ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಚಿವ ಸಿ ಟಿ ರವಿ ಆಡಿದ ಮಾತಿನ ಗುರಿ ಏನು?

ಸಂಪುಟ ಪುನರ್ ರಚನೆಯ ಯಡಿಯೂರಪ್ಪ ಪ್ರಯತ್ನ ಹಾಗೂ ಅದರ ಭಾಗವಾಗಿಯೇ ನಡೆದಿರುವ ಸಂಪುಟದಿಂದ ಸಿ ಟಿ ರವಿಯವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜಿಸುವ ತಂತ್ರಗಾರಿಕೆಗಳು ಅಂತಿಮವಾಗಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವವೆ ಎಂಬ ...
ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಚಿವ ಸಿ ಟಿ ರವಿ ಆಡಿದ ಮಾತಿನ ಗುರಿ ಏನು?

ಕರೋನಾ ಸಂಕಷ್ಟದ ನಡುವೆ ಕೆಲಮಟ್ಟಿಗೆ ಸದ್ದಡಗಿದ್ದ ಬಿಜೆಪಿಯ ಭಿನ್ನರಾಗದ ಮೇಳ ಈಗ ಮತ್ತೆ ಚುರುಕಾದಂತಿದೆ.

ಲಾಕ್ ಡೌನ್, ಕೋವಿಡ್ ಭೀತಿಯ ನಡುವೆ ತೆರೆಮರೆಗೆ ಸರಿದಿದ್ದ ದಿಲ್ಲಿಯ ಸೂತ್ರಧಾರನ ಸೂತ್ರದ ಗೊಂಬೆಗಳು ಮತ್ತೆ ತೆರೆಮುಂದೆ ಬಂದಂತಿದೆ. ಹಾಗಾಗಿಯೇ ದಿಢೀರನೇ ಮತ್ತೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರದ ಭವಿಷ್ಯದ ಬಗ್ಗೆ, ಬಿಜೆಪಿಯ ಅಲಿಖಿತ ನಿಯಮಗಳ ಬಗ್ಗೆ ಭಿನ್ನರಾಗ ಎದ್ದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಮಳೆಗಾಲದ ಅಧಿವೇಶನದ ನಡುವೆ ವಿಶ್ವಾಸಮತದ ಪರೀಕ್ಷೆ ಗೆದ್ದು ಆರು ತಿಂಗಳು ಸರ್ಕಾರ ಭದ್ರ ಎಂದು ಸಂಪುಟ ವಿಸ್ತರಣೆಯ ಲೆಕ್ಕಾಚಾರದಲ್ಲಿ ದೆಹಲಿಗೆ ಹೋಗಿ ಹೈಕಮಾಂಡ್ ಭೇಟಿಯಾಗಿ ಬಂದ ಬೆನ್ನಲ್ಲೇ ಯಡಿಯೂರಪ್ಪ ಅವರ ಕಾಲೆಳೆಯುವ ಆಟವನ್ನು ಸ್ವಪಕ್ಷೀಯರೇ ಶುರುವಿಟ್ಟುಕೊಂಡಿದ್ದಾರೆ. ದಿಲ್ಲಿ ಧಣಿಗಳ ಮುಂದೆ ಯಡಿಯೂರಪ್ಪ ಸಂಪುಟದಿಂದ ಕೈಬಿಡುವವರ ಪಟ್ಟಿ ಮಂಡಿಸಿ, ಹೊಸಬರ ಸೇರ್ಪಡೆಯ ಪಟ್ಟಿಯ ಬೇಡಿಕೆಯನ್ನೂ ಸಲ್ಲಿಸಿ ಬಂದಿದ್ದರು. ಅದಾಗಿ ಕೆಲವೇ ದಿನಗಳಲ್ಲಿ ಬಿಜೆಪಿ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆಯಾಗಿದೆ. ಆ ಪಟ್ಟಿಯಲ್ಲಿ ಯಡಿಯೂರಪ್ಪ ಸಂಪುಟದಿಂದ ಕೈಬಿಡುವ ಬಯಕೆ ಹೊಂದಿದ್ದ ಸಿ ಟಿ ರವಿಯವರ ಹೆಸರು ಪ್ರಮುಖವಾಗಿ ಕಾಣಿಸಿಕೊಂಡಿದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಪರೇಷನ್ ಕಮಲದ ಮೂಲಕ ಅಸ್ತಿತ್ವಕ್ಕೆ ಬಂದಾಗ, ಮಹತ್ವದ ಖಾತೆಗಳ ನಿರೀಕ್ಷೆಯಲ್ಲಿದ್ದ ಮುಖಂಡರ ಪೈಕಿ ಸಿ ಟಿ ಕೂಡ ಒಬ್ಬರು. ಆದರೆ, ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಬಗ್ಗೆಯೇ ಯಡಿಯೂರಪ್ಪ ಅವರಿಗೆ ಒಲವಿಲ್ಲ ಎಂಬುದು ಆಗ ಎಲ್ಲರ ನಿರೀಕ್ಷೆಯಾಗಿತ್ತು. ಅದಕ್ಕೆ ಕಾರಣ; ಯಡಿಯೂರಪ್ಪ ಅವರು ಏಳು ವರ್ಷಗಳ ಹಿಂದೆ ಬಿಜೆಪಿ ತೊರೆದು ಕೆಜೆಪಿ ಕಟ್ಟಿದ ದಿನಗಳಿಂದಲೂ ಅವರು ಮತ್ತು ಸಿ ಟಿ ರವಿ ನಡುವಿನ ಸಂಬಂಧ ಎಣ್ಣೆ- ಸೀಗೆಕಾಯಿ ಎಂಬಂತಾಗಿತ್ತು. ಈ ನಡುವೆ ಯಡಿಯೂರಪ್ಪ ಪಾಲಿಗೆ ರಾಜಕೀಯವಾಗಿ ಮಗ್ಗುಲಮುಳ್ಳಾಗಿರುವ ಆರ್ ಎಸ್ ಎಸ್ ನಾಯಕ ಮತ್ತು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪ್ರಭಾವಿ ನಾಯಕರು ಸಿ ಟಿ ರವಿಯವರ ಬೆನ್ನಿಗೆ ನಿಂತ ಬಳಿಕ ಕೊನೆಗೂ ಪ್ರವಾಸೋದ್ಯಮ ಸಚಿವರಾಗಿ ಅವಕಾಶ ಪಡೆದಿದ್ದರು.

ತೀವ್ರ ಮುಜಗರ ಮತ್ತು ಅಸಮಾಧಾನದಿಂದಲೇ ರವಿ ಅವರು ಆ ಖಾತೆಯನ್ನು ಒಪ್ಪಿಕೊಂಡಿದ್ದರು. ಇದೀಗ ಕಳೆದ ವಾರವಷ್ಟೇ ಸಾವಿರಾರು ಕೋಟಿ ರೂ. ಮೊತ್ತದ ವಿವಿಧ ಪ್ರವಾಸೋದ್ಯಮ ಯೋಜನೆಗಳಿಗೆ ಸಂಪುಟದ ಅನುಮೋದನೆ ಪಡೆದಿದ್ದರು. ಈವರೆಗೆ ಬಹುತೇಕ ನೆರೆ ಮತ್ತು ಕರೋನಾ ಹಿನ್ನೆಲೆಯಲ್ಲಿ ಆರ್ಥಿಕ ಮುಗ್ಗಟ್ಟಿನ ನೆಪದಲ್ಲಿ ಹೊಸ ಯೋಜನೆಗಳಿಗೆ ಬ್ರೇಕ್ ಹಾಕಲಾಗಿತ್ತು. ಇದೀಗ ಸಾವಿರಾರು ಕೋಟಿ ಯೋಜನೆಗಳಿಗೆ ಅನುಮೋದನೆ ಸಿಕ್ಕ ಹೊತ್ತಲ್ಲಿ ದಿಢೀರನೇ ಪಕ್ಷದ ಸಂಘಟನೆಯ ನೆಪದಲ್ಲಿ ಸಚಿವರು ಸಂಪುಟಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿರುವುದು ಒಂದು ರೀತಿಯಲ್ಲಿ’ಎಣ್ಣೆ ಬರುವ ಹೊತ್ತಿಗೆ ಗಾಣ ಮುರಿದ ಹಾಗಾಗಿದೆ’ ಎಂಬ ಮಾತೂ ಕೇಳಿಬರುತ್ತಿದೆ.

ಸಹಜವಾಗೇ ಈ ಬೆಳವಣಿಗೆ ಸಚಿವ ಸಿ ಟಿ ರವಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದು ಕಡೆ ಪಕ್ಷದ ವರಿಷ್ಠರ ಆದೇಶವನ್ನು ಒಪ್ಪಿ, ಫಲ ಕೊಡುವ ಹೊತ್ತಲ್ಲಿ ಅಧಿಕಾರ ತ್ಯಾಗ ಮಾಡಿ ಪಕ್ಷ ಸಂಘಟನೆಗೆ ತೊಡಗಿಸಿಕೊಳ್ಳದೇ ಹೋದರೆ ಸ್ವತಃ ಪಕ್ಷವನ್ನು ಎದುರುಹಾಕಿಕೊಂಡಂತಾಗುತ್ತದೆ. ಮತ್ತೊಂದು ಕಡೆ ಸಚಿವ ಸ್ಥಾನ ಬಿಟ್ಟುಕೊಟ್ಟರೆ ರಾಜ್ಯ ರಾಜಕಾರಣದಲ್ಲಿ ಒಂದು ರೀತಿಯಲ್ಲಿ ಅಧಿಕಾರ ಕಳೆದುಕೊಂಡು ಮೂಲೆಗುಂಪಾದಂತಾಗುತ್ತದೆ. ಪ್ರಭಾವಿ ನಾಯಕ ಬಿ ಎಲ್ ಸಂತೋಷ್ ಅವರಂಥವರ ಆಶೀರ್ವಾದದ ಹೊರತಾಗಿಯೂ ಹೀಗೆ ಅತ್ತ ಧರಿ, ಇತ್ತ ಪುಲಿ ಎಂಬ ಇಕ್ಕಟ್ಟಿಗೆ ಈಡಾಗಿರುವುದು ತೀವ್ರ ಹತಾಶೆ ತರಿಸಿದೆ. ಆದರೆ, ಅದನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸಲಾರದ ಅಸಹಾಯಕತೆ ಇದೆ. ಹಾಗಾಗಿಯೇ ಎಲ್ಲವೂ ಧೈವೇಚ್ಛೆ ಎಂದು ಹೇಳುತ್ತಿದ್ದಾರೆ. ಆ ಮಾತನ್ನು ವಿಷಾಧವೂ ಇದೆ, ಹತಾಶೆಯೂ ಇದೆ!

ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಚಿವ ಸಿ ಟಿ ರವಿ ಆಡಿದ ಮಾತಿನ ಗುರಿ ಏನು?
ಸಚಿವ ಸ್ಥಾನದಿಂದ ಕೆಳಗಿಳಿಯಲಿರುವ ಸಿಟಿ ರವಿ: ಯಡಿಯೂರಪ್ಪ ನಿರಾಳ

ಅಂತಹ ಹತಾಶೆ ಮತ್ತು ವಿಷಾಧದ ಹಿನ್ನೆಲೆಯಲ್ಲಿಯೇ ಒಬ್ಬ ವ್ಯಕ್ತಿಗೆ ಒಂದು ಹುದ್ದೆ ಎಂಬ ಬಿಜೆಪಿಯ ನಿಯಮದ ಪ್ರಕಾರ ಸಚಿವ ಸ್ಥಾನಕ್ಕೇ ರಾಜೀನಾಮೆ ನೀಡುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಸಚಿವ ಸಿ ಟಿ ರವಿ, “ಒಬ್ಬರಿಗೆ ಒಂದು ಹುದ್ದೆ ಎಂಬುದು ಪಕ್ಷದ ಅಲಿಖಿತ ನಿಯಮ. ಕೆಲವು ಸಂದರ್ಭದಲ್ಲಿ ಆ ನಿಯಮ ಕೆಲವರಿಗೆ ಅನ್ವಯವಾಗದೇ ಇರುವ ಉದಾಹರಣೆಗಳೂ ಇವೆ. ಹಾಗೇ 75 ವರ್ಷ ಮೇಲ್ಪಟ್ಟವರು ಅಧಿಕಾರ ರಾಜಕಾರಣದಿಂದ ನಿವೃತ್ತಿ ಹೊಂದಬೇಕು ಎಂಬ ಅಲಿಖಿತ ನಿಯಮವೂ ಇದೆ. ಆ ನಿಯಮ ಕೂಡ ಕೆಲವರ ವಿಷಯದಲ್ಲಿ ಬದಲಾವಣೆಯಾಗಿದೆ. ಯಾರಿಗೆ ನಿಯಮ ಅನ್ವಯಿಸಬೇಕು, ಯಾರಿಗೆ ಬೇಡ ಎಂಬುದು ಪಕ್ಷದ ವರಿಷ್ಠರ ತೀರ್ಮಾನ” ಎಂದಿದ್ದಾರೆ. ಆ ಮೂಲಕ ತಮಗೆ ಅನ್ವಯವಾಗುವುದಾದರೆ, ಅದೇ ಅಲಿಖಿತ ಮತ್ತೊಂದು ನಿಯಮ ಸಿಎಂ ಯಡಿಯೂರಪ್ಪ ಅವರಿಗೂ ಅನ್ವಯವಾಗಬೇಕಲ್ಲವೆ? ಎಂದು ಪರೋಕ್ಷ ಪ್ರಶ್ನೆ ಎತ್ತಿದ್ದಾರೆ.

ಯಡಿಯೂರಪ್ಪ ಅವರಿಗೆ 75 ವರ್ಷ ಮೀರಿರುವ ಹಿನ್ನೆಲೆಯಲ್ಲಿ ಅವರನ್ನು ಈ ಬಾರಿ ಸಿಎಂ ಮಾಡುವುದೇ ಇಲ್ಲ ಎಂಬ ವಾದ ಕೂಡ ಸ್ವತಃ ಬಿಜೆಪಿ ವಲಯದಿಂದ ವರ್ಷದ ಹಿಂದೆ ಹೊಸ ಸರ್ಕಾರ ರಚನೆಯ ವೇಳೆಯೇ ಕೇಳಿಬಂದಿದ್ದನ್ನು ಇಲ್ಲಿ ಸ್ಮರಿಸಬಹುದು. ಆ ಹಿನ್ನೆಲೆಯಲ್ಲಿ ಸಿ ಟಿ ರವಿಯವರ ಹೇಳಿಕೆ, ಸದ್ಯದ ಸ್ಥಿತಿಯಲ್ಲಿ ಅವರೊಬ್ಬರ ಹೇಳಿಕೆಯಲ್ಲ. ಬದಲಾಗಿ ಅವರ ಹಿಂದಿರುವ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳು ಮತ್ತು ಬಿಎಸ್ ವೈ ವಿರೋಧಿ ಬಣದ ಹಲವು ನಾಯಕರ ಮನದ ಇಂಗಿತ ಕೂಡ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಸಚಿವ ಸ್ಥಾನ ಕಳೆದುಕೊಳ್ಳುವ ಆತಂಕದಲ್ಲಿ ಸಚಿವ ಸಿ ಟಿ ರವಿ ಆಡಿದ ಮಾತಿನ ಗುರಿ ಏನು?
ಉಪಚುನಾವಣೆ; ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆ

ಈ ನಡುವೆ ಅದೇ ದಿನ, ಅರಣ್ಯ ಸಚಿವ ಆನಂದ್ ಸಿಂಗ್ ಕೂಡ ಸರ್ಕಾರದ ಭವಿಷ್ಯದ ಕುರಿತು ತೀರಾ ನಿರಾಶೆಯ ಹೇಳಿಕೆ ನೀಡಿರುವುದು ಕೂಡ ಬಹುಶಃ ಕೇವಲ ಕಾಕತಾಳೀಯವಲ್ಲದೇ ಇರಬಹುದು. ಇತ್ತ ಸಚಿವ ಸಿ ಟಿ ರವಿ ಯಡಿಯೂರಪ್ಪ ಸಿಎಂ ಕುರ್ಚಿಯ ಮಾನದಂಡದ ಬಗ್ಗೆಯೇ ಪರೋಕ್ಷ ಪ್ರಶ್ನೆ ಎತ್ತಿರುವ ಹೊತ್ತಿಗೆ, ಅತ್ತ ಬಳ್ಳಾರಿಯ ಹೊಸಪೇಟೆಯಲ್ಲಿ ಮಾತನಾಡಿರುವ ಅರಣ್ಯ ಸಚಿವರು, “ಈ ಸರ್ಕಾರ ಯಾವಾಗ ಇರುತ್ತೋ, ಹೋಗುತ್ತೋ ಗೊತ್ತಿಲ್ಲ” ಎಂದಿದ್ದಾರೆ. ಸಂಪುಟ ವಿಸ್ತರಣೆಯ ಯಡಿಯೂರಪ್ಪ ಪ್ರಯತ್ನ, ಸಿ ಟಿ ರವಿಯವರನ್ನು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದು ಮತ್ತು ಅದರ ಬೆನ್ನಲ್ಲೇ ಅವರು 75 ವರ್ಷ ವಯೋಮಿತಿ ಮೀರಿದವರಿಗೆ ಅಧಿಕಾರ ರಾಜಕಾರಣಕ್ಕೆ ಪಕ್ಷದ ಅಲಿಖಿತ ನಿಯಮದಲ್ಲಿ ಅವಕಾಶವಿಲ್ಲ ಎಂದು ನೆನಪಿಸಿರುವುದು,.. ಹೀಗೆ ಹಲವು ಸಾಂದರ್ಭಿಕ ಹಿನ್ನೆಲೆಯಲ್ಲಿ ಆನಂದ್ ಸಿಂಗ್ ಅವರ ಮೇಲ್ನೋಟಕ್ಕೆ ದೇಶಾವರಿ ಎನ್ನಬಹುದಾದ ಮಾತು ಕೂಡ ಹಲವು ಅರ್ಥ ಪಡೆದುಕೊಂಡಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಸಂಪುಟ ಪುನರ್ ರಚನೆಯ ಯಡಿಯೂರಪ್ಪ ಪ್ರಯತ್ನ ಹಾಗೂ ಅದರ ಭಾಗವಾಗಿಯೇ ನಡೆದಿರುವ ಸಂಪುಟದಿಂದ ಸಿ ಟಿ ರವಿಯವರನ್ನು ಕೈಬಿಟ್ಟು ಪಕ್ಷ ಸಂಘಟನೆಗೆ ನಿಯೋಜಿಸುವ ತಂತ್ರಗಾರಿಕೆಗಳು ಅಂತಿಮವಾಗಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗುವವೆ ಎಂಬ ಪ್ರಶ್ನೆ ಎದ್ದಿದೆ. ಸಿ ಟಿ ರವಿ ಮತ್ತು ಅವರ ಬೆನ್ನಿಗೆ ನಿಂತ ರಾಷ್ಟ್ರೀಯ ಮುಖಂಡರ ಇಚ್ಛಾಶಕ್ತಿ ಮತ್ತು ತಂತ್ರಗಾರಿಕೆ ಎಷ್ಟರ ಮಟ್ಟಿಗೆ ಫಲ ಕೊಡುತ್ತದೆ ಎಂಬುದರ ಮೇಲೆ ಮುಂದಿನ ಬೆಳವಣಿಗೆಗಳು ನಿಂತಿವೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com