ಬೆಳ್ಳಿತೆರೆಯ ಮೇಲೆ ʼಮಾತನಾಡದʼ ಕಲಾವಿದರು!

ಆರಂಭದಿಂದಲೂ ಕನ್ನಡ ಚಿತ್ರಗಳಲ್ಲಿ ನಾನಾ ರೀತಿಯ ಪ್ರಾಣಿಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. ಪ್ರಾಣಿಗಳೇ ಪ್ರಧಾನ ಭೂಮಿಕೆಯಲ್ಲಿರುವ ಚಿತ್ರಗಳೂ ನಮ್ಮಲ್ಲಿ ತಯಾರಾಗಿವೆ. ಶ್ವಾನವೇ ಮುಖ್ಯ ಪಾತ್ರದಲ್ಲಿರುವ ‘ನಾನು ಮತ್ತು ಗುಂಡ’ ಇತ್ತೀಚಿನ ಉದಾಹರಣೆ. ...
ಬೆಳ್ಳಿತೆರೆಯ ಮೇಲೆ ʼಮಾತನಾಡದʼ ಕಲಾವಿದರು!

ಮೂಕಿ ಚಿತ್ರಗಳ ಕಾಲದಿಂದಲೂ ಚಿತ್ರೀಕರಣಗಳಲ್ಲಿ ವಿವಿಧ ಪ್ರಾಣಿ - ಪಕ್ಷಿಗಳನ್ನು ಬಳಸಿದ್ದಿದೆ. ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಆನೆ, ಕುದುರೆ, ಹುಲಿ, ಸಿಂಹ, ಕರಡಿ, ಜಿಂಕೆ, ನವಿಲು, ಹಾವು, ಹಸು.. ಹೀಗೆ ಹತ್ತಾರು ಜೀವಿಗಳು ಬಳಕೆಯಾಗುತ್ತಿದ್ದವು. ಜಾನಪದ ಹಾಗೂ ಸಾಮಾಜಿಕ ಚಿತ್ರಗಳಲ್ಲಿ ಗಿಣಿ, ನಾಯಿ, ಕೋತಿ, ಹಾವುಗಳ ಬಳಕೆ ಸಾಮಾನ್ಯ. ಅಗತ್ಯವಿದ್ದಾಗ ಪ್ರಾಣಿ - ಪಕ್ಷಿಗಳಿಗೆ ಸೂಕ್ತ ತರಬೇತಿ ನೀಡಿ ಚಿತ್ರೀಕರಣದಲ್ಲಿ ತೊಡಗಿಸಲಾಗುತ್ತಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಹಿಂದೆ ಸಿನಿಮಾಗೆ ಒದಗಿಸಲೆಂದೇ ಕೆಲವು ಕುಟುಂಬಗಳು ಪ್ರಾಣಿ - ಪಕ್ಷಿಗಳನ್ನು ಸಾಕುತ್ತಿದ್ದವು. ಅವರೇ ಅವುಗಳಿಗೆ ಸೂಕ್ತ ತರಬೇತಿಯನ್ನೂ ನೀಡುತ್ತಿದ್ದರು. ಮತ್ತೆ ಕೆಲವರಿಗೆ ಹಾವು, ಕೋತಿ, ಕರಡಿ ಆಡಿಸುವುದು ವೃತ್ತಿಯಾಗಿರುತ್ತಿತ್ತು. ಅವರು ಸಾರ್ವಜನಿಕವಾಗಿ ತಮ್ಮ ಸಾಕು ಪ್ರಾಣಿಗಳ ಚಮತ್ಕಾರ ಪ್ರದರ್ಶಿಸಿ ಹೊಟ್ಟೆ ಹೊರೆಯುತ್ತಿದ್ದರು. ಅವಕಾಶ ಬಂದಾಗ ಸಿನಿಮಾಗಳಿಗೆ ತಮ್ಮ ಪ್ರಾಣಿಗಳನ್ನು ಒದಗಿಸುತ್ತಿದ್ದರು.

ಪೌರಾಣಿಕ ಚಿತ್ರಗಳ ಯುದ್ಧದ ಸನ್ನಿವೇಶಗಳಲ್ಲಿ ಹತ್ತಾರು ಸಂಖ್ಯೆಯಲ್ಲಿ ಆನೆ, ಕುದುರೆ, ಒಂಟೆಗಳನ್ನು ತೋರಿಸಬೇಕಾಗುತ್ತಿತ್ತು. ಇನ್ನು ಕಾಡಿನ ಸನ್ನಿವೇಶಗಳಲ್ಲಿ ಹುಲಿ, ಕರಡಿ, ಚಿರತೆ, ಕಾಡೆಮ್ಮೆ ಹಾಗೂ ಇತರೆ ಕಾಡು ಪ್ರಾಣಿಗಳ ಅವಶ್ಯಕತೆ ಇರುತ್ತದೆ. ಆಶ್ರಮ - ಪರ್ಣಕುಟೀರಗಳ ದೃಶ್ಯಗಳಲ್ಲಿ ಜಿಂಕೆ, ನವಿಲು, ಗೋವುಗಳನ್ನು ನೋಡಬಹುದು. ಜಾನಪದ ಕತೆಗಳಲ್ಲಿ ಮಾಯ, ಮಂತ್ರ, ಮಾಟ, ಮೋಡಿಗಳೊಂದಿಗೆ ಮಂತ್ರವಾದಿ ಮಾನವನನ್ನು ಗಿಣಿಯನ್ನಾಗಿಸುವುದು, ನಾಯಿಯನ್ನಾಗಿಸುವುದು, ಕರಡಿಯನ್ನಾಗಿಸುವುದು, ಹಾವಾಗಿಸುವುದು... ಹೀಗೆಯ ಕತೆಗೆ ಹೊಂದುವಂಥ ಪ್ರಾಣಿಗಳನ್ನು ಬಳಕೆ ಮಾಡಲಾಗುತ್ತದೆ. ಸಾಮಾಜಿಕ ಚಿತ್ರಗಳಲ್ಲಿ ಸ್ನೇಹಿತರಿಗೆ ಕೋತಿ ನೆರವಾಗುವುದು, ಸಾಕಿದ ನಾಯಿಯ ಸಹಾಯ, ಗೂಳಿ ಅಟ್ಟಿಸಿಕೊಂಡು ಬರುವುದು.. ಇಂಥ ಸನ್ನಿವೇಶಗಳಲ್ಲಿ ಪ್ರಾಣಿಗಳು ಕಾಣಿಸುತ್ತವೆ.

ಪೌರಾಣಿಕ ಚಿತ್ರಗಳಲ್ಲಿ ಪರಶಿವನ ಕೊರಳಲ್ಲಿ ಹಾವನ್ನು ಕಡ್ಡಾಯವಾಗಿ ತೋರಿಸಬೇಕು. ಆರಂಭದ ದಿನಗಳಲ್ಲಿ ಶಿವನ ಪಾತ್ರಧಾರಿಗಳು ಕೊರಳಿಗೆ ರಬ್ಬರ್ ಹಾವನ್ನು ಸುತ್ತಿಕೊಳ್ಳುತ್ತಿದ್ದರು. ಕ್ರಮೇಣ ಹಾವಾಡಿಗರಿಂದ ನಾಗರಹಾವುಗಳನ್ನೇ ತರಿಸಿಕೊಂಡು ಬಳಸತೊಡಗಿದರು. ಹುಲಿ, ಸಿಂಹ, ಕರಡಿ, ಆನೆ.. ಮುಂತಾದವುಗಳನ್ನು ಮಾನವ ಸಂಪರ್ಕಕ್ಕೆ ಹೊಂದಿಕೊಳ್ಳುವಂತೆ ಪಳಗಿಸಿ ವಿವಿಧ ಚಮತ್ಕಾರಗಳ ತರಬೇತಿ ನೀಡಲಾಗಿರುತ್ತದೆ. ಶೂಟಿಂಗ್‍ನಲ್ಲಿ ನಿರ್ದೇಶಕರ ಅಭಿಲಾಷೆಯಂತೆ, ತನ್ನ ತರಬೇತುದಾರನ ಇಷಾರೆಯಂತೆ ಪ್ರಾಣಿ - ಪಕ್ಷಿಗಳು ಅಭಿನಯಿಸುತ್ತವೆ. ತರಬೇತಿ ನೀಡದಿದ್ದರೆ ಪ್ರಾಣಿಗಳಿಂದ ಅಭಿನಯ ತೆಗೆಯುವುದು ಕಷ್ಟವಾಗುವುದಲ್ಲದೆ ವೆಚ್ಚವೂ ಅಧಿಕವಾಗುತ್ತದೆ.

ನಾಗರ ಹೊಳೆ

ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕ, ನಟ ಎಂ.ಪಿ.ಶಂಕರ್ ಅವರಿಗೆ ಕಾಡು ಪ್ರಾಣಿಗಳ ಬಗ್ಗೆ ವಿಶೇಷ ಆಸಕ್ತಿಯಿತ್ತು. ಅವರ ಬಹುತೇಕ ಸಿನಿಮಾಗಳಲ್ಲಿ ಪ್ರಾಣಿಗಳು ಬಳಕೆಯಾಗಿರುವುದನ್ನು ನಾವು ನೋಡಬಹುದು. ನಿರ್ದೇಶಕ ಆರೂರು ಪಟ್ಟಾಭಿ ತಮ್ಮ ಮನೆಯಲ್ಲಿ ಲಿಲ್ಲಿ ಹೆಸರಿನ ನಾಯಿಯೊಂದನ್ನು ಸಾಕಿದ್ದರು. ಸೂಕ್ತ ತರಬೇತಿಯನ್ನೂ ನೀಡಿ ತಮ್ಮ `ಭಕ್ತ ವಿಜಯ' ಚಿತ್ರದಲ್ಲಿ ಅದನ್ನು ಬಳಕೆ ಮಾಡಿದ್ದರು. ಎಂ.ಪಿ.ಶಂಕರ್ ನಿರ್ಮಿಸಿದ `ಕಾಡಿನ ರಹಸ್ಯ' ಚಿತ್ರದಲ್ಲಿ ಆನೆ, ಚಿರತೆ, ನರಿ ಬಳಸಲಾಗಿತ್ತು. ಅವರದೇ ಮತ್ತೊಂದು ಚಿತ್ರ `ರಾಮ ಲಕ್ಷ್ಮಣ'ದಲ್ಲಿ ಹುಲಿ, `ನಾರಿ ಮುನಿದರೆ ಮಾರಿ' ಚಿತ್ರದಲ್ಲಿ ಕುದುರೆ (ಭೈರವ) ಅಭಿನಯಿಸಿದ್ದವು.

ಪುಟಾಣಿ ಏಜೆಂಟ್‌ ೧೨೩
ಪುಟಾಣಿ ಏಜೆಂಟ್‌ ೧೨೩ಫೋಟೋ: ಶಂಕರ್‌ಸಿಂಗ್‌

ರಾಜ್‍ಕುಮಾರ್ ಅಭಿನಯಿಸಿದ್ದ `ಗಂಧದ ಗುಡಿ' ಚಿತ್ರಕ್ಕೆ ಬಂಡೀಪುರ ಅರಣ್ಯದಲ್ಲಿ ಚಿತ್ರೀಕರಣ ನಡೆಸಲಾಗಿತ್ತು. ಚಿತ್ರದಲ್ಲಿನ ಗಂಧದ ಕಳ್ಳಸಾಗಣೆ ಸನ್ನಿವೇಶಗಳಲ್ಲಿ ಆನೆಗಳು ಬಳಕೆಯಾಗಿದ್ದವು. ಆ ಚಿತ್ರದ ಇತ್ರೀಕರಣ ನಡೆದಿದ್ದ ಸಂದರ್ಭದಲ್ಲಿ ಕಾಡಿನಲ್ಲಿ ಆನೆಯೊಂದು ಮರಣಿಸಿತ್ತಂತೆ. ಅದರ ಮೂಳೆ - ದಂತಗಳನ್ನು ಅರಣ್ಯ ಸಿಬ್ಬಂದಿ ಬೇರ್ಪಡಿಸುವ ಸಂದರ್ಭವನ್ನು ಚಿತ್ರಿಸಿ, ಸಿನಿಮಾದಲ್ಲಿ ತೋರಿಸಲಾಗಿತ್ತು. ಇದೇ ರೀತಿ ಕಾಡಾನೆಯನ್ನು ಹಿಡಿಯುವ ಖೆಡ್ಡಾ ಕೂಡ ಅನಾಯಾಸವಾಗಿ ಚಿತ್ರೀಕರಣಕ್ಕೆ ದೊರೆತವು. `ನಾಗರ ಹೊಳೆ' ಚಿತ್ರದಲ್ಲಿ ಬೇಬಿ ಇಂದಿರಾ ಹೆಬ್ಬಾವಿನೊಂದಿಗೆ ಸೆಣಸುವ ಸನ್ನಿವೇಶವಿದೆ. `ಬಂಗಾರದ ಮನುಷ್ಯ' ಚಿತ್ರದಲ್ಲಿ ಗೂಳಿ ಕಾಳಗವನ್ನು ರೋಚಕವಾಗಿ ತೋರಿಸಲಾಗಿದೆ.

ಜಂಬೂ ಸವಾರಿ
ಜಂಬೂ ಸವಾರಿಫೋಟೋ : ಪ್ರಗತಿ ಅಶ್ವತ್ಥ ನಾರಾಯಣ

ಮಕ್ಕಳಿಗೆ ಸಂಗಾತಿಗಳಾಗಿ...

ಬಾಲನಟಿಯಾಗಿ ಬೇಬಿ ಶ್ಯಾಮಿಲಿ ನಟಿಸಿದ ಬಹಳಷ್ಟು ಚಿತ್ರಗಳಲ್ಲಿ ನಾಯಿ, ಕೋತಿ ಆಕೆಯ ಸಂಗಾತಿಯಾಗಿರುತ್ತಿದ್ದವು. `ಭಲೇ ರಾಣಿ'ಯಲ್ಲಿ ಬೇಬಿ ರಾಣಿಯ ಜೊತೆಗಾರನಾಗಿ ನಾಯಿ (ಮೋತಿ) ಇತ್ತು. `ದೊಂಬರ ಕೃಷ್ಣ', `ಜಂಬೂ ಸವಾರಿ' ಚಿತ್ರಗಳಲ್ಲಿ ಆನೆ, `ಸಂಪತ್ತಿಗೆ ಸವಾಲ್' ಚಿತ್ರದ ಎಮ್ಮೆ ಹಾಡಿನಲ್ಲಿ ಎಮ್ಮೆ, `ಸತಿ ಸಾವಿತ್ರಿ', `ಭೂಲೋಕದಲ್ಲಿ ಯಮರಾಜ' ಚಿತ್ರಗಳಲ್ಲಿ ಕೋಣ, `ಮಳೆ ಬಂತು ಮಳೆ'ಯಲ್ಲಿ ಮೊಸಳೆ, ಅಯ್ಯಪ್ಪಸ್ವಾಮಿಯ ಚಿತ್ರಗಳಲ್ಲಿ ಹುಲಿ, `ಗರುಡ ರೇಖೆ'ಯ ಸರ್ಪ ದಂಪತಿಯ ಪ್ರಣಯ, `ಸರ್ಪದ ಸೇಡು', `ನಿಶ್ಯಬ್ಧ'ದಲ್ಲಿ ನಾಯಿಗಳು, `ನಾಗ ಕಾಳ ಭೈರವ'ದಲ್ಲಿ ಹಾವು, ಕೋತಿ, ನಾಯಿ ಮತ್ತು ಎತ್ತು, `ಪುಟಾಣಿ ಏಜೆಂಟ್ 123', `ಸಿಂಹದ ಮರಿ ಸೈನ್ಯ', `ಪ್ರಚಂಡ ಪುಟಾಣಿಗಳು' ಮಕ್ಕಳ ಚಿತ್ರಗಳಲ್ಲಿ ನಾಯಿ, ಕೋತಿ, ಹಾವು ಇವೆ. `ಸೀತೆಯಲ್ಲಿ ಸಾವಿತ್ರಿ'ಯಲ್ಲಿ ಹೋರಿ (ಹನುಮ), `ಕೌಬಾಯ್ ಕುಳ್ಳ'ದಲ್ಲಿ ನಾಯಿ (ಪೀಟರ್), `ಕಿಲಾಡಿ ತಾತ'ದಲ್ಲಿ ಆನೆಯನ್ನು (ಗಣೇಶ) ನೋಡಬಹುದು. `ಅಪ್ಪು ಪಪ್ಪು' ಚಿತ್ರದಲ್ಲಿ ತರಬೇತಿ ಹೊಂದಿದ ಒರಾಂಗಟನ್ ತೋರಿಸಲಾಗಿತ್ತು.

ಜಂಬೂ ಸವಾರಿ
ಜಂಬೂ ಸವಾರಿಫೋಟೋ : ಪ್ರಗತಿ ಅಶ್ವತ್ಥ ನಾರಾಯಣ

`ಶ್ರೀ ರಾಮಾಂಜನೇಯ ಯುದ್ಧ', `ಕಿತ್ತೂರು ಚೆನ್ನಮ್ಮ', `ಮಯೂರ', `ಶ್ರೀ ಕೃಷ್ಣದೇವರಾಯ', `ಬಬ್ರುವಾಹನ', `ಹುಲಿಯ ಹಾಲಿನ ಮೇವು' ಸೇರಿದಂತೆ ಮತ್ತಿತರೆ ಚಿತ್ರಗಳ ಯುದ್ಧದ ಸನ್ನಿವೇಶಗಳಲ್ಲಿ ನೂರಾರು ಸಂಖ್ಯೆಯಲ್ಲಿ ಆನೆ, ಕುದುರೆಗಳನ್ನು ಬಳಕೆ ಮಾಡಿಕೊಳ್ಳಲಾಗಿದೆ. `ನಾಗಕನ್ನಿಕಾ', `ನಾಗಪೂಜೆ', `ನಾಗದೇವತೆ', `ಮಧು ಮಾಲತಿ', `ನಾಗರಹಾವು' ಚಿತ್ರಗಳಲ್ಲಿ ಹಾವುಗಳು ಅಭಿನಯಿಸಿದ್ದರೆ, `ಸಹೋದರರ ಸವಾಲ್', `ಅಶ್ವಮೇಧ'ದಂಥ ಚಿತ್ರಗಳಲ್ಲಿ ಕುದುರೆಗಳಿವೆ. `ವಿಘ್ನೇಶ್ವರ ವಾಹನ' ಚಿತ್ರದಲ್ಲಿ ಇಲಿಗಳು ಬಳಕೆಯಾಗಿರುವುದು ವಿಶೇಷ. ಹೀಗೆ, ನಮ್ಮ ಪ್ರಾಣಿಗಳಿರುವ ಸಾಕಷ್ಟು ಚಿತ್ರಗಳನ್ನು ಉದಾಹರಣೆಯನ್ನಾಗಿ ಕೊಡಬಹುದು.

ಬಿಗಿಯಾದ ಕಾನೂನು

ಚಿತ್ರಗಳಲ್ಲಿ ಪ್ರಾಣಿಗಳನ್ನು ಬಳಸಿಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಚಿತ್ರೀಕರಣದಲ್ಲಿ ಅವು ಸಹಕಾರ ಕೊಡದೆ ಕೆರಳಬಹುದು. ಹಲವು ಬಾರಿ ಚಿತ್ರೀಕರಣಕ್ಕೆ ಮುನ್ನ ತರಬೇತುದಾರನಿಂದ ಅವರು ಹಿಂಸೆಗೊಳಗಾಗುವ ಸಂದರ್ಭಗಳೂ ಎದುರಾಗುತ್ತವೆ. ಹಾವುಗಳನ್ನು ಬಳಸುವ ಮುನ್ನ ಅವುಗಳ ವಿಷಯ ಹಲ್ಲುಗಳನ್ನು ತೆಗೆಯಲಾಗುತ್ತದೆ. ಹುಲಿ, ಚಿರತೆಗಳು ಕಚ್ಚಲು ಸಾಧ್ಯವಾಗದಂತೆ ಅವುಗಳ ಬಾಯಿ ಹೊಲೆದು ಚಿತ್ರಿಸಲಾಗುತ್ತಿತ್ತು. ಹೀಗೆ ಮುನ್ನಚ್ಚರಿಕೆ ಕ್ರಮಗಳಿಂದ ಅವುಗಳು ಅತಿಯಾದ ಹಿಂಸೆ ಅನುಭವಿಸಬೇಕಾಗುತ್ತದೆ. ಹಾಗಾಗಿ ಇತ್ತೀಚೆಗೆ ಚಿತ್ರೀಕರಣದಲ್ಲಿ ಪ್ರಾಣಿಗಳ ಬಳಕೆಗೆ ಸಂಬಂಧಿಸಿದಂತೆ ಕಾನೂನನ್ನು ಬಿಗಿಗೊಳಿಸಲಾಗಿದೆ. ಇದರಿಂದಾಗಿ ಬಹಳಷ್ಟು ಸಂದರ್ಭಗಳಲ್ಲಿ ಈಗ ಗ್ರಾಫಿಕ್ಸ್‍ನಲ್ಲಿ ಪ್ರಾಣಿ - ಪಕ್ಷಿಗಳನ್ನು ಸೃಷ್ಟಿಸಿ ಬಳಸಿಕೊಳ್ಳಲಾಗುತ್ತದೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com