ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ರೈತರನ್ನು ಗೊಂದಲಕ್ಕೆ ದೂಡಬೇಡಿ -ಯಡಿಯೂರಪ್ಪ

ಅನವಶ್ಯಕವಾಗಿ ರೈತರನ್ನು ಗೊಂದಲಕ್ಕೆ ದೂಡಬೇಡಿ. ನನ್ನ ಬಳಿ ಬಂದು ಚರ್ಚೆ ಮಾಡಿ ಎಂದು ಯಡಿಯೂರಪ್ಪ ರೈತ ಸಂಘಟನೆಗಳನ್ನು ಚರ್ಚೆಗೆ ಆಹ್ವಾನಿಸಿದ್ದಾರೆ.
ಕೈಗಾರಿಕೆಯಿಂದ ಉದ್ಯೋಗ ಸೃಷ್ಟಿಯಾಗುತ್ತದೆ, ರೈತರನ್ನು ಗೊಂದಲಕ್ಕೆ ದೂಡಬೇಡಿ -ಯಡಿಯೂರಪ್ಪ

ಸರ್ಕಾರ ಅಂಗೀಕರಿಸಿರುವ ಕೃಷಿ ಸಂಬಂಧಿತ ಕಾಯ್ದೆಗಳ ತಿದ್ದುಪಡಿ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ ನಡೆಯುತ್ತಿದೆ. ರೈತರಿಗೆ ಬೆಂಬಲಿಸಿ ಕಾರ್ಮಿಕರು, ಕನ್ನಡ ಪರ ಸಂಘಟನೆಗಳು ಸೇರಿದಂತೆ ರಾಜಕೀಯ ಪಕ್ಷಗಳೂ ಪ್ರತಿಭಟನೆಯಲ್ಲಿ ಕೈಜೋಡಿಸಿವೆ. ಈ ನಡುವೆ ಸರ್ಕಾರದ ತಿದ್ದುಪಡಿಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಸಮರ್ಥಿಸಿದ್ದಾರೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ ತಿದ್ದುಪಡಿಗಳಿಂದ ರೈತರಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದಿರುವ ಯಡಿಯೂರಪ್ಪ, ನಾನು ರೈತರ ಮಗನಾಗಿ, ರೈತರ ಆಶೀರ್ವಾದದಿಂದ ಮುಖ್ಯಮಂತ್ರಿಯಾಗಿ ಕೆಲಸ ಮಾಡುತ್ತಿದ್ದೇನೆ. ಅನ್ನ ಕೊಡುವ ಅನ್ನದಾತನಿಗೆ ಕಿಂಚಿತ್ತೂ ತೊಂದರೆಯಾಗದಂತೆ, ನಾಡಿನ ಅನ್ನದಾತರ ಉತ್ತಮ ಭವಿಷ್ಯಕ್ಕಾಗಿ ಸಾಕಷ್ಟು ಚರ್ಚೆಮಾಡಿ ತಿದ್ದುಪಡಿ ತರಲಾಗಿದೆ ಎಂದಿದ್ದಾರೆ.

ಈ ಕುರಿತಂತೆ ಟ್ವಿಟರ್‌ ನಲ್ಲಿ ಸರಣಿ ಟ್ವೀಟ್‌ ಮಾಡಿದ ಮುಖ್ಯಮಂತ್ರಿ, ಎಪಿಎಂಸಿ ತಿದ್ದುಪಡಿಯಿಂದ ರೈತರು ತಮ್ಮ ಬೆಳೆಯನ್ನು ಒಳ್ಳೆಯ ದರ ಸಿಗುವ ಕಡೆ, ಎಪಿಎಂಸಿಯಲ್ಲಾಗಲಿ ಅಥವಾ ದೇಶದ ಯಾವುದೇ ಭಾಗದಲ್ಲಿ ಮಾರಬಹುದು. ಹಿಂದೆ ಹೊರಗೆ ಮಾರಾಟ ಮಾಡಿದರೆ ದಂಡ ವಿಧಿಸಲಾಗುತ್ತಿತ್ತು. ಈ ಬಂಧನದಿಂದ ರೈತರನ್ನು ಮುಕ್ತಗೊಳಿಸಲಾಗಿದೆ. ಎಪಿಎಂಸಿ ಬಾಗಿಲು ಮುಚ್ಚಲ್ಲ. ರೈತ ಬಾಂಧವರಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದ್ದಾರೆ.

ಭೂಸುಧಾರಣೆ ಕಾಯ್ದೆಯಡಿ ನೀರಾವರಿ ಭೂಮಿ ಖರೀದಿಗೆ ಅವಕಾಶ ನೀಡಿಲ್ಲ. ಒಂದು ಕುಟುಂಬ 54 ಎಕರೆ ಭೂಮಿ ಮಾತ್ರ ಖರೀದಿಸಬಹುದು. 22 ಲಕ್ಷ ಭೂಮಿ ಸಾಗುವಳಿಯಾಗದೆ ಬಂಜರಾಗಿದೆ. ಈ ತಿದ್ದುಪಡಿಯಿಂದ ಯಾರು ಬೇಕಾದರೂ ಕೃಷಿ ಮಾಡಬಹುದು. ಹಾಗೆಯೇ, ಕೈಗಾರಿಕೆಯೂ ಅಗತ್ಯವಿದೆ. ಕೃಷಿ ಇಲ್ಲದ ಭೂಮಿಯಲ್ಲಿ ಕೈಗಾರಿಕೆ ಮಾಡಿದರೆ ಉದ್ಯೋಗ ಸೃಷ್ಟಿಯಾಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನೀರಾವರಿ ಜಮೀನು ನೀರಾವರಿಗೇ ಮೀಸಲು. ಪರಿಶಿಷ್ಟ ಜಾತಿ, ವರ್ಗಗಳ ಭೂಮಿ ಖರೀದಿ ಅವಕಾಶ ಇಲ್ಲ ಎಂದ ಯಡಿಯೂರಪ್ಪ, ಸಣ್ಣ, ಅತಿಸಣ್ಣ ರೈತರಿಗೆ ಬಾಧಕವಾಗದಂತೆ ಎಚ್ಚರವಹಿಸಿದ್ದೇವೆ. ಬರಡು ಭೂಮಿಯಲ್ಲಿ ಕೈಗಾರಿಕೆ ಮಾಡಲು ಅಡ್ಡಿಯಿಲ್ಲ. ರೈತ ಸಂಘಟನೆಗಳಿಗೆ ನನ್ನ ಕಳಕಳಿಯ ಮನವಿ - ಅನವಶ್ಯಕವಾಗಿ ರೈತರನ್ನು ಗೊಂದಲಕ್ಕೆ ದೂಡಬೇಡಿ. ನನ್ನ ಬಳಿ ಬಂದು ಚರ್ಚೆ ಮಾಡಿ ಎಂದು ಚರ್ಚೆಗೆ ಆಹ್ವಾನಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com