ಮಹಾ ಮಳೆಗೆ ಉತ್ತರ ಕರ್ನಾಟಕ ತತ್ತರ: 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಲ ಕೊಲ್ಲಿಯಲ್ಲಾಗಿರುವ ವಾಯುಭಾರ ಕುಸಿತದ ಪರಿಣಾಮ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ಇಡೀ ಉತ್ತರ ಕರ್ನಾಟಕ ತತ್ತರಿಸಿದೆ.
ಮಹಾ ಮಳೆಗೆ ಉತ್ತರ ಕರ್ನಾಟಕ ತತ್ತರ: 6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್
ಬೆಳಗಾವಿಯ ರಾಮದುರ್ಗ ಬಳಿ, ಮಲಪ್ರಭಾ ತುಂಬಿ ಹರಿಯುತ್ತಿರುವ ದೃಶ್ಯ

ಕಳೆದ ನಾಲ್ಕೈದು ದಿನಗಳಿಂದ ಮಹಾ ಮಳೆಗೆ ಉತ್ತರ ಕರ್ನಾಟಕದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಮೊನ್ನೆ ತಾನೇ ಪ್ರವಾಹ ಬೀತಿಯುಂಟಾಗಿತ್ತು ಒಂದಷ್ಟು ಬೆಳೆ ಹಾಳನ್ನೂ ಮಾಡಿತ್ತು. ಇನ್ನೂ ಜಲಾಘಾತದ ಹೊಡೆತದಿಂದ ನಲುಗಿದ ಉತ್ತರ ಕರ್ನಾಟಕದ ಗ್ರಾಮಸ್ಥರು ಮನೆ ರಿಪೇರಿ ಮಾಡಿಕೊಂಡು ತಮಗೆ ಸರ್ಕಾರದಿಂದ ಬರಬೇಕಾದ ಹಣವನ್ನು ಕಾಯುತ್ತ ಕುಳಿತಿದ್ದರು. ಈಗ ಮತ್ತೊಮ್ಮೆ ಅಲ್ಲಲ್ಲ ಮಗದೊಮ್ಮೆ ಜಲಾಘಾತ.

ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಮುಂದಿನ 48 ಗಂಟೆ ಹಾಗೂ ಬೀದರ, ಕಲಬುರಗಿ, ರಾಯಚೂರು, ಯಾದಗಿರಿಯಲ್ಲಿ 24 ಗಂಟೆ ಭಾರಿ ಮಳೆಯಾಗಲಿರುವ ಹಿನ್ನಲೆಯಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿಯಲ್ಲಿ ಅಕ್ಟೋಬರ್ 15ರಂದು ವ್ಯಾಪಕ ಮಳೆಯಾಗಲಿದೆ. ಈ ಅವಧಿಯಲ್ಲಿ 204.5 ಮಿಮೀ ಮಳೆಯಾಗುವ ಸಾಧ್ಯತೆ ಇದೆ.

ಮಲಪ್ರಭಾ, ಘಟಪ್ರಭಾ, ಕೃಷ್ಣಾ, ದೂಧಗಂಗಾ, ವೇದಗಂಗಾ, ಹಿರಣ್ಯಕೇಶಿ, ವರದಾ, ಕಾಳಿ ಅಘನಾಶಿನಿ, ಶರಾವತಿ, ಹೇಮಾವತಿ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿರುವುದರಿಂದ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳು ಭಾಗಶಃ ನೀರಿನಲ್ಲಿವೆ. ಜನರೆಲ್ಲ ಮಹಾ ಮಳೆಗೆ ತತ್ತರಿಸಿ ಹೋಗಿವೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬಂಗಾಲ ಕೊಲ್ಲಿಯಲ್ಲಾಗಿರುವ ವಾಯುಭಾರ ಕುಸಿತದ ಪರಿಣಾಮ ಮೂರು ದಿನಗಳಿಂದ ಅಬ್ಬರಿಸುತ್ತಿರುವ ಮಳೆಗೆ ಇಡೀ ಉತ್ತರ ಕರ್ನಾಟಕ ತತ್ತರಿಸಿದೆ. ಬಿಟ್ಟೂ ಬಿಡದೆ ಸುರಿದ ಮಳೆಯಿಂದಾಗಿ ಸಾವಿರಾರು ಎಕರೆ ಬೆಳೆ ನೀರಿನಲ್ಲಿ ಕೊಚ್ಚಿಹೋಗಿದ್ದರೆ, ಸಾವಿರಕ್ಕೂ ಅಧಿಕ ಮನೆಗಳು ಹಾನಿಗೀಡಾಗಿ ಕುಸಿಯುವ ಆತಂಕದಲ್ಲಿವೆ. ಈ ಆಘಾತ ಸಾಲದೆಂಬಂತೆ ಬಾಗಲಕೋಟೆ, ರಾಯಚೂರು ಸೇರಿದಂತೆ 6 ಜಿಲ್ಲೆಗಳಲ್ಲಿ ಇನ್ನೂ 3 ದಿನ ವ್ಯಾಪಕ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಎಚ್ಚರಿಸಿರುವುದು ಮತ್ತಷ್ಟು ಆತಂಕ ಸೃಷ್ಟಿಸಿದೆ.

ಸತತ ಮಳೆಯಿಂದ ಊರು ಹಳ್ಳಿಗಳಲ್ಲೆಲ್ಲ ಕೊಳ್ಳಗಳುಂಟಾಗಿ ಯಾವುದು ಭೂಮಿ ಯಾವುದು ಹಳ್ಳ ಎಂಬುದೇ ತಿಳಿಯದಾಗಿದೆ. ರಾಯಚೂರು, ನಾರಾಯಣಪೂರ್ ಡ್ಯಾಂನಿಂದ ಕೃಷ್ಣಾ ನದಿಗೆ 91 ಸಾವಿರ ಕ್ಯೂಸೆಕ್ ನೀರು ಹರಿಬಿಟ್ಟಿದ್ದರಿಂದ ದೇವದುರ್ಗ ತಾಲೂಕ ಹೂವಿನಹೆಡಗಿಯ ಶ್ರೀ ಗಡ್ಡೆಗೂಳಿ ಬಸವೇಶ್ವರ ದೇವಸ್ಥಾನ ಮುಳುಗಡೆಯಾಗಿದೆ. ಹಲವೆಡೆ ಜಲಾವೃತಗೊಂಡು ಜನ ಸಂಚಾರ ಕಷ್ಟವಾಗಿದೆ. ಜಲಾಶಯಗಳು ತುಂಬಿ ಹರಿಯುತ್ತಿರುವುದರಿಂದ ಪ್ರವಾಹಭೀತಿ ಶುರುವಾಗಿದೆ. ಕರಾವಳಿ ತೀರದಲ್ಲಿ ಗಂಟೆಗೆ 40-45 ಕಿ.ಮೀ. ಗಾಳಿಬೀಸುತ್ತಿರುವ ಹಿನ್ನಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಇಲಾಖೆ ಎಚ್ಚರಿಕೆ ನೀಡಿದೆ. ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಬೆಳಗಾವಿಯ ರಾಮದುರ್ಗ ಬಳಿ, ಮಲಪ್ರಭಾ ತುಂಬಿ ಹರಿಯುತ್ತಿರುವ ದೃಶ್ಯ
ನೆರೆಯ ನೀರು: ಉತ್ತರ ಕರ್ನಾಟಕ ತತ್ತರ

ವಿಜಯಪುರ ಜಿಲ್ಲೆಯಲ್ಲೇ ಮಳೆಯಿಂದಾಗಿ 128 ಮನೆಗಳಿಗೆ ಹಾನಿಯಾಗಿದೆ. ಯಾದಗಿರಿಯಲ್ಲಿ 87 ಮನೆಗಳ ಗೋಡೆಗಳು ಬಿರುಕು ಬಿಟ್ಟಿವೆ. ಕೊಪ್ಪಳದಲ್ಲಿ 800 ಮನೆಗಳಿಗೆ ಹಾನಿಯಾಗಿದೆ. ಸಾವಿರಾರು ಹೆಕ್ಟರ್ ಬೆಳೆ ನಾಶವಾಗಿದೆ. ದಾವಣಗೆರೆಯಲ್ಲಿ 200 ಎಕರೆ ಮೆಕ್ಕೆಜೋಳ 50 ಎಕರೆ ಭತ್ತ ನೀರುಪಾಲಾಗಿದ್ದು, ಬಳ್ಳಾರಿಯಲ್ಲಿ 40ಹೆಕ್ಟೇರ್ ಬೆಳೆ ಕೊಚ್ಚಿಹೋಗಿದೆ. ಯಾದಗಿರಿ ಗುರುಸಣಗಿ ಬ್ಯಾರೇಜನಿಂದ ಭೀಮಾ ನದಿಗೆ 40 ಸಾವಿರ ಕ್ಯೂಸೆಕ್ ನೀರು ಬಿಡಲಾಗಿದೆ. ಇದರಿಂದ ನದಿ ಪಾತ್ರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ಬಾಗಲಕೋಟೆಯಲ್ಲಿ 769 ಮನೆಗಳಿಗೆ ಹಾನಿಯಾಗಿದ್ದು, ಗೋಡೆಗಳು ಉರುಳಿ ಬೀಳುತ್ತಿವೆ. ಘಟಪ್ರಭಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮತ್ತೆ ಮುಧೋಳ ತಾಲುಕಿನ ಮಾಚಕನೂರು ಗ್ರಾಮದ ಪ್ರಸಿದ್ದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತಗೊಂಡಿದೆ.

ಯಾದಗಿರಿಯ ಸುರಪುರ, ಶಹಾಪುರ, ವಡಗೇರಾ ಹಾಗೂ ಹುಣಸಗಿ ತಾಲೂಕಿನಲ್ಲಿ ಮನೆಗಳ ಗೋಡೆ ಬಿರುಕು ಬಿಟ್ಟ ಬಗ್ಗೆ ಜಿಲ್ಲಾಡಳಿತ ತಿಳಿಸಿದೆ. ಇನ್ನು ಕ್ರಮೇಣ ಒಳಹರಿವು ಹೆಚ್ಚುತ್ತಿರುವುದರಿಂದ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಪಾತ್ರಕ್ಕೆ ಹೆಚ್ಚಿನ ನೀರು ಹರಿಸಲಾಗುತ್ತಿದೆ. ನದಿ ಪಾತ್ರದ ಗ್ರಾಮಸ್ಥರಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

ರಾಯಚೂರು ಜಿಲ್ಲೆಯಲ್ಲಿ 4.67 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಹತ್ತಿ ಮತ್ತು ತೊಗರಿ, ಸಜ್ಜೆ, ಸೂರ್ಯಕಾಂತಿ ಬೆಳೆ ಹೆಚ್ಚು ಬಿತ್ತಲಾಗಿದೆ. ಹತ್ತಿಯ ಕಾಯಿ ಕೊಳೆತು ಉದುರುತ್ತಿದೆ.

ಕೊಪ್ಪಳದಲ್ಲಿ 60 ಹೆಕ್ಟೇರ್ ಬೆಳೆಹಾನಿಯಾಗಿದೆ. ಭತ್ತ ಮೆಕ್ಕೆಜೋಳ ಹತ್ತಿ ಬೆಳೆಗಳು ಹಾನಿಗೀಡಾಗಿವೆ. ಕಳೆದ ಮೂರ್ನಾಲ್ಕು ದಿನದಲ್ಲಿ ಮಳೆಯಿಂದ 1100 ಹೆ. ಬೆಳೆ ಹಾನಿಯಾಗಿದೆ. 800 ಕ್ಕೂ ಅಧಿಕ ಮನೆಗಳು ಹಾನಿಯಾಗಿವೆ.

ಗದಗ ಜಿಲ್ಲೆಯ ರೋಣ ಹಾಗೂ ನರಗುಂದದಲ್ಲಿ ಹೆಚ್ಚಿನ ಮಳೆಯಾಗಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದ ಸುರಿದ ಮಳೆ, ಘಟಪ್ರಭಾ ಮತ್ತು ಬೆಣ್ಣೆಹಳ್ಳ ಪ್ರವಾಹದಿಂದ ಶೇಂಗಾ 16 ಸಾವಿರ ಹೆಕ್ಟೇರ್, ಈರುಳ್ಳಿ 7 ಸಾವಿರ ಹೆಕ್ಟೇರ್, ಹತ್ತಿ 9900 ಹೆಕ್ಟೇರ್ ಮತ್ತು ಮೆಕ್ಕೆಜೋಳ 19 ಸಾವಿರ ಹೆಕ್ಟೇರ್ ಬೆಳೆ ಹಾನಿಯಾಗಿದೆ.

ಬೆಳಗಾವಿಯ ರಾಮದುರ್ಗ ಬಳಿ, ಮಲಪ್ರಭಾ ತುಂಬಿ ಹರಿಯುತ್ತಿರುವ ದೃಶ್ಯ
ಮತ್ತೆ ಪ್ರವಾಹ.. ಉತ್ತರ ಕರ್ನಾಟಕಕ್ಕೆ ಮತ್ತೆ ಸಂಕಷ್ಟ

ಪ್ರತಿ ಬಾರಿ ಪ್ರವಾಹ ಸಾವಿರಾರು ಜನರ ಜೀವನವನ್ನೇ ಅಸ್ತವ್ಯಸ್ತ ಮಾಡುತ್ತಿದೆ. ಇದಕ್ಕೆ ಪರಿಹಾರವಿಲ್ಲವೇ? ಆಣೆಕಟ್ಟು ಗಳನ್ನು ಎತ್ತರ ಮಾಡಬಹುದು. ಜನರಿಗೆ ಬೇರೆ ಕಡೆಗೆ ಸೂರು ಕಲ್ಪಿಸಬಹುದು. ಅನೇಕ ದಾರಿಗಳುಂಟು. ಸರ್ಕಾರ ಈ ಬಗ್ಗೆ ಚಿಂತನೆ ಮಾಡಬೇಕಿದೆ. ಕಳೆದ ಬಾರಿಯ ನೆರೆ ಪರಿಹಾರವನ್ನೇ ಸಾಕಷ್ಟು ಪ್ರಮಾಣದಲ್ಲಿ ತರಲು ಸಾಧ್ಯವಾಗದ, ಜಿಎಸ್‌ಟಿ ಪಾಲನ್ನೂ ಪಡೆದುಕೊಳ್ಳಲು ಸಾಧ್ಯವಾಗದ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಧಿಕಾರ ಲಾಲಸೆಯನ್ನು ಬದಿಗಿಟ್ಟು ರಾಜ್ಯದ ಜನರ ಸಂಕಷ್ಟ ನಿವಾರಿಸಲು ಈ ಬಾರಿಯಾದರೂ ಯೋಗ್ಯ ಹೆಜ್ಜೆಗಳನ್ನಿಡುತ್ತದೆಯೇ ಎಂಬುದು ಕಾದುನೋಡಬೇಕು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com