಯ ನೈಜ ಭಕ್ತರ ಧಾರ್ಮಿಕ ಭಾವನೆಗೆ ದಕ್ಕೆ ಉಂಟಾಗಿದೆ. ಹುಟ್ಟಿನಿಂದ ಸಾವಿನವರೆಗೂ ಕುಲಮಾತೆ ಕಾವೇರಿಯೊಂದಿಗೆ ತಾಯಿ ಮಕ್ಕಳ ಸಂಬಂಧವಿದ್ದು, ತಾಯಿಯನ್ನು ನೋಡಲು ಮಕ್ಕಳನ್ನು ಬಿಡುವುದಿಲ್ಲವೆಂದರೆ ಹೇಗೆ ಎಂದು ಪ್ರಶ್ನೆ ಮಾಡಿರುವ ಅಖಿಲ ಕೊಡವ ಸಮಾಜ ಹಾಗೂ ಯೂಥ್ ವಿಂಗ್ ಸರ್ಕಾರದ ಹಾಗೂ ಜಿಲ್ಲಾಡಳಿತದ ಈ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಡಿಯಲ್ಲಿ ಅನ್ಯಧರ್ಮದ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಗೆ ಹಾಗೂ ಅವರ ಸಹಾಯಕರಿಗೆ ಜವಬ್ದಾರಿಯನ್ನು ನೀಡದೆ ಆ ಅಧಿಕಾರಿಯನ್ನು ತಾತ್ಕಾಲಿಕವಾಗಿ ರಜೆ ಅಥವಾ ಆ ಹಬ್ಬದ ಉಸ್ತುವಾರಿಯನ್ನು ಅದೇ ಧರ್ಮದ ಅಧಿಕಾರಿಗಳಿಗೆ ನೀಡಬೇಕು ಎಂಬ ನಿಯಮವಿದೆ. ಸರಕಾರ ಹಾಗೂ ಸಂಬಂಧಪಟ್ಟವರು ಈ ನಿಯಮವನ್ನು ಏಕೇ ಪಾಲಿಸಿಲ್ಲ. ಕನಿಷ್ಠ ಪಕ್ಷ ಮೂಲನಿವಾಸಿಗಳ ಧಾರ್ಮಿಕ ಭಾವನೆಗೆ ದಕ್ಕೆಯಾಗುತ್ತದೆ ಎಂಬ ಪರಿಜ್ಞಾನ ಸರಕಾರಕ್ಕೆ ಬೇಕು ಹಾಗೂ ಸಂಬಂಧಪಟ್ಟವರಿಗೂ ಬೇಕು ಅಲ್ಲವೆ. ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಂಡು ಮೂಲನಿವಾಸಿಗಳ ಭಾವನೆಗೆ ದಕ್ಕೆಯಾಗದಂತೆ ನೋಡಿಕೊಳ್ಳಬೇಕಿದೆ. ತೀರ್ಥೋದ್ಬವಕ್ಕೆ ಸಾಕಷ್ಟು ಕಾಲಾವಕಾಶವಿದ್ದರೂ ಯಾವುದೇ ಮುಂಜಾಗ್ರತಾ ಕ್ರಮವನ್ನು ಕೈಗೊಳ್ಳದೆ ಮೂಲನಿವಾಸಿಗಳ ಮೇಲೆ ಗದಾಪ್ರಹಾರಕ್ಕೆ ನಿಂತಿರುವುದು ಎಷ್ಟು ಸರಿ? ದೇಶದಲ್ಲಿ, ರಾಜ್ಯದಲ್ಲಿ ಮಾತ್ರವಲ್ಲ ಜಿಲ್ಲೆಯಲ್ಲಿ ಕೋವಿಡ್-19 ವ್ಯಾಪಕವಾಗಿ ಹರಡಿದೆ ಎಂಬುದನ್ನು ಒಪ್ಪಿಕೊಳ್ಳೋಣ. ಇದಕ್ಕೆ ಯಾವ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದೆ. ಸದ್ಯದ ಮಟ್ಟಿಗೆ ಪ್ರಸ್ತುತ ವರ್ಷ ಹೊರಜಿಲ್ಲೆ ಹೊರ ರಾಜ್ಯದ ಭಕ್ತರಿಗೆ ಕಡಿವಾಣ ಹಾಕಿ ಜಿಲ್ಲೆಯ ಭಕ್ತರಿಗೆ ಅವಕಾಶ ಮಾಡಿ ಕೊಡಿ.

ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವನ್ನು ಕೈಗೊಂಡು ಜಿಲ್ಲೆಯ ರೆಸಾರ್ಟ್ ಹೋಂಸ್ಟೇ ಹಾಗೂ ಲಾಡ್ಜ್'ಗಳನ್ನು ಒಂದು ವಾರದ ಮಟ್ಟಿಗೆ ಮುಚ್ಚಿ ಪ್ರವಾಸಿಗರಿಗೆ ನಿರ್ಬಂಧ ಹಾಕಬೇಕಿತ್ತು. ಹಾಗೇ ಗಡಿಯಲ್ಲಿ ತಪಾಸಣೆ ಮಾಡಿ ಮೂಲನಿವಾಸಿ ಎನ್ನುವ ಯಾವುದಾದರೊಂದು ದಾಖಲೆ ಇದ್ದರೆ ಮಾತ್ರ ಬಿಡುವ ವ್ಯವಸ್ಥೆ ಮಾಡಬೇಕಿತ್ತು. ಇದ್ಯಾವುದನ್ನು ಮಾಡದೆ ಇದೀಗ ಏಕಾಏಕಿ ಕೋವಿಡ್ ಸರ್ಟಿಫಿಕೇಟ್ ಖಡ್ಡಾಯ ಎಂದು ಅಥವಾ ಕ್ಷೇತ್ರದೊಳಗೆ ಬಿಡುವುದಿಲ್ಲ ಎನ್ನುವುದು ಎಷ್ಟು ಸರಿ. ಕೊನೆ ಗಳಿಗೆಯಲ್ಲಿ ಯಾವ ಸರಕಾರಿ ಆಸ್ಪತ್ರೆಯಲ್ಲಿ ಅಷ್ಟು ಬೇಗ ಕೋವಿಡ್ ಟೆಸ್ಟ್ ಮಾಡಿಕೊಡುತ್ತೆ ಒಂದು ಸಮಯ ಮಾಡಿಕೊಟ್ಟರು ನೂಕುನುಗ್ಗಲು ಹೆಚ್ಚಾಗಿ ಇಲ್ಲಿಯೂ ಕೋವಿಡ್ ಅಧಿಕವಾಗಲು ಕಾರಣವಾಗುವುದಿಲ್ಲವೇ. ಇನ್ನು ಖಾಸಗಿಯಲ್ಲಿ ಹಣವನ್ನು ಭರಿಸುವುದು ಯಾರು, ಕೊಡಗಿನ ಕಾವೇರಿ ಮಾತೆಯ ಭಕ್ತರೆಲ್ಲಾರು ಶ್ರೀಮಂತರೇ ಎಂದು ಚಿಂತಿಸಬೇಕಿದೆ. ಇದ್ಯಾವುದನ್ನು ಚಿಂತಿಸದೆ ಏಕಾಏಕಿ ತಲಕಾವೇರಿಗೆ ತೀರ್ಥೋದ್ಬವ ಸಮಯದಲ್ಲಿ ಬಿಡುವುದಿಲ್ಲವೆಂದರೆ ಹೇಗೆ, ಕೊಡವ ಧಾರ್ಮಿಕ ಭಾವನೆಯೊಂದಿಗೆ ಜಿಲ್ಲಾಡಳಿತವಾಗಲಿ ಅಥವಾ ಸರಕಾರವಾಗಲಿ ಆಟವಾಡುವುದು ಬೇಡ ಎಂದು ಎಚ್ಚರಿಕೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಈ ಕುರಿತು ಬುಧವಾರ ಆದೇಶವೊಂದನ್ನು ಹೊರಡಿಸಿರುವ ಅವರು, ಜಿಲ್ಲೆಯ ಹೊಟೇಲ್, ರೆಸಾರ್ಟ್ ಮತ್ತು ಹೋಂಸ್ಟೇಗಳ ಪ್ರವೇಶ ದ್ವಾರದಲ್ಲಿ ಸ್ಟ್ಯಾಂಡ್ ಸ್ಯಾನಿಟೈಸರ್, ಕೊಠಡಿ, ಶೌಚಾಲಯ, ರೆಸ್ಟೋರೆಂಟ್ಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ಬಳಸಲಾಗುತ್ತಿದೆಯೇ, ಕಡ್ಡಾಯವಾಗಿ ಮಾಸ್ಕ್ ಅಥವಾ ಮುಖಗವಸು ಬಳಸಲಾಗುತ್ತಿದೆಯೇ, ಸಾಕಷ್ಟು ಸಾಮಾಜಿಕ ಅಂತರ ಕಾಯ್ದುಕೊಳ್ಳಲಾಗುತ್ತಿದೆಯೇ ಎಂಬ ಬಗ್ಗೆ ಪರಿಶೀಲಿಸುವಂತೆ ಸೂಚಿಸಿದ್ದಾರೆ.ಸಾಧ್ಯವಾದಷ್ಟು ವಿವಿಧ ಮಾದರಿಯ ಇ-ಪೇಮೆಂಟ್ ಮೂಲಕ ವ್ಯವಹಾರ ನಡೆಸಲಾಗುತ್ತಿದೆಯೇ, ಥರ್ಮಲ್ ಟೆಸ್ಟ್ ಮಾಡಲಾಗುತ್ತಿದೆಯೇ, ಕೋವಿಡ್-19 ಸಂಬಂಧ ಪ್ರವಾಸಿಗರಿಗೆ, ಅತಿಥಿಗಳಿಗೆ ಸೂಕ್ತ ನಿರ್ದೇಶನ ನೀಡುವ ಫಲಕ ಅಳವಡಿಸಲಾಗಿದೆಯೇ, ವಾಸ್ತವ್ಯ ಹೂಡಿರುವ ಪ್ರವಾಸಿಗರು, ಅತಿಥಿಗಳ ಪ್ರಯಾಣ ಹಿನ್ನೆಲೆಯ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಲಾಗಿದೆಯೇ ಮತ್ತು ಅವರು ಗುರುತಿನ ಚೀಟಿಗಳನ್ನು ಪಡೆಯಲಾಗುತ್ತಿದೆಯೇ, ಸಿಬ್ಬಂದಿಗಳು ಕೋವಿಡ್ಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮಗಳಾದ ಕೈಗವಸು, ಮುಖಗವಸು ಮತ್ತು ಶುಚಿತ್ವ ಕಾಪಾಡಿಕೊಳ್ಳಲಾಗಿದೆಯೇ, ಅತಿಥಿಗಳು, ಪ್ರವಾಸಿಗರ ಲಗೇಜುಗಳನ್ನು ಸ್ಯಾನಿಟೈಸರ್ ಮಾಡಲಾಗುತ್ತಿದೆಯೇ, ಒಂದು ಕೊಠಡಿಯಲ್ಲಿ ಇಬ್ಬರು ಅತಿಥಿಗಳಿಗೆ ಮಾತ್ರ ವಾಸ್ತವ್ಯ ಹೂಡಲು ಅವಕಾಶ ಕಲ್ಪಿಸಲಾಗುತ್ತಿದೆಯೇ ಎಂಬ ಬಗ್ಗೆಯೂ ಮಾಹಿತಿ ಕಲೆಹಾಕುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ.

ಅಲ್ಲದೆ ಅಕ್ಟೋಬರ್ 17 ಮತ್ತು 26 ರಂದು ಎರಡು ದಿನ ಜಿಲ್ಲೆಯ ಎಲ್ಲ ಪ್ರವಾಸೀ ಕೇಂದ್ರಗಳನ್ನು ಮುಚ್ಚುವಂತೆ ಆದೇಶ ನೀಡಿದ್ದಾರೆ, ನೆರೆಯ ಮೈಸೂರು ಜಿಲ್ಲೆಯಲ್ಲಿ ಅಕ್ಟೋಬರ್ 17 ರಿಂದ ನವೆಂಬರ್ 1 ರ ವರೆಗೆ ಎಲ್ಲ ಪ್ರವಾಸೀ ತಾಣಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದ್ದಾರೆ. ಆದರೆ ಕೊಡಗು ಜಿಲ್ಲಾಡಳಿತದ ಕ್ರಮ ಈಗ ಚರ್ಚೆಗೆ ಗ್ರಾಸವಾಗಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com