ತಲಕಾವೇರಿ ಪೂಜೆಯ ವಿಚಾರದಲ್ಲಿ ಮತ್ತೆ ಕೊಡವ ಮತ್ತು ಗೌಡ ಜನಾಂಗದ ನಡುವೆ ಭುಗಿಲೆದ್ದ ಭಿನ್ನಮತ
ರಾಜ್ಯ

ತಲಕಾವೇರಿ ಪೂಜೆಯ ವಿಚಾರದಲ್ಲಿ ಮತ್ತೆ ಕೊಡವ ಮತ್ತು ಗೌಡ ಜನಾಂಗದ ನಡುವೆ ಭುಗಿಲೆದ್ದ ಭಿನ್ನಮತ

ಒಂದು ಸಮುದಾಯದವರು ಸಭೆ ನಡೆಸಿ ತಾಲಿಬಾನ್ ಉಗ್ರರಂತೆ ಫತ್ವಾ ಹೊರಡಿಸುವುದು ಇಲ್ಲಿ ನಡೆಯುವುದಿಲ್ಲ, ಎಂದು ಪೊನ್ನಂಪೇಟೆಯ ಕೊಡವ ಸಮಾಜ ಎಚ್ಚರಿಕೆ ನೀಡಿದೆ.

ವಸಂತ ಕೆ

ರಾಜ್ಯದ ವಿಶಿಷ್ಟ ಸಂಸ್ಕೃತಿಯ ಪುಟ್ಟ ಜಿಲ್ಲೆ ಕೊಡಗು ಕಳೆದ ಮೂರು ವರ್ಷಗಳಿಂದ ಭೂ ಕುಸಿತ ಮತ್ತು ಭೀಕರ ಮಳೆಗೆ ಸಿಲುಕಿ ನಲುಗಿ ಹೋಗಿದೆ. ಅದರಲ್ಲೂ ಕಳೆದ ಎರಡು ತಿಂಗಳ ಹಿಂದೆ ಸುರಿದ ಭಾರಿ ಮಳೆಗೆ ಭೂ ಕುಸಿತ ಉಂಟಾಗಿ ಕೊಡಗಿನ ಕುಲ ದೈವ ಕಾವೇರಿ ಮಾತೆಯ ಸನ್ನಿಧಿಯಲ್ಲೇ ಭೂ ಕುಸಿತ ಉಂಟಾಯಿತು. ಈ ಭೂ ಕುಸಿತಕ್ಕೆ ಅರಣ್ಯ ಇಲಾಖೆಯ ಅವೈಜ್ಞಾನಿಕ ಕಾಮಗಾರಿಯೇ ಕಾರಣ ಎಂದು ಅರೋಪಿಸಲಾಗುತ್ತಿದೆ. ಅರಣ್ಯ ಇಲಾಖೆಯು ಗಜಗಿರಿ ಬೆಟ್ಟದಲ್ಲಿ ಇಂಗು ಗುಂಡಿಗಳನ್ನು ನಿರ್ಮಾಣ ಮಾಡಿದ ಕಾರಣದಿಂದಲೇ ಭೂ ಕುಸಿತ ಸಂಬವಿಸಿದೆ ಎಂದು ಸ್ಥಳೀಯರು ಹೇಳುತ್ತಾರೆ. ಅದೇನೆ ಇರಲಿ ಭೂ ಕುಸಿತದಲ್ಲಿ ಸುಮಾರು 200 ವರ್ಷಗಳಿಂದ ಇಲ್ಲೆ ನೆಲೆಸಿದ್ದ ತಲಕಾವೇರಿಯ ಪ್ರಧಾನ ಅರ್ಚಕರ ಕುಟುಂಬ ಸೇರಿದಂತೆ ಒಟ್ಟು 6 ಜನರು ಭೂ ಸಮಾಧಿ ಆದರು. ಇದರಲ್ಲಿ ಮೂವರ ಶವಗಳು ಇನ್ನೂ ಪತ್ತೆ ಆಗಿಲ್ಲ.

ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣ ಆಚಾರ್ ಅವರು ಮೃತರಾದ ನಂತರ ಪೂಜೆಯ ವಿಧಿ ವಿಧಾನಕ್ಕೆ ಸಂಭಂದಿಸಿದಂತೆ ಪ್ರಮುಖ ಜನಾಂಗಗಳಾದ ಕೊಡವ ಮತ್ತು ಅರೆ ಭಾಷೆ ಗೌಡ ಜನಾಂಗದ ನಡುವೆ ಭಿನ್ನಮತ ಭುಗಿಲೆದ್ದಿದೆ. ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಅರೆ ಭಾಷೆಯ ಗೌಡ ಕುಟುಂಬಗಳಾದ ಕೋಡಿ ಮತ್ತು ಬಳ್ಳಡ್ಕ ಕುಟುಂಬಗಳವರು ತಕ್ಕರಾಗಿ ಕಾರ್ಯ ನಿರ್ವಹಿಸುತ್ತಿರುವುದು ಮೊದಲಿನಿಂದಲೂ ನಡೆದುಕೊಂಡು ಬಂದಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ವರ್ಷಕ್ಕೊಮ್ಮೆ ಅಕ್ಟೋಬರ್ 17 ರಂದು ನಡೆಯುವ ತುಲಾ ಸಂಕ್ರಮಣ ಜಾತ್ರೆಗೆ 20 ದಿನಗಳ ಮೊದಲೇ ಸಿದ್ದತೆ ಅರಂಭಗೊಳ್ಳುತ್ತದೆ. ಸೆಪ್ಟೆಂಬರ್ 26 ರಂದು ತಲಕಾವೇರಿ ಮತ್ತು ಭಾಗಮಂಡಲದಲ್ಲಿ ಎರಡೂ ಕುಟುಂಬಗಳು ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಚಾಲನೆ ನೀಡಲಾಗುತ್ತದೆ. ಆದರೆ ಈ ಬಾರಿ ಅಕ್ಕಿ ಹಾಕುವಾಗ ಕೊಡವ ಜನಾಂಗದವರೂ ಕೂಡ ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿ ಅಕ್ಕಿ ಹಾಕಿ ವಿನಾ ಕಾರಣ ಗೊಂದಲ ಸೃಷ್ಟಿಸಿದ್ದಾರೆ ಎಂದು ದೇವ ತಕ್ಕರಾದ ಕೋಡಿ ಮೋಟಯ್ಯ ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಗೌಡ ಜನಾಂಗದ ಮುಖಂಡರೊಬ್ಬರು ಕೊಡವರ ಸಾಂಪ್ರದಾಯಿಕ ಕುಪ್ಯ ಚೇಲೆ ಉಡುಪನ್ನು ಸಮವಸ್ತ್ರ ಎಂದು ಕರೆದ ಕಾರಣಕ್ಕೆ ವಿವಿಧ ಕೊಡವ ಸಮಾಜಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.

ಪೊನ್ನಂಪೇಟೆಯ ಕೊಡವ ಸಮಾಜವು ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು ಕೊಡವರ ಸಾಂಪ್ರದಾಯಿಕ ಉಡುಪನ್ನು ಧರಿಸಿ ಬರಲು ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ, ಭಾಗಮಂಡಲದಲ್ಲಿ ನಾಗರಿಕ ಸಮಿತಿ ಸಭೆ ಎಂದು ಹೇಳಿಕೊಂಡು ಒಂದು ಸಮುದಾಯದವರು ಸಭೆ ನಡೆಸಿ ತಾಲಿಬಾನ್ ಉಗ್ರರಂತೆ ಫತ್ವಾ ಹೊರಡಿಸುವುದು ಇಲ್ಲಿ ನಡೆಯುವುದಿಲ್ಲ ಎಂಬ ಎಚ್ಚರಿಕೆ ನೀಡಿದೆ. ಕೊಡವ ಸಮಾಜದ ಅದ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ ಅವರು ಮಾತನಾಡಿ ಈ ಹಿಂದೆ ಮೋಜು ಮಸ್ತಿಗಾಗಿ ಬ್ರಹ್ಮಗಿರಿ ಬೆಟ್ಟ ಏರಲು ಬರುವ ಪ್ರವಾಸಿಗರನ್ನು ನಿರ್ಬಂಧಿಸಲು ಕೊಡವ ಸಮಾಜವು ಜಿಲ್ಲಾಡಳಿತವನ್ನು ಆಗ್ರಹಿಸಿದಾಗ ಅದನ್ನು ಮತ್ತೊಂದು ಜನಾಂಗ ವಿರೋಧಿಸಿದ್ದನ್ನು ಜ್ಞಾಪಿಸಿದ್ದಾರೆ. ಇದಲ್ಲದೆ ಕೊಡವರ ಜಮ್ಮ ಕೋವಿ ಹಕ್ಕನ್ನು ಹಿಂಪಡೆಯುವಂತೆ ಒತ್ತಾಯಿಸಿ ಗೌಡ ಜನಾಂಗದ ವಕೀಲರೊಬ್ಬರು ಸುಪ್ರೀಂ ಕರ‍್ಟಿನ ಮೆಟ್ಟಿಲೇರಿದ್ದು ಮತ್ತು ಕೊಡವ ಜನಾಂಗಕ್ಕೆ ಪರಿಶಿಷ್ಟ ಪಂಗಡ ಸ್ಥಾನ ಮಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸುವ ಮೂಲಕ ಶಾಂತಿಪ್ರಿಯ ಕೊಡವ ಜನಾಂಗವನ್ನು ಕೆಣಕುತಿದ್ದಾರೆ ಎಂದು ಆರೋಪಿಸಿದರು. ಪ್ರಚೋದಿತ ಹೇಳಿಕೆಗಳ ಮೂಲಕ ಜಾತಿ ಸಂವರ್ಷಕ್ಕೆ ಎಡೆ ಮಾಡಿ ಕೊಡುವ ಇಂತವರನ್ನು ಜಿಲ್ಲೆಯಿಂದ ಹೊರಗೆ ಗಡೀಪಾರು ಮಾಡುವಂತೆಯೂ ಒತ್ತಾಯಿಸಿದ್ದಾರೆ.

ತಕ್ಕರು ಹೊರತುಪಡಿಸಿ ಇತರರು ಯಾರು ಕುಪ್ಪಸ ಹಾಕಬಾರದೆಂಬ ಭಾಗಮಂಡಲ ನಾಗರಿಕ ಸಭೆಯ ಹೇಳಿಕೆಯನ್ನು ಅಖಿಲ ಅಮ್ಮ ಕೊಡವ ಸಮಾಜ ತೀವ್ರವಾಗಿ ಖಂಡಿಸಿದೆ. ಈ ಕುರಿತು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅಖಿಲ ಅಮ್ಮ ಕೊಡವ ಸಮಾಜದ ಗೌರವಾಧ್ಯಕ್ಷ ಬಾನಂಡ ಪ್ರಥ್ವಿ ಭಾಗಮಂಡಲ ನಾಗರಿಕ ಸಭೆಯ ವಿವಿಧ ಮುಖಂಡರ ಹೇಳಿಕೆಯನ್ನು ಖಂಡಿಸಿ ಇಂತಹ ಹೇಳಿಕೆಗಳು ನಾಗರಿಕ ಸಾಮಾಜದ ಸ್ವಾಸ್ಥ್ಯ ಹಾಳಾಗುತ್ತದೆ ಮೊದಲು ಇಂತಹ ಅಸಂಬದ್ಧ ಹೇಳಿಕೆಗಳನ್ನು ನಿಲ್ಲಿಸಿ ಎನ್ನುತ್ತಾ, ಪರಸ್ಪರ ಸಾಮರಸ್ಯದಿಂದ ಆ ತಾಯಿಯ ಆರಾಧನೆಯನ್ನು ಮಾಡುವ ಅದುಬಿಟ್ಟು ಅಲ್ಲಿ ಕೊಡವ ಜನಾಂಗ ಅದರಲ್ಲೂ ಈ ಹಿಂದಿನ ಮೂಲ ತಕ್ಕರ ಕುಟುಂಬ ಸಾಂಪ್ರದಾಯಿಕ ಉಡುಗೆ ತೊಟ್ಟಿದಕ್ಕೆ ಕೊಂಕು ಮಾತನಾಡುವ ಅಗತ್ಯವಿಲ್ಲ.

ಕೊಡವರು ಇರಲಿ ಅಮ್ಮ ಕೊಡವರು ಇರಲಿ ಕಾವೇರಿಯನ್ನು ಕುಲಮಾತೆಯಾಗಿ ಪೂಜಿಸುತ್ತಾರೆ. ಆ ತಾಯಿಯ ಆರಾಧನೆಯನ್ನು ತಮ್ಮ ಭಕ್ತಿ ಬಾವಕ್ಕೆ ಸರಿಯಾಗಿ ಹಾಗೂ ಸಾಂಪ್ರದಾಯಿಕ ಉಡುಪಿನಲ್ಲಿ ಪೂಜಿಸುತ್ತಾರೆ ಇದನ್ನು ಬೇಡ ಎನ್ನುವ ಅಧಿಕಾರ ಯಾರಿಗೂ ಇಲ್ಲ ಎಂದು ತಿರುಗೇಟು ನೀಡಿದ್ದಾರೆ. ಪತ್ತಾಯಕ್ಕೆ ಅಕ್ಕಿ ಹಾಕುವಾಗ ತಕ್ಕರು ಅಕ್ಕಿ ಹಾಕಿದ ನಂತರ ಬೇರೆಯವರು ಹಾಕಬಾರದೆಂದು ಯಾವುದಾದರೂ ಶಾಸನದಲ್ಲಿ ದಾಖಲಾಗಿಯೇ ಎಂದು ಪ್ರಶ್ನಿಸಿದರು.

ತಲಕಾವೇರಿಯಲ್ಲಿ 300 ವರ್ಷಗಳಿಗೂ ಮೊದಲು ಪೂಜಾ ಕೈಂರ‍್ಯವನ್ನು ನಡೆಸಿಕೊಂಡು ಬರುತಿದ್ದ ಕೊಡವ ಜನಾಂಗದ ಮಂಡೀರ, ಮಣವಟ್ಟೀರ ಮತ್ತು ಪಟ್ಟ ಮಾಡ ಕುಟುಂಬಸ್ಥರು ಸ್ವಚ್ಚತಾ ಕಾರ್ಯವನ್ನು ಕೈಗೊಂಡಿದ್ದರು. ಕೊಡವ ಜನಾಂಗದವರು ಪೂಜಾ ವಿಧಿ ವಿಧಾನಗಳಿಗೆ ಬರುವಾಗ ಕೊಡವರ ಹೆಮ್ಮೆಯ ಸಾಂಪ್ರದಾಯಿಕ ಉಡುಪು ಧರಿಸಿ ಬರಬಾರದೆನ್ನುವ ಗೌಡ ಜನಾಂಗದ ಮುಖಂಡರ ನಿಬಂಧನೆಗೆ ಜಿಲ್ಲಾದ್ಯಂತ ಕೊಡವ ಜನಾಂಗದವರ ಆಕ್ರೋಶ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಒಟ್ಟು 35 ಕೊಡವ ಸಮಾಜಗಳ ಒಕ್ಕೂಟದ ಸಭೆಯನ್ನು ವೀರಾಜಪೇಟೆಯ ಕೊಡವ ಸಮಾಜದಲ್ಲಿ ಅಕ್ಟೋಬರ್ 2 ರಂದು ಕರೆಯಲಾಗಿದೆ ಎಂದು ಅಕೊಸ ಒಕ್ಕೂಟದ ಅದ್ಯಕ್ಷ ಮಾತಂಡ ಎಂ ಮೊಣ್ಣಪ್ಪ ತಿಳಿಸಿದ್ದಾರೆ.

ತಲಕಾವೇರಿ ಪುಣ್ಯ ಕ್ಷೇತ್ರಕ್ಕೆ ಸಾವಿರಾರು ವರ್ಷಗಳ ಇತಿಹಾಸವೇ ಇದೆ. ಕೊಡಗನ್ನು ಗೆಲ್ಲಲಾಗದೇ ಆಕ್ರೋಶಿತನಾಗಿದ್ದ ಮೈಸೂರಿನ ರಾಜ ಟಿಪ್ಪು ಸುಲ್ತಾನನು 1785 ರಲ್ಲಿ ಕೊಡಗಿನ ಮೇಲೆ ದಂಡೆತ್ತಿ ಬರುತ್ತಾನೆ. ಭಾಗಮಂಡಲ ಸಮೀಪದಲ್ಲಿ ಬಿಡಾರ ಹೂಡಿ ಕೊಡವರನ್ನು ಸಂಧಾನಕ್ಕೆ ಕರೆಯುತ್ತಾನೆ. ದೇವಟ್ ಪರಂಬ್ ಎಂಬ ಸ್ಥಳದಲ್ಲಿ ಸಂಧಾನಕ್ಕೆ ನಿರಾಯುದರಾಗಿ ಬಂದ ಕೊಡವ ಗಂಡಸರು, ಹೆಂಗಸರು ಮತ್ತು ಮಕ್ಕಳನ್ನು ಟಿಪ್ಪು ಹಾಗೂ ಫ್ರೆಂಚ್ ಸೇನೆ ಹಠಾತ್ ಧಾಳಿ ನಡೆಸಿ ಕೊಲ್ಲಲಾಗುತ್ತದೆ. ಸೆರೆ ಸಿಕ್ಕವರನ್ನು ಶ್ರೀರಂಗ ಪಟ್ಟಣದ ಸೆರೆ ಮನೆಗೆ ಕೊಂಡೊಯ್ಯಲಾಗುತ್ತದೆ. ಅಲ್ಲಿಯವರೆಗೆ ಪೂಜೆ ಮಾಡಿಕೊಂಡಿದ್ದ ಮಣವಟ್ಟೀರ, ಮಂಡೀರ ಮತ್ತು ಪಟ್ಟಮಾಡ ಕುಟುಂಬಗಳ ಹಿರಿಯರೂ ಕೊಲ್ಲಲ್ಪಡುತ್ತಾರೆ. ಆಗ ತಲಕಾವೇರಿಯಲ್ಲಿ ಕ್ಷೇತ್ರಕ್ಕೆ ಪೂಜೆ ಮಾಡಲು ಅರ್ಚಕರೇ ಇಲ್ಲದಂತಾಗಿರುತ್ತದೆ.

ಆಗ ಕೊಡಗಿನ ರಾಜನು ಪಕ್ಕದ ದಕ್ಷಿಣ ಕೊಡಗಿನ ಸುಳ್ಯ ತಾಲ್ಲೂಕಿನಿಂದ ಅರೆ ಭಾಷೆ ಜನಾಂಗದ ಜನರನ್ನು ಇಲ್ಲಿಗೆ ಕರೆ ತರುತ್ತಾನೆ ಎಂದು ಇತಿಹಾಸ ಹೇಳುತ್ತದೆ. ಈ ರೀತಿ ಬಂದ ಗೌಡ ಜನಾಂಗದವರು ಪೂಜಾ ಕಾರ್ಯಗಳನ್ನು ಮುಂದುವರೆಸಿಕೊಂಡು ಹೋಗುತಿದ್ದಾರೆ. ಈಗ ಗೌಡ ಜನಾಂಗದ ಬಳ್ಳಡ್ಕ ಮತ್ತು ಕೋಡಿ ಕುಟುಂಬಗಳು ತಕ್ಕರಾಗಿ ಕಾರ್ಯ ನಿರ್ವಹಿಸುತಿದ್ದಾರೆ. ಅದರೆ ದೇವರಿಗೆ ನಿತ್ಯ ಪೂಜೆಯನ್ನು ಬ್ರಾಹ್ಮಣ ಸಮುದಾಯದ ಅರ್ಚಕರೇ ಮಾಡಿಕೊಂಡು ಹೋಗುತಿದ್ದಾರೆ. ಈ ವ್ಯವಸ್ಥೆಯಿಂದಾಗಿ ಕೊಡಗಿನ ಮೂಲನಿವಾಸಿಗಳಾದ ಕೊಡವರೇ ಕುಲದೇವಿಯ ಪೂಜೆ ಮಾಡುವ ಕಾರ್ಯದಿಂದ ದೂರ ಉಳಿಯಬೇಕಾದ ಸಂದರ್ಭ ಬಂದಿತು.

ಅದೇನೇ ಇರಲಿ ತಲಕಾವೇರಿ ವಿಷಯದಲ್ಲಿ ಇನ್ನಾದರೂ ರಾಜಕೀಯ ಹಾಗೂ ಜಾತಿ ದ್ವೇಷವನ್ನು ಬದಿಗೊತ್ತಿ ಎಲ್ಲಾರನ್ನು ಒಂದುಗೂಡಿಸಿ ಕ್ಷೇತ್ರದ ಅಭಿವೃದ್ಧಿ ಹಾಗೂ ತಾಯಿಯ ಸೇವೆಯನ್ನು ಮಾಡಲು ಮುಂದಾಗಬೇಕಿದೆ, ತಲಕಾವೇರಿ ಭಾಗಮಂಡಲ ಸುತ್ತಾಮುತ್ತಲ ಪ್ರದೇಶವನ್ನು ಪ್ರವಾಸಿ ತಾಣ ಮಾಡದೆ ಪುಣ್ಯಕ್ಷೇತ್ರವಾಗಿ ಮಾಡಲು ಒಂದಾಗಿ ಶ್ರಮಿಸಬೇಕಿದೆ. ತೀರ್ಥೋದ್ಭವವು ಮುಂದಿನ ಅಕ್ಟೋಬರ್ 17 ರಂದು ನಡೆಯಲಿದ್ದು ಸಾವಿರಾರು ಜನ ಭಕ್ತಾದಿಗಳು ಹೊರರಾಜ್ಯಗಳಿಂದಲೂ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಕೊವೀಡ್ -19 ಸೋಂಕು ಹೆಚ್ಚಾಗಿರುವ ಕಾರಣ ರೋಗ ಉಲ್ಭಣಗೊಳ್ಳುವ ಸಾದ್ಯತೆ ಹೆಚ್ಚು. ಈ ಸಂದರ್ಭದಲ್ಲಿ ತಲಕಾವೇರಿ ಕ್ಷೇತ್ರದಲ್ಲಿ ಸಾಂಕ್ರಮಿಕ ಹರಡದಂತೆ ನೋಡಿಕೊಳ್ಳಬೇಕಾಗಿರುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ. ಎಲ್ಲ ಜನತೆ ತಮ್ಮ ಜಾತಿ, ಕುಲ ಮರೆತು ತುಲಾ ಸಂಕ್ರಮಣ ಕಾರ್ಯದಲ್ಲಿ ತೊಡಗಿದರೆ ಕ್ಷೇತ್ರದ ಉದ್ದಾರಕ್ಕೆ ಅನುಕೂಲವಾಗುತ್ತದೆ.

Click here to follow us on Facebook , Twitter, YouTube, Telegram

Pratidhvani
www.pratidhvani.com