ಜೂನಿಯರ್‌ ರಾಜ್‌ಕುಮಾರ್‌, ಕೊಡಗನೂರು ಜಯಕುಮಾರ್‌ ನಿಧನ
ಡಾ. ರಾಜ್‌ಕುಮಾರ್‌ ಅವರನ್ನು ಅನುಕರಿಸುವುದರಲ್ಲಿ ಎಷ್ಟೇ ಜನರು ಪರಿಣಿತಿ ಹೊಂದಿದ್ದರೂ, ಜಯಕುಮಾರ್‌ ಅವರು ಪ್ರಸಿದ್ದಿ ಪಡೆದಿದ್ದು ತಮ್ಮ ಸ್ವಂತಿಕೆಯಿಂದ, ಎಂದು ರಂಗಭೂಮಿ ತಜ್ಞರಾದ ಗುಡಿಹಳ್ಳಿ ನಾಗರಾಜು ಹೇಳಿದ್ದಾರೆ.
ಜೂನಿಯರ್‌ ರಾಜ್‌ಕುಮಾರ್‌, ಕೊಡಗನೂರು ಜಯಕುಮಾರ್‌ ನಿಧನ

ರಂಗಭೂಮಿ, ಸಿನಿಮಾ, ಕಿರುತೆರೆಯ ಹಿರಿಯ ಕಲಾವಿದ ಕೊಡಗನೂರು ಜಯಕುಮಾರ್‌ (72 ವರ್ಷ) ಇಂದು ಬೆಳಗ್ಗೆ 11 ಗಂಟೆಗೆ ದಾವಣಗೆರೆಯಲ್ಲಿ ಹೃದಯಾಘಾತದಿಂದ ಅಗಲಿದ್ದಾರೆ. ದಾವಣಗೆರೆ ಸಮೀಪ ಕೊಡಗನೂರು ಅವರ ಜನ್ಮಸ್ಥಳ. ವೃತ್ತಿರಂಗಭೂಮಿ ಜೊತೆ ಅವರದು ಸುಮಾರು ನಾಲ್ಕೂವರೆ ದಶಕಗಳ ಒಡನಾಟ. ಕನ್ನಡ ವೃತ್ತಿರಂಗಭೂಮಿಯಲ್ಲಿ ಅವರು ಜ್ಯೂನಿಯರ್ ರಾಜಕುಮಾರ್ ಎಂದೇ ಹೆಸರಾದವರು.

ರಂಗಭೂಮಿ ತಜ್ಞರು ಹಾಗೂ ಹಿರಿಯ ಪತ್ರಕರ್ತರಾಗಿರುವ ಗುಡಿಹಳ್ಳಿ ನಾಗರಾಜು ಅವರು ಹೇಳುವ ಪ್ರಕಾರ, ಜಯಕುಮಾರ್‌ ಅವರು ವೃತ್ತಿರಂಗಭೂಮಿಯ ಹೆಸರಾಂತ ನಟ. ಅವರು ಕುಮಾರಸ್ವಾಮಿ ಕಂಪೆನಿ, ಗುಬ್ಬಿ ಕಂಪೆನಿ ಸೇರಿದಂತೆ ಹಲವಾರು ಕಂಪೆನಿಗಳಲ್ಲಿ ಎಲ್ಲಾ ರೀತಿಯ ಪಾತ್ರಗಳನ್ನು ಮಾಡಿದ್ದಾರೆ. ಕೆಲವರು ಹೀರೋ ಪಾತ್ರ ಮಾತ್ರ ಮಾಡಿದರೆ, ಇವರು ಸೇವಕನ ಪಾತ್ರ ಕೊಟ್ಟರೂ ಮಾಡುತ್ತಿದ್ದರು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ ಹೀಗೆ ಎಲ್ಲಾ ರೀತಿಯ ನಾಟಕಗಳಲ್ಲಿ ಅವರು ಪಾತ್ರಗಳನ್ನು ಮಾಡಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

“ವರ ನೋಡು ಹೆಣ್ಣು ಕೊಡು, ಬದುಕು ಬಂಗಾರವಾಯಿತು ಜೊತೆಗೆ ಮದಕರಿ ನಾಯಕ ಎಚ್‌ ಎಂ ನಾಯಕ ಮತ್ತು ತಿಪ್ಪೇರುದ್ರಸ್ವಾಮಿ ಮಹಾತ್ಮೆ ಹೀಗೆ ಹಲವು ಪ್ರಮುಖ ನಾಟಕಗಳನ್ನು ಅವರು ಮಾಡಿದ್ದಾರೆ. ತಿಪ್ಪೇರುದ್ರಸ್ವಾಮಿಗೆ ಸೌಮ್ಯ ಪಾತ್ರ ಬೇಕು, ಮದಕರಿ ನಾಯಕ ಪಾತ್ರಕ್ಕೆ ವೀರಾವೇಷ ಬೇಕು. ಇವರ ಇನ್ನೊಂದು ಸಾಮಾಜಿಕ ನಾಟಕ ನೋಡಿದರೆ, ಇವರೇನಾ ಜಯಕುಮಾರ್‌ ಎಂದು ಸಂದೇಹ ಬರುತ್ತಿತ್ತು. ನಾವು ಪ್ರೀತಿಯಿಂದ ಜಯಣ್ಣ ಜಯಣ್ಣ ಎಂದು ಕರಿಯುತ್ತಿದ್ದೆವು.”

“ಹವ್ಯಾಸಿಗಳು, ವಿಶ್ಲೇಷಕರು ವೃತ್ತಿ ರಂಗಭುಮಿಯ ಬಗ್ಗೆ ತಾತ್ಸಾರದ ಮನೋಭಾವನೆ ತಾಳಿದ್ದಾರೆ. ಅದಕ್ಕೆ ಕಾರಣ ಇತ್ತೀಚಿನ 20-25 ವರ್ಷಗಳಲ್ಲಿ ರಂಗಭುಮಿ ಅಶ್ಲೀಲ ಸಂಭಾಷಣೆ ಹಾಗೂ ಹಾಸ್ಯಕ್ಕೆ ಸೀಮಿತವಾಗಿದೆ. ಇದರ ಹಿಂದೆಯೇ ಜಯಕುಮಾರ್‌ ಅವರು ರಂಗಭೂಮಿಗೆ ಸಾಕಷ್ಟು ಕೊಡುಗೆ ನೀಡಿದ್ದರು. ಸ್ವಾತಂತ್ರ್ಯೋತ್ಸವಕ್ಕೆ, ಏಕೀಕರಣಕ್ಕೆ, ಪೌರಾಣಿಕ ನಾಟಕಗಳನ್ನು ಜನಪ್ರಿಯಗೊಳಿಸಿದ್ದು ಈ ಎಲ್ಲಾ ಹಿನ್ನೆಲೆಯಿಂದ ಬಂದವರು ಜಯಕುಮಾರ್‌ ಅವರು.”

“ಡಾ. ರಾಜ್‌ಕುಮಾರ್‌ ಅವರನ್ನು ಅನುಕರಿಸುವುದರಲ್ಲಿ ಎಷ್ಟೇ ಜನರು ಪರಿಣಿತಿ ಹೊಂದಿದ್ದರೂ, ಜಯಕುಮಾರ್‌ ಅವರು ಪ್ರಸಿದ್ದಿ ಪಡೆದಿದ್ದು ತಮ್ಮ ಸ್ವಂತಿಕೆಯಿಂದ. ಅವರು ಯಾವುದಕ್ಕೂ ಸೀಮಿತವಾಗಿರಲಿಲ್ಲ. ಅದಕ್ಕೆ ಅವರು ದೊಡ್ಡ ನಟರಾದರು. ಎಲ್ಲಾ ರೀತಿಯ ಪಾತ್ರಗಳನ್ನೂ ಮಾಡಿದ್ದಾರೆ. ಇವರ ಅಭಿನಯದಲ್ಲಿ ಅಬ್ಬರವಿಲ್ಲ. ಹಿತಮಿತವಾದ ಅಭಿನಯದಿಂದಲೇ ದೊಡ್ಡನಟರಾಗಿ ಬೆಳೆದವರು,” ಎಂದು ಹೇಳಿದ್ದಾರೆ.

ಗುಬ್ಬಿ ಕಂಪನಿ, ಕೆಬಿಆರ್‌ ಕಂಪನಿ, ಕುಮಾರೇಶ್ವರ ನಾಟಕ ಸಂಘ, ಶ್ರೀ ಶೈಲ ಮಲ್ಲಿಕಾರ್ಜುನ ನಾಟ್ಯ ಸಂಘ, ಕರ್ನಾಟಕ ಕಲಾ ವೈಭವ ಸಂಘ, ಸಂಗಮೇಶ್ವರ ನಾಟಕ ಸಂಘಗಳ ಹಲವಾರು ನಾಟಕಗಳಲ್ಲಿ ಜಯಕುಮಾರ್ ಅಭಿನಯಿಸಿದ್ದಾರೆ. ಪೊಲೀಸನ ಮಗಳು, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ಮಹಾತ್ಮೆ, ಮದಕರಿನಾಯಕ, ಮುದುಕನ ಮದುವೆ, ಟಿಪ್ಪು ಸುಲ್ತಾನ, ಗೋಮುಖ ವ್ಯಾಘ್ರ, ರಾಷ್ಟ್ರವೀರ ಎಚ್ಚಮ್ಮನಾಯಕ ಅವರಿಗೆ ಜನಪ್ರಿಯತೆ ತಂದುಕೊಟ್ಟ ನಾಟಕಗಳು.

ತಾಯಿಗೊಬ್ಬ ಕರ್ಣ, ಸತ್ಯನಾರಾಯಣ ಪೂಜಾಫಲ, ಸಾಂಗ್ಲಿಯಾನ-3, ಜನುಮದ ಜೋಡಿ, ಕಿಟ್ಟಿ, ಜಾಕಿ, ರಾಜ, ತಾಯಿ, ಶಬರಿ, ಮರಣದಂಡನೆ ಸೇರಿದಂತೆ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸಂಕ್ರಾಂತಿ, ಮಹಾಮಾಯೆ, ಅಪ್ಪ, ಕೆಳದಿ ಚನ್ನಮ್ಮ, ಭಾಗೀರಥಿ, ಶ್ರೀ ರಾಘವೇಂದ್ರ ವೈಭವ, ಪಾ.ಪ.ಪಾಂಡು, ಶ್ರೀ ಕಲಾಭೈರವ ಮಹಾತ್ಮೆ ಸೇರಿದಂತೆ 20ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಸುವರ್ಣ ಅಕಾಡೆಮಿ ಪ್ರಶಸ್ತಿ, ವರದಪ್ಪ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗೆ ಅವರು ಭಾಜನರಾಗಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com