ಡಿಕೆಶಿ ಮನೆ ಮೇಲೆ CBI ದಾಳಿ: ಕಾಂಗ್ರೆಸ್-BJP ನಾಯಕರ ನಡುವೆ ಟ್ವಿಟರ್ ಜಟಾಪಟಿ

ದೇಶವನ್ನು ಮುನ್ನಡೆಸಲು ಬಾರದ ಮೂರ್ಖರು ವಿರೋಧ ಪಕ್ಷಗಳ ದನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದ್ದಾರೆ.
ಡಿಕೆಶಿ ಮನೆ ಮೇಲೆ CBI ದಾಳಿ: ಕಾಂಗ್ರೆಸ್-BJP ನಾಯಕರ ನಡುವೆ ಟ್ವಿಟರ್ ಜಟಾಪಟಿ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ ಮನೆ, ಕಛೇರಿ ಮೇಲೆ ನಡೆದ ಸಿಬಿಐ ದಾಳಿ ರಾಜಕೀಯ ಪ್ರೇರಿತ ದಾಳಿಯೆಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್‌ ಅವರ ಮನೆ ಮೇಲೆ ನರೇಂದ್ರ ಮೋದಿ ಸರ್ಕಾರ ನಡೆಸಿರುವ ಸಿಬಿಐ ದಾಳಿ ರಾಜಕೀಯ ದುಷ್ಟತನದ ಪರಮಾವಧಿ. ಇದು ಕಾಂಗ್ರೆಸ್ ಪಕ್ಷವನ್ನು ರಾಜಕೀಯವಾಗಿ ಎದುರಿಸಲಿಕ್ಕಾಗದ ಬಿಜೆಪಿ ನಾಯಕರ ನೈತಿಕ ದಿವಾಳಿತನವನ್ನು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಡಿಕೆ ಶಿವಕುಮಾರ್‌ ಮನೆ ಮೇಲೆ ನಡೆದಿರುವ ಸಿಬಿಐ ದಾಳಿಯನ್ನು ಪ್ರಿಯಾಂಕ್‌ ಖರ್ಗೆ ಕೂಡಾ ಟೀಕಿಸಿದ್ದಾರೆ. ಸರ್ಕಾರವನ್ನು ಪ್ರಶ್ನಿಸಿದರ ಮತ್ತು ಅವರ ಹಗರಣವನ್ನು ಬಯಲಿಗೆಳೆದರ ಪರಿಣಾಮವೇ ಈ ದಾಳಿ ಎಂದಿದ್ದಾರೆ. ಚುನಾವಣೆಗಳು ಇರುವಾಗ ಕಾಂಗ್ರೆಸ್‌ ಸಾಯಕರ ಮೇಲೆ ಸಿಬಿಐ, ಐಟಿ, ಇಡಿ ಮೊದಲಾದ ದಾಳಿಗಳು ನಡೆಯುತ್ತವೆ ಎಂದೂ ಸೇರಿಸಿದ್ದಾರೆ.

ಡಿಕೆ ಶಿವಕುಮಾರ್‌ ಮೇಲೆ ಮೊದಲು ಐಟಿ ದಾಳಿ ನಡೆಸಲಾಯಿತು, ಬಳಿಕ ಇಡಿ ದಾಳಿಯಾಯ್ತು. ಇದೀಗ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮೋದಿಜಿಗೆ ಟ್ರಂಪ್‌ ಹಾಗೂ ನೆತನ್ಯಾಹು ಜೊತೆ ಉತ್ತಮ ಬಾಂಧವ್ಯವಿದೆ. ಮುಂದೆ ಸಿಐಎ ಅಥವಾ ಮೊಸ್ಸಾದ್‌ ದಾಳಿ ಮಾಡುತ್ತದೆಯೇ ಎಂದು ಬ್ರಿಜೇಶ್‌ ಕಾಳಪ್ಪ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ದೇಶವನ್ನು ಮುನ್ನಡೆಸಲು ಬಾರದ ಮೂರ್ಖರು ವಿರೋಧ ಪಕ್ಷಗಳ ದನಿಯನ್ನು ಅಡಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದ್ದಾರೆ.

ನರೇಂದ್ರ ಮೋದಿ ಸರ್ಕಾರ ಸಿಬಿಐ, ಇಡಿ, ಐಟಿ ಮೊದಲಾದ ಇಲಾಖೆಗಳನ್ನು ವಿರೋಧಿಗಳನ್ನು ಹಣಿಯಲು ಬಳಸುತ್ತಿದೆ. ಆದರೆ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರು ಇಂತಹದಕ್ಕೆಲ್ಲಾ ಮಣಿಯುವವರಲ್ಲ ಎಂದು ಹೇಳಿದ ಕರ್ನಾಟಕ ಕಾಂಗ್ರೆಸ್‌ ವಕ್ತಾರ ರಣ್‌ದೀಪ್‌ ಸುರ್ಜೇವಾಲ ಸಿಬಿಐ ಯಡಿಯೂರಪ್ಪ ಸರ್ಕಾರದ ಭ್ರಷ್ಟಾಚಾರದ ಪದರಗಳನ್ನು ಕಂಡುಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ ನಾಯಕರ ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಕರ್ನಾಟಕ ವೈದ್ಯಕೀಯ ಶಿಕ್ಷಣಗಳ ಸಚಿವ ಡಾ. ಕೆ ಸುಧಾಕರ್‌, ಪ್ರತೀ ಬಾರಿ ಸಿಬಿಐ ದಾಳಿ ನಡೆದಾಗ ಅದು ರಾಜಕೀಯ ಪ್ರೇರಿತ ಎಂದು ಆರೋಪ ಮಾಡುವ ಕಾಂಗ್ರೆಸ್ ನಾಯಕರು, ಅಮಿತ್ ಶಾ ಅವರಿಗೆ 2 ವರ್ಷ ಗುಜರಾತ್ ಪ್ರವೇಶ ನಿಷೇಧಿಸಿದ್ದಾಗ, ಈಗಿನ ಆಂಧ್ರ ಪ್ರದೇಶದ ಸಿಎಂ ಸೇರಿ ಹಲವಾರು ಕಾಂಗ್ರೆಸ್ಸೇತರ ನಾಯಕರ ಮೇಲೆ ಸಿಬಿಐ ದಾಳಿ ನಡೆದಾಗ ಕೇಂದ್ರದಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಎಂಬುದು ಮರೆತುಹೋಯಿತೇ? ಎಂದು ಪ್ರಶ್ನಿಸಿದ್ದಾರೆ.

ಸಿಬಿಐ, ಈಡಿ, ಐಟಿ ಸ್ವತಂತ್ರ ಸ್ವಾಯತ್ತ ಸಂಸ್ಥೆಗಳಾಗಿದ್ದು ಸಹಜ ಕಾನೂನು ಪ್ರಕ್ರಿಯೆ ಪಾಲಿಸುವ ಮೂಲಕ ತಮ್ಮ ಕಾರ್ಯನಿರ್ವಹಿಸುತ್ತಿವೆ. ಇದಕ್ಕೆ ರಾಜಕೀಯ ಬಣ್ಣ ಹಚ್ಚುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವುದು ಸರಿಯಲ್ಲ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಎಷ್ಟೇ ದೊಡ್ಡವರಾದರೂ ಕಾನೂನಿಗೆ ತಲೆ ಬಾಗಲೇ ಬೇಕು ಎಂದು ಸುಧಾಕರ್‌ ಹೇಳಿದ್ದಾರೆ.

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಕೂಡಾ ಕಾಂಗ್ರೆಸ್‌ ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ಸಿಬಿಐ ಯಾವುದೇ ದಾಳಿ ಮಾಡುವ ಮೊದಲು ಸಾಕಷ್ಟು ಸಾಕ್ಷ್ಯಗಳನ್ನು ಸಂಗ್ರಹಿಸುತ್ತದೆ. 70 ವರ್ಷ ಆಳಿದ ಕಾಂಗ್ರೆಸ್ಸಿಗೆ ಅದು ಗೊತ್ತಿಲ್ಲ ಎಂದರೆ ಇಷ್ಟು ವರ್ಷ CBI ಅನ್ನು ರಾಜಕೀಯ ವಿರೋಧಿಗಳನ್ನು ಹಣಿಯಲು ಕಾಂಗ್ರೆಸ್ ಬಳಸುತ್ತಿತ್ತು ಎನ್ನುವುದನ್ನು ಅವರೇ ಒಪ್ಪಿಕೊಂಡಂತೆ ಆಗಿದೆ ಎಂದು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com