ಅಯ್ಯಂಗಾರ್ ಬೇಕರಿಗಳ ಹುಟ್ಟಿನ ಹಿಂದಿನ ಇತಿಹಾಸ

ಅಯ್ಯಂಗಾರ್‌ ಬೇಕರಿಗಳು ಪ್ರಾರಂಭಗೊಂಡಿದ್ದರ ಹಿಂದೆ ಅದರದ್ದೇ ಆದ ಒಂದು ರೋಚಕ ಹಿನ್ನೆಲೆ ಇದೆ.
ಅಯ್ಯಂಗಾರ್ ಬೇಕರಿಗಳ ಹುಟ್ಟಿನ ಹಿಂದಿನ ಇತಿಹಾಸ

ಸುಮಾರು ನೂರಕ್ಕೂ ಹೆಚ್ಚು ವರ್ಷಗಳಿಂದ ಬೇಕರಿಗಳು ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವೇ ಅಗಿದೆ. ಮನೆಯಲ್ಲಿ ತಿಂಡಿಗಳನ್ನು ಮಾಡಿದರೂ ಬೇಕರಿಗಳಿಂದ ಏನಾದರೂ ತಂದು ತಿನ್ನುವುದು ವಾಡಿಕೆಯೇ ಅಗಿದೆ. ಅಂಬೆಗಾಲಿಡುವ ಮಗುವಿನಿಂದ ಹಿಡಿದು 90 ವಯಸ್ಸಿನ ಅಜ್ಜಿಯರಿಗೂ ಬೇಕರಿ ತಿನಿಸುಗಳು ಅಚ್ಚು ಮೆಚ್ಚೆ ಆಗಿವೆ. ಇಂದು ನೀವು ಯಾವುದೇ ಊರಿಗೆ ಹೋದರೂ ಅಯ್ಯಂಗಾರ್ ಬೇಕರಿ ಎಂಬ ಹತ್ತಾರು ಅಂಗಡಿಗಳು ನಿಮಗೆ ಕಾಣಸಿಗುತ್ತವೆ. ಆದರೆ ಇಂದು ನಾವು ರಸ್ತೆ ಬದಿಯಲ್ಲಿ ಬಾಯಿ ಚಪ್ಪರಿಸಿಕೊಂಡು ತಿನ್ನುವ ಪಾನಿ ಪೂರಿ, ಮಸಾಲಾ ಪೂರಿ, ಗೋಬಿ ಮಂಚೂರಿ ಇವಕ್ಕೆಲ್ಲ ಬಹುತೇಕ ಮಾನವ ಸೇವನೆಗೆ ಯೋಗ್ಯವಲ್ಲದ ರಸಾಯನಿಕಗಳನ್ನು ಬಳಸಿಯೇ ತಯಾರಿಸಲಾಗಿರುತ್ತದೆ. ಇನ್ನು ಬೇಕರಿಗಳಲ್ಲಿ ಸಿಗುವ ತಿನಿಸುಗಳೂ ಇದರಿಂದ ಮುಕ್ತವೇನಲ್ಲ. ಇಲ್ಲೂ ಕೂಡ ಅಹಾರ ಪದಾರ್ಥಗಳಿಗೆ ರಸಾಯನಿಕಗಳೂ, ಟೇಸ್ಟಿಂಗ್ ಪೌಡರ್ ಗಳನ್ನೂ ಬಳಸಲಾಗಿರುತ್ತದೆ. ಆದರೂ ಕೂಡ ಜನರು ಬೇಕರಿ ಪದಾರ್ಥಗಳ ರುಚಿಗೆ ಮನಸೋತು ಇವುಗಳನ್ನು ತಿನ್ನದೇ ಇರಲಾರರು. ಸಸ್ಯಾಹಾರಿಗಳಿಗಂತೂ ಬೇಕರಿ ಪದಾರ್ಥಗಳು ಅಚ್ಚು ಮೆಚ್ಚು. ಆದರೆ ಈ ಬೇಕರಿ ಗಳು ಪ್ರಾರಂಭಗೊಂಡಿದ್ದರ ಹಿಂದೆ ಅದರದ್ದೇ ಆದ ಒಂದು ರೋಚಕ ಹಿನ್ನೆಲೆ ಇದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಈ ಬೇಕರಿಯ ಹುಟ್ಟು ಅಗಿದ್ದೇ 1890 ರ ದಶಕದ ಆರಂಭದಲ್ಲಿ. ಹಾಸನ ಜಿಲ್ಲೆಯ ಅಷ್ಟ ಗ್ರಾಮಗಳ ಅಯ್ಯಂಗಾರ್ ಬ್ರಾಹ್ಮಣ ಟಿ ಎಸ್ ತಿರುಮಲಾಚಾರ್ ಎಂಬುವವರು ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಒಂದು ಸಿಹಿ ತಿನಿಸುಗಳ ಮಾರಾಟ ಮಾಡುವ ಅಂಗಡಿಯನ್ನು ತೆರೆಯುತ್ತಾರೆ. ಆಗ ತಮ್ಮ ಅಂಗಡಿಗೆ ಪದೇ ಪದೇ ಬರುತಿದ್ದ ಬ್ರಿಟಿಷ್ ವ್ಯಕ್ತಿಯೊಬ್ಬ ಅವರಿಗೆ ಬ್ರೆಡ್ ಮಾಡುವುದನ್ನು ಹೇಳಿಕೊಡುತ್ತಾರೆ. ಅಷ್ಟರಲ್ಲೆ ಅವರ ಅಂಗಡಿಯ ರುಚಿ ಶುಚಿಗೆ ಗ್ರಾಹಕರಿಂದ ಉತ್ತಮ ಸ್ಪಂದನೆ ದೊರೆತು ಅಂಗಡಿಯು ಲಾಭದಲ್ಲಿ ಓಡಲಾರಂಭಿಸಿತು. ಸಿಹಿಗಿಂತಲೂ ಬ್ರೆಡ್ ಹಾಗೂ ಮೈದಾದಿಂದ ಮಾಡಿದ ಇತರ ತಿನಿಸುಗಳಿಗೆ ಗ್ರಾಹಕರಿಂದ ಬೇಡಿಕೆಯೂ ಹೆಚ್ಚಿತು. ಆಗ ತಿರುಮಲಾಚಾರ್ ಅವರು ಸಿಹಿ ತಿನಿಸುಗಳಿಗೆ ಆದ್ಯತೆ ಕಡಿಮೆ ಮಾಡಿ 1898 ರಲ್ಲಿ ಪೂರ್ಣ ಪ್ರಮಾಣದ ಬೇಕರಿಯನ್ನು ತೆರೆದರು.

ಅವರು ತಮ್ಮ ಸಹೋದರರ ಸಹಾಯದಿಂದ ಬೇಕರಿಯನ್ನು ಸ್ಥಾಪಿಸಿದ್ದರಿಂದ ಮತ್ತು ಬೇಕರಿ ಬೆಂಗಳೂರಿನಲ್ಲಿ ಇದ್ದುದರಿಂದ , ಅವರು ಅದಕ್ಕೆ "ಬೆಂಗಳೂರು ಬ್ರದರ್ಸ್ ಬೇಕರಿ" ಎಂದು ಹೆಸರಿಟ್ಟರು . ನಂತರ ಜನರು ಅದನ್ನು ಸಂಕ್ಷಿಪ್ತವಾಗಿ ʼಬಿಬಿ ಬೇಕರಿʼ ಎಂದು ಗುರ್ತಿಸುತಿದ್ದರು. ಅಯ್ಯಂಗಾರ್ ಸಮುದಾಯದ ಸದಸ್ಯರಿಂದ ಪ್ರಾರಂಭಿಸಲ್ಪಟ್ಟ ಈ ಬೇಕರಿಯನ್ನು ಬೆಂಗಳೂರಿಗರು ಪ್ರೀತಿಯಿಂದ ಅಯ್ಯಂಗಾರ್ ಬೇಕರಿ ಎಂದು ಕರೆಯತೊಡಗಿದರು.

ಬಿಬಿ ಬೇಕರಿಯ ಯಶಸ್ಸಿನ ಸುದ್ದಿ ತಿರುಮಲಾಚಾರ್ ಅವರ ಸ್ನೇಹಿತರು ಮತ್ತು ಸಂಬಂಧಿಕರನ್ನು ಹಾಸನದ ಅಷ್ಟ ಗ್ರಾಮದ ಅಯ್ಯಂಗಾರ್ ಸಮುದಾಯಕ್ಕೆ ತಲುಪಿತು, ಆಗ ಅವರು ಈ ಹೊಸ ವ್ಯಾಪಾರದಲ್ಲಿ ತಮ್ಮ ಅದೃಷ್ಟವನ್ನೂ ಪರೀಕ್ಷಿಸಲು ಪ್ರಯತ್ನಿಸಿದರು. ಕೆಲವು ಅಯ್ಯಂಗಾರ್ ಸಮುದಾಯದವರು ಬೆಂಗಳೂರಿನ ಬೇರೆ ಕಡೆಯಲ್ಲಿ ಅಯ್ಯಂಗಾರ್ ಬೇಕರಿ ಎಂದು ಹೆಸರಟ್ಟು ಬೇಕರಿ ಆರಂಭಿಸಿದರು. ಅವೂ ಯಶಸ್ವಿ ಆದವು. ಮುಂದಿನ ಕೆಲವು ದಶಕಗಳಲ್ಲಿ ಬೆಂಗಳೂರಿನ ಪ್ರತಿಯೊಂದು ಮೂಲೆ ಮತ್ತು ಮೂಲೆಯಲ್ಲಿ "ಅಯ್ಯಂಗಾರ್" ಹೆಸರಿನ ಹೊಸ ಬೇಕರಿಗಳ ಸಂತೆಯೇ ಆಯಿತು, ಮತ್ತು ಬೇಕರಿ ವ್ಯಾಪಾರವು ಕ್ರಮೇಣ ರಾಷ್ಟ್ರದ ಇತರ ಭಾಗಗಳಿಗೂ ಹರಡಿತು.

ಬಹಳ ಹಿಂದೆಯೇ ಬ್ರಿಟಿಷರು ಹಲವಾರು ಬೇಕರಿಗಳನ್ನು ಶತಮಾನಗಳಿಂದ ನಡೆಸುತ್ತಿದ್ದರೂ ಸಸ್ಯಾಹಾರಿಗಳೇ ಹೆಚ್ಚಾಗಿದ್ದ ಆ ಕಾಲದಲ್ಲಿ ಅವರು ಗೋಮಾಂಸ ಮತ್ತು ಹಂದಿಮಾಂಸದಂತಹ ಪದಾರ್ಥಗಳನ್ನು ಬಳಸುತ್ತಿದ್ದಾರೆಂದು ಶಂಕಿಸಿ ಬ್ರಿಟಿಷ್ ಬೇಕರಿಗಳಿಗೆ ಹೆಚ್ಚಿನ ಭಾರತೀಯರು ಹೋಗುತ್ತಿರಲಿಲ್ಲ. ಸೂಕ್ತ ಕಾಲದಲ್ಲಿ ಅಪ್ಪಟ ಸಸ್ಯಾಹಾರಿ ಬ್ರಾಹ್ಮಣ ಅಯ್ಯಂಗಾರ್ ಜನರೇ ಬೇಕರಿ ಅರಂಬಿಸಿದಾಗ ಜನರು ಮಾಂಸಾಹಾರ ಬೆರೆತಿಲ್ಲ ಎಂಬ ನಂಬಿಕೆಯೊಂದಿಗೆ ಬೇಕರಿಯ ಪದಾರ್ಥಗಳ ಖರೀದಿಯಲ್ಲಿ ತೊಡಗಿದರು. ಹೀಗೆ ಈ ಬೇಕರಿಗಳು ಅಧ್ಬುತ ಯಶಸ್ಸನ್ನು ಕಂಡವು. ಹೀಗೆ ಆರಂಬಗೊಂಡ ಬೇಕರಿಗಳ ಸಂಖ್ಯೆ ಏರುತ್ತಲೇ ಹೋಗುತ್ತಿದೆ.

ಬೇಕರಿಗಳ ಯಶಸ್ಸಿಗೆ ಬಹು ಮುಖ್ಯ ಕಾರಣ ಎಂದರೆ ಜನರ ಬದಲಾದ ಜೀವನ ಶೈಲಿ ಆಗಿದೆ. ಮನೆಯಲ್ಲಿ ಏನೇ ತಿಂದರೂ ಕುಡಿದರೂ ಲಕ್ಷಾಂತರ ಜನರು ಇಂದಿಗೂ ಹೋಟೆಲ್, ಕ್ಯಾಂಟೀನ್ ಗಳಲ್ಲಿ ಕಾಫಿ ಟೀ ಕುಡಿಯುವುದನ್ನು ತಪ್ಪಿಸುವುದಿಲ್ಲ ಅಷೇ ಅಲ್ಲ ಬೇಕರಿಗಳ ತಿನಿಸನ್ನು ತಿನ್ನುವುದು ಮನೆಗೆ ಒಯ್ಯುವುದನ್ನೂ ಬಿಡುವುದಿಲ್ಲ. ಬೇಕರಿಗಳಿಂದ ಹೊರ ಬರುವ ಸುವಾಸನೆ ಜನರನ್ನು ಬೇಕರಿಗಳಿಗೆ ಸೆಳೆಯುತ್ತಿದೆ.ಇಂದು ಸಣ್ಣ ಪಟ್ಟಣ ಪಂಚಾಯ್ತಿ ಅಥವಾ 10 ಸಾವಿರದಷ್ಟು ಜನಸಂಖ್ಯೆ ಉಳ್ಳ ಪುಟ್ಟ ಪಟ್ಟಣದಲ್ಲೂ 15 ರಿಂದ ಇಪ್ಪತ್ತು ಬೇಕರಿಗಳು ಇವೆ. ಈ ಬೇಕರಿಗಳು ಅಕ್ಕ ಪಕ್ಕದಲ್ಲೇ ಇರುತ್ತವೆಯಾದರೂ ಬಹುಶಃ ಯಾರೂ ವ್ಯಾಪಾರ ಕಡಿಮೆ ಎಂದು ಬೇಕರಿ ಮುಚ್ಚಿದ ಉದಾಹರಣೆ ಕಡಿಮೆ. ಶೇಕಡಾ 99 ರಷ್ಟು ಬೇಕರಿಗಳು ಅಯ್ಯಂಗಾರ್ ಎಂಬ ಹೆಸರನ್ನೇ ಹೊಂದಿವೆ. ಈ ಬೇಕರಿಗಳಲ್ಲಿ ಕಾಫಿ ಟೀ ಕೂಡ ಮಾರಲ್ಪಡುವುದರಿಂದ ಹೋಟೆಲ್ , ಕ್ಯಾಂಟೀನ್ ಗಳಿಗೆ ಹೋಗುವ ಜನರು ಬೇಕರಿಗೆ ಹೋಗುವುದನ್ನೇ ರೂಢಿಸಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಮೊಟ್ಟ ಮೊದಲು ಸ್ಥಾಪಿಸಿದ ಬಿ ಬಿ ಬೇಕರಿ ತಿರುಮಲಾಚಾರ್ ನಂತರ ಅವರ ಮಕ್ಕಳು ನಡೆಸಿದರು. ಅವರು 1970 ರ ವರೆಗೂ ಅಲ್ಲೆ ಬೇಕರಿ ಚೆನ್ನಾಗಿ ನಡೆಯುತಿತ್ತು. ದುರದೃಷ್ಟದ ಸಂಗತಿ ಎಂದರೆ ಅವರ ಕುಟುಂಬ ಗ್ರಾಹಕರಿಗೆ ಶುಚಿ ರುಚಿ ಗೆ ಆದ್ಯತೆ ನೀಡುತಿತ್ತೆ ಹೊರತು ಹಣ ಮಾಡುವ ಏಕೈಕ ಉದ್ದೇಶ ಹೊಂದಿರಲಿಲ್ಲ. ಹೀಗಾಗಿ ಅವರು ಹಣ ನೋಡಲೇ ಇಲ್ಲ , ಕೊನೆ ತನಕ ಬಾಡಿಗೆ ಕಟ್ಟಡದಲ್ಲೇ ನಡೆದ ಬೇಕರಿಯನ್ನು ಮುಚ್ಚಿ ಅವರ ಮೊಮ್ಮಗ ಶ್ರೀನಿವಾಸ ಅವರು ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಬಿ ಬಿ ಬೇಕರಿ ಪ್ರಾರಂಬಿಸಿದರು. ಅದೂ ಕೂಡ 2016 ರಲ್ಲಿ ನಷ್ಟದಿಂದ ನಿಂತೇ ಹೋಯಿತು. ʼಪ್ರತಿಧ್ವನಿʼಯ ಸಾಕಷ್ಟು ಪ್ರಯತ್ನದ ನಂತರ ಅವರನ್ನು ಪತ್ತೆ ಮಾಡಿ ಮಾತಿಗೆ ಸಿಕ್ಕ ಶ್ರೀನಿವಾಸ ಅವರು ನಮ್ಮ ತಂದೆ ಮತ್ತು ನಾನು ಎಲ್ಲರೂ ಬೇಕರಿಯ ಒಳಗೆ ನಾವೇ ದುಡಿಯುತಿದ್ದೆವು, ಹೊರಗೆ ಹುಡುಗರನ್ನು ಮಾರಾಟ ಮಾಡಲು ಮತ್ತು ಹಣ ಪಡೆದುಕೊಳ್ಳಲು ಬಿಟ್ಟಿದ್ದವು. ಇದೇ ನಮಗೆ ಮುಳುವಾಯ್ತು. ಇವತ್ತಿಗೂ ಸ್ವಂತ ಕಟ್ಟಡ ಇಲ್ಲದೆ ಬೇಕರಿ ನಡೆಸಲು ದುಬಾರಿ ಬಾಡಿಗೆ ನೀಡಿ ನಡೆಸುವ ಚೈತನ್ಯ ಇಲ್ಲ ಎಂದು ವಿಷಾದಿಸಿದರು. ಅವರ ದೊಡ್ಡಪ್ಪನ ಮಗ ಈಗಲೂ ಕಪಾಲಿ ಚಿತ್ರಮಂದಿರದ ಎದುರಿಗೆ ಬೇಕರಿ ನಡೆಸುತಿದ್ದು ಇದರ ಹೆಸರು ಸೂರ್ಯ ಬೇಕರಿ ಎಂದು ಅವರೇ ಹೇಳಿದರು. ರಾಜ್ಯದಲ್ಲಿ ಬಿಬಿ ಬೇಕರಿ ಅಯ್ಯಂಗಾರರ ಕುಟುಂಬದ್ದು ಅಂತ ಇರೋದು ಇದೊಂದೇ ಬೇಕರಿ. ಈಗ ಕೆಂಗೇರಿ ಸಮೀಪದ ಕೋಡಿ ಪಾಳ್ಯದಲ್ಲಿ ವಾಸಿಸುತ್ತಿರುವ ಶ್ರೀನಿವಾಸ ಅವರಿಗೆ ಮೂವರು ಹೆಣ್ಣು ಮಕ್ಕಳು ಇದ್ದು ಗಂಡು ಮಕ್ಕಳಿಲ್ಲ. ಪ್ರಾಯ 60 ಆಗಿದ್ದರೂ ಶೀಘ್ರದಲ್ಲೆ ಇನ್ನೊಂದು ಬೇಕರಿ ತೆರೆಯುವ ಸಿದ್ದತೆಯಲ್ಲಿದ್ದಾರೆ. ಇವರ ದೊಡ್ಡಪ್ಪ ಚಿಕ್ಕಪ್ಪ ಅವರ ಮಕ್ಕಳೆಲ್ಲ ಬೇರೆ ಬೇರೆ ವ್ಯಾಪಾರ ಮಾಡಿಕೊಂಡಿದ್ದಾರೆ. .

ಆದರೆ ಈಗ ನಮ್ಮ ರಾಜ್ಯವೊಂದರಲ್ಲೇ ಲಕ್ಷಾಂತರ ಅಯ್ಯಂಗಾರ್ ಬೇಕರಿಗಳು ಇವೆ. ಆದರೆ ಅಯ್ಯಂಗಾರ್ ಎಂಬ ಹೆಸರಿಟ್ಟ ಮಾತ್ರಕ್ಕೆ ಇವು ಸಸ್ಯಾಹಾರಿಗಳು ಅದರಲ್ಲೂ ಅಯ್ಯಂಗಾರ್ ಸಮುದಾಯದವರು ನಡೆಸುತ್ತಿರುವ ಬೇಕರಿ ಎಂದು ಭಾವಿಸಬಾರದು.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com