ಮಹಿಳಾ ರೈತರ ದಿನದಂದು ಕೃಷಿಯಲ್ಲಿ ಸಮಾನತೆಗಾಗಿ ನಮ್ಮೂರ ಭೂಮಿ ತಂಡದಿಂದ ಅಭಿಯಾನ

2007ರಲ್ಲಿ ಸರ್ಕಾರ ಹೊರಡಿಸಿರುವ ಆದೇಶದಂತೆ ಕುಟುಂಬದ ಭೂ ದಾಖಲೆಗಳಲ್ಲಿ ಕಡ್ಡಾಯವಾಗಿ ಪತಿ-ಪತ್ನಿ ಇಬ್ಬರ ಹೆಸರೂ ದಾಖಲಾಗಬೇಕು, ಎಂದು ನಮ್ಮೂರ ಭೂಮಿ ತಂಡ ಆಗ್ರಹಿಸಿದೆ.
ಮಹಿಳಾ ರೈತರ ದಿನದಂದು ಕೃಷಿಯಲ್ಲಿ ಸಮಾನತೆಗಾಗಿ ನಮ್ಮೂರ ಭೂಮಿ ತಂಡದಿಂದ ಅಭಿಯಾನ

ಅಕ್ಟೋಬರ್ 15ನ್ನು `ಗ್ರಾಮೀಣ ಮಹಿಳಾ ದಿನʼವೆಂದು ವಿಶ್ವ ಸಂಸ್ಥೆಯು ಘೋಷಿಸಿದೆ. ಭಾರತ ಸರ್ಕಾರವು ಆ ದಿನವನ್ನು 'ಮಹಿಳಾ ರೈತರ ದಿನ'ವೆಂದು ಘೋಷಿಸಿದೆ. 2007ರಲ್ಲಿಯೇ ಕರ್ನಾಟಕ ಸರ್ಕಾರವು ಎಲ್ಲ ಕಂದಾಯ ಅಧಿಕಾರಿಗಳಿಗೆ ಪತ್ರ ಬರೆದು ಭೂ ದಾಖಲೆಗಳಲ್ಲಿ ಪತಿ ಪತ್ನಿ ಇಬ್ಬರ ಹೆಸರುಗಳನ್ನೂ ಕಡ್ಡಾಯವಾಗಿ ಸೇರಿಸಬೇಕು ಎಂದು ಆದೇಶಿಸಿತ್ತು. ಆದರೆ ಇದುವರೆಗೆ ಎಲ್ಲಿಯೂ ಕಂದಾಯ ಅಧಿಕಾರಿಗಳು ಆ ಆದೇಶವನ್ನು ಪಾಲಿಸಿದ ಲಕ್ಷಣ ಕಾಣುತ್ತಿಲ್ಲ ಎಂದು ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ ಅಭಿಯಾನದ ತಂಡ ಆರೋಪಿಸಿದೆ.

ಆದರೆ, ಭೂಸುಧಾರಣಾ ಕಾನೂನು ತಿದ್ದುಪಡಿಯ ಸುಗ್ರೀವಾಜ್ಞೆ ಬರುತ್ತಲೇ, ಅದು ಸದನದಲ್ಲಿ ಒಪ್ಪಿಗೆಯಾಗಿ ಕಾನೂನೆನಿಸಿಕೊಳ್ಳುವ ಮೊದಲೇ ಕಾನೂನು ತಿದ್ದುಪಡಿಯನ್ನು ಜಾರಿಗೆ ತರಲು ಕಂದಾಯ ಅಧಿಕಾರಿಗಳು ಅವಸರ ಮಾಡುತ್ತಿರುವುದು ಕಂಡುಬಂದಿದೆ. `ನಮ್ಮೂರ ಭೂಮಿ ನಮಗಿರಲಿ, ಅನ್ಯರಿಗಲ್ಲ' ಆಂದೋಲನದ ವತಿಯಿಂದ ನಾವು ಅಧಿಕಾರಿಗಳ ಆ ನಡೆಯನ್ನು ಖಂಡಿಸುತ್ತೇವೆ ಎಂದು ನಮ್ಮೂರ ಭೂಮಿ ತಂಡ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಸುಗ್ರೀವಾಜ್ಞೆ ಬಂದಾಗಿನಿಂದಲೂ ರಾಜ್ಯದ ಎಲ್ಲೆಡೆ ರೈತರು, ರೈತ ಸಂಘಟನೆಗಳು ನಮ್ಮೂರ ಭೂಮಿಯನ್ನು ಹೊರಗಿನವರು, ಕೃಷಿಕರಲ್ಲದವರು ಖರೀದಿ ಮಾಡಬಾರದು, ಆ ತಿದ್ದುಪಡಿಯಿಂದ ಹಳ್ಳಿಗಳ ಚಿತ್ರವೇ ಬದಲಾಗಿ ಹೋಗುತ್ತದೆ, ಕೃಷಿಯನ್ನೇ ನಂಬಿರುವ ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆತ ಬೀಳುತ್ತದೆ, ಉದ್ಯೋಗ ಖಾತರಿಯ ಕೆಲಸ ಸಿಗುವುದಿಲ್ಲ ಮತ್ತು ಹಣವುಳ್ಳ ಭೂಗಳ್ಳರಿಗೆ ಹಳ್ಳಿಗಳನ್ನು ಪ್ರವೇಶಿಸಲು ದಾರಿ ಮಾಡಿಕೊಟ್ಟಂತಾಗುತ್ತದೆ, ಕಾರಣ ಕಾನೂನಿನ ಈ ತಿದ್ದುಪಡಿ ಬೇಡವೆಂದು ಎಂದು ಸರ್ಕಾರವನ್ನು ಒತ್ತಾಯಿಸುತ್ತಲೇ ಇವೆ. ಸದನವು ನಡೆದಿದ್ದ ಸಮಯದಲ್ಲಿ ಸಾವಿರಾರು ಜನರು ಪ್ರತಿರೋಧ ವ್ಯಕ್ತ ಮಾಡಿದ್ದರ ಪರಿಣಾಮವಾಗಿ ಮೇಲ್ಮನೆಯಲ್ಲಿ ತಿದ್ದುಪಡಿಯು ಪಾಸಾಗಿರುವುದಿಲ್ಲ. ಸರ್ಕಾರವು ಮತ್ತೊಮ್ಮೆ ಸುಗ್ರೀವಾಜ್ಞೆ ತಂದು ತನ್ನ ಜನವಿರೋಧಿ ಕೆಲಸವನ್ನು ಮುಂದುವರೆಸಿದೆ ಎಂದು ಸಂಘಟನೆಯು ಹೇಳಿದೆ.

ಭೂಸುಧಾರಣಾ ಕಾನೂನಿನ ತಿದ್ದುಪಡಿಯು ಸಂಪೂರ್ಣವಾಗಿ ಮಹಿಳಾ ರೈತ ವಿರೋಧಿ ನಡೆಯಾಗಿರುತ್ತದೆ. ಭಾರತ ಸರ್ಕಾರದ 2007ರ ಕೃಷಿ ನೀತಿಯಲ್ಲಿ ಹೇಳುವಂತೆ ಭೂಮಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನೂ ಅಂದರೆ ಪಾಲಲ್ಲಿ ಭೂಮಿ ಮಾಡುವವರು, ಗುತ್ತಿಗೆ ಕೃಷಿಕರು, ಕೃಷಿ-ಕೂಲಿಕಾರರು, ದನ-ಕರು ಸಾಕುವವರು, ಕೋಳಿ ಸಾಕುವವರು, ಆಡು-ಕುರಿ ಸಾಕುವವರು, ಜೇನು ಸಾಕುವವರು, ಮೀನು ಸಾಕುವವರು, ಹುಲ್ಲುಗಾವಲು ಮಾಡಿಕೊಂಡವರು, ಅರಣ್ಯ ಉತ್ಪನ್ನ ಸಂಗ್ರಹಿಸುವವರು, ಇವರೆಲ್ಲರೂ ರೈತರು, ಕೃಷಿ ನೀತಿಯಲ್ಲಿ ಸ್ಪಷ್ಟವಾಗಿ ಬರೆದಿರುವಂಥ ಈ ವಾಕ್ಯಗಳು ವಾಸ್ತವದಲ್ಲಿಯೂ ಹಳ್ಳಿಗಳಲ್ಲಿ ವಾಸಿಸುವ ಕಟ್ಟ ಕಡೆಯ ಕಂದಾಯ ಅಧಿಕಾರಿಯವರೆಗೂ ಜಾರಿಯಲ್ಲಿ ತರುವಂತಾಗಬೇಕು. ಅದು ಆಗುವಂತೆ ಮಾಡಲು ನಾವು ನಮ್ಮೂರ ಭೂಮಿ ನಮಗಿರಲಿ ಆಂದೋಲನದಿಂದ ಈ ಬೇಡಿಕೆಗಳನ್ನಿರಿಸುತ್ತಿದ್ದೇವೆ ಎಂದು ಸಂಘಟನೆಯು ತಮ್ಮ ಬೇಡಿಕೆಯನ್ನು ಪ್ರಕಟಿಸಿದೆ.

ಬೇಡಿಕೆಗಳು

• ಗ್ರಾಮೀಣ ಭಾಗದಲ್ಲಿ ಭೂಮಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮಹಿಳೆಯರನ್ನು ರೈತರೆಂದು ಘೋಷಿಸಿ ಕಿಸಾನ್ ಕಾರ್ಡ್ ಗುರುತಿನ ಚೀಟಿ ನೀಡಬೇಕು.

• 2007ರಲ್ಲಿ ಸರ್ಕಾರ ಹೊರಡಿಸಿರುವ ಆದೇಶದಂತೆ ಕುಟುಂಬದ ಭೂ ದಾಖಲೆಗಳಲ್ಲಿ ಕಡ್ಡಾಯವಾಗಿ ಪತಿ-ಪತ್ನಿ ಇಬ್ಬರ ಹೆಸರೂ ದಾಖಲಾಗಬೇಕು.

• ಬಗರ್‌ಹುಕುಂ ಅಥವಾ ಇನ್ನಾವುದೇ ಯೋಜನೆಯಲ್ಲಿ ಭೂಮಿಯನ್ನು ಭೂರಹಿತ ಕುಟುಂಬಗಳಿಗೆ ಭುಮಿ ಹಂಚುವಾಗ ಪತಿ-ಪತ್ನಿ ಇಬ್ಬರ ಹೆಸರಿನಲ್ಲೂ ಕಡ್ಡಾಯವಾಗಿ ದಾಖಲಿಸಬೇಕು.

• ಹೊಸದಾಗಿ ಭೂಮಿ ಮಂಜೂರು ಮಾಡುವಾಗ ಬೇರೆ ಬೇರೆ ಕಾರಣಗಳಿಗಾಗಿ ಒಂಟಿಯಾಗಿ ಬದುಕುತ್ತಿರುವ ಮಹಿಳೆಯರ ಹೆಸರಲ್ಲೇ ಭೂಮಿ ದಾಖಲೆಯಾಗಬೇಕು.

• ರಾಜ್ಯದಲ್ಲಿ ದೊಡ್ಡ ಪ್ರಮಾಣದ ಕೃಷಿ ಭೂಮಿ ಪಾಳು ಬಿದ್ದಿದ್ದು ಇದನ್ನು ಮಹಿಳೆಯರಿಗೆ ಸ್ವಂತ ಅಥವಾ ಸಾಮೂಹಿಕವಾಗಿ ಬೇಸಾಯ ಮಾಡಲು ಧೀರ್ಘ ಕಾಲಿಕ ಗುತ್ತಿಗೆ ಕೊಡಬೇಕು.

• ಆಹಾರ ಮತ್ತು ಆರೋಗ್ಯ ಭದ್ರತೆ ಕಾಪಾಡುವ ಬಹುಬೆಳೆ ಬೇಸಾಯದಲ್ಲಿ ಮಹಿಳಿಗಿರುವ ಪರಿಣತಿ ಮತ್ತು ಆಳವಾದ ಜ್ಞಾನಕ್ಕೆ ಮನ್ನಣೆ ನೀಡಿ, ವಿಷಮುಕ್ತ ಕೃಷಿಗೆ ಮಹಿಳೆಯರ ಬೆಲೆಕಟ್ಟಲಾಗದ ಈ ಕೊಡುಗೆಯನ್ನು ಗುರುತಿಸಿ ಅದನ್ನು ಕೃಷಿಯ ಮುಖ್ಯರಂಗಕ್ಕೆ ತರಬೇಕು.

ಈ ಮೇಲ್ಕಂಡ ಬೇಡಿಕೆಗಳನ್ನು ಈಡೇರಿಸುವಂತೆ ಸಂಘಟನೆಯು ಅಕ್ಟೋಬರ್ 15ರಂದು ರಾಜ್ಯಾದ್ಯಂತ ಹಳ್ಳಿ ಹಳ್ಳಿಗಳಲ್ಲಿ ಕಂದಾಯ ನಿರೀಕ್ಷಕರ ಕಚೇರಿಗಳ ಎದುರು ಮಹಿಳಾ ರೈತರ ಜಾಥಾ ಮತ್ತು ಸಮಾವೇಶಗಳನ್ನು ಏರ್ಪಡಿಸಿದ್ದು ಮಹಿಳೆಯರನ್ನು ರೈತರೆಂದು ಗುರುತಿಸಿ ಎಂಬ ಮನವಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ಹೇಳಿದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com