ಕರೋನಾ, ಲಾಕ್‌ಡೌನ್ ಬಳಿಕ ಕೊಡಗಿನಲ್ಲಿ ಹೆಚ್ಚಿದ ತರಕಾರಿ ಅಂಗಡಿಗಳ ಸಂಖ್ಯೆ

ಕರೋನಾದಿಂದಾಗಿ ಯಾವ್ಯಾವುದೋ ವೃತ್ತಿ ನಂಬಿ ಬದುಕುತ್ತಿದ್ದವರು ತಮ್ಮ ವೃತ್ತಿಯನ್ನೇ ಕೈಬಿಟ್ಟು ಬೀದಿ ಬದಿ ವ್ಯಾಪಾರಕ್ಕಿಳಿದಿದ್ದಾರೆ. ಈ ಪೈಕಿ ಬಹುತೇಕರು ಕಂಡುಕೊಂಡಿದ್ದು, ತರಕಾರಿ ವ್ಯಾಪಾರವನ್ನು
ಕರೋನಾ, ಲಾಕ್‌ಡೌನ್ ಬಳಿಕ ಕೊಡಗಿನಲ್ಲಿ ಹೆಚ್ಚಿದ ತರಕಾರಿ ಅಂಗಡಿಗಳ ಸಂಖ್ಯೆ

ವಿಶ್ವದಲ್ಲಿ ದೊಡ್ಡ ತಲ್ಲಣ ಸೃಷ್ಟಿಸಿ ಲಕ್ಷಾಂತರ ಜನರನ್ನು ಸಾಯಿಸಿ, ಕೋಟ್ಯಾಂತರ ಜನರ ಬದುಕನ್ನು ಸಂಕಷ್ಟಕ್ಕೆ ನೂಕಿರುವ ಕರೋನಾ ಸೋಂಕು. ಕರೋನಾ ಹರಡುವಿಕೆಗೂ ಮುನ್ನ ನಿತ್ಯ ಸಾವಿರಾರು ಪ್ರವಾಸಿಗರನ್ನು ಬರ ಮಾಡಿಕೊಂಡು ಆತಿಥ್ಯ ನೀಡುತಿದ್ದ ಪುಟ್ಟ ಜಿಲ್ಲೆ ಕೊಡಗಿನಲ್ಲಿ ವ್ಯಾಪಾರೋದ್ಯಮ ಸಂಪೂರ್ಣ ನೆಲ ಕಚ್ಚಿದೆ. ಪ್ರವಾಸಿಗರಿಗೆ ಕಡ್ಡಾಯ ತಡೆ ಒಡ್ಡಿ ಹೋಟೆಲ್, ರೆಸಾರ್ಟ್, ಹೋಂ ಸ್ಟೇಗಳನ್ನು ಪೂರ್ಣ ಬಂದ್ ಮಾಡಲಾಗಿತ್ತು. ಇವೆಲ್ಲವೂ ಪ್ರವಾಸಿಗರೇ ಇಲ್ಲದೆ ಬಿಕೋ ಎನ್ನುತಿದ್ದವು. ಇದೀಗ ಕಳೆದ ತಿಂಗಳಿನಿಂದ ಹೋಂ ಸ್ಟೇ ಗಳು ಪುನಃ ಪ್ರವಾಸಿಗರಿಗೆ ತೆರೆಯಲ್ಪಟ್ಟಿದ್ದರೂ ರೂಂ ಗಳೆಲ್ಲ ಖಾಲಿ ಹೊಡೆಯುತ್ತಿವೆ. ದಸರಾ ನಂತರ ವಷ್ಟೆ ಹೆಚ್ಚಿನ ಬುಕಿಂಗ್ ಆಗಬಹುದು ಎನ್ನುವ ಆಶಯ ಇಲ್ಲಿನ ವ್ಯಾಪಾರಿಗಳದ್ದಾಗಿದೆ.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್‌ ಮಾಡಿ

ಕರೋನಾ ವೈರಸ್ ಸೋಂಕಿನ ಲಾಕ್‌ಡೌನ್ ಕೊಡಗಿನಲ್ಲಿ ಜನ ಜೀವನದ ಮೇಲೆ ಉಂಟು ಮಾಡಿರುವ ಪರಿಣಾಮಗಳನ್ನು ಅರಿಯಲು ಒಂದು ಸುತ್ತು ಹೊಡೆದು ವ್ಯಾಪಾರಿಗಳನ್ನೂ ಜನರನ್ನೂ ಮಾತಾಡಿಸಿದಾಗ ಸಂಕಷ್ಟಗಳ ಸರಮಾಲೆಯನ್ನೇ ತೆರೆದಿಟ್ಟರು. ಬಡವ ಬಲ್ಲಿದ ಎನ್ನದೆ ಪ್ರತಿಯೊಬ್ಬರಿಗೂ ಕರೋನಾದಿಂದ ನಷ್ಟವಾಗಿದೆ. ಆಶ್ಚರ್ಯಕಾರಿಯಾಗಿ ಕರೋನಾ ಪರಿಣಾಮದಿಂದ ಜಿಲ್ಲೆಯಲ್ಲಿ ತರಕಾರಿ ಅಂಗಡಿಗಳ ಸಂಖ್ಯೆ ಹೆಚ್ಚಾಗಿದೆ.

ಕರೋನಾದಿಂದಾಗಿ ಯಾವ್ಯಾವುದೋ ವೃತ್ತಿ ನಂಬಿ ಬದುಕುತ್ತಿದ್ದವರು ತಮ್ಮ ವೃತ್ತಿಯನ್ನೇ ಕೈಬಿಟ್ಟು ಬೀದಿ ಬದಿ ವ್ಯಾಪಾರಕ್ಕಿಳಿದಿದ್ದಾರೆ. ಈ ಪೈಕಿ ಬಹುತೇಕರು ಕಂಡುಕೊಂಡಿದ್ದು, ತರಕಾರಿ ವ್ಯಾಪಾರವನ್ನು. ಹೊಟೇಲ್ ನಡೆಸುವವರು, ಆಟೋ ಚಾಲಕರು, ಪೈಂಟರ್, ಕಾರ್ಪೆಂಟರ್ ಕೆಲಸದವರು, ಹೆಚ್ಚಿನ ಆದಾಯ ತಂದುಕೊಡುತ್ತಿದ್ದ ಸ್ಪೈಸಸ್ ಅಂಗಡಿಯವರು, ಹೀಗೇ ಎಲ್ಲರೂ ತರಕಾರಿ ಮಾರಾಟಕ್ಕಿಳಿದಿದ್ದಾರೆ.

ಕರೊನಾದಿಂದಾಗಿ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ಸಾಗಾಟ ಹಾಗೂ ಮಾರಾಟಕ್ಕೆ ತರಕಾರಿ ಮತ್ತು ಹಣ್ಣು-ಹಂಪಲುಗಳಿಗೆ ಮುಕ್ತ ಅವಕಾಶವಿತ್ತು. ಈ ಸಂದರ್ಭದಲ್ಲಿ ತಾತ್ಕಾಲಿಕವಾಗಿ ತರಕಾರಿ, ಹಣ್ಣು-ಹಂಪಲು ಮಾರಾಟಕ್ಕಿಳಿದವರು ಇದೀಗ ಅದನ್ನೇ ವ್ಯಾಪಾರ ವೃತ್ತಿಯನ್ನಾಗಿ ಮುಂದುವರಿಸಿರುವದು ಕಂಡು ಬರುತ್ತಿದೆ.

ಲಾಕ್‌ಡೌನ್ ಸಂದರ್ಭದಲ್ಲಿ ಪಿರಿಯಾಪಟ್ಟಣ, ಹಾಸನ, ಸಕಲೇಶಪುರ ಮುಂತಾದೆಡೆಗಳಿಂದ ತಮ್ಮ ಅಥವಾ ಬಾಡಿಗೆ ವಾಹನಗಳಲ್ಲಿ ತರಕಾರಿ, ಹಣ್ಣು- ಹಂಪಲುಗಳನ್ನು ತಂದು ಮನೆ-ಮನೆಗೆ ಮಾರಾಟ ಮಾಡುತ್ತಿದ್ದವರು ಇದೀಗ ಅದನ್ನೇ ಮುಂದುವರಿಸಿ ಈ ಹಿಂದೆ ಇದ್ದಂತಹ ಅಂಗಡಿ, ಹೊಟೇಲ್ಗಳನ್ನು ತರಕಾರಿ ಅಂಗಡಿಯನ್ನಾಗಿಸಿಕೊಂಡಿದ್ದಾರೆ. ಲಾಕ್‌ಡೌನ್‌ಗಳಿಗಿಂತ ಮುಂಚೆ ಎಲ್ಲೆಂದರಲ್ಲಿ ಸ್ಪೈಸಸ್ - ಚಾಕೋಲೇಟ್ ಮಳಿಗೆಗಳೇ ಕಾಣಬರುತ್ತಿದ್ದವು. ಇದೀಗ ಎಲ್ಲೆಡೆ ತರಕಾರಿ ಅಂಗಡಿಗಳು ತಲೆ ಎತ್ತಿದ್ದು, ಸಾರ್ವಜನಿಕರಿಗೂ ಇದರಿಂದ ಬಹಳಷ್ಟು ಅನುಕೂಲಗಳಾಗುತ್ತಿವೆ. ಅಂಗಡಿಗಳಲ್ಲಿ ವ್ಯಾಪಾರ-ವಹಿವಾಟು ಅಷ್ಟೇನು ಇಲ್ಲದಿದ್ದರೂ ಗ್ರಾಹಕರಿಗೆ ಮಾತ್ರ ತಮ್ಮ ಮನೆಗಳ ಸಮೀಪವೇ ತರಕಾರಿಗಳು ಲಭಿಸುತ್ತಿರುವದರಿಂದ ಖುಷಿಯಾಗಿದ್ದಾರೆ.

ಮಡಿಕೇರಿಯ ಕಾನ್ವೆಂಟ್ ಜಂಕ್ಷನ್ನಲ್ಲಿ ಈ ಹಿಂದಿನಿಂದಲೂ ‘ಕುಂಞಲಿ ಕ್ಯಾಂಟೀನ್’ ಈ ಹೆಸರು ಕೇಳದವರಿಲ್ಲ. ಆ ಹೊಟೇಲಿನ ಮಾಲೀಕರು ತೀರಿಕೊಂಡ ಬಳಿಕ ಭಾಸ್ಕರ್ ಹಾಗೂ ಪ್ರಭಾಕರ್ ಸಹೋದರರು ಸೇರಿಕೊಂಡು ಪೂಜಾ ಕ್ಯಾಂಟೀನ್ ಹಾಗೂ ಭಾಸ್ಕರ್ ಅಂಡ್ ಬ್ರದರ್ಸ್ ಎಂಬ ಹೊಟೇಲ್ ತೆರೆದು ಸೇವೆಯನ್ನು ಮುಂದುವರಿಸಿದರು. ರುಚಿ ಹಾಗೂ ಗುಣಮಟ್ಟ ಕಾಯ್ದುಕೊಂಡು ಬಂದುದರಿಂದ ಉದ್ಯಮ ಚೆನ್ನಾಗಿಯೇ ಸಾಗುತಿತ್ತು. ಆದರೆ ಲಾಕ್‌ಡೌನ್ ಆರಂಭವಾದ ಬಳಿಕ ಕ್ಯಾಂಟೀನ್ನಲ್ಲಿ ತರಕಾರಿ ವ್ಯಾಪಾರ ಆರಂಭಿಸಿದರು. ಕ್ಯಾಂಟೀನ್ ಎದುರು ವ್ಯಾಪಾರ ನಡೆಸುತ್ತಿದ್ದವರು ಇದೀಗ ಅನ್ಲಾಕ್ ಆದ ಬಳಿಕ ಕ್ಯಾಂಟೀನ್ ಒಳಗಡೆಯೇ ವ್ಯಾಪಾರ ಆರಂಭಿಸಿದ್ದಾರೆ. ‘ಕರೊನಾ ಬಂದ ಮೇಲೆ ಹೊಟೇಲ್ ವ್ಯಾಪಾರವೇ ಇಲ್ಲದಾಗಿದೆ. ಹಾಗಾಗಿ ಕ್ಯಾಂಟೀನ್ನಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದೇವೆ. ದಿನದಿಂದ ದಿನಕ್ಕೆ ಬೆಲೆ ಕೂಡ ಏರಿಕೆಯಾಗುತ್ತಿರುವದರಿಂದ ವ್ಯಾಪಾರವೂ ಕಡಿಮೆ. ಇನ್ನೊಂದು ಹೊಟೇಲ್ ಇರುವದರಿಂದ ಹೇಗೋ ಸುಧಾರಿಸಿಕೊಂಡು ಹೋಗುತ್ತಿದ್ದೇವೆ’ ಎಂದು ಭಾಸ್ಕರ್ ಹಾಗೂ ಪ್ರಭಾಕರ್ ಹೇಳುತ್ತಾರೆ.ʼಪ್ರತಿದಿನ ಬೆಳ್ಳಂಬೆಳಗೆ ಪಿರಿಯಾಪಟ್ಟಣ - ಹುಣಸೂರಿಗೆ ತೆರಳಿ ತರಕಾರಿ ತರುತ್ತೇವೆ. ಅಲ್ಲಿ ಸಿಗದಿದ್ದಲ್ಲಿ ಒಮ್ಮೊಮ್ಮೆ ಮೈಸೂರಿಗೂ ಹೋಗಬೇಕಾಗುತ್ತದೆ. ಅಂದಿನ ದರಕ್ಕೆ ಮಾರಾಟ ಮಾಡುತ್ತೇವೆ. ಎಲ್ಲವೂ ಸರಿಯಾಗಿ ಎಂದಿನಂತಾದರೆ ಕ್ಯಾಂಟೀನ್ ತೆರೆಯಲಾಗುವುದು. ಇಲ್ಲವಾದಲ್ಲಿ ಇದನ್ನೇ ಮುಂದುವರಿಸುತ್ತೇವೆ’ಎಂದು ಅವರು ಹೇಳುತ್ತಾರೆ.

ಭಾಸ್ಕರ್‌ ಹಾಗೂ ಪ್ರಭಾಕರ್
ಭಾಸ್ಕರ್‌ ಹಾಗೂ ಪ್ರಭಾಕರ್

ಮಡಿಕೇರಿಯಲ್ಲಿ ಸರಕಾರದ ಅಕ್ಷರ ದಾಸೋಹ ಕಚೇರಿಯಲ್ಲಿ ಕೆಲಸಮಾಡುತ್ತಿದ್ದ ಮಹಿಳೆ ಇದೀಗ ಕೆಲಸ ಕಳೆದುಕೊಂಡು ತರಕಾರಿ ವ್ಯಾಪಾರಕ್ಕೆ ಇಳಿದಿದ್ದಾರೆ. 6 ವರ್ಷಗಳ ಹಿಂದೆ ಮಡಿಕೇರಿಯ ನಿವಾಸಿ ಭಾನುಮತಿ ಅವರಿಗೆ ನಗರದ ಅಕ್ಷರ ದಾಸೋಹ ಯೋಜನೆ ಸಂಬಂಧ ಕಚೇರಿ ಕೆಲಸ ಲಭಿಸಿದ್ದು ಮಾಸಿಕ ಸುಮಾರು ರೂ.11,000 ದುಡಿಯುತ್ತಿದ್ದರು. ಕರೊನಾ ಸಂಬಂಧ ಲಾಕ್‌ಡೌನ್ ಘೋಷಣೆಯಾದ ಬಳಿಕ ಮಾರ್ಚ್ ಅಂತ್ಯದಲ್ಲಿ ಕೆಲಸ ಕಳೆದುಕೊಂಡರು. ರಾಜ್ಯಾದ್ಯಂತ ಅಕ್ಷರ ದಾಸೋಹ ಯೋಜನೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸುಮಾರು 400 ಮಂದಿ ಕೆಲಸವನ್ನು ಕಳದುಕೊಂಡಿರುವುದಾಗಿ ಭಾನುಮತಿ ಹೇಳುತ್ತಾರೆ. ಭಾನುಮತಿಯ ಪತಿ ಈ ಹಿಂದೆ ಚಾಲಕ ವೃತ್ತಿ ನಂಬಿಕೊಂಡಿದ್ದರು, ನಂತರ ಏಡಿ ಮಾರುವ ಕೆಲಸದಲ್ಲಿ ತೊಡಗಿಸಿಕೊಂಡರು. ಮಳೆಗಾಲದಲ್ಲಿ ಏಡಿ ಮಾರಾಟ ಮಾಡುತ್ತಿದ್ದರು. ಆದರೆ ಇದೀಗ ಇಬ್ಬರಿಗೂ ಕೆಲಸವಿಲ್ಲದ ಕಾರಣ ತರಕಾರಿ ವ್ಯಾಪಾರ ವೃತ್ತಿಗೆ ಕಾಲಿಟ್ಟು ಖರ್ಚಿಗೆ ಆಗುವಷ್ಟು ಹಣ ಸಂಪಾದಿಸುತ್ತಿರುವುದಾಗಿ ಭಾನುಮತಿ ಹೇಳುತ್ತಾರೆ. ತನ್ನ 17 ವರ್ಷದ ಮಗಳು 10ನೇ ತರಗತಿಯಲ್ಲಿ ಒಳ್ಳೆಯ ಫಲಿತಾಂಶ ಗಳಿಸಿದ್ದು ಪಿ.ಯು ವಿದ್ಯಾಭ್ಯಾಸಕ್ಕೆ ಖಾಸಗಿ ಕಾಲೇಜಿಗೆ ಸೇರಿಸಲು ಶುಲ್ಕದ ಮೊತ್ತ ಜಾಸ್ತಿ ಇರುವ ಕಾರಣ ಸರಕಾರಿ ಕಾಲೇಜಿಗೆ ಸೇರಿಸಿದ್ದಾರೆ. ಮಂದುವರೆದು ನಿತ್ಯ ಖರ್ಚಿಗೆ ಆಗುವಷ್ಟು ಪರಿಚಿತ ಹಲವು ಮಂದಿಗಳಿಂದ ಸಾಲ ಮಾಡಿ ನಗರದ ಕಾನ್ವೆಂಟ್ ಜಂಕ್ಷನ್ ಬಳಿ ನೂತನ ತರಕಾರಿ ಅಂಗಡಿ ತೆರೆದಿದ್ದಾರೆ.

ಮುಕ್ತಾರ್‌ ಬಾದ್ ಷಾ
ಮುಕ್ತಾರ್‌ ಬಾದ್ ಷಾ

ಸೋಮವಾರಪೇಟೆಯಲ್ಲಿ ಸೌಂಡ್ ಸಿಸ್ಟಮ್ ಅಂಗಡಿ ಇಟ್ಟುಕೊಂಡಿದ್ದ ಸಂಗಮೇಶ ಕರೊನಾದಿಂದಾಗಿ ಸಭೆ ಸಮಾರಂಭಗಳೂ ಇಲ್ಲದಿರುವದರಿಂದ ಧ್ವನಿವರ್ಧಕಕ್ಕೂ ಬೇಡಿಕೆ ಇಲ್ಲ. ಬೇಸಿಗೆಯಲ್ಲಿ ಕೊರೊನಾ ವ್ಯಾಪಕವಾಗಿದ್ದರಿಂದ ಐಸ್ ಕ್ಯಾಂಡಿಯನ್ನೂ ಮಾರಾಟ ಮಾಡಲಾಗಲಿಲ್ಲ. ಇದರಿಂದಾಗಿ ಜೀವನದ ಅನಿವಾರ್ಯತೆಗೆ ತರಕಾರಿ ಅಂಗಡಿ ಇಟ್ಟುಕೊಂಡಿದ್ದಾರೆ. ಇವರ ಪತ್ನಿಯೂ ವಿಶೇಷ ಚೇತನರಾಗಿದ್ದು, ಮಗಳು ಖಾಸಗಿ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಸರ್ಕಾರದಿಂದ ವಿಶೇಷಚೇತನ ವೇತನವಾಗಿ ಈರ್ವರಿಗೂ ತಲಾ 1400 ಲಭಿಸುತ್ತಿದ್ದು, ಕಳೆದೆರಡು ತಿಂಗಳ ಹಣ ಬಾರದೇ ಇನ್ನಷ್ಟು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ತರಕಾರಿ ವ್ಯಾಪಾರ ಮಾಡಿ ಕುಟುಂಬ ನಿರ್ವಹಣೆ ಕಷ್ಟಸಾಧ್ಯವಾಗುತ್ತಿದೆ. ಇಬ್ಬರೂ ವಿಶೇಷ ಚೇತನರಾಗಿರುವದರಿಂದ ಬೇರೆ ಉದ್ಯೋಗ ಮಾಡಲು ಅಸಾಧ್ಯವಾಗಿದೆ. ಉಳಿಕೆಯಾಗುವ ತರಕಾರಿ ಕೊಳೆತರೆ ಇನ್ನಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಕರೊನಾದಿಂದಾಗಿ ಜೀವನದ ನೆಮ್ಮದಿಯೇ ಹಾಳಾಗಿದ್ದು, ಅನಿವಾರ್ಯವಾಗಿ ತರಕಾರಿ ವ್ಯಾಪಾರ ಮಾಡುತ್ತಿದ್ದೇನೆ ಎಂದು ಸಂಗಮೇಶ್ ಅನುಭವ ಹಂಚಿಕೊಂಡಿದ್ದಾರೆ.

ಆಲೂಗೆಡ್ಡೆ, ಈರುಳ್ಳಿ ವ್ಯವಹಾರ ಮಾಡುತ್ತಿದ್ದ ಸಫೂಲ್ ಎಂಬುವರು ಕರೊನಾ ವೈರಸ್ ಹಿನ್ನಲೆಯಲ್ಲಿ ಈಗ ಒಂದು ತಿಂಗಳ ಹಿಂದೆ ಇಲ್ಲಿನ ಮಾಂಸ ಮಾರುಕಟ್ಟೆಯ ಬಳಿಯಲ್ಲಿ ಹೊಸದಾಗಿ ಚಿಲ್ಲರೆ ತರಕಾರಿ ಅಂಗಡಿಯನ್ನು ಆರಂಭಿಸಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಗ್ರಾಮಾಂತರ ಪ್ರದೇಶದ ಜನರು ಪಟ್ಟಣಕ್ಕೆ ಬಾರದಿರುವುದರಿಂದ ತರಕಾರಿ ವ್ಯಾಪಾರ ಕುಂಠಿತಗೊಂಡಿದೆ. ವ್ಯಾಪಾರ ಕಡಿಮೆಯಾದ ಕಾರಣ ಹೆಚ್ಚಿನ ಲಾಭವನ್ನು ನಿರೀಕ್ಷಿಸುವಂತಿಲ್ಲ. ಆದರೆ ತಾಜಾ ತರಕಾರಿಯನ್ನು ಗ್ರಾಹಕರಿಗೆ ವಿತರಿಸುತ್ತಿರುವುದರಿಂದ ನಮಗೆ ಈ ವ್ಯವಹಾರ ತೃಪ್ತಿ ತಂದಿದೆ. ಕರೊನಾ ವೈರಸ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಸಗಟು ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ. ಈ ವ್ಯವಹಾರ ಚೇತರಿಸಿಕೊಳ್ಳಬೇಕಾದರೆ ಅನೇಕ ತಿಂಗಳುಗಳು ಬೇಕಾಗಬಹುದು. ಕರೊನಾ ಎಂಬ ಮಹಾಮಾರಿ ಹಿಂದಿನ ಜೀವನದ ಮಾದರಿಯನ್ನೇ ಬದಲಾಯಿಸಲು ಹೊರಟಿದೆ ಎಂಬುದು ತರಕಾರಿ ವ್ಯಾಪಾರಿ ಸಫೂಲ್ ಅಭಿಪ್ರಾಯವಾಗಿದೆ.

ಕುಶಾಲನಗರ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರಾದರೂ ಪಟ್ಟಣದಲ್ಲಿ ಬೆರಳೆಣಿಕೆಯಷ್ಟಿದ್ದ ತರಕಾರಿ ಅಂಗಡಿಗಳು ಸಂಖ್ಯೆ ಇಂದು 20ಕ್ಕೂ ಮೀರಿರುವುದು ಕಾಣಬಹುದು. ನೆರೆಯ ಕೊಪ್ಪ ವ್ಯಾಪ್ತಿಯಲ್ಲಿ ಕೂಡ ನೂತನ ತರಕಾರಿ ಅಂಗಡಿ ಮಳಿಗೆಗಳು ಆರಂಭಗೊಳ್ಳುವುದರೊಂದಿಗೆ ಬೀದಿ ಬದಿ ತರಕಾರಿ ವ್ಯಾಪಾರ ದೃಶ್ಯ ಕಂಡುಬರುತ್ತಿದೆ.

ಕಳೆದ ಹಲವು ವರ್ಷಗಳಿಂದ ಸ್ಥಳೀಯ ಮಡಿಕೇರಿ ರಸ್ತೆಯ ಬಾರ್ ಒಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಜುನಾಥ ಇದೀಗ ಇದೇ ಹಾದಿ ಹಿಡಿದಿರುವುದು ಕಂಡುಬಂದಿದೆ. ಸ್ಥಳೀಯ ಬೈಪಾಸ್ ರಸ್ತೆಯ ಕಟ್ಟಡವೊಂದರಲ್ಲಿ ಅಂಗಡಿ ಬಾಡಿಗೆ ಪಡೆದು ತರಕಾರಿ ವ್ಯಾಪಾರದಲ್ಲಿ ತೊಡಗಿಕೊಂಡಿರುವ ದೃಶ್ಯ ಕಾಣಬಹುದು. ನಿರೀಕ್ಷಿಸಿದಂತೆ ವ್ಯಾಪಾರ ವಹಿವಾಟು ನಡೆಯುತ್ತಿಲ್ಲ. ಈ ಕಾರಣದಿಂದ ಸಣ್ಣ ಬಂಡವಾಳ ಹೂಡಿಕೆ ಮಾಡಿ ಹಣ್ಣು ತರಕಾರಿ ವ್ಯಾಪಾರ ಆರಂಭಿಸಿರುವುದಾಗಿ ಕಳೆದ 8 ವರ್ಷಗಳಿಂದ ಬಾರ್‌ನಲ್ಲಿ ಕರ್ತವ್ಯ ನಿರ್ವಹಿಸಿದ ಮಂಜುನಾಥ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ.

Click here to follow us on Facebook , Twitter, YouTube, Telegram

Related Stories

Pratidhvani
www.pratidhvani.com