ಚುನಾವಣಾ ಅಫಿಡವಿಟ್‌ನಲ್ಲಿ ಶಾಸಕ ಭೀಮಾನಾಯ್ಕ್‌ ಸುಳ್ಳನ್ನು ಬಯಲು ಮಾಡಿದ ಸಹಕಾರ ಸಂಘದ ಪ್ರಕರಣ

ಭಿಮಾ ನಾಯ್ಕ್‌ ಅವರ ಚುನಾವಣಾ ಅಫಿಡವಿಟ್‌ ಅನ್ನು ಪರಿಶೀಲಿಸಿದಾಗ ಅವರು ಅಡವಿ ಆನಂದ ದೇವನಹಳ್ಳಿಯಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿರುವ ಕುರಿತು ಉಲ್ಲೇಖಿಸದಿರುವುದು ಪತ್ತೆಯಾಗಿದೆ.
ಚುನಾವಣಾ ಅಫಿಡವಿಟ್‌ನಲ್ಲಿ ಶಾಸಕ ಭೀಮಾನಾಯ್ಕ್‌ ಸುಳ್ಳನ್ನು ಬಯಲು ಮಾಡಿದ ಸಹಕಾರ ಸಂಘದ ಪ್ರಕರಣ

ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾ ನಾಯ್ಕ್‌ ಅವರು ತಮ್ಮ ಕೆಎಂಎಫ್‌ ನಿರ್ದೇಶಕ ಸ್ಥಾನವನ್ನು ಕಳೆದುಕೊಳ್ಳಲಿದ್ದಾರೆ. ಅಡವಿ ಆನಂದ ದೇವನಹಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಸ್ಥಾನವನ್ನೇ ಕಳೆದುಕೊಂಡಿರುವ ಅವರು, ಕೆಎಂಎಫ್‌ ನಿರ್ದೇಶಕರಾಗಿ ಮುಂದುವರೆಯಲು ಅನರ್ಹರಾಗಿದ್ದಾರೆ. ಈ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಭೀಮಾ ನಾಯ್ಕ್‌ ಅವರು ವಿಧಾನಸಭಾ ಚುನಾವಣೆಯ ವೇಳೆ ನೀಡಿದ ಅಫಿಡವಿಟ್‌ನಲ್ಲಿ ಸುಳ್ಳು ಹೇಳಿರುವ ಮಾಹಿತಿಯೂ ಬಹಿರಂಗವಾಗಿದೆ.

ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಮತ್ತು ಹಾಲು ಉತ್ಪಾದಕರ ಸಂಘ ನಿಯಮಿತ, ಅಡವಿ ಆನಂದ ದೇವನಹಳ್ಳಿಯ ಇದರ ಉಪವಿಧಿ ಸಂಖ್ಯೆ 17ರ ಪ್ರಕಾರ, ಸಹಕಾರ ಸಂಘದ ಸದಸ್ಯರಾಗ ಬಯಸುವವರು ಅಡವಿ ಆನಂದ ದೇವನಹಳ್ಳಿಯ ಖಾಯಂ ನಿವಾಸಿಗಳಾಗಿರಬೇಕಿತ್ತು. ಆದರೆ, ತಾವು ಅಡವಿ ಆನಂದ ದೇವನಹಳ್ಳಿಯ ಖಾಯಂ ನಿವಾಸಿಗಳೆಂದು ದಾಖಲೆಗಳ ಸಮೇತ ನಿರೂಪಿಸಲು ಭೀಮಾ ನಾಯ್ಕ್‌ ಅವರು ವಿಫಲರಾದ ಹಿನ್ನೆಲೆಯಲ್ಲಿ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

2018ರ ಚುನಾವಣೆಯ ಸಂದರ್ಭದಲ್ಲಿ ಅಫಿಡವಿಟ್‌ ಸಲ್ಲಿಸಿದ್ದ ಭೀಮಾ ನಾಯ್ಕ್‌ ಅವರು, ತಮ್ಮ ಖಾಯಂ ವಿಳಾಸವನ್ನು ಹಗರಿಬೊಮ್ಮನಹಳ್ಳಿ ಎಂದು ನೀಡಿದ್ದರು. ಅವರ ಬ್ಯಾಂಕ್‌ ಖಾತೆಗೆ ನೀಡಲಾದ ವಿಳಾಸವು ಇದೇ ಆಗಿರುವುದರಿಂದ ಅಡವಿ ಆನಂದ ದೇವನಹಳ್ಳಿಯಲ್ಲಿ ವಾಸ್ತವ್ಯವಿರುವುದಕ್ಕೆ ಯಾವುದೇ ಆಧಾರವನ್ನು ನೀಡಲಾಗಿಲ್ಲ. ಈ ವಿಚಾರವಾಗಿ, ಅಡವಿ ಆನಂದ ದೇವನಹಳ್ಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯರಾದ ಬಸವರಾಜು ಹಾಗೂ ನಾಗನಗೌಡ ಎಂಬವರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ಇವರ ದೂರಿಗೆ ವಿಚಾರಣೆಯ ಸಂದರ್ಭದಲ್ಲಿ ಉತ್ತರ ನಿಡಿದ ಶಾಸಕ ಭೀಮಾ ನಾಯ್ಕ್‌ ಅವರು, ದೂರುದಾರರು ತನ್ನೊಂದಿಗೆ ನಿರ್ದೇಕರಾಗಿ ಆಯ್ಕೆಯಾಗಿದ್ದಾರೆ. ತಾನು ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದಾಗ ಯಾವುದೇ ತಕರಾರನ್ನು ಎತ್ತಲಿಲ್ಲ. ರಾಯಚೂರು, ಬಳ್ಳಾರಿ, ಕೊಪ್ಪಳ ಹಾಲು ಒಕ್ಕೂಟದ ಆಡಳಿತ ಮಂಡಳಿಯಲ್ಲಿ ಸ್ಪರ್ಧಿಸಲು ಸರ್ವಾನುಮತದಿಂದ ತನಗೆ ಬೆಂಬಲ ನೀಡಿದ್ದರು. ಈಗ ಸದಸ್ಯನಾಗಿ ಆಯ್ಕೆಯಾದ 5 ವರ್ಷಗಳ ಬಳಿಕ ನನ್ನ ವಿರುದ್ದ ದೂರು ನೀಡಿದ್ದಾರೆ. ಇದು ರಾಜಕೀಯ ಪ್ರೇರಿತವಾದ ದೂರು ಎಂದು ಹೇಳಿದ್ದರು.

adesha.pdf
download

ಇದರೊಂದಿಗೆ, ಅಡವಿ ಆನಂದ ದೇವನಹಳ್ಳಿಯಲ್ಲಿ ವಾಸವಿರುವುದಕ್ಕೆ ದಾಖಲೆಯಾಗಿ ಅಲ್ಲಿ ತಾವು 15 ವರ್ಷಗಳ ಅವಧಿಗೆ ಬಾಡಿಗೆ ಪಡೆದಿರುವ ಮನೆ ಹಾಗೂ 12 ವರ್ಷಗಳಿಗೆ ಗುತ್ತಿಗೆಗೆ ಪಡೆದುಕೊಂಡಿರುವ 2.50 ಎಕರೆ ಜಮೀನಿನ ದಾಖಲೆಗಳನ್ನು ಒದಗಿಸಿದ್ದಾರೆ. ಹಗರಿಬೊಮ್ಮನಹಳ್ಳಿಯ ನಿವಾಸದ ಕುರಿತಾಗಿಯೂ ಸ್ಪಷ್ಟನೆ ನೀಡಿರುವ ನಾಯ್ಕ್‌ ಅವರು, ತಾವು ಅಲ್ಲಿನ ಶಾಸಕರಾಗಿರುವುದರಿಂದ ಹಾಗೂ ಸಾರ್ವಜನಿಕರೊಂದಿಗೆ ನಿರಂತರವಾಗಿ ಸಂಪರ್ಕ ಹೋಂದಿರಬೇಕಾದ್ದರಿಂದ ಅಲ್ಲಿ ಜನ ಸಂಪರ್ಕ ಕಚೇರಿಯನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.

ಆದರೆ, ಭಿಮಾ ನಾಯ್ಕ್‌ ಅವರ ಚುನಾವಣಾ ಅಫಿಡವಿಟ್‌ ಅನ್ನು ಪರಿಶೀಲಿಸಿದಾಗ ಅವರು ಅಡವಿ ಆನಂದ ದೇವನಹಳ್ಳಿಯಲ್ಲಿ ಮನೆ ಬಾಡಿಗೆಗೆ ಪಡೆದುಕೊಂಡಿರುವ ಕುರಿತು ಉಲ್ಲೇಖಿಸದಿರುವುದು ಪತ್ತೆಯಾಗಿದೆ. ಈ ವಿಚಾರವನ್ನು ಪ್ರಕರಣದ ಕಡತದಲ್ಲಿ ದಾಖಲಿಸಲಾಗಿದೆ. ಇನ್ನು ಈ ಹಿಂದೆ ಇದ್ದ ಭೂ ಸುಧಾರಣಾ ಕಾಯ್ದೆಯನ್ವಯ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಭೂಮಿಯನ್ನು ಗುತ್ತಿಗೆಗೆ ಪಡೆಯುವ ಹಾಗಿಲ್ಲ. ಓರ್ವ ಶಾಸಕರಾಗಿ ಭೀಮಾ ನಾಯ್ಕ್‌ ಅವರು ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ ಹಾಗೂ ಅಫಿಡವಿಟ್‌ನಲ್ಲಿಯೂ ಸುಳ್ಳು ಹೇಳಿದ್ದಾರೆ.

ಈ ವಿಚಾರವಾಗಿ ಕೂಲಂಕುಷವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು ತಕ್ಷಣದಿಂದ ಜಾರಿಗೆ ಬರುವಂತೆ ಅವರ ಸದಸ್ಯತ್ವನ್ನು ರದ್ದುಗೊಳಿಸಿದೆ. ಇದರಿಂದಾಗಿ ಕೆಎಂಎಫ್‌ನ ನಿಯಮಾವಳಿಗಳಂತೆ ನಿರ್ದೇಶಕರಾಗಿಯೂ ಭೀಮಾನಾಯ್ಕ್‌ ಅವರು ಮುಂದುವರೆಯುವ ಹಾಗಿಲ್ಲ.

ಈ ವಿಚಾರವಾಗಿ ಮಾತನಾಟಿರುವ ಸಾಮಾಜಿಕ ಹೋರಾಟಗಾರರಾದ ಹೆಚ್‌ ಎಂ ವೆಂಕಟೇಶ್‌ ಅವರು, ಹಗರಿಬೊಮ್ಮನಹಳ್ಳಿಯ ವಿಧಾನಸಭಾ ಸದಸ್ಯರಾದ ಭೀಮಾನಾಯಕ್ ಅವರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಕೆಎಂಎಫ್ ನಿರ್ದೇಶಕ ಆಗಿರುವುದನ್ನು ಗ್ರಾಮಸ್ಥರು ಪ್ರಶ್ನಿಸಿದ ಕಾರಣ ನ್ಯಾಯಾಲಯವು ಅವರ ಸದಸ್ಯತ್ವವನ್ನು ವಜಾಗೊಳಿಸಿದ ಹಿನ್ನೆಲೆಯಲ್ಲಿ ಜನಪ್ರತಿನಿಧಿಗಳಾಗಿ ಮುಂದುವರೆಯಲು ನೈತಿಕತೆಯನ್ನು ಅವರು ಕಳೆದುಕೊಂಡಿರುತ್ತಾರೆ. ಆದ್ದರಿಂದ ವಿಧಾನಸಭಾ ಸದಸ್ಯತ್ವ ಸ್ಥಾನಕ್ಕೆ ತಕ್ಷಣ ರಾಜೀನಾಮೆ ಕೊಡುವ ಮೂಲಕ ಪ್ರಜಾಪ್ರಭುತ್ವವನ್ನು ಎತ್ತಿ ಹಿಡಿಯಬೇಕು, ಎಂದು ಆಗ್ರಹಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com