ಹಿರಿಯೂರಿನಲ್ಲಿ ಇಲಾಖೆ ಬೋನಿಗೆ ಬಿದ್ದ ಮಲೆನಾಡು ಶೋಕಿ ಬೇಟೆಗಾರರು!

ಗೌಡನಹಳ್ಳಿ ಫಾರ್ಮಹೌಸ್ ಮೇಲೆ ದಾಳಿ ಮಾಡುವಾಗ ಅರಣ್ಯಾಧಿಕಾರಿಗಳ ತಂಡಕ್ಕೆ ಅಲ್ಲಿರುವ ಬೇಟೆಗಾರರ ತಂಡ ಯಾವುದು ಎಂಬ ಮಾಹಿತಿ ಇರಲಿಲ್ಲ. ಒಮ್ಮೆ ಅವರನ್ನು ಬಂಧಿಸಿದ ಬಳಿಕ ಅವರೆಲ್ಲರೂ ಪ್ರತಿಷ್ಟಿತ ಕುಟುಂಬಗಳ ಹಿನ್ನೆಲೆಯವರು ಮತ್ತು ಭಾರೀ ಪ್ರಭಾವಿಗಳ ...
ಹಿರಿಯೂರಿನಲ್ಲಿ ಇಲಾಖೆ ಬೋನಿಗೆ ಬಿದ್ದ ಮಲೆನಾಡು ಶೋಕಿ ಬೇಟೆಗಾರರು!

ಚಿತ್ರದುರ್ಗ ಜಿಲ್ಲೆ ಹಿರಿಯೂರು ಕಾಡಿನಲ್ಲಿ ನಾಲ್ಕು ದಿನಗಳ ಹಿಂದೆ ಮಲೆನಾಡಿನ ಹೈಟೆಕ್ ಬೇಟೆಗಾರರ ತಂಡ ದುಬಾರಿ ಬೆಲೆಯ ಅತ್ಯಾಧುನಿಕ ಆಯುಧಗಳೊಂದಿಗೆ ಅರಣ್ಯಾಧಿಕಾರಿಗಳ ಬಲೆಗೆ ಬಿದ್ದಿರುವ ಘಟನೆ ಮಲೆನಾಡಿನ ಶ್ರೀಮಂತ ಕುಟುಂಬಗಳಲ್ಲಿ ಇಂದಿಗೂ ಮುಂದುವರಿದಿರುವ ಕಾಡುಪ್ರಾಣಿ ಬೇಟೆಯ ಕರಾಳ ಮುಖವನ್ನು ತೆರೆದಿಟ್ಟಿದೆ.

ಐವತ್ತು-ಅರವತ್ತು ವರ್ಷಗಳ ಹಿಂದೆ ಮಲೆನಾಡಿನಲ್ಲಿ ಕಾಡುಪ್ರಾಣಿಗಳ ಬೇಟೆ ಎಂಬುದು ಒಂದು ಪ್ರತಿಷ್ಠೆಯ, ಮೋಜಿನ ಹವ್ಯಾಸವಾಗಿತ್ತು. 1980ರ ಅರಣ್ಯಕಾಯ್ದೆ ಮತ್ತು ವನ್ಯಜೀವಿ ಕಾಯ್ದೆಗಳು ಜಾರಿಗೆ ಬಂದ ಬಳಿಕ ಕ್ರಮೇಣ ಕಡಿಮೆಯಾಗಿತ್ತು. ತೀರಾ ಕಾಡಂಚಿನ ಗ್ರಾಮಗಳಲ್ಲಿ ಆಹಾರಕ್ಕಾಗಿ ಪ್ರಾಣಿಗಳ ಬೇಟೆ ಕದ್ದುಮುಚ್ಚಿ ನಡೆಯುತ್ತಿದ್ದಾರೂ, ಕಳೆದ ಎರಡು ದಶಕದಿಂದೀಚೆಗೆ ಬಹುತೇಕ ನಿಂತುಹೋಗಿತ್ತು. ಅರಣ್ಯ ಇಲಾಖೆಯ ನಿರಂತರ ಗಸ್ತು, ಹದ್ದುಬಸ್ತು, ಕಠಿಣ ಕಾನೂನು ಬೇಟೆಯನ್ನು ದುಸ್ತರಗೊಳಿಸಿದ್ದವು. ಜೊತೆಗೆ ಹಿಂದಿನಂತೆ ಒಂದು ಬೆಳೆಯ ಹೊರತಾಗಿ, ವರ್ಷವಿಡೀ ದುಡಿಮೆಯ ಬೆಳೆ ವೈವಿಧ್ಯದ ಕಾರಣಕ್ಕೆ ಬಿಡುವಿಲ್ಲದ ರೈತಾಪಿ ಮತ್ತು ಕೂಲಿಕಾರರಿಗೆ ಬೇಟೆಯಂತಹ ಕಾಲಾಹರಣಕ್ಕೆ ಪುರುಸೊತ್ತು ಕೂಡ ಇಲ್ಲ. ಇನ್ನು ಟಿವಿ, ಮೊಬೈಲ್ ಬಂದ ಬಳಿಕ ಅಂಗೈನಲ್ಲೇ ಅರಮನೆ ತೋರಿಸುವ ಮನರಂಜನೆಗಳ ಮುಂದೆ ಬೇಟೆಯಂತಹ ಖಯಾಲಿ ಉಳಿಯಲಿಲ್ಲ. ಒಟ್ಟಾರೆ ಈ ಎಲ್ಲದರ ಪರಿಣಾಮ ಮಲೆನಾಡಿನ ಕಾಡು ಬೇಟೆ ಇತಿಹಾಸದ ಸಂಗತಿಯಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಆದರೆ, ಅದೇ ಹೊತ್ತಿಗೆ ಕೇವಲ ಅಡಿಕೆ ಕೃಷಿ, ಜೊತೆಗೆ ಮಂಡಿ ವ್ಯವಹಾರ ಮುಂತಾದ ಸೀಮಿತ ಹಂಗಾಮಿನ ಉದ್ಯೋಗದಲ್ಲಿ ತೊಡಗಿಸಿಕೊಂಡಿರುವ ಕೆಲವು ಶ್ರೀಮಂತ ಕುಟುಂಬಗಳಲ್ಲಿ ಮಾತ್ರ ಮಲೆನಾಡು ಬದಲಾದರೂ, ಆ ಕುಟುಂಬಗಳ ರಾಜವೈಭೋಗದ ಬಳುವಳಿಗಳು ಮುಂದುವರಿದುಕೊಂಡೇ ಬಂದಿದ್ದವು. ದೇಶದ ಕಾನೂನು- ಕಟ್ಟಳೆಗಳನ್ನು ಮೀರಿ ಕಾಡು ಪ್ರಾಣಿ ಬೇಟೆಯಂತಹ ಅವರ ಐಷಾರಾಮಿ ಹವ್ಯಾಸಗಳು ಆತ್ಯಾಧುನಿಕ ಆಯುಧ, ಸಲಕರಣೆಗಳೊಂದಿಗೆ ಇನ್ನಷ್ಟು ಚಿಗಿತುಕೊಂಡಿವೆ ಎಂಬುದನ್ನು ಹಿರಿಯೂರು ಪ್ರಕರಣ ಈಗ ತೋರಿಸಿಕೊಟ್ಟಿದೆ.

ಅದರಲ್ಲೂ ಮಲೆನಾಡಿನ ಪ್ರತಿಷ್ಟಿತ ಕುಟುಂಬಗಳಲ್ಲಿ ಒಂದಾದ ದೇವಂಗಿ ಕುಟುಂಬದ ವ್ಯಕ್ತಿಯೇ ಬಂಧಿತ ಬೇಟೆಗಾರರ ತಂಡದ ನಾಯಕ ಎಂಬ ಸಂಗತಿ ಶಿವಮೊಗ್ಗ ಸೇರಿದಂತೆ ಮಲೆನಾಡಿನಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಜೊತೆಗೆ ದೇವಂಗಿ ಕುಟುಂಬದ ಪ್ರತಿಷ್ಠಿತ ಮಾದರಿ ಕೃಷಿಕ ಮತ್ತು ಕೃಷಿ ಕ್ಷೇತ್ರದ ಸಾಧನೆಗಾಗಿ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರಾಗಿದ್ದ ದಿವಂಗತ ದೇವಂಗಿ ಪ್ರಫುಲ್ಲ ಚಂದ್ರ ಅವರ ಪುತ್ರ ಇಕ್ಷು ಧನ್ವಾ ತಂಡದ ಬಳಿ ಲಕ್ಷಾಂತರ ಬೆಲೆಯ ಟೆಲಿಸ್ಕೋಪಿಕ್ ಗನ್, ಪಿಸ್ತೂಲ್, ಕ್ರೀಡಾಪಟುಗಳು ಬಳಸುವ ಬಿಲ್ಲು-ಬಾಣ, ಹೈಫ್ಲಾಶ್ ಲೈಟ್ಸ್, ಬೈನಾಕುಲಾರ್ ಮುಂತಾದ ವಿದೇಶಿ ಮಾದರಿಯ ಅತ್ಯಾಧುನಿಕ ಆಯುಧಗಳು ಮತ್ತು ಪ್ರಾಣಿ ಬೇಟೆಗೆ ಬಳಸುವ ಎಲ್ಲಾ ಬಗೆಯ ಹೈಟೆಕ್ ವಸ್ತುಗಳೂ ಇದ್ದವು ಎಂಬುದು ಮಲೆನಾಡಿನ ಪ್ರತಿಷ್ಠಿತ ಕುಟುಂಬಗಳ ಶೋಕಿ ಬದುಕಿನ ಆಯಾಮಗಳನ್ನು ಅನಾವರಣಗೊಳಿಸಿದೆ.

ನಿಜಕ್ಕೂ ನಡೆದದ್ದೇನು?: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಗೌಡನಹಳ್ಳಿ ಸುತ್ತಮುತ್ತು ಇರುವ ಮೀಸಲು ಅರಣ್ಯದ ಕುರುಚಲು ಕಾಡಿನಲ್ಲಿ ಕೃಷ್ಣಮೃಗ ಮತ್ತು ನವಿಲು ದೊಡ್ಡ ಸಂಖ್ಯೆಯಲ್ಲಿವೆ. ಅವೆರಡೂ ವನ್ಯಜೀವಿ ಕಾಯ್ದೆಯಲ್ಲಿ ಕಟ್ಟುನಿಟ್ಟಿನ ಸಂರಕ್ಷಿತ ಜೀವಿಗಳು. ಕೃಷ್ಣಮೃಗ ಅಳಿವಿನಂಚಿನ ಜೀವಿಯಾದರೆ, ನವಿಲು ರಾಷ್ಟ್ರಪಕ್ಷಿ. ಹೀಗೆ ಈ ಪ್ರಾಣಿಗಳ ದಟ್ಟಣೆ ಮತ್ತು ಬಯಲುಸೀಮೆಯ ಕುರುಚಲು ಕಾಡಿನಲ್ಲಿ ರಾತ್ರಿ ಬೇಟೆಯ ವೇಳೆ ವಾಹನಗಳನ್ನು ಚಲಾಯಿಸಬಹುದು ಎಂಬ ಹಿನ್ನೆಲೆಯಲ್ಲೇ ಮಲೆನಾಡಿನ ಈ ಬೇಟೆಗಾರರಿಗೆ ಆ ಜಾಗ ಸುರಕ್ಷಿತವೂ, ಆಕರ್ಷಕವೂ ಆದಂತಿದೆ. ಇಕ್ಷು ಧನ್ವಾ ತನ್ನ ತಂಡವನ್ನು ಕಟ್ಟಿಕೊಂಡು ಈ ಜಾಗಕ್ಕೆ ಆಗಾಗ ಬೇಟೆಗೆ ಹೋಗುತ್ತಿದ್ದ. ಅರಣ್ಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಿಕ್ಕ ಬಳಿಕ ಎರಡು ಬಾರಿ ಹಿಡಿಯಲು ಪ್ರಯತ್ನಿಸಿದ್ದರು. ಆದರೆ, ಚಾಣಾಕ್ಷತನದಿಂದ ಬೇಟೆಗಾರರು ಪರಾರಿಯಾಗಿದ್ದರು. ಇದೀಗ ಅ.11ರಂದು ಬೇಟೆಗೆ ಬಂದು, ಫಾರ್ಮ್ ಹೌಸ್ ವೊಂದರಲ್ಲಿ ತಂಗಿ ತಯಾರಿ ನಡೆಸುತ್ತಿರುವ ಮಾಹಿತಿ ಮೇಲೆ ದಾಳಿ ಮಾಡಿದಾಗ ಬೇಟೆಗಾರರ ಕರಾಮತ್ತು ಬಯಲಾಗಿದೆ!

ಒಟ್ಟು ಏಳು ಮಂದಿ ಬೇಟೆಗಾರರ ತಂಡದಲ್ಲಿದ್ದರು. ಆದರೆ, ದಾಳಿ ವೇಳೆ ಇಬ್ಬರು ಪರಾರಿಯಾಗಿದ್ದು, ಉಳಿದ ಐವರು ಸೆರೆಯಾಗಿದ್ದಾರೆ. ಬಂಧಿತರ ಪೈಕಿ ಇಕ್ಷು ಧನ್ವಾ ಶಿವಮೊಗ್ಗದವನಾಗಿದ್ದು, ರಾಷ್ಟ್ರಮಟ್ಟದ ಶೂಟರ್ ಆಗಿದ್ದಾನೆ ಎನ್ನಲಾಗಿದೆ. ಉಳಿದ ಪ್ರತಾಪ್, ವಿನೋದಕುಮಾರ್, ಸಹದೇವ ಶೆಟ್ಟಿ, ದಿವಾಕರ್ ಮತ್ತು ಗೋಪಿನಾಥನ್ ಅವರು ಬೆಂಗಳೂರು ಮತ್ತಿತರ ಪ್ರದೇಶದ ಶ್ರೀಮಂತ ಕುಟುಂಬಗಳ ಹಿನ್ನೆಲೆಯವರು. ಕಾಫಿ ಎಸ್ಟೇಟ್, ವಿವಿಧ ವಾಹನ ಶೋರೂಂ ಸೇರಿದಂತೆ ವಿವಿಧ ಪ್ರತಿಷ್ಟಿತ ಹಿನ್ನೆಲೆಯವರು ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸೆರೆ ಸಿಕ್ಕವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು, ಪ್ರಾಥಮಿಕ ತನಿಖೆಯಿಂದ ಈ ಎಲ್ಲರೂ ವೃತ್ತಿಪರ ಬೇಟೆಗಾರರು ಎಂದು ತಿಳಿದುಬಂದಿದೆ. ಇವರ ಬಳಿ ಇರುವ ಅತ್ಯಾಧುನಿಕ ಶಸ್ತ್ರಗಳು ಮತ್ತು ಸಲಕರಣೆಗಳು, ಅವರ ಎರಡು ಮಹಿಂದ್ರಾ ಥಾರ್ ಮತ್ತು ಒಂದು ಸ್ಕಾರ್ಪಿಯೋ ವಾಹನದಲ್ಲಿ ಬೇಟೆಯಾಡಲು, ಬೇಟೆ ಬಳಿಕ ಬಲಿಯಾದ ಪ್ರಾಣಿಯ ಮಾಂಸ ಮತ್ತು ಚರ್ಮ ಮತ್ತಿತರ ವಸ್ತುಗಳ ಸಂಸ್ಕರಣೆ ಮತ್ತು ಸಾಗಣೆಗೆ ಬೇಕಾದ ಎಲ್ಲಾ ವ್ಯವಸ್ಥೆ ಇರುವುದನ್ನು ಗಮನಿಸಿದರೆ, ಈ ತಂಡ ಈ ಭಾಗದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಕಡೆ ಕೂಡ ಇಂತಹ ಬೇಟೆ ನಡೆಸುತ್ತಿರುವ ಅನುಮಾನವಿದೆ. ಹೆಚ್ಚಿನ ತನಿಖೆಯಿಂದ ಆ ಬಗ್ಗೆ ವಿವರ ತಿಳಿದುಬರಬೇಕಿದೆ ಎಂದು ಅರಣ್ಯಾಧಿಕಾರಿಗಳು ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.

ಮೂಲಗಳ ಪ್ರಕಾರ, ಗೌಡನಹಳ್ಳಿ ಫಾರ್ಮಹೌಸ್ ಮೇಲೆ ದಾಳಿ ಮಾಡುವಾಗ ಅರಣ್ಯಾಧಿಕಾರಿಗಳ ತಂಡಕ್ಕೆ ಅಲ್ಲಿರುವ ಬೇಟೆಗಾರರ ತಂಡ ಯಾವುದು ಎಂಬ ಮಾಹಿತಿ ಇರಲಿಲ್ಲ. ಒಮ್ಮೆ ಅವರನ್ನು ಬಂಧಿಸಿದ ಬಳಿಕ ಅವರೆಲ್ಲರೂ ಪ್ರತಿಷ್ಟಿತ ಕುಟುಂಬಗಳ ಹಿನ್ನೆಲೆಯವರು ಮತ್ತು ಭಾರೀ ಪ್ರಭಾವಿಗಳು ಎಂಬುದು ಗೊತ್ತಾಗಿದೆ. ಅಷ್ಟರಲ್ಲಿ ಹಿರಿಯ ಅಧಿಕಾರಿಗಳಿಗೆ ಪ್ರಭಾವಿಗಳ ಕರೆಗಳೂ ಬಂದಿವೆ. ಆರೋಪಿಗಳು ಪ್ರಭಾವ ಬೀರಿ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳಲು ಯತ್ನಿಸಿದ್ದರು. ಆದರೆ, ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ಅರಣ್ಯಾಧಿಕಾರಿಗಳು ಅಂತಹ ಪ್ರಭಾವಗಳಿಗೆ ಜಗ್ಗಿಲ್ಲ.

ಆದರೆ, ಪ್ರಕರಣ ದಾಖಲಾದ ಬಳಿಕ ತನಿಖೆಯ ಹಾದಿತಪ್ಪಿಸುವ ಯತ್ನಗಳು ಕೂಡ ನಡೆಯುತ್ತಿವೆ. ಅರಣ್ಯಾಧಿಕಾರಿಗಳಿಗೆ ದೊಡ್ಡ ಮಟ್ಟದಿಂದ ಒತ್ತಡ ಹೇರಲಾಗುತ್ತಿದೆ. ಹಾಗಾಗಿ ಹೆಚ್ಚಿನ ತನಿಖೆಯ ಮೂಲಕ ಈ ತಂಡದ ಹಿಂದಿನ ಕಾರ್ಯಾಚರಣೆಗಳು, ಮಾಂಸ ಮತ್ತು ಚರ್ಮ, ಉಗುರು ಮತ್ತಿತರ ವನ್ಯಜೀವಿ ವಸ್ತುಗಳ ವಹಿವಾಟು, ತಂಡದ ಹಿಂದಿರುವ ಜಾಲ ಮತ್ತಿತರ ಮಾಹಿತಿಯನ್ನು ಕೆದಕಲು ತನಿಖಾಧಿಕಾರಿಗಳಿಗೆ ಅಡ್ಡಿ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳುತ್ತಿವೆ. ಒತ್ತಡದ ಪರಿಣಾಮವಾಗಿಯೇ ಬಂಧಿತರ ವಿರುದ್ಧ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಕಠಿಣ ಕಾಯ್ಡೆಗಳಡಿ ಪ್ರಕರಣ ದಾಖಲಿಸಲು ಕೂಡ ಇಲಾಖೆ ಹಿಂದೇಟು ಹಾಕಿದೆ. ಹಾಗಾಗಿ, ಪ್ರಭಾವಿಗಳು ಭಾಗಿಯಾಗುವ ಬಹುತೇಕ ಅರಣ್ಯ ಮತ್ತು ವನ್ಯಜೀವಿ ಸಂಬಂಧಿತ ಪ್ರಕರಣಗಳಲ್ಲಿ ಆಗುವಂತೆ ಈ ಪ್ರಕರಣದಲ್ಲಿಯೂ ತಿಪ್ಪೆಸಾರಿಸುವ ಸಾಧ್ಯತೆಗಳು ಹೆಚ್ಚಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com