ವಿದೇಶಿ ನೇರ ಬಂಡವಾಳ ಹೂಡಿಕೆ: ಲಾಕ್‌ಡೌನ್‌ನಲ್ಲಿ ಅತೀ ಹೆಚ್ಚು ಬಂಡವಾಳ ಆಕರ್ಷಿಸಿದ ಕರ್ನಾಟಕ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಅಕ್ಟೋಬರ್‌ 2019ರಿಂದ ಜೂನ್‌ 2020ರ ವರೆಗೆ ಭಾರತದಲ್ಲಿ ಒಟ್ಟು 2.2 ಲಕ್ಷ ಕೋಟಿಯಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ.
ವಿದೇಶಿ ನೇರ ಬಂಡವಾಳ ಹೂಡಿಕೆ: ಲಾಕ್‌ಡೌನ್‌ನಲ್ಲಿ ಅತೀ ಹೆಚ್ಚು ಬಂಡವಾಳ ಆಕರ್ಷಿಸಿದ ಕರ್ನಾಟಕ

ಇತ್ತೀಚಿನ ಕೆಲ ವರ್ಷಗಳಲ್ಲಿ ಸಾಕಷ್ಟು ಏರಿಳಿತ ಕಂಡಿದ್ದ ಕರ್ನಾಟಕದ ವಿದೇಶಿ ನೇರ ಬಂಡವಾಳ ಹೂಡಿಕೆ (Foregin Direct Investment - FDI) ಯಲ್ಲಿ ಕರ್ನಾಟಕ ಮಹತ್ತರವಾದ ಪ್ರಗತಿ ಸಾಧಿಸಿದೆ. ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲಾ ರಾಜ್ಯಗಳಿಗಿಂತಲೂ ಹೆಚ್ಚಿನ ಮೊತ್ತದ ಬಂಡವಾಳ ಕರ್ನಾಟಕದಲ್ಲಿ ಹೂಡಲಾಗಿದೆ. ಪ್ರತೀ ಬಾರಿಯೂ ಮುಂಚೂಣಿಯಲ್ಲಿರುತ್ತಿದ್ದ ಮಹಾರಾಷ್ಟ್ರವನ್ನು ಹಿಂದಿಕ್ಕಿ ಹೆಚ್ಚಿನ ಮೊತ್ತದ ಬಂಡವಾಳವನ್ನು ಆಕರ್ಷಿಸುವಲ್ಲಿ ಕರ್ನಾಟಕ ಸಫಲವಾಗಿದೆ.

ಸಂಪೂರ್ಣ ಭಾರತ ಲಾಕ್‌ಡೌನ್‌ ಆಗಿದ್ದ ಸಂದರ್ಭದಲ್ಲಿ ಅಂದರೆ, ಏಪ್ರಿಲ್‌ ಮೇ ಮತ್ತು ಜೂನ್‌ ತಿಂಗಳಲ್ಲಿ ಕರ್ನಾಟಕಕ್ಕೆ ಹೆಚ್ಚಿನ ಬಂಡವಾಳ ಹರಿದು ಬಂದಿದೆ. ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದರೂ, ಕರ್ನಾಟಕದಲ್ಲಿ ರೂ. 10,255 ಕೋಟಿಯಷ್ಟು ಬಂಡವಾಳ ಹೂಡಲಾಗಿದೆ. ಇದೇ ಸಮಯದಲ್ಲಿ ಮಹಾರಾಷ್ಟ್ರದಲ್ಲಿ 8,861 ಕೋಟಿ ಬಂಡವಾಳ ಹೂಡಿಕೆಯಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಅಕ್ಟೋಬರ್‌ 2019ರಿಂದ ಜೂನ್‌ 2020ರ ವರೆಗೆ ಭಾರತದಲ್ಲಿ ಒಟ್ಟು 2.2 ಲಕ್ಷ ಕೋಟಿಯಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆಯಾಗಿದೆ. ಒಟ್ಟು ಮೊತ್ತವನ್ನು ಪರಿಗಣಿಸಿದರೆ ಮಹಾರಾಷ್ಟ್ರಕ್ಕೆ ಅತೀ ಹೆಚ್ಚು ಅಂದರೆ, 60,934 ಕೋಟಿ ರೂ. ನಷ್ಟು ಬಂಡವಾಳ ಬಂದರೆ ಕರ್ನಾಟಕಕ್ಕೆ 41,001 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಿದೆ. ಆದರೆ, ಲಾಕ್‌ಡೌನ್‌ ಇದ್ದಂತಹ ತಿಂಗಳನ್ನು ಮಾತ್ರ ನೋಡಿದರೆ, ಮಹಾರಾಷ್ಟ್ರದಲ್ಲಿ ಆದಂತಹ ಬಂಡವಾಳ ಕರ್ನಾಟಕಕ್ಕಿಂತಲೂ ಕಡಿಮೆಯಿದೆ. ಒಟ್ಟು ಬಂಡವಾಳ ಹೂಡಿಕೆಯ ಶೇ. 46ರಷ್ಟನ್ನು ಮಹಾರಾಷ್ಟ್ರ ಮತ್ತು ಕರ್ನಾಟಕ ಹಂಚಿಕೊಂಡಿದೆ.

“ಈ ಬೆಳವಣಿಗೆಯು ಎರಡು ವಿಚಾರಗಳನ್ನು ತಿಳಿಸುತ್ತದೆ. ಮೊದಲನೇಯದು, ಉದ್ಯಮಿಗಳು ಕರ್ನಾಟಕಕ್ಕೆ ಆದ್ಯತೆಯನ್ನು ನೀಡುತ್ತಿದ್ದಾರೆ. ಎರಡನೇಯದು, ಇಲಾಖೆಯ ಅಧಿಕಾರಿಗಳು ಲಾಕ್‌ಡೌನ್‌ ಸಂದರ್ಭದಲ್ಲಿಯೂ ಕರ್ನಾಟಕಕ್ಕೆ ದೇಸೀಯ ಹಾಗೂ ವಿದೇಶಿ ಬಂಡವಾಳವನ್ನು ತರಲು ಕಠಿಣ ಶ್ರಮಪಟ್ಟಿದ್ದಾರೆ. ನಮ್ಮಲ್ಲಿ ಉದ್ಯಮ ಸ್ಥಾಪನೆಗೆ ಸಾಕಷ್ಟು ಜಾಗವಿದೆ,” ಎಂದು ರಾಜ್ಯ ಕೈಗಾರಿಕಾ ಮಂತ್ರಿ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ದೇಸೀಯ ಹೂಡಿಕೆಯ ಕುರಿತು ಆಗಸ್ಟ್‌ ತಿಂಗಳಲ್ಲಿ ಮಾತನಾಡಿದ್ದ ಸಿಎಂ ಬಿ ಎಸ್‌ ಯಡಿಯೂರಪ್ಪ, ಬಂಡವಾಳ ಹೂಡಿಕೆಯಲ್ಲಿ ಮೈಲಿಗಲ್ಲಿ ಸ್ಥಾಪಿಸಲು ಕರ್ನಾಟಕ ಬದ್ದವಾಗಿದೆ. ಕೋವಿಡ್‌ ನಂತರದ ಪರಿಸ್ಥಿತಿಯಲ್ಲಿ ಇನ್ನಷ್ಟು ಪ್ರಗತಿಯನ್ನು ಕಾಣುತ್ತೇವೆ ಎಂಬ ವಿಶ್ವಾಸ ನಮಗಿದೆ,” ಎಂದು ಹೇಳಿದ್ದರು.

2018-19ರಲ್ಲಿ ಕಳೆಗುಂದಿದ್ದ ಬಂಡವಾಳ ಹೂಡಿಕೆ:

ಕಳೆದ ಕೆಲ ವರ್ಷಗಳಲ್ಲಿ ಕರ್ನಾಟಕಕ್ಕೆ ಹರಿದು ಬಂದಿರುವ ಬಂಡವಾಳವನ್ನು ಗಮನಿಸಿದರೆ, 2018-19ನೇ ಆರ್ಥಿಕ ವರ್ಷದಲ್ಲಿ ಬಂಡವಾಳ ಹೂಡಿಕೆ ನೀರಸವಾಗಿತ್ತು. 2017-18ರಲ್ಲಿ ಒಟ್ಟು ರೂ. 30,420 ಕೋಟಿಗಳಷ್ಟು ಬಂಡವಾಳ ಹೂಡಿಕೆಯಾಗಿದ್ದರೆ, 2018-19ರಲ್ಲಿ ಕೇವಲ ರೂ. 17,234 ಕೋಟಿಯಷ್ಟು ಮಾತ್ರ ಆಗಿತ್ತು. ಶೇಕಡಾವಾರು 46ರಷ್ಟು ಬಂಡವಾಳ ಇಳಿಕೆಯಾಗಿತ್ತು. ಆ ವರ್ಷ ಸಂಪೂರ್ಣ ದೇಶದಲ್ಲಿನ ಬಂಡವಾಳ ಹೂಡಿಕೆಯು ಕೂಡಾ ನೀರಸವಾಗಿತ್ತು.

ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಕೂಡಾ ಅನುಕ್ರಮವಾಗಿ ಶೇ. 46 ಮತ್ತು ಶೇ. 29ರಷ್ಟು ಬಂಡವಾಳ ಹೂಡಿಕೆ ಕಡಿಮೆಯಾಗಿತ್ತು.

GST ಮತ್ತು ನೋಟ್‌ ಬ್ಯಾನ್‌ ಪ್ರಭಾವ:

ದೇಶದಲ್ಲಿ ಬಂಡವಾಳ ಹೂಡಿಕೆ ಇಳಿಕೆಗೆ ಕೇಂದ್ರ ಸರ್ಕಾರದ ಜಿಎಸ್‌ಟಿ ಅನುಷ್ಟಾನ ಮತ್ತು ನೋಟ್‌ಬ್ಯಾನ್‌ ಕೂಡಾ ಕಾರಣ. ದೇಶದ ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡಿದ ಈ ಎರಡು ಯೋಜನೆಗಳಿಂದ ಬಂಡವಾಳ ಹೂಡಿಕೆಯೂ ಇಳಿಮುಖವಾಗಿತ್ತು.

ಈ ಎರಡು ಯೋಜನೆಗಳ ಅಸಮರ್ಪಕ ಅನುಷ್ಟಾನದಿಂದ ತತ್ತರಿಸಿ ಹೋಗಿದ್ದ ಆರ್ಥಿಕತೆ ಇನ್ನೂ ಸುಧಾರಿಸಿಕೊಂಡಿಲ್ಲ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com